ಸಣ್ಣದಾದರೂ ಕಗ್ಗಂಟಾಗಿರುವ ಮರಳು ಸಮಸ್ಯೆ

Posted In : ಅಂಕಣಗಳು, ಯಾರಿಗೆ ಹೇಳೋಣ?

ಪ್ರಜಾಪ್ರಭುತ್ವದ ಶೀರ್ಷಿಕೆಯ ಅಡಿಯಲ್ಲಿ ಅರಾಜಕತೆಯನ್ನು ಹೇಗೆ ಸೃಷ್ಠಿಸಬಹುದು ಎಂಬುದಕ್ಕೆ ರಾಜ್ಯ ಸರಕಾರವು ಮರಳು ಪೂರೈಕೆಯಲ್ಲಿ ಸಂಪೂರ್ಣ ವಿಫಲವಾಗಿರುವುದನ್ನು ತಾಳೆ ಹಾಕಬಹುದಾಗಿದೆ. ಗೃಹ ನಿರ್ಮಾಣಕ್ಕೆ, ಕಟ್ಟಡ ಕಾಮಗಾರಿಗಳಿಗೆ ಹಾಗೂ ಸಾರ್ವಜನಿಕ ಯೋಜನೆಗಳಿಗೆ ಅಗತ್ಯವಾದ ಮರಳು ಈಗ ಚಿನ್ನದಂತೆ ಸಾರ್ವಜನಿಕರಿಗೆ ಗೋಚರಿಸಲಾರಂಭಿಸಿದೆ. ಕೆಲ ವರ್ಷಗಳ ಹಿಂದೆ ಕೇವಲ ಸಾವಿರ ರೂಪಾಯಿಗಳಿಗೆ ಲಭ್ಯವಾಗುತ್ತಿದ್ದ ಮರಳಿನ ದರ ಸುಮಾರು ಎಂಬತ್ತು ಸಾವಿರದಿಂದ ಲಕ್ಷಕ್ಕೇರಿದೆ. ಕೆಲ ವರ್ಷಗಳ ಹಿಂದೆ ಇಂತಹ ಯಾವುದೇ ಸಮಸ್ಯೆ ಇಲ್ಲದೆ ಲಭ್ಯವಾಗುತ್ತಿದ್ದ ಮರಳು ಹಠಾತ್‌ನೆ ಸಾರ್ವಜನಿಕರಿಗೆ ಲಭ್ಯವಿಲ್ಲದಂತೆ ವಾತಾವರಣ ಸೃಷ್ಠಿಯಾಗಲು ನಿಜಕ್ಕೂ ಮರಳಿನ ಪ್ರಮಾಣದಲ್ಲಿ ಕ್ಷೀಣತೆ ಉಂಟಾಗಿದೆಯೆ? ಅಥವಾ ದುರುದ್ದೇಶಪೂರ್ವಕವಾಗಿ ಮರಳಿನ ಕೃತಕ ಅಭಾವವನ್ನು ಸೃಷ್ಠಿಸಲಾಗಿದೆಯೆ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿವೆ.

