About Us Advertise with us Be a Reporter E-Paper

ಅಂಕಣಗಳು

ಸಾಲಮನ್ನಾಗೆ ಪೂರಕವಾಗುವ ಕೆಲಸಗಳೂ ಆಗಬೇಕು

ವಿಶ್ಲೇಷಣೆ: ಸಿದ್ದಾರ್ಥ ವಾಡೆನ್ನನವರ

ಕೃಷಿ ಒಂದು ಭರವಸೆಯ ವೃತ್ತಿ. ಇಂದು ನಾವು ಊಟ ಮಾಡುತ್ತಿದ್ದೇವೆಂದರೆ ಅದಕ್ಕೆ ಪ್ರತಿಯಾಗಿ ಅನ್ನದಾತನಿಗೆ ಧನ್ಯವಾದ ಹೇಳಲೇಬೇಕು. ಅನ್ನದಾತರು ಸ್ವಾವಲಂಬಿ ಗಳು, ಅವರ ಬದುಕು ಸ್ವಾಭಿಮಾನದ ಬದುಕು. ಮನುಷ್ಯನಿಗೆ ಕೆಲವು ದಿನಗಳಿಗೆ ಮಾತ್ರ ವೈದ್ಯ, ವಕೀಲ, ರಾಜಕಾರಣಿಗಳ ಅಗತ್ಯ ಇರುತ್ತದೆ. ಆದರೆ ರೈತನ ಅಗತ್ಯಪ್ರತಿ ದಿನವೂ ಇರುತ್ತದೆ. ಸರಕಾಗಳು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ದರಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ  ಯೋಗ್ಯವಾದ ದರ ಒದಗಿಸಲು ಅಗತ್ಯವಾಗಿ ಬೇಕಾದ ಕಾನೂನುಗಳನ್ನು ರೂಪಿಸುವುದು ಅಥವಾ ಕಾನೂನುಗಳಿಗೆ ತಿದ್ದುಪಡಿ ತರುವುದು ಮುಖ್ಯವಾಗಿದೆ. ಹೀಗೆ ಮಾಡುವುದರ ಮೂಲಕ ಸರಕಾರಗಳು ಸೂಕ್ತ ಬೆಲೆ ನಿಗದಿ ಮಾಡಿದರೆ ನಾಡಿನ ರೈತನ ಬದುಕು ಉಜ್ವಲವಾಗುತ್ತದೆ.

ಅನ್ನದಾತರು ಎಂದೂ ನಿರಾಶಾವಾದಿಗಳಾಗಿ ಬದುಕುವುದಿಲ್ಲ. ಪ್ರತಿ ವರ್ಷ ಮಳೆ ಬಂದೇ ಬರುತ್ತದೆ, ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ ಎಂಬ ನಿರೀಕ್ಷೆಯಲ್ಲಿ ಇರುತ್ತಾರೆ. ಅದಕ್ಕೆ ತಕ್ಕಂತೆ ಅಸ್ತಿತ್ವದಲ್ಲಿರುವ ಸರಕಾರಗಳು ಅವರ ಬಾಳಿಗೆ ಬೆಳಕಾಗಬೇಕು. ಕೇಂದ್ರದಲ್ಲಿರುವ  ನರೇಂದ್ರ ಮೋದಿ  ಸರಕಾರ ಮತ್ತು ರಾಜ್ಯದಲ್ಲಿರುವ  ಕುಮಾರಸ್ವಾಮಿಯವರ ನೇತೃತ್ವದ ಸರಕಾರ ರೈತ ಪರವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಕೈಗೊಂಡಿರುವ ಕೇಂದ್ರದ ನಿರ್ಧಾರ ಮತ್ತು ಸುಮಾರು 44,700 ಕೋಟಿ ರು. ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿಯವರ ನಿರ್ಧಾರ ಇವು ಉತ್ತಮ ಆರಂಭವನ್ನೇನೋ ಮಾಡಿವೆ. ಆದರೆ ಇದು ನಿರೀಕ್ಷಿತ ಫಲ ನೀಡುವುದೇ ಎನ್ನುವುದೇ ಪ್ರಶ್ನೆ. ಕೆಳಗೆ ಕೆಲ ಪೂರಕ ನೀತಿ ನಿರೂಪಣೆ, ಚಟುವಟಿಕೆಗಳ ಪರಾಮರ್ಶೆ ಇದೆ.

