About Us Advertise with us Be a Reporter E-Paper

ಗುರು

ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ

- ನಾಗೇಶ್ ಜೆ. ನಾಯಕ

ನಗುವು ಸಹಜದ ಧರ್ಮ ; ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ॥
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ ॥

ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರ ಮೊಗದಲ್ಲಿ ನಗು ಮಾಯವಾಗುತ್ತಿರುವುದನ್ನು ನಾವು ಕಾಣುತ್ತೇವೆ. ದಿನನಿತ್ಯದ ಒತ್ತಡಗಳು, ಬೇಸರದ ಸಂಗತಿಗಳು, ಸಮಸ್ಯೆಯ ಆತಂಕಗಳು ಜನರ ಮೊಗದ ನಗುವನ್ನು ತಿಂದು ತೇಗುತ್ತಿವೆ. ಮನುಷ್ಯ ಹಣ ದುಡಿಯುವ ಧಾವಂತದ ಬೆನ್ನು ಬಿದ್ದು ನಗುವೆಂಬ ಶಾಶ್ವತ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಬೇಂದ್ರೆ ಅವರು ‘ ನಗೀ ಹಿಂದ ಹೊಗಿ ಬ್ಯಾಡ, ಹೊಗಿ ಧಗೀ ಬ್ಯಾಡ, ಬಾಳಿಗೆ ಎರಡು ಬಗೀ ಬ್ಯಾಡ’ ಎಂದು ಹೇಳುವಂತೆ ನಗು ಸಹಜವಾಗಿರಬೇಕು. ಕೆ. ಎಸ್. ನರಸಿಂಹಸ್ವಾಮಿ ತಮ್ಮ ಕವನದಲ್ಲಿ ಹೇಳುತ್ತಾರೆ ‘ಒಮ್ಮೆ ನಕ್ಕು ನನ್ನ ನಗಿಸು, ಜುಮ್ಮೆನ್ನುತಿಹುದೆನ್ನ ಮನಸು, ಫಕ್ಕನೊಮ್ಮೆ ನಕ್ಕು ಬಿಡು ಚಿಂತೆ ತೊಲಗಲಿ.’

ಹೌದು, ಚಿಂತೆ ಹಗುರವಾಗಿಸುವ ಏಕೈಕ ಶಕ್ತಿ ಎಂದರೆ ನಗು. ನನ್ನ ಕೈಹಿಡಿದಾಕೆ ಅಳುನುಂಗಿ ನಗು ಒಮ್ಮೆ, ನಾನೂನು ನಕ್ಕೇನ ಎನ್ನುವ ಬೇಂದ್ರೆ ನೋವಿನ ನಿವಾರಣೆ ನಗುವಿನಿಂದಲೇ ಎಂದು ಸಾರುತ್ತಾರೆ. ಇವನ್ನೆಲ್ಲ ಬದುಕಿನಲ್ಲಿ ನಗುವಿನ ಮಹತ್ವ ಎಷ್ಟು ಎಂಬುದು ತಿಳಿಯುತ್ತದೆ. ಡಿ.ವಿ.ಜಿ. ಯವರ ಈ ಕಗ್ಗ ಎವರ್ ಗ್ರೀನ್ ಸಲಹೆಯನ್ನು ನಮ್ಮ ಬಾಳಿನುದ್ದಕ್ಕೂ ಅನ್ವಯಿಸಿಕೊಂಡರೆ ಎಲ್ಲರಿಗೂ ನಾವು ಪ್ರಿಯರಾಗಬಹುದು.

ನಗುವು ಮನುಷ್ಯನಿಗೆ ದೇವರು ಕೊಟ್ಟ ವರ. ನಾವು ನಗುವುದು ಸಹಜಧರ್ಮ. ಇತರರನ್ನು ನಗಿಸುವುದು ಪರಧರ್ಮ. ಇತರರು ನಗುವುದನ್ನು ನೋಡುತ ನಗುವುದು ಅತಿಶಯದ ಧರ್ಮ. ಆದುದರಿಂದ ನಗುವ, ನಗಿಸುವ, ನಗಿಸಿ, ನಗುತ, ಬಾಳುವ ವರವನ್ನು ದೇವರಲ್ಲಿ ಬೇಡಿಕೊಳ್ಳಿ ಎಂದು ಡಿ.ವಿ.ಜಿ. ಅವರು ಕಗ್ಗದ ಅರಿವು ಮೂಡಿಸುತ್ತಾರೆ. ಇಂದು, ಎಲ್ಲರ ಮುಖ ಗಂಟು ಹಾಕಿಕೊಂಡಿರುವ ದೃಶ್ಯವನ್ನು ನಾವು ಕಾಣುತ್ತೇವೆ. ಜೋರಾಗಿ ನಗುವುದು ಗೌರವಕ್ಕೆ ಕುಂದು ತರುತ್ತದೆ ಎಂದುಕೊಳ್ಳುವವರು ಉಂಟು. ನಗು ಖಾಯಿಲೆಗೆ ಪ್ರಥಮ ಚಿಕಿತ್ಸೆಯಿದ್ದಂತೆ. ನಕ್ಕಾಂವ ಗೆದ್ದಾಂವ ಎನ್ನುತ್ತಾರೆ.

ನಗೆಹಬ್ಬದಂಥ ಕಾರ್ಯಕ್ರಮಗಳು ಇಂದು ಜನಮನ್ನಣೆಯನ್ನು ಗಳಿಸಿಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ಎಲ್ಲರ ಬದುಕಿನಲ್ಲಿ ನಗುವಿನ ಅವಶ್ಯಕತೆ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. ದುಃಖವಿರದ ಜೀವಗಳೇ ಇಲ್ಲ, ಅದನ್ನೇ ಹಾಸಿ, ಹೊದ್ದುಕೊಂಡರೆ ಅವುಗಳು ದೂರವಾಗುವ ಬದಲು ಹೆಚ್ಚಾಗುತ್ತವೆ. ಎಲ್ಲ ನುಂಗಿ ನಗುವ, ನಗಿಸುವ ಕಲೆಯ ಬಲ್ಲವನು ದುಃಖವನ್ನು ಗೆಲ್ಲಬಲ್ಲ. ನಗಿಸುವವನಿಗೆ ಸದಾ ನೋವುಗಳು ಇದ್ದೇ ಇರುತ್ತವೆ. ಅವೆಲ್ಲವನ್ನೂ ಮೀರಿದವನೆ ಗೆಲುವಿನ ಹರಿಕಾರನಾಗುತ್ತಾನೆ. ಡಿ.ವಿ.ಜಿ. ಅವರ ಬದುಕಿನ ಸೂತ್ರ ತಿಳಿಸುವ ಕಗ್ಗದ ಸಾರ್ಥಕ್ಯತೆ ಅರಿಯೋಣ, ಅಳವಡಿಸಿಕೊಳ್ಳೋಣ.

ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ. ನಾನಕ್ಕು ಜಗವಳಲು ನೋಡಬಹುದೇ? ನಾನಳಲು ಜಗವೆನ್ನ ಎತ್ತಿಕೊಳ್ಳದೆ? ಎಂಬ ಕವಿ ಈಶ್ವರ ಸಣಕಲ್ಲ ಅವರ ಕವಿತೆಯಂತೆ ಎಲ್ಲರ ನೋವಿಗೆ ನಗುವಿನ ಮದ್ದಾಗೋಣ. ನಗು ನಗುತಲೇ ಚಿಂತೆ ತೊಲಗಿಸೋಣ.

Tags

Related Articles

Leave a Reply

Your email address will not be published. Required fields are marked *

Language
Close