ಕೆಲವರ್ಷಗಳ ಹಿಂದೆ ನದಿ ಪಾತ್ರಗಳಲ್ಲಿ ಮರಳಿನ ಲಭ್ಯತೆಯನ್ನು ಗಮನಿಸಿ ಗಣಿ ಮತ್ತು ಭೂ ವಿಜ್ಞಾನ ಬ್ಲಾಕ್‌ಗಳನ್ನಾಗಿ ಗುರುತಿಸಿ ಹರಾಜು ಪ್ರಕ್ರಿಯೆ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಿತ್ತು. ಕೆಲವು ಗುತ್ತಿಗೆದಾರರು ನಿಗದಿಪಡಿಸಲಾದ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣದ ಮರಳನ್ನು ಅಗೆಯಲು ಆರಂಭಿಸಿದರು. ಟೆಂಡರ್ ಪಡೆಯಲಾದ ಗುತ್ತಿಗೆದಾರನಿಗೆ ನೀಡಲಾದ ಬ್ಲಾಕ್‌ಗಳ ವ್ಯಾಪ್ತಿಯನ್ನು ಮೀರಿ ಅನಧಿಕೃತ ಪ್ರದೇಶದಲ್ಲಿಯೂ ಮರಳು ಗಣಿಗಾರಿಕೆಯನ್ನು ನಡೆಸುತ್ತಿದ್ದರು. ಕೆಲ ಅಧಿಕಾರಿಗಳು ಗುತ್ತಿಗೆದಾರರ ಜತೆ ಶಾಮೀಲಾಗಿ ಸರಹದ್ದು ಮೀರಿದ ಮರಳು ಗಣಿಗಾರಿಕೆಯ ಚಟುವಟಿಕೆಗಳನ್ನು ನೋಡಿಯೂ ಜಾಣ ಕುರುಡು ಹಾಗೂ ಚಾಣಾಕ್ಷ ಮೌನವನ್ನು ವಹಿಸಿದ್ದರು.

ಮರಳು ಗಣಿಗಾರಿಕೆಯಿಂದಾಗಿ ಪಾತ್ರದ ಮರಳಿನ ಪದರುಗಳು ಸಂಪೂರ್ಣ ನಾಶವಾಗುತ್ತಿವೆ. ನದಿಪಾತ್ರದಲ್ಲಿರುವ ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತಿದೆ. ಯಾಂತ್ರಿಕ ದೋಣಿಯನ್ನು ಬಳಸಿ ಮರಳು ಗಣಿಗಾರಿಕೆಯನ್ನು ನಡೆಸುವುದರಿಂದ ಜಲಚರಗಳಿಗೆ ಆಪತ್ತಿನ ಸ್ಥಿತಿಯುಂಟಾಗಿದೆ. ಎಗ್ಗಿಲ್ಲದೆ ನದಿಪಾತ್ರದಿಂದ ಮರಳನ್ನು ಎತ್ತುವುದರಿಂದ ನದಿಪಾತ್ರಗಳಲ್ಲಿ ಭೂಕೊರತೆ ಉಂಟಾಗಿ ನದಿಗಳು ತಮ್ಮ ದಿಕ್ಕನ್ನೇ ಬದಲಾಯಿಸುವಂತಹ ಆಪತ್ತಿನ ಸ್ಥಿತಿ ಬಂದೊದಗಿದೆ. ನದಿ ಪಾತ್ರಗಳಲ್ಲಿ ಮರಳಿನ ಪದರವು ಮಾನವರ ದೇಹದ ಮಾಂಸಖಂಡಗಳಿಗೆ ರಕ್ಷಣೆಯನ್ನೊದಗಿಸುವ ಚರ್ಮದಂತೆ. ಭೂಸವಕಳಿಯನ್ನು ತಪ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಆದುದರಿಂದ ನದಿಪಾತ್ರಗಳಲ್ಲಿ ಯಾಂತ್ರೀಕೃತ ಬಳಸಿ ಮರಳು ಗಣಿಗಾರಿಕೆ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕೆಲವರು ಸರ್ವೋಚ್ಛ ನ್ಯಾಯಾಲಯ ಹಾಗೂ ರಾಜ್ಯ ಉಚ್ಛ ನ್ಯಾಯಾಲಯಗಳ ಬಾಗಿಲು ತಟ್ಟಿದರು. ಇವುಗಳನ್ನಾಲಿಸಿದ ನ್ಯಾಯಾಲಯಗಳ ಹಸಿರುಪೀಠವು ತಕ್ಷಣದಲ್ಲಿ ಮರಳು ಗಣಿಗಾರಿಕೆಯನ್ನು ನಿಲ್ಲಿಸದಿದ್ದಲ್ಲಿ ಬಹುದೊಡ್ಡ ಆಪತ್ತನ್ನು ಜೀವಸಂಕುಲಗಳು ಎದುರಿಸಲಿವೆ. ನದಿ ಮೂಲಗಳೂ ಬತ್ತಿ ಹೋಗುವ ಅಪಾಯವೂ ಇದೆಯೆಂದು ಭಾವಿಸಿ ಹಲವಾರು ನಿಬಂಧನೆಗಳನ್ನು ಹಾಗೂ ಮಾರ್ಗಸೂಚಿಗಳನ್ನು ರಾಜ್ಯ ಸರಕಾರಗಳಿಗೆ ನೀಡುವುದರ ಜತೆಗೆ ಹಂತಹಂತದಲ್ಲಿ ನದಿ ಪಾತ್ರದ ಮರಳು ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕೆಂದು ಆದೇಶವನ್ನು ಇಂತಹ ಆದೇಶವನ್ನು ನೋಡುತ್ತಿದ್ದಂತೆಯೆ ಕರ್ನಾಟಕವೂ ಸೇರಿ ಹಲವು ರಾಜ್ಯಗಳು 2020ರ ಹೊತ್ತಿಗೆ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಅಫಿಡವಿಟ್ ಸಲ್ಲಿಸಿ ತಮ್ಮ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಮೆರೆದಿವೆ.

