ಹಣ ಹೆಂಡ ಕೇಳದ ಯುವಪಡೆಯಿದೆ ಕುಡಚಿಯಲ್ಲಿ!

Posted In : ಅಂಕಣಗಳು, ಯಾರಿಗೆ ಹೇಳೋಣ?

ಚುನಾವಣೆಯೆಂಬ ಪ್ರಸವವೇದನೆಯ ಅನುಭವವನ್ನು ಹಂಚಿಕೊಳ್ಳಲೇಬೇಕು. ಒಂದು ಚುನಾವಣೆಯನ್ನು ಎದುರಿಸುವುದೆಂದರೆ ಅದೊಂದು ಕಸರತ್ತಿನ ಕೆಲಸವೇ ಆಗಿದೆ. ಎಲ್ಲಾ ರೀತಿಯ ಸಾಮ-ದಾನ-ಬೇಧ-ದಂಡ ಮುಂತಾದ ಪಟ್ಟುಗಳನ್ನು ಸಡಿಲಿಸದೆ ಅಖಾಡಕ್ಕೆ ಧುಮುಕಬೇಕಾದ ಅನಿವಾರ್ಯತೆ. ಯಾವುದೋ ಉದ್ವೇಗ, ಹುಟ್ಟಿಕೊಳ್ಳುವ ಭಾವಾವೇಶಗಳ ನಡುವಿನಲ್ಲಿ ಜನಾಭಿಪ್ರಾಯದ ಅಲೆಯೊಂದಿಗೆ ಈಜಿ ದಡಸೇರುವುದು ಅಷ್ಟೊಂದು ಸುಲಭದ ಪ್ರಯಾಣವಲ್ಲ. ಚುನಾವಣೆಯನ್ನೆದುರಿಸುವುದೆಂದರೆ ಸಾವಿರ ಆಲೋಚನೆಗಳ ಸಾಗರದ ಮಧ್ಯದಲ್ಲಿ ಹುಟ್ಟಿಕೊಳ್ಳುವ ತೆರೆಗಳನ್ನು ಈಜಿ ದಡವನ್ನು ಸೇರಿದಂತೆ. ನನ್ನದೊಂದು ಅನುಭವ ನಿಮ್ಮೊಂದಿಗೆ.

ಸ್ವತಂತ್ರವಾಗಿ ಆಯ್ಕೆಯಾಗಿ ಕರ್ನಾಟಕ ವಿಧಾನಸೌಧವನ್ನು 2013 ರಲ್ಲಿ ಪ್ರವೇಶಿಸಿದ್ದೆ. ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಮತದಾರ ಬಂಧುಗಳಿಗೆ ಒಂದು ಪೈಸೆ ಹಣವನ್ನು ನೀಡಿರಲಿಲ್ಲ. ಹನಿಯಷ್ಟು ಹೆಂಡವನ್ನು ನೀಡದಿದ್ದರೂ ಬಹುದೊಡ್ಡ ಅಂತರದಿಂದ ನನ್ನನ್ನು ಚುನಾಯಿಸಿ ವಿಧಾನಸೌಧಕ್ಕೆ ಕಳುಹಿಸಿದ್ದರು. ಸ್ವತಂತ್ರವಾಗಿ ಆಯ್ಕೆಯಾಗಿದ್ದರಿಂದ ಸರಕಾರದ ಅನುದಾನ ಹಂಚಿಕೆಯಲ್ಲಿ ತಾರತಮ್ಯವೆಂಬುದು ಮುಖಕ್ಕೆ ಬಡಿದಂತೆ ಎದ್ದು ಕಾಣುತ್ತಿತ್ತು. ಕ್ಷೇತ್ರದಲ್ಲಿನ ಜನತೆಗೆ ಇದು ಅರ್ಥವಾಗುತ್ತಿರಲಿಲ್ಲ. ಅದು ಅವರ ತಪ್ಪಲ್ಲ! ಯೋಗ್ಯನೊಬ್ಬನನ್ನು ಆರಿಸಿ ವಿಧಾನಸೌಧಕ್ಕೆ ಕಳುಹಿಸುವ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದರು. ಹೀಗೆ ಆಯ್ಕೆ ಮಾಡಿದ ಜನರಿಗೆ ನ್ಯಾಯವನ್ನೊದಗಿಸುವುದಕ್ಕಾಗಿ ಹಗಲಿರುಳು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಮತಚಲಾಯಿಸಿದ ಕ್ಷೇತ್ರದ ಮಾಲೀಕನಿಗೆ ಸೇವಕನೊಬ್ಬ ಸಲ್ಲಿಸಬೇಕಾದ ಕರ್ತವ್ಯಪ್ರಜ್ಞೆ ಶಾಸಕನಾದ ನನ್ನ ಮನಸ್ಸಿನೊಳಗೆ ಆಳವಾಗಿ ಬೇರೂರಿತ್ತು.

ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಸದಸ್ಯನಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದೆ. ಈ ಸಮಿತಿಯು ಸಂಪ್ರದಾಯದಂತೆ ವಿದೇಶಿ ಪ್ರವಾಸವನ್ನು ಕೈಗೊಂಡಿತ್ತು. ಅದೇ ಸಂದರ್ಭದಲ್ಲಿ ನನ್ನ ಮತಕ್ಷೇತ್ರದ ಕೆಲವು ಹಳ್ಳಿಗಳಿಗೆ ವಸತಿ ಯೋಜನೆಯಡಿಯಲ್ಲಿ ಮನೆ ಹಂಚಿಕೆಯ ಗ್ರಾಮಸಭೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಪುಕ್ಕಟೆಯಾಗಿ ವಿದೇಶಿ ಪ್ರವಾಸವನ್ನು ಕೈಗೊಳ್ಳುವುದೊ ಅಥವಾ ಅರ್ಹ ಫಲಾನುಭವಿಗಳನ್ನು ಗುರುತಿಸುವುದರ ಮೂಲಕ ಗುಡಿಸಲುವಾಸಿಗಳಿಗೆ ಸೂರನ್ನೊದಗಿಸುವ ಭಾಗವಹಿಸುವುದೊ? ಎಂಬ ಜಿಜ್ಞಾಸೆ ತಲೆದೋರಿತ್ತು. ಅಂತಿಮವಾಗಿ ಅಮೆರಿಕ, ಆಸ್ಟ್ರೇಲಿಯಾ, ಯುರೋಪ್ ದೇಶಗಳನ್ನೊಂಡ ಪುಕ್ಕಟೆ ವಿದೇಶ ಪ್ರವಾಸವನ್ನು ಕೈಬಿಟ್ಟು ಬಡವರಿಗೆ ಮನೆ ಹಂಚುವ ಕೆಲಸದಲ್ಲಿ ತೊಡಗಿಕೊಂಡಿದ್ದೆ. ಅದರಲ್ಲಿ ಹೆಚ್ಚಿನ ತೃಪ್ತಿಯನ್ನು ಸಹ ಕಂಡುಕೊಂಡಿದ್ದೆ.