ದೇಶದ  ಮತ್ತು ರಾಜ್ಯದ ಉದ್ದಗಲಕ್ಕೂ ಒಂದೇ ತೆರನಾಗಿ ಬೆಳೆ ಬೆಳೆಯುವುದಿಲ್ಲ. ಒಂದು ಭಾಗದಲ್ಲಿ ಕಬ್ಬು, ಭತ್ತ ಪ್ರಮುಖ ಬೆಳೆಗಳಾದರೆ ಇನ್ನೊಂದು ಭಾಗದಲ್ಲಿ ಮೆಕ್ಕೆಜೋಳ, ತೆಂಗು ಇತ್ಯಾದಿ ಬೆಳೆಗಳು ಪ್ರಮುಖವಾಗಿರುತ್ತವೆ. ಯಾವ ಜಿಲ್ಲೆಯಲ್ಲಿ ಯಾವ ಬೆಳೆಗಳನ್ನು ಅತಿ ಹೆಚ್ಚು ಬೆಳೆಯುತ್ತಿದ್ದಾರೆ ಎಂದು ಗುರುತಿಸಿ, ಅಲ್ಲಿನ ಉತ್ಪನ್ನಗಳಿಗೆ ಅದೇ ಜಿಲ್ಲೆಯಲ್ಲಿ ಸಂಸ್ಕರಣಾ ಘಟಕಗಳನ್ನು, ಅಗತ್ಯವಾಗಿ ಬೇಕಾದ ಗೋದಾ ಮುಗಳನ್ನು, ಕೋಲ್‌ಡ್ ಸ್ಟೋರೇಜ್‌ಗಳನ್ನು ಮತ್ತು ಕೃಷಿ ಆಧರಿತ ಕೈಗಾರಿಕೆಸ್ಥಾಪಿಸಲು ಸರಕಾರ ಪ್ರೋತ್ಸಾಹ ನೀಡಬೇಕು. ಕೃಷಿ  ಕಚ್ಚಾ ವಸ್ತುಗಳನ್ನಾಗಿ ಪರಿಗಣಿಸಿ ಸಿದ್ಧ ವಸ್ತು ಉತ್ಪಾದಿಸುತ್ತಿರುವ ಉದ್ದಿಮೆದಾರರನ್ನು ಅಹ್ವಾನಿಸಿ ಕೃಷಿ ಆಧರಿತ ಕೈಗಾರಿಕಾ ಮೇಳವನ್ನು ಆಯೋಜಿಸಬೇಕು. ಕೃಷಿ ಆಧರಿತ ಕೈಗಾರಿಕೆಗಳನ್ನು ಸ್ಥಾಪಿಸಿಸಲು ಮುಂದೆ ಬರುವ ಉದ್ದಿಮೆದಾರರಿಗೆ ವಿವಿಧ ಸವಲತ್ತುಗಳನ್ನು ನೀಡಬೇಕು.

ಇದರಿಂದ ರೈತನಿಗೆ ಎರಡು ರೀತಿಯ ಲಾಭವಾಗುವ ಸಾಧ್ಯತೆ ಇದೆ. ಕೈಗಾರಿಕೆಗಳ ಸ್ಥಾಪನೆ ಆಗುವುದರಿಂದ ಅಲ್ಲಿನ ಬೆಳೆಗಳಿಗೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ಸಿಗುತ್ತದೆ. ಜೊತೆಗೆ ಸ್ಥಳೀಯವಾಗಿ ಉದ್ಯೋಗಗಳು ಸೃಷ್ಟಿಯಾಗಿ ರೈತರ ಮಕ್ಕಳಿಗೂ ನೌಕರಿ ಸಿಗುತ್ತದೆ. ಕೃಷಿ ಉತ್ಪನ್ನಗಳನ್ನು  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಳೀಯ ಉತ್ಪನ್ನಗಳು ಪ್ರವೇಶಿಸುವ ಹಾಗೆ ಸಮಗ್ರ ಯೋಜನೆಯನ್ನು ರೂಪಿಸಬಹುದು.

