ವಿಕಸಿಸಬೇಕಿದೆ ವಿದ್ಯಾಗ್ರಾಮಗಳ ಪರಿಕಲ್ಪನೆ

Posted In : ಅಂಕಣಗಳು, ಯಾರಿಗೆ ಹೇಳೋಣ?

ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗಾಗಿ ಕ್ರೀಡಾ ಗ್ರಾಮವನ್ನು ನಿರ್ಮಾಣ ಮಾಡಲಾಗಿದೆ. ಉಚ್ಛ ನ್ಯಾಯಾಲಯದ ನ್ಯಾಯಾಧಿಶರು ಹಾಗೂ ಸಿಬ್ಬಂದಿಗಳಿಗಾಗಿ ನೂರಾರು ಎಕರೆ ವಿಸ್ತೀರ್ಣದಲ್ಲಿ ನ್ಯಾಯ ಗ್ರಾಮವೊಂದನ್ನು ರಚಿಸಿಲಾಗಿದೆ. ವಿದ್ಯಾಕಾಶಿಗಳೆಂದು ಪರಿಗಣಿಸಲ್ಪಡುವ ಧಾರವಾಡ, ಶಿವಮೊಗ್ಗ, ಮೈಸೂರು ಇನ್ನಿತರ ಪ್ರದೇಶಗಳಿಗೆ ಸಾವಿರಾರು ವಿದ್ಯಾರ್ಥಿಗಳು ವಿದ್ಯೆಯನ್ನರಸಿ ಬರುತ್ತಾರೆ. ಹೀಗೆ ಆಗಮಿಸಿದ ಎಲ್ಲ ವಿಧ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ವಿದ್ಯೆಗಾಗಿ ವಲಸೆ ಬಂದ ಹಳ್ಳಿಗಾಡಿನ ಬಡಮಕ್ಕಳ ಪರಿಸ್ಥಿತಿಯಂತೂ ಶೋಚನೀಯ.

ಬಾಡಿಗೆ ರೂಮ್ ಪಡೆಯಲಾಗದೆ, ಹೊಟೇಲ್ ಅಥವಾ ಮೆಸ್‌ಗಳಲ್ಲಿ ಊಟದ ಖರ್ಚುನ್ನೂ ಭರಿಸಲಾಗದೆ, ಪುಟ್ಟಕೋಣೆಯೊಂದರಲ್ಲಿ ಸೀಮೆ ಎಣ್ಣೆ ಸ್ಟವ್‌ನಿಂದ ಅನ್ನ ಬೇಯಿಸಿಕೊಂಡು ಹೊಟೇಲ್‌ನಿಂದ ಸಾಂಬಾರ್ ತಂದು ಊಟ ಮಾಡಿ ವಿದ್ಯಾಭ್ಯಾಸವನ್ನು ಮುಂದುವರಿಸುವುದು ಬಹಳಷ್ಟು ವಿದ್ಯಾರ್ಥಿಗಳಿಗೆ ಕಷ್ಟದಾಯಕವಾಗಿದೆ. ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಸಿಗುವುದಿಲ್ಲ. ‘ವಿದ್ಯಾಸಿರಿ’ ಯೋಜನೆಯನ್ನು ಸರಕಾರ ಘೋಷಿಸಿದ್ದರೂ ಕೂಡ ಬೇಡಿಕೆ ಪ್ರಮಾಣದ ಶೇ. 5 ರಷ್ಟು ವಿದ್ಯಾರ್ಥಿಗಳಿಗೆ ಯೋಜನೆಯ ಸೌಲಭ್ಯ ಲಭ್ಯವಾಗುತ್ತಿದೆ. ಹೀಗಾಗಿ ಕ್ರೀಡಾಗ್ರಾಮ, ನ್ಯಾಯಗ್ರಾಮಗಳಂತೆಯೇ ವಿದ್ಯಾರ್ಥಿಗ್ರಾಮ ನಿರ್ಮಿಸುವ ಪರಿಕಲ್ಪನೆಯ ಕುರಿತು ಸರಕಾರಗಳು ಚಿಂತಿಸಿದ್ದರೆ ಅದಷ್ಟೋ ಭರವಸೆಯ ವಾತಾವರಣವನ್ನು ಮೂಡಿಸಬಹುದಾಗಿತ್ತಲ್ಲವೆ?
ಶಿಕ್ಷಣದ ಗುಣಮಟ್ಟದ ಕುರಿತು ಅಲ್ಲಲ್ಲಿ ಚರ್ಚೆಗಳು ಸಾಗುತ್ತಲೇ ಇವೆ.