ಸರಕಾರದಿಂದ ಅನುದಾನ ಹಂಚಿಕೆಯಲ್ಲಿನ ತಾರತಮ್ಯವನ್ನು ವಿರೋಧಿಸಿ ವಿಕಾಸಸೌಧದಲ್ಲಿ ಧರಣಿ ಕುಳಿತು ನನ್ನ ಕ್ಷೇತ್ರಕ್ಕೆ ಸಲ್ಲಬೇಕಾದ ನ್ಯಾಯವನ್ನು ಹೋರಾಟದಿಂದ ಪಡೆದುಕೊಂಡಿದ್ದೆ. ದಿನನಿತ್ಯ ಸಾರ್ವಜನಿಕರೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಕ್ಷೇತ್ರದಲ್ಲಿನ ಅಭಿವೃದ್ಧಿಯೊಂದಿಗೆ ಸಾರ್ವಜನಿಕರೊಂದಿಗಿನ ಸೌಹಾರ್ದಯುತ ಸಂಪರ್ಕವನ್ನೂ ಇಟ್ಟುಕೊಂಡಿದ್ದೆ. ಚುನಾವಣೆ ಕಾವು ಏರುತ್ತಿದ್ದಂತೆ ಬದಲಾಯಿಸಿ ಬಿಡುತ್ತವೆ. ಚುನಾವಣಾ ಸಂದರ್ಭದಲ್ಲಿ ಮತದಾರನ ಚಿಂತನಾಲಹರಿ ಬೇರೊಂದು ಹಂತವನ್ನು ತಲುಪಿಬಿಡುತ್ತದೆ. ಜಾತೀಯತೆಯ ಅಫೀಮು ರಕ್ತದಲ್ಲಿ ಹರಿದಾಡಲಾರಂಭಿಸುತ್ತದೆ. ಜನರಮನಸ್ಸಿನೊಳಗೆ ಇಲ್ಲಸಲ್ಲದ ಗೊಂದಲವನ್ನು ಸೃಷ್ಟಿಸಲಾಗುತ್ತದೆ.

ಉದ್ದೇಶಪೂರ್ವಕವಾಗಿ ಭಯದ ವಾತಾವರಣವನ್ನು ನಿರ್ಮಿಸಲಾಗುತ್ತದೆ. ಕೋಮು ಪ್ರಚೋದನೆಯನ್ನು ಹುಟ್ಟಿಸುವ ಮೂಲಕ ಮನಸ್ಸುಗಳನ್ನು ಕದಡುವ ಪ್ರಯತ್ನ ಸದ್ದಿಲ್ಲದಂತೆ ನಡೆಯುತ್ತದೆ. ಹಣ ಮತ್ತು ಮದ್ಯದ ಆಮಿಷವನ್ನೊಡ್ಡಿ ಜನರನ್ನು ದಾರಿ ತಪ್ಪಿಸುವ ಎಲ್ಲಾ ಪ್ರಯತ್ನಗಳೂ ಎಗ್ಗಿಲ್ಲದೆ ಸಾಗುತ್ತದೆ. ಮಾನಸಿಕವಾಗಿ ಘಾಸಿಗೊಳ್ಳಬಹುದಾದ ಸುಳ್ಳು ಸುದ್ದಿಗಳನ್ನು ಸತ್ಯದ ಮುಖಕ್ಕೆರಚಿದಂತೆ ಹಬ್ಬಿಸಲಾಗುತ್ತದೆ. ಗುಡಿಗುಂಡಾರಗಳಿಗೆ ಸಲ್ಲಿಸಲಾಗುತ್ತದೆ. ಮತದಾರರು ಭಾವಾವೇಶಕ್ಕೊಳಗಾಗುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತದೆ.

ಯಾವ ಉದ್ದೇಶಕ್ಕಾಗಿ ಚುನಾವಣೆಯನ್ನು ನಡೆಸಲಾಗುತ್ತದೆಯೊ ಆ ಉದ್ದೇಶವನ್ನು ಸಂಪೂರ್ಣವಾಗಿ ಮರೆಯಲಾಗುತ್ತದೆ. ಜನಪ್ರತಿನಿಧಿಯಾಗಬಯಸುವವನಿಗೆ ತನ್ನ ಮುಂದಿನ ಉದ್ದೇಶಗಳೇನು? ಯಾವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ, ಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರದ ಗಮನಸೆಳೆಯಬೇಕಾದ ಪ್ರಮುಖ ಅಂಶಗಳು ಯಾವವು ಎಂಬುದನ್ನು ಜನತೆಗೆ ತಿಳಿಸುವುದಕ್ಕಿಂತಲೂ ಹೆಚ್ಚಾಗಿ ಧರ್ಮದ ಹೆಸರಿನಲ್ಲಿ ಚರ್ಚೆಗಳು ಗರಿಗೆದರಿಗೊಳ್ಳುತ್ತವೆ. ಆರೋಗ್ಯ, ಶಿಕ್ಷಣ, ಮೂಲಭೂತ ಸೌಲಭ್ಯ, ನೀರಾವರಿ, ಕೃಷಿ, ಔದೋಗ್ಯೀಕರಣದ ಬದಲಾಗಿ ಜಾತಿ ಸಮೀಕರಣ, ಗುಂಪುಗೂಡುವಿಕೆ, ದ್ವೇಷದ ಭಾವನೆಯನ್ನು ಕೆರಳಿಸುವುದು, ಗುಂಪುಗಳ ನಡುವೆ ಹಲ್ಲೆ, ಮಾರಾಮಾರಿಗಳನ್ನು ಹುಟ್ಟು ಹಾಕುವುದು ಸರ್ವೇ ಸಾಮಾನ್ಯವಾಗಿರುತ್ತದೆ.