ಕೆಲ ನೀತಿ ನಿಯಮಗಳು ಹಾಗೂ ಸುತ್ತೋಲೆಗಳು ಆಧುನಿಕ ಜಗತ್ತಿನ ಆದರ್ಶಪ್ರಾಯ ಪೀಠಿಕೆಗಳಂತೆ ವ್ಯಕ್ತವಾಗುತ್ತವೆ. ಅವುಗಳನ್ನು ಓದಿದಾಗ ಹಾಗೂ ಅವುಗಳ ಕುರಿತ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದಾಗ ವ್ಯಕ್ತವಾಗುವ ಅಭಿವ್ಯಕ್ತಿಗಳು ಉತ್ಸಾಹವನ್ನು ಹೊಮ್ಮಿಸುತ್ತವೆ. ಆದರೆ ಅವುಗಳ ಅನುಷ್ಠಾನ ಶೂನ್ಯ ಸಾಧನೆಯಷ್ಟಿದ್ದಾಗ ಬಾರದ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ಅವುಗಳನ್ನು ದುರುಪಯೋಗಪಡಿಸಿಕೊಳ್ಳುವ ಬಲಾಢ್ಯರು ಹೇಸಿಗೆಯಿಲ್ಲದ ಅದ್ದೂರಿ ಜೀವನವನ್ನು ನಡೆಸಲಾರಂಭಿಸಿದರೆ ಇಂತಹ ಆಚರಣೆಗೆ ಸಾಧ್ಯವಿಲ್ಲದ ತೀರ್ಪುಗಳು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುವ ಇಲಾಖೆಗಳ ಷರತ್ತುಗಳು ಯಾರ ಸೌಲಭ್ಯಕ್ಕಾಗಿ ಎಂಬ ಗುಮಾನಿ ಎಲ್ಲರ ಮನಸ್ಸಿನಲ್ಲಿಯೂ ಮೂಡುವುದಂತೂ ಸತ್ಯ.