ಆದರ್ಶ ಗುಣಮಟ್ಟದ ಶಿಕ್ಷಣವೆಂದಾಗ ಥಟ್ಟನೆ ನೆನಪಾಗುವ ಸಂಗತಿಯೆಂದರೆ ನಳಂದ, ತಕ್ಷಶಿಲೆ ವಿದ್ಯಾಲಯಗಳು. ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಪುರಾತನ ವಿದ್ಯೆಯ ಗುಣಮಟ್ಟವನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವುದು ಇಂದಿನ ಶೈಕ್ಷಣಿಕ ವ್ಯವಸ್ಥೆಯ ಕುಸಿತಕ್ಕೆ ಹಿಡಿದ ಕನ್ನಡಿಯಂತಾಗಿದೆ. ಕರ್ನಾಟಕದಲ್ಲಿ ಹದಿನೆಂಟಕ್ಕಿಂತ ಹೆಚ್ಚು ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿವರ್ಷ ನಾಲ್ಕು ಸಾವಿರಕ್ಕಿಂತ ಹೆಚ್ಚು ವೈದ್ಯರು, ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಎಂಜಿನಿಯರ್‌ಗಳು ಹಾಗೂ ಲಕ್ಷಾಂತರ ಪದವೀಧರರು ಹೊರಹೊಮ್ಮುತಿದ್ದಾರೆ. ಸಾಕ್ಷರತೆಗೊಂಡ ಪದವೀಧರರಿಗೆ ನಿರುದ್ಯೋಗವೆಂಬ ಪೆಡಂಭೂತ ಮಹಾವಿದ್ಯಾಲಯದಿಂದ ಹೊರಬಿದ್ದ ದಿನದಿಂದಲೇ ಬೆನ್ನತ್ತಲಾರಂಭಿಸುತ್ತದೆ.

ಅಷ್ಟಕ್ಕೂ ವಿದ್ಯಾವಂತರೆಲ್ಲರಿಗೂ ನೌಕರಿಯನ್ನು ನೀಡಲು ಯಾವ ಸರಕಾರಗಳಿಗೂ ಸಾಧ್ಯವಿಲ್ಲ. ಆದರೆ ವಿಶ್ವವಿದ್ಯಾಲಯದಿಂದ ಹೊರಬಂದ ಪದವೀಧರರು ತಮ್ಮ ಬದುಕನ್ನು ತಾವು ನಿರ್ಮಿಸಿಕೊಳ್ಳುವ ಹಂತಕ್ಕೆ ತಲುಪದಿರುವ ಅಕೌಶಲದೊಂದಿಗೆ ಹೊರಬಂದಿದ್ದಾರೆಂದರೆ, ಸರಿಸುಮಾರು ಇಪ್ಪತ್ತು ವರ್ಷಗಳವರೆಗೆ ಪಡೆದುಕೊಂಡ ಸಾಕ್ಷರತೆಯ ಸಾಕಾರವಾದರೂ ಏನು? ಇಂದಿನ ಶೈಕ್ಷಣಿಕ ವಿದ್ಯಾಲಯಗಳು ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗುತ್ತಿವೆಯೆ?