ಚುನಾವಣೆಯ ಸಂದರ್ಭದಲ್ಲಿ ಪ್ರತಿ ಓಟುಗಳಿಗೆ ಹಣವನ್ನು ನೀಡಿ ಖರೀದಿಸುವ ಪ್ರಯತ್ನ ಸಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ಹಲವಾರು ಆಮಿಷಗಳಿಗೆ ಮತದಾರನನ್ನು ಬಲಿಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಪ್ರತಿ ಮತಕ್ಕೆ ಇಂತಿಷ್ಟು ಹಣ ನೀಡುವುದಾಗಿ ಪುಸಲಾಯಿಸಲಾಗುತ್ತದೆ. ಆದರೆ ಹೀಗೆ ನೀಡಲಾದ ಹಣವನ್ನು ಹೇಗೆ ವಸೂಲಿ ಮಾಡಬಹುದೆಂಬ ತರ್ಕ ಮತದಾರನಿಗೆ ತಿಳಿಯದಂತೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ಯಾವೊಬ್ಬ ರಾಜಕಾರಣಿಯೂ ತನ್ನ ದುಡಿಮೆಯ ಹಣವನ್ನು ಚುನಾವಣೆಯಲ್ಲಿ ವಿನಿಯೋಗಿಸಿ ತೋರಿದ ನಿದರ್ಶನಗಳಿಲ್ಲ.

ಚುನಾವಣಾ ಸಂದರ್ಭದಲ್ಲಿ ಮತವೊಂದಕ್ಕೆ ಒಂದು ಸಾವಿರ ರೂಪಾಯಿಗಳಷ್ಟು ಹಣವನ್ನು ನೀಡಿದಲ್ಲಿ ಐದು ವರ್ಷಗಳ ಸರಾಸರಿ ಸಾವಿರದ ಎಂಟುನೂರು ದಿನಗಳಷ್ಟು ಅವಧಿಗೆ ತನ್ನ ಹಕ್ಕನ್ನು ಮಾರಿಕೊಂಡಂತಾಗುತ್ತದೆ. ಅಂದರೆ ಪ್ರತಿದಿನ ಒಂದು ರೂಪಾಯಿ ಎಂಟು ಪೈಸೆಗಳಷ್ಟು ಮೌಲ್ಯಕ್ಕೆ ತನ್ನ ಮತವನ್ನು ಮಾರಿಕೊಂಡಂತಾಗುತ್ತದೆ. ಆದರೆ ಐದು ವರ್ಷಗಳ ಅವಧಿಯಲ್ಲಿ ಮತದಾರನೊಬ್ಬ ಕಳೆದುಕೊಳ್ಳಬಹುದಾದ ಹಣದ ಪ್ರಮಾಣ ಇದಕ್ಕಿಂತಲೂ ಸಾವಿರಪಟ್ಟು ಹೆಚ್ಚಾಗಿರುತ್ತದೆ!  ಹೀಗೆ ಅಪಾರ ಪ್ರಮಾಣದ ಹಣವನ್ನು ವ್ಯಯಿಸುವ ರಾಜಕಾರಣಿಗಳು ಹಣವನ್ನು ಸಂಪಾದಿಸುವುದಾದರೂ ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜಕಾರಣಿಗಳು ಹಣವನ್ನು ನಿರೀಕ್ಷಿಸುತ್ತಾರೆ! ಹೀಗೆ ಹಣವನ್ನು ನೀಡಿ ವರ್ಗಾವಣೆ ಬಯಸಿ ಬಂದ ಅಧಿಕಾರಿಗಳು ಹಣವನ್ನು ಗಳಿಸುವುದಾದರೂ ಎಲ್ಲಿಂದ? ಜನಸಾಮಾನ್ಯರನ್ನು ಹಣಕ್ಕಾಗಿ ಪೀಡಿಸಲಾರಂಭಿಸುತ್ತಾರೆ. ಕಂದಾಯ ಇಲಾಖೆಯಲ್ಲಿ ಭೂದಾಖಲಾತಿ ತಿದ್ದುಪಡಿ, ಖರೀದಿ ವ್ಯವಹಾರಗಳಲ್ಲಿ ಹಣವನ್ನು ಜನರಿಂದ ಪೀಕಲಾರಂಭಿಸುತ್ತಾರೆ.