ನ್ಯಾಯಾಲಯದ ಆದೇಶಗಳಿಂದ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ನಿಯಮಗಳಿಂದಾಗಿ ಇಂದಿಗೆ ನದಿಪಾತ್ರದಲ್ಲಿ ಮರಳು ಗಣಿಗಾರಿಕೆ ಸಂಪೂರ್ಣವಾಗಿ ನಿಂತು ಹೋಗಿವೆಯೆ? ಪರಿಸರವಾದಿಗಳ ಉದ್ದೇಶ ನಿಜಕ್ಕೂ ಈಡೇರಿದೆಯೆ? ನದಿಪಾತ್ರದಲ್ಲಿ ಜೀವ ರಕ್ಷಿಸಿಕೊಳ್ಳಲಾಗುತ್ತಿದೆಯೆ? ಇದಾವುದೂ ಸಾಧ್ಯವಿಲ್ಲ ಎಂದಾದರೆ ಇಂತಹ ಆದೇಶ ಮತ್ತು ಸುತ್ತೋಲೆಗಳು ಯಾರನ್ನು ಸಂತೃಪ್ತಿಗೊಳಿಸಿವೆ.  ಗಾದೆಯ ಮಾತೊಂದಿದೆ. ಬಡವರು ಕಾನೂನಿಗೆ ಹೆದರುತ್ತಾರೆ. ಪ್ರಭಾವಿಗಳು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ! ಇಂದು ತನ್ನ ಜೀವಮಾನದ ದುಡಿಮೆಯ ಉಳಿತಾಯದಲ್ಲಿ ಮನೆ ಕಟ್ಟಿಕೊಳ್ಳಲು ಇಚ್ಛಿಸುವ ನಾಗರೀಕನಿಗೆ ಕಡಿಮೆ ದರದಲ್ಲಿ ಮರಳು ಲಭ್ಯವಾಗುತ್ತಿಲ್ಲ.

ಸರಕಾರದ ವಸತಿ ಯೋಜನೆಗಳ ಅಡಿಯಲ್ಲಿ ಮನೆ ಕಟ್ಟಿಕೊಳ್ಳಲಿಚ್ಛಿಸುವ ಬಡ ಫಲಾನುಭವಿಗಳು ಮರಳನ್ನು ಖರಿದಿಸಲು ಸಾಧ್ಯವಾಗದೆ ಸರಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕೆಲವರು ಮರಳು ಖರಿದಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಂಬಾಗಿಲಿನಲ್ಲಿ ಕಾದು ಸುಣ್ಣವಾಗಿದ್ದಾರೆ. ಕೆಲವೊಬ್ಬರು ತಮ್ಮ ಸ್ವಂತದ ನಿರ್ಮಾಣ ಕೆಲಸಕ್ಕಾಗಿ ಎತ್ತಿನ ಬಂಡಿಯಲ್ಲಿ ಅಥವಾ ಟಮ್ ಟಮ್ ವಾಹನಗಳಲ್ಲಿ ನದಿಪಾತ್ರದಿಂದ ಅಲ್ಪ ಪ್ರಮಾಣದ ಮರಳನ್ನು ಸ್ವಂತಕ್ಕೆ ಸಾಗಿಸಿಕೊಳ್ಳುವಾಗ ಹಾಜರಾಗುವ ಪೊಲೀಸ್, ಕಂದಾಯ, ಲೋಕೋಪಯೋಗಿ, ಗಣಿ ಇಲಾಖೆಯ ಅಧಿಕಾರಿಗಳು ಸಾಗಣೆ ಮಾಡುತ್ತಿದ್ದ ವಾಹನವನ್ನು ಜಪ್ತಿ ಮಾಡುವುದರೊಂದಿಗೆ ಹೇಳಲಾಗದಷ್ಟು ತೊಂದರೆಯನ್ನು ನೀಡಿದ ಉದಾಹರಣೆಗಳಿವೆ.