ಪ್ರತಿಯೊಂದು ಶಿಲೆಯೂ ತನ್ನಲ್ಲೊಂದು ಶಿಲ್ಪವನ್ನು ಅಡಗಿಸಿಟ್ಟುಕೊಂಡಿರುತ್ತದೆ. ಸುತ್ತಿಗೆಯಿಂದ ಹೊಡೆದರೆ ಶಿಲ್ಪ ಹೊರಬರುವುದಿಲ್ಲ. ಉಳಿಯಿಂದ ಕೆತ್ತಬೇಕು. ಹಾಗೆಯೆ ಪ್ರತಿಯೊಂದು ಮಗುವಿನಲ್ಲಿಯೂ ಆಗಾದವಾದ ಸಾಧನೆಗೈಯುವ ಅದಮ್ಯ ಶಕ್ತಿ ಅಡಗಿರುತ್ತದೆ. ಅದನ್ನು ಹೊರತೆಗೆಯಬೇಕಾದ ಕೆಲಸ ಶಿಕ್ಷಣ ಮತ್ತು ಮಹಾವಿದ್ಯಾಲಯಗಳಿಂದ ಆಗಬೇಕಾಗಿದೆ. ಸಿದ್ಧಾಂತ, ನೈತಿಕತೆ ಮತ್ತು ತತ್ವಾದರ್ಶಗಳ ಅವಧಿ ಕೇವಲ ಕೆಲಗಂಟೆಗಳು ಮಾತ್ರ. ಸ್ವಾಮಿ ವಿವೇಕಾನಂದರು ಹೇಳುವಂತೆ ಪ್ರತಿ ಮೂರು ಗಂಟೆಗಳಿಗೆ ಹಸಿವು ವ್ಯಕ್ತಿಯನ್ನಾವರಿಸುತ್ತದೆ. ಆತನ ಹಸಿವನ್ನು ಸ್ವಯಂ ಆದಾಯದಿಂದ ನೀಗಿಸಿಕೊಳ್ಳಲು ವಿಫಲವಾದ ವ್ಯಕ್ತಿಯಿಂದ ಮಹತ್ತರವಾದದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಇಂದಿನ ಶಿಕ್ಷಣ ವ್ಯವಸ್ಥೆ ಒಬ್ಬ ವ್ಯಕ್ತಿಯನ್ನು ಸ್ವಾವಲಂಬಿಯಾಗಿಯೂ, ದೇಶಪ್ರೇಮಿಯಾಗಿಯೂ ನಿರ್ಮಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿಯೇ ನಮ್ಮ ದೇಶದಲ್ಲಿ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವವರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ವಾಮಮಾರ್ಗದಿಂದ ಹಣ ಗಳಿಸುವ ಅವಕಾಶ ಸಿಕ್ಕಾಗಲೆಲ್ಲ ಪ್ರಾಮಾಣಿಕತೆಯನ್ನು ಮರೆತು ಬಿಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ನಿರಂತರ ಹದಿನೆಂಟು, ಇಪ್ಪತ್ತು ವರ್ಷಗಳವೆರೆಗೆ ಪಡೆದುಕೊಂಡ ಜ್ಞಾನದ ಲಾಭವನ್ನು ಇಂದಿನ ವ್ಯವಸ್ಥೆಗೆ ಪೂರಕವಾಗಿ ಬಳಸಿಕೊಳ್ಳಲು ಅವಕಾಶದ ಕೊರತೆ ಬಹಳಷ್ಟಿದೆ. ಈಗ ಉದ್ದಿಮೆ, ವ್ಯಾಪಾರ ಹಾಗೂ ನೌಕರಿಯಲ್ಲಿ ತೊಡಗಿಕೊಂಡಿರುವವರು ತಾವು ಪಡೆದುಕೊಂಡ ಶಿಕ್ಷಣದ ಹಿನ್ನೆಲೆಯ ಅಡಿಪಾಯದಲ್ಲಿ ಸಿಗುವವರು ಬಹಳಷ್ಟು ವಿರಳ. ಇವುಗಳನ್ನು ಅವಲೋಕಿಸಿದಾಗ ಇಂದಿನ ಶೈಕ್ಷಣಿಕ ವ್ಯವಸ್ಥೆ ಹಾಗೂ ಇಂದಿನ ಸಾಮಾಜಿಕ ಜೀವನದ ನಡುವಿನ ಅಂತರ ಬಹಳಷ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಭಾರತದ ಶೈಕ್ಷಣಿಕ ವ್ಯವಸ್ಥೆಯನ್ನು ಲಾರ್ಡ್ ಮೆಕಾಲೆ ಎಂಬುವವನು ರೂಪಿಸಿದನೆಂದು ಹೇಳಲಾಗುತ್ತದೆ. ಬ್ರಿಟಿಷರ ಆಡಳಿತದಲ್ಲಿ ಕಡತಗಳನ್ನು ಬರೆದಿಡುವ, ಲೆಕ್ಕಗಳನ್ನು ಸರಿಯಾಗಿ ಸಲ್ಲಿಸುವ ಕಾರಕೂನರ ಅವಶ್ಯಕತೆ ಹೆಚ್ಚಾಗಿತ್ತು. ಹೀಗೆ ಪತ್ರವ್ಯವಹಾರ ನಡೆಸುವ ಹಾಗೂ ಲೆಕ್ಕಗಳನ್ನು ಸರಿಯಾಗಿ ಬರೆದಿಡಲು ತಲೆಯಲ್ಲಿ ಶೂನ್ಯವಿಚಾರಗಳನ್ನು ತುಂಬಿಕೊಂಡ ಅಕ್ಷರಸ್ಥರನ್ನು ರೂಪಿಸುವ ಹಿನ್ನೆಲೆಯಲ್ಲಿ ರೂಪುಗೊಂಡು ಶೈಕ್ಷಣಿಕ ಪದ್ಧತಿಯು ದೇಶಪ್ರೇಮಿಗಳನ್ನು ಹಾಗೂ ಮಾನವತಾವಾದಿಗಳನ್ನು ರೂಪಿಸುವ ಇರಾದೆ ಹೊಂದಿರಲಿಲ್ಲ. ಭಾರತದ ಸ್ವಾತಂತ್ರ ಚಳವಳಿಯನ್ನು ಅವಲೋಕಿಸಿದಾಗ ಆಂದೋಲನದ ನಾಯಕತ್ವವನ್ನು ವಹಿಸಿಕೊಂಡಿರುವವರೆಲ್ಲರೂ ಪಾಶ್ಚಾತ್ಯ ಚಿಂತಕರ ಸಿದ್ಧಾಂತಗಳಿಂದಲೇ ಪ್ರೇರಣೆಗೊಂಡು ಕ್ರಾಂತಿ ಹಾಗೂ ಚಳವಳಿಗಳನ್ನು ರೂಪಿಸುವ ಸನ್ನಾಹಕ್ಕೆ ಕೈ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಗಣತಂತ್ರ ದೇಶದಲ್ಲಿನ ನಾಗರಿಕನಿಗೆ ದೇಶವನ್ನು ಪ್ರೀತಿಸುವ ಹಾಗೂ ಸಮಾಜದ ಅಭ್ಯುದಯಕ್ಕೆ ಸನ್ನದ್ಧಗೊಳಿಸುವ ಸಾಮಾಜಿಕ ಹೊಣೆಗಾರಿಕೆ ಮೈದಳೆಯುವಂತೆ ನೋಡಿಕೊಳ್ಳುವುದು ವ್ಯವಸ್ಥೆಯ ಜವಾಬ್ದಾರಿಯಾಗುತ್ತದೆ. ಇಂದು ಶಿಕ್ಷಣವನ್ನರಸಿ ವಿಶ್ವವಿದ್ಯಾಲಯಗಳ ಮೆಟ್ಟಿಲೇರುವವರು ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಹಣಗಳಿಸುವ ಆಸ್ಥೆಯನ್ನು ಹೊಂದಿರುವುದು ಕಹಿಯಾದರೂ ಕಟು ಸತ್ಯ. ದೇಶದ ಗಡಿ ಕಾಯುವ ಸೈನಿಕರೆಲ್ಲರೂ ಬಡವರ ಮಕ್ಕಳು ಎಂಬ ಹೇಳಿಕೆ ಕೆಲದಿನಗಳ ವರೆಗೆ ಟೀಕೆ,ಟಿಪ್ಪಣಿಗಳಿಗೆ ಆಹಾರವಾದರೂ ಅದರಲ್ಲಿ ಸತ್ಯವಿರಲಿಲ್ಲ ಎಂದು ಹೇಳಲಾಗುವುದಿಲ್ಲ. ಹಾಗಿದ್ದರೆ ಎಂತಹ ಶೈಕ್ಷಣಿಕ ವ್ಯವಸ್ಥೆಯನ್ನು ನಾವು ನಿರೀಕ್ಷಿಸಬಹುದು.