ಪೊಲೀಸ್ ಠಾಣೆಗಳಲ್ಲಿ ಅಮಾಯಕನನ್ನು ಪ್ರಕರಣದಲ್ಲಿ ಭಾಗಿಯಾಗಿಸುವ ಅಪಾಯವನ್ನೊಡ್ಡಿ ಹಣ ಪಡೆದುಕೊಳ್ಳುತ್ತಾರೆ. ಪಡಿತರ ಇಲಾಖೆಯಲ್ಲಿ ಸಾರ್ವಜನಿಕರಿಗೆ ವಿತರಣೆಯಾಗಬೇಕಾದ ಆಹಾರ ಪದಾರ್ಥಗಳು ತೂಕದಲ್ಲಿನ ಮೋಸದ ಫಲವಾಗಿ ಕಾಳ ಸಂತೆಯಲ್ಲಿ ಮಾರಲ್ಪಡುತ್ತವೆ. ಸಾಮಾಜಿಕ ಭದ್ರತೆ ಪಿಂಚಣಿ ಸೌಲಭ್ಯ ಪಡೆದುಕೊಳ್ಳುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪಡೆಯಲಾಗುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳಿಗೂ ಹಣವನ್ನು ನೀಡಲೇಬೇಕಾಗುತ್ತದೆ. ಇದು ಜನಪ್ರತಿನಿಧಿಯ ಗಮನಕ್ಕೆ ಬರುವುದಿಲ್ಲವೆಂದಲ! ಆದರೆ ಅಧಿಕಾರಿಗಳಿಂದ ವರ್ಗಾವಣೆಯ ದಂಧೆಯಲ್ಲಿ ಹಣ ಪಡೆದಿರುವುದರಿಂದ ಮೌನವಹಿಸಲೇ ಬೇಕಾಗುತ್ತದೆ.

ಅಂತಿಮವಾಗಿ ಬಲಿಪಶುವಾಗುವುದು ಜನಸಾಮಾನ್ಯನೇ. ಆದರೂ ಚುನಾವಣೆಯಲ್ಲಿ ಮತದಾರ ಪ್ರಬುದ್ಧನಾಗುವುದು ಬಹಳ ಕಡಿಮೆ. ನನ್ನ ಪ್ರಕಾರ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುವುದು ಯಾರನ್ನೊ ಶಾಸಕರನ್ನಾಗಿ ಮಾಡುವುದಕ್ಕಾಗಿ ಅಲ್ಲ. ಯಾರಿಗೊ ವಿಧಾನಸೌಧದ ಒಳಗೆ ಆಸನಗಳನ್ನು ಅಲಂಕರಿಸಲು ಅಲ್ಲ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯು ಜನಪ್ರತಿನಿಧಿಯನ್ನು ಆರಿಸುವುದಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯನ ನೆಮ್ಮದಿಯ ಬದುಕಿಗಾಗಿ. ಎಂತಹ ವ್ಯಕ್ತಿ ಆಯ್ಕೆಯಾದಲ್ಲಿ ನನ್ನ ಮೇಲಿನ ಶೋಷಣೆ ಕಡಿಮೆಯಾಗಬಹುದು. ಅಧಿಕಾರಿಗಳ ಕಿರುಕುಳ ತಪ್ಪಬಹುದು. ನನ್ನೂರಿನ ಮೂಲಭೂತ ಸೌಲಭ್ಯಗಳು ಅಭಿವೃದ್ಧಿಗೊಳ್ಳಬಹುದು.