ಎಷ್ಟು ಕಠಿಣವಾದ ಕಾನೂನುಗಳನ್ನು ನಾವುಗಳು ರೂಪಿಸುತ್ತೇವೆಯೋ ಅಷ್ಟೇ ತೀವ್ರತರವಾದ ಉಂಟಾಗುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ. ಮರಳು ಗಣಿಗಾರಿಕೆಯ ವಿಷಯದಲ್ಲಿಯೂ ಉಂಟಾಗಿರುವುದು ಇಂತಹುದೆ ದುರದೃಷ್ಟಕರ ಬೆಳವಣಿಗೆಯಾಗಿದೆ. ಕಠಿಣ ನಿಯಮಗಳ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಗಳು ಕೈ ಬಿಸಿ ಮಾಡಿದವರಿಗೆ ಸಂಪೂರ್ಣ ಸಹಕಾರವನ್ನು ಧಾರೆಯೆರೆಯುತ್ತಿದ್ದಾರೆ. ಗ್ರಾಮ ಮಟ್ಟದ ಸಣ್ಣ ಅಧಿಕಾರಿಯಿಂದ ಹಿಡಿದು ಇಲಾಖೆಯ ಪ್ರಮುಖ ಅಧಿಕಾರಿಯವರೆಗೂ ಮಾಫಿಯಾಕ್ಕೆ ಪಾಲುದಾರರಂತೆ ಭಾಗಿಯಾಗಿದ್ದಾರೆ. ಮೇಲಿನ ಹಂತದ ಕೆಲ ಅಧಿಕಾರಿಗಳು ಅಕ್ರಮ ಗಣಿಗಾರಿಕೆಯ ನೆಂಟಸ್ತಿಕೆಯನ್ನು ಪಡೆಯಲು ಇಚ್ಛಿಸದಿದ್ದಲ್ಲಿ ಕೆಳ ಹಂತದ ಅಧಿಕಾರಿಗಳೇ ಮೇಲ್ವರ್ಗದ ವರಿಷ್ಠಾಧಿಕಾರಿಗಳಿಗೆ ತಪ್ಪು ರವಾನಿಸುತ್ತಿದ್ದಾರೆ.

ಕೆಲ ಪ್ರಾಮಾಣಿಕ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆಯನ್ನು ಪತ್ತೆ ಹಚ್ಚಲು ಆಕಸ್ಮಿಕ ದಾಳಿ ನಡೆಸಲು ಬಯಸಿದ್ದಲ್ಲಿ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಯ ಅಧೀನ ಅಧಿಕಾರಿಗಳೇ ಅಕ್ರಮ ಚಟುವಟಿಕೆದಾರರಿಗೆ ರವಾನಿಸಿ ದಾಳಿಯು ಯಶಸ್ವಿಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.  ಎಲ್ಲಕ್ಕೂ ಪರಿಹಾರ ಒದಗಿಸಬೇಕಾದ ಸರಕಾರವೆಂಬ ಸಾಧನ ಸಾಧಾರಣವಾದ ಮರಳಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಪ್ರತೀ ಬಾರಿಯೂ ಮರಳು ಸಮಸ್ಯೆಯ ಕುರಿತ ಚರ್ಚೆಯಲ್ಲಿ ಮರಳು ಉತ್ಪಾದನಾ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹಾರಿಕೆಯ ಉತ್ತರವನ್ನು ನೀಡುತ್ತಲೇ ದಿನಗಳನ್ನು ಮುಂದೂಡುತ್ತಿದ್ದಾರೆ. ಆದರೆ ಸೂಕ್ತ ಪರಿಹಾರ ಇಂದಿಗೂ ದೊರಕಿರುವುದಿಲ್ಲ.