ನಮ್ಮ ದೇಶದ ನಾಗರಿಕನ ಸರಾಸರಿ ಜೀವಿತಾವಧಿ ಅರವತ್ತು ವರ್ಷಗಳೆಂದುಕೊಳ್ಳುವುದಾದರೆ ಪದವಿ ಪಡೆದುಕೊಳ್ಳಲು ಕನಿಷ್ಠ ಇಪ್ಪತ್ತು ವರ್ಷಗಳಾಗುತ್ತವೆ. ಅಂದರೆ ತನ್ನ ಜೀವನದ ಮೂರನೆ ಒಂದಂಶದಷ್ಟು ಅವಽಯನ್ನು ಪದವಿ ಶಿಕ್ಷಣ ಪಡೆದುಕೊಳ್ಳುವುದಕ್ಕಾಗಿ ಮೀಸಲಿಡಬೇಕಾಗುತ್ತದೆ. ಇಷ್ಟು ದೀರ್ಘ ಪ್ರಮಾಣದ ಶಿಕ್ಷಣ, ಶೈಕ್ಷಣಿಕ ಗುಣಮಟ್ಟ ಯಾವ ಅಂಶಗಳನ್ನು ಒಳಗೊಂಡಿರಬೇಕು? ಕಲಿಕೆಯ ಪ್ರವೃತ್ತಿಯ ಧ್ಯೇಯೋದ್ದೇಶಗಳು ಯಾವ ದಿಕ್ಕುಗಳನ್ನು ಅವಲಂಬಿಸಿರಬೇಕು? ವ್ಯಕ್ತಿಯನ್ನು ಸಂಪೂರ್ಣ ನಾಗರಿಕನನ್ನಾಗಿ ನಿರ್ಮಿಸುವುದೇ ಮೂಲ ಉದ್ದೇಶ ಎಂದು ಮಹಾತ್ಮಾ ಗಾಂಧಿಜಿಯವರು ಹೇಳುತ್ತಾರೆ. ಸಂಪೂರ್ಣ ನಾಗರಿಕತೆಯೆಂದರೆ ಸತ್ಯವನ್ನು ಅವಲೋಕಿಸುವ ಶಕ್ತಿಯನ್ನು ತುಂಬಿಕೊಳ್ಳುವುದು, ಸಮಾಜಕ್ಕೆ ಹೊರೆಯಾಗಲಾರದಂತೆ ಬದುಕುವುದು, ರಾಷ್ಟ್ರ ನಿರ್ಮಾಣಕ್ಕೆ ತನ್ನಿಂದಾದ ಕೊಡುಗೆಯನ್ನು ಸಲ್ಲಿಸುವುದು, ಅಭಿವೃದ್ಧಿಯ ಭಾಗವಾಗಿ ನಿಲ್ಲುವುದು ಎಂದು ಅರ್ಥೈಸಿಕೊಳ್ಳಬಹುದೆ? ಶಿಕ್ಷಣದಿಂದ ವ್ಯಕ್ತಿಯೊಬ್ಬ ಸರಿತಪ್ಪುಗಳನ್ನು ವಿಶ್ಲೇಷಿಸುವ ತಾರ್ಕಿಕ ಆಲೋಚನೆಯನ್ನು ತುಂಬಿಕೊಳ್ಳಬೇಕಾಗುತ್ತದೆ.