ನಾನು ಬದುಕುವ ವಾತಾವರಣ ಸೌಹಾರ್ದಯುತವಾಗಿ ನಿರ್ಮಾಣಗೊಳ್ಳಬಹುದು ಎಂಬುದನ್ನು ಚಿಂತಿಸುವುದಕ್ಕಾಗಿ. ಹಾಗಾಗಿಯೆ ಚುನಾವಣೆಯೆನ್ನುವುದು ರಾಜಕಾರಣಿಗಿಂತಲೂ ಹೆಚ್ಚು ಪ್ರಮುಖವಾಗಿರುವುದು ಜನಸಾಮಾನ್ಯನೊಬ್ಬನಿಗೆ. ತನ್ನ ದುಡಿಮೆಯ ಪ್ರತಿಫಲವನ್ನು ಬೇರೊಬ್ಬರು ಕಿತ್ತುಕೊಳ್ಳದಂತೆ ನೋಡಿಕೊಳ್ಳುವ ವಾತಾವರಣ ಎಲ್ಲಕ್ಕಿಂತಲೂ ಮುಖ್ಯವಾದುದು. ಆದರೆ ಇಂತಹ ಜನಸಾಮಾನ್ಯರಲ್ಲಿ ಹುಟ್ಟುಹಾಕಲು ಇಂದಿಗೂ ಸಾಧ್ಯವಾಗಿರುವುದಿಲ್ಲ.

ಸಣ್ಣ ಮೀನನ್ನು ಮುಳ್ಳಿಗೆ ಚುಚ್ಚಿ ದೊಡ್ಡ ಮೀನನ್ನು ಹಿಡಿಯುವಂತೆ ಮತದಾರ ಪ್ರಭುವಿಗೆ ಚಿಕ್ಕ ಚಿಕ್ಕ ಆಮಿಷಗಳನ್ನೊಡ್ಡಿ ದೊಡ್ಡ ದೊಡ್ಡ ಭ್ರಷ್ಟಾಚಾರದಲ್ಲಿ ಭಾಗಿಯಾಗುವ ರಾಜಕಾರಣಿಗಳು ಮೇಲಕ್ಕೆದ್ದು ಬಿಡುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ತರ್ಕಬದ್ಧವಾಗಿ ಆಲೋಚಿಸದ ಮತದಾರ ನಂತರದ ಐದು ವರ್ಷಗಳ ವರೆಗೆ ಪಶ್ಚಾತಾಪ ಪಡುತ್ತಲೆ ನೋವು ಅನುಭವಿಸಿರುತ್ತಿರುತ್ತಾನೆ. ಚುನಾವಣಾ ಆಯೋಗವು ಎಷ್ಟೆ ಕಟ್ಟು ನಿಟ್ಟಿನ ಕ್ರಮಗಳನ್ನು ಜರುಗಿಸಿದರೂ ಸಹ ಚುನಾವಣಾ ಅಕ್ರಮಗಳು ಸರಾಗವಾಗಿ ಸಾಗುತ್ತಲೆ ಇವೆ. ಮತದಾರನ ಮನಸ್ಸು ಪ್ರಬುದ್ಧಗೊಳ್ಳುವುದಿಲ್ಲವೋ ಅಲ್ಲಿಯವರೆಗೂ ಇಂತಹ ಸನ್ನಿವೇಶಗಳನ್ನು ನೋಡುತ್ತಲೆ ಇರಬೇಕಾಗುತ್ತದೆ.