ಉತ್ಪಾದಿತ ಮರಳಿನ ಪ್ರಮಾಣವಾಗಲಿ ಅಥವಾ ಆಮದು ಮಾಡಿಕೊಳ್ಳುವ ಮರಳಾಗಲಿ ಅಥವಾ ಗುರುತಿಸಲ್ಪಟ್ಟ ನಿಗದಿತ ಬ್ಲಾಕ್‌ಗಳಿಂದ ನಿಯಮಾನುಸಾರ ತೆಗೆಯಲಾದ ಮರಳಾಗಲಿ, ಜನಸಾಮಾನ್ಯರಿಗೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಮರಳಿನ ಕೊರತೆಯಾಗದಂತೆ ಪ್ರತಿ ತಾಲೂಕುಗಳಲ್ಲಿಯೂ ಕನಿಷ್ಠ ಎಂಟರಿಂದ ಹತ್ತರಷ್ಟು ಮರಳು ಮಾರಾಟ ಮಾಡುವ ಪ್ರದೇಶಗಳನ್ನು ಸರಕಾರವೇ ಗುರುತಿಸಿ ಆ ಭಾಗದಲ್ಲಿ ಬೇಡಿಕೆಗೆ ಅನುಗುಣವಾಗಿ ಪ್ರಮಾಣವನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕಿದೆ. ಇಂತಹ ಪ್ರಯತ್ನಕ್ಕೆ ಈ ಹಿಂದೆ ಇಲಾಖೆಗಳು ಪ್ರಯತ್ನಿಸಿದ್ದರೂ ಸಹ ನಿಗದಿತ ಯಶಸ್ಸನ್ನು ಪಡೆಯಲು ಸಾಧ್ಯವಾಗಿಲ್ಲ. ಕಾರಣ ಅಕ್ರಮ ಮರಳು ಗಣಿಗಾರಿಕೆ ಮಾಡುವವರ ವಿರುದ್ಧ ಹಾಗೂ ಪ್ರೋತ್ಸಾಹ ನೀಡುವ ಅಧಿಕಾರಿಗಳ ವಿರುದ್ಧ ಯಾವುದೇ ಸ್ಪಷ್ಟ ಉಲ್ಲೇಖಗಳು ಆ ನಿಯಮಗಳಲ್ಲಿ ನಮೂದಿಸಿಲ್ಲ.

ಸರಕಾರದಿಂದ ನಿಗದಿಪಡಿಸಲಾದ ಪ್ರದೇಶಗಳ ಹೊರತಾಗಿ ಬೇರೆ ಎಲ್ಲಿಯೂ ಮರಳು ಗಣಿಗಾರಿಕೆ, ಸಂಗ್ರಹ ಅಥವಾ ಸಾಗಣೆಯನ್ನು ಘೋರ ಅಪರಾಧವೆಂದು ಪರಿಗಣಿಸುವ ಅವಶ್ಯಕತೆ ಇದೆ. ನೀಡಲಾದ ಕೃತಕ ಮರಳು ಉತ್ಪಾದನಾ ಘಟಕಗಳಿಂದ ಹಾಗೂ ನಿಗದಿತ ಬ್ಲಾಕ್‌ಗಳಿಂದ ಸಂಗ್ರಹಿಸಲಾದ ಮರಳಿನ ಪ್ರಮಾಣವು ನೇರವಾಗಿ ಸರಕಾರದಿಂದ ಮಾರಾಟ ಮಾಡುವ ಪ್ರದೇಶಗಳಿಗೆ ಮಾತ್ರ ರವಾನೆಯಾಗುವಂತೆ ನೀಯಮಗಳನ್ನು ರೂಪಿಸಿ ಜನಸಾಮಾನ್ಯರಿಗೆ ಸರಕಾರದ ನಿಗದಿತ ಪ್ರದೇಶದಿಂದಲೇ ಮರಳು ಲಭ್ಯವಾಗುವಂತೆ ಏರ್ಪಡಿಸಬೇಕಿದೆ.

ಇದನ್ನು ಹೊರತುಪಡಿಸಿದ ಯಾವುದೇ ಮರಳು ಸಂಗ್ರಹ ಮತ್ತು ಸಾಗಣೆಯನ್ನು ತೀವ್ರ ಅಪರಾಧವೆಂದು ಗುರುತಿಸಿ ಭಾಗಿಯಾದ ವ್ಯಕ್ತಿಗಳು ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡುವುದರ ಮೂಲಕ ಕೃತಕ ಮರಳಿನ ನೀಗಿಸಬಹುದಾಗಿದೆ. ಆದರೆ ಲಕ್ಷಾಂತರ ಜನ ಅನುಭವಿಸುತ್ತಿರುವ ಸಣ್ಣದಾದರೂ ಅತೀ ಹೆಚ್ಚು ಕಗ್ಗಂಟಾಗಿರುವ ಮರಳಿನ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸರಕಾರ ಕೂಡಲೇ ಸ್ಪಂದಿಸಬೇಕಾಗಿದೆ.

Leave a Reply

Your email address will not be published. Required fields are marked *

ten − 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top