ಸ್ವಾವಲಂಬಿಯಾಗಿ ತನ್ನ ಜೀವನವನ್ನು ನಿರ್ವಹಿಸಲು ಬೇಕಾಗುವ ಆದಾಯವನ್ನು ಉತ್ಪಾದಿಸುವ ಕೌಶಲಗಳನ್ನು ಹೊಂದಿರಬೇಕಾಗುತ್ತದೆ. ಇತಿಹಾಸದ ಹಿನ್ನೆಲೆಯಿಂದ ಪ್ರೇರೆಪಿತನಾಗಿ ಜಾಗತಿಕ ಮಟ್ಟದಲ್ಲಿ ತನ್ನ ದೇಶವು ಇತಿಹಾಸವನ್ನು ನಿರ್ಮಿಸಬೇಕೆಂಬ ಹಂಬಲದ ತುಡಿತವನ್ನು ಅಳವಡಿಸಿಕೊಂಡಿರಬೇಕಾಗುತ್ತದೆ. ಇವಿಷ್ಟನ್ನು ಸಮಾಜದಲ್ಲಿ ಪಸರಿಸುವಂತೆ ನೋಡಿಕೊಂಡಲ್ಲಿ ವ್ಯಕ್ತಿ, ಸಮಾಜ ಹಾಗೂ ದೇಶ ಸದೃಢವಾಗುವುದರಲ್ಲಿ ಯಾವ ಸಂಶಯವೂ ಇರಲಾರದು. ಇವುಗಳನ್ನು ಪಡೆದುಕೊಳ್ಳುವುದಕ್ಕೆ ಗಣಿತ ಶಾಸ, ವಿಜ್ಞಾನದ ವಿಶ್ಲೇಷಣೆ, ರಾಸಾಯಿನಿಕಗಳ ಪಾತ್ರ, ಪ್ರೇರಣಾಸ್ಪೂರ್ತಿ ಇತಿಹಾಸ, ವ್ಯವಸ್ಥೆಯ ಧ್ಯೇಯೋದ್ಯೇಶಗಳನ್ನು ಸಾಕಾರಗೊಳಿಸುವ ಸಂವಿಧಾನದ ಆಶೋತ್ತರಗಳೊಂದಿಗೆ ಪ್ರಾಥಮಿಕ ಹಂತದಿಂದಲೆ ಕೌಶಲ ಅಭಿವೃದ್ಧಿ ನೀಡಿದಲ್ಲಿ ಸಂಪೂರ್ಣ ವಿಕಸಿತ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗುವುದಿಲ್ಲವೆ?