ವ್ಯವಸ್ಥೆಯೆಂಬುದು ಒಂದು ವಿಶಾಲ ಮರವಿದ್ದಂತೆ. ವ್ಯಕ್ತಿಯೆಂಬುದು ಆ ಮರದ ಎಲೆಗಳಿದ್ದಂತೆ. ಮರವು ಸಂಪೂರ್ಣವಾಗಿ ಒಣಗಿಹೋದರೂ ಅಡ್ಡಿಯಿಲ್ಲ. ನಾನು ಮಾತ್ರ ಸದಾ ಹಸಿರಾಗಿರಬೇಕೆಂದು ಮರದ ಎಲೆಯೊಂದು ಬಯಸಿದರೆ ಹಸಿರಾಗಿರಲು ಹೇಗೆ ಸಾಧ್ಯವಾದೀತು? ಅದರಂತೆಯೆ ರಾಜಕಾರಣಿಗಳು ಪ್ರಾಮಾಣಿಕರಾಗಿರಬೇಕು. ಆಡಳಿತದಲ್ಲಿ ಶುದ್ಧ ಹಸ್ತರಾಗಿರಬೇಕು. ಆದರೆ ಚುನಾವಣೆಯ ಸಂದರ್ಭದಲ್ಲಿ ನನಗೆ ಮಾತ್ರ ಹಣ, ಹೆಂಡ ನೀಡಲೇಬೇಕು ಎಂದು ಜನಸಾಮಾನ್ಯನು ಬಯಸುವುದಾದರೆ ನಾವು ಕಟ್ಟಿಕೊಳ್ಳುವ ಕುಸಿಯದಿರಲು ಹೇಗೆ ಸಾಧ್ಯವಾದೀತು? ಕೇವಲ ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಜಾಹೀರಾತಿನ ಮೂಲಕ ತಿಳಿವಳಿಕೆ ನೀಡಿದರೆ ಸಾಲದು. ಮತದಾರನ ಆಲೋಚನಾ ಲಹರಿಯನ್ನು ಪ್ರಬುದ್ಧಗೊಳಿಸುವ ಪ್ರಕ್ರಿಯೆ ವರ್ಷವಿಡಿ ಜಾರಿಯಲ್ಲಿರುವಂತೆ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಎಲ್ಲದಕ್ಕೂ ಅಪವಾದಗಳಿರುವಂತೆ ಕೆಲವು ಮತಕ್ಷೇತ್ರಗಳಲ್ಲಿ ಪ್ರಬುದ್ಧ ಮತದಾರರಿದ್ದಾರೆ. ಸ್ವಚ್ಛ ಮತ್ತು ಪಾರದರ್ಶಕ ಚುನಾವಣೆಗೆ ಆದ್ಯತೆ ನೀಡಿದವರು ಇದ್ದಾರೆ. ಹಣ ಮತ್ತು ಹೆಂಡವನ್ನು ಹಂಚದೆ ಚುನಾವಣೆಯನ್ನು ನಡೆಸಿದ ಅಭ್ಯರ್ಥಿಗಳೂ ಇದ್ದಾರೆ. ಮುಂದಿನ ದಿನಗಳು ಭರವಸೆಯ ಬದುಕನ್ನು ಎಂಬ ಅಭಿಲಾಷೆಯೊಂದಿಗೆ ಇಂತಹ ಕ್ಷೇತ್ರಗಳಲ್ಲು ಗೌರವದಿಂದ ನೋಡಬಹುದಾಗಿದೆ. ಫಲಿತಾಂಶ ಏನೆ ಆಗಿರಲಿ! ಆದರೆ ಹಣ ಮತ್ತು ಹೆಂಡಕ್ಕೆ ಆಸೆಪಡದೆ ಚುನಾವಣೆಯನ್ನು ಎದುರಿಸಿದ ಬಹುದೊಡ್ಡ ಯುವಪಡೆ ಕುಡಚಿ ಮತಕ್ಷೇತ್ರದಲ್ಲಿದೆ ಎಂಬ ಹೆಮ್ಮೆ ನನಗಿದೆ.

Leave a Reply

Your email address will not be published. Required fields are marked *

two × 2 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top