ಇದರ ಬದಲಾಗಿ ಈಗ ಪಡೆದುಕೊಳ್ಳಲಾಗುತ್ತಿರುವ ಕ್ಲಿಷ್ಟಕರ ಇತಿಹಾಸದ ಜ್ಞಾನ. ವಿಜ್ಞಾನಿಯೊಬ್ಬ ಸಂಶೋಧನೆ ಕೈಗೊಳ್ಳಬಹುದಾದ ಗೊಂದಲಮಯ ಜೀವಶಾಸ, ಬದುಕಿಗೆ ಉಪಯೋಗವಿಲ್ಲದ ರಾಸಾಯಿನಿಕ ಪಠ್ಯಕ್ರಮ, ಒಂದಂಶವೂ ಉಪಯೋಗಿಸಲಾರದ ಸೈನ್‌ತೀಟಾ, ಕಾಸ್‌ತೀಟಾಗಳು. ಇವುಗಳನ್ನೆಲ್ಲ ಬಾಯಿಪಾಠದ ಮೂಲಕ ಪರೀಕ್ಷೆ ಬರೆದು ಅಂಕಪಟ್ಟಿಯೊಂದಿಗೆ ಹೊರಬರುವ ವಿಧ್ಯಾರ್ಥಿಯು ಅನಿವಾರ್ಯತೆಯಿಂದಾಗಿ ಕೃಷಿಕನಾದರೆ ಉಪಯೋಗಕ್ಕೆ ಬಾರದ ಸೈನ್‌ತೀಟಾಗಳು, ಆರಕ್ಷಕನಾದರೆ ಹೊಂದಾಣಿಕೆಯಾಗದ ರಾಸಾಯನಿಕಗಳು, ಗುಮಾಸ್ತನಾದರೆ ಗುರಿಕಂಡುಕೊಳ್ಳಲಾರದ ಭೌತಶಾಸ ಸಿದ್ಧಾಂತಗಳು, ಇತ್ಯಾದಿ ಇತ್ಯಾದಿ. ಕಲಿತದ್ದೆ ಬೇರೆ, ಕರ್ತವ್ಯ ನಿರ್ವಹಿಸುವ ಕ್ಷೇತ್ರವೇ ಬೇರೆ. ಕರ್ತವ್ಯ ನಿರ್ವಹಿಸಲು ಅವಕಾಶ ಸಿಗದ ನಿರುದ್ಯೋಗಿಗಳ ಅಸಂಖ್ಯ ಪ್ರಮಾಣಗಳು ಬೇರೆ ಬೇರೆ. ಇಂತಹ ಗೊಂದಲದ ಗೂಡಾಗಿರುವ ಶೈಕ್ಷಣಿಕ ವ್ಯವಸ್ಥೆಗೆ ವಿದ್ಯಾರ್ಥಿ ಗ್ರಾಮವೆಂಬ ಪರಿಕಲ್ಪನೆ ಉತ್ತರವನ್ನು ಒದಗಿಸಬಲ್ಲದೆ? ಕನಿಷ್ಠ ಜಿಲ್ಲೆಗೊಂದಾದರೂ ವಿದ್ಯಾರ್ಥಿ ಗ್ರಾಮಗಳನ್ನು ರೂಪಿಸಲು ನಮ್ಮಿಂದ ಸಾಧ್ಯವಿಲ್ಲವೆ? ವಿದ್ಯಾರ್ಥಿ ಗ್ರಾಮಗಳ ಪರಿಕಲ್ಪನೆ ಹೇಗಿರಬೇಕು?

ವಿದ್ಯಾರ್ಥಿ ಗ್ರಾಮದಲ್ಲಿ ವಿದ್ಯೆಯನ್ನರಸಿ ಬರುವ ಎಲ್ಲರಿಗೂ ಅವಕಾಶ ಸಿಗುವಂತಾಗಬೇಕು. ಶಿಕ್ಷಣವು ತಾರ್ಕಿಕ ಆಲೋಚನೆಗೆ ಒಡ್ಡುವ ಪ್ರಮಾಣದ ಗಣಿತ, ವಿಜ್ಞಾನ ಮತ್ತು ಖಗೋಳಗಳನ್ನು ಹೊಂದಿದ್ದರೆ ಸಾಕು. ವಿದ್ಯಾರ್ಥಿ ದೆಸೆಯಿಂದಲೆ ತನಗಾಸಕ್ತಿ ಇರುವ ಕೌಶಲಾಭಿವೃದ್ದಿಯಲ್ಲಿ ಪರಿಣಿತಿಯನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸಬೇಕು. ಆಸಕ್ತಿ ಇರುವ ವಿಷಯದಲ್ಲಿ ಸಂಶೋಧನೆ ಕೈಗೊಳ್ಳುವುದಕ್ಕೂ ಅವಕಾಶವಿರಲಿ. ಇತಿಹಾಸ ಹಾಗೂ ಸಂವಿಧಾನ, ಆಡಳಿತ ಪದ್ದತಿಗಳ ಅರಿವು ಸ್ಪೂರ್ತಿದಾಯಕವಾಗುವಂತೆ ರೂಪಿಸಿದಲ್ಲಿ ವಿದ್ಯಾರ್ಥಿ ದೆಸೆಯಿಂದಲೆ ದೇಶಪ್ರೇಮವನ್ನು ಬೆಳೆಸಿಕೊಳ್ಳಬಹುದು. ವಿದ್ಯಾರ್ಥಿ ಗ್ರಾಮದಲ್ಲಿ ಅಭ್ಯಸಿಸುವ ಪ್ರತಿಯೊಬ್ಬ ವಿದ್ಯಾರ್ಥಿ ಸ್ವದೇಶಿ ಉತ್ಪಾದನೆಯಲ್ಲಿ ಭಾಗವಹಿಸುವುದು ಹಾಗೂ ಉತ್ಪನ್ನಗಳ ಬಳಕೆಯ ಭಾಗವಾಗುವಂತೆ ನೋಡಿಕೊಂಡಲ್ಲಿ ದೇಶಾಭಿಮಾನವೂ ರಕ್ತಗತವಾಗಬಹುದು. ವಿದ್ಯಾರ್ಥಿ ಗ್ರಾಮದಿಂದ ಹೊರಬಂದವನು ನೌಕರಿಗಾಗಿ ಅಲೆಯುವುದಕ್ಕಿಂತ ಅದನ್ನು ಸೃಷ್ಟಿಸಬಲ್ಲೆನೆಂಬ ಆತ್ಮವಿಶ್ವಾಸದಿಂದ ಹೊರಬರುವಂತೆ ನೋಡಿಕೊಳ್ಳುವಂತಾಗಿದ್ದರೆ ನಮ್ಮ ದೇಶವು ಎಂದಿಗೂ ನಂಬರ್ ಒನ್ ಆಗಿರುತ್ತಿರಲಿಲ್ಲವೆ?

Leave a Reply

Your email address will not be published. Required fields are marked *

four × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top