2016-2017ರ ‘ಡೈರೆಕ್ಟರ್ ಆಫ್ ಎಕನಾಮಿಕ್‌ಸ್ ಮತ್ತು ಹೈ-ಪವರ್ ಕಮೀಟಿ ಮೀಟಿಂಗ್ ರೀಪೋರ್ಟ್’ನಲ್ಲಿ ಯಾವ ಬೆಳೆಯನ್ನು ಯಾವ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆಯುತ್ತಿದ್ದಾರೆ ಎನ್ನುವ ಅಂದಾಜು ಅಂಕಿ-ಅಂಶಗಳನ್ನು ಪ್ರಕಟಿಸಿದ್ದಾರೆ. ಬೀದರ ಜಿಲ್ಲೆಯಲ್ಲಿ ಸೋಯಾಬೀನ್, ಗುಲಬರ್ಗಾ ಜಿಲ್ಲೆಯಲ್ಲಿ ಜೋ-ತೊಗರಿ, ಬಿಜಾಪುರ ಜಿಲ್ಲೆಯಲ್ಲಿ ತೊಗರಿ-ಕಬ್ಬು, ಯಾದಗಿರಿ ಮತ್ತು ರಾಯಚೂರ ಜಿಲ್ಲೆಗಳಲ್ಲಿ ಭತ್ತ, ಬಾಗಲಕೋಟ ಜಿಲ್ಲೆಯಲ್ಲಿ ಕಬ್ಬು-ಸೂರ್ಯಕಾಂತಿ, ಬೆಳಗಾವಿ ಜಿಲ್ಲೆಯಲ್ಲಿ ಮೆಕ್ಕೆಜೋಳ-ಕಬ್ಬು-ಸಿಹಿಅಲೂಗಡ್ಡೆ-ಸೋಯಾಬೀನ್,  ಜಿಲ್ಲೆ ಯಲ್ಲಿ ಹತ್ತಿ-ಒಣಮೆಣಸಿನಕಾಯಿ-ಸೂರ್ಯಕಾಂತಿ- ಈರುಳ್ಳಿ, ಗದಗ ಜಿಲ್ಲೆಯಲ್ಲಿ ಹೆಸರುಕಾಳು-ಈರುಳ್ಳಿ, ಕೊಪ್ಪಳ ಜಿಲ್ಲೆಯಲ್ಲಿ ಸೂರ್ಯಕಾಂತಿ, ಬಳ್ಳಾರಿ ಜಿಲ್ಲೆಯಲ್ಲಿ ಭತ್ತ ಒಣಮೆಣಸಿನಕಾಯಿ, ಹಾವೇರಿ ಜಿಲ್ಲೆಯಲ್ಲಿ ಮೆಕ್ಕೆಜೋಳ- ಹತ್ತಿ, ಶಿವಮೊಗ್ಗ ಮತ್ತು ದಾವಣಗೆರೆಗಳಲ್ಲಿ ಭತ್ತ, ಉತ್ತರಕನ್ನಡ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗೋಡಂಬಿ-ತೆಂಗು, ಚಿತ್ರದುರ್ಗ ಜಿಲ್ಲೆ ಯಲ್ಲಿ ಈರುಳ್ಳಿ-ತೆಂಗು-ಮೆಕ್ಕೆಜೋಳ, ತುಮಕೂರು ಜಿಲ್ಲೆಯಲ್ಲಿ ರಾಗಿ-ತೆಂಗು, ಚಿಕ್ಕಮಗಳೂರಿನಲ್ಲಿ ಆಲೂಗಡ್ಡೆ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತೆಂಗು-ಆಲೂಗಡ್ಡೆ, ಕೋಲಾರ ಜಿಲ್ಲೆಯಲ್ಲಿ ಟೊಮೇಟೊ, ಬೆಂಗಳೂರ ಗ್ರಾಮ ಮತ್ತು ರಾಮನಗರ  ರಾಗಿ-ತೆಂಗು, ಮಂಡ್ಯ ಜಿಲ್ಲೆಯಲ್ಲಿ ಕಬ್ಬು-ತೆಂಗು ಟೊಮೇಟೊ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಟೊಮೇಟೊ-ಅರಿಶಿನ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.

ಕೃಷಿ ಉತ್ಪನ್ನಗಳ ಆಧರಿತ ಉತ್ಪಾದನಾ ಉದ್ದಿಮೆದಾರರಿಗೆ ಕರ್ನಾಟಕದಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಇಂತಹ ಮಾಹಿತಿ ಒದಗಿಸಿ ಪ್ರೋತ್ಸಾಹ ನೀಡಬೇಕಾಗಿದೆ. ಶೇರು ಮಾರುಕಟ್ಟೆಯಲ್ಲಿ ಏರುಪೇರಾದರೆ ಅಥವಾ ಸರಕಾರಗಳು ಬದಲಾದರೆ ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ. ಆದರೆ ಪ್ರತಿ ವರ್ಷ ಬೀಳುವ ಸರಾಸರಿ ಮಳೆಯ ಪ್ರಮಾಣದಲ್ಲಿ ಬದಲಾವಣೆ ಅವನ ಬದುಕಿನ  ಪ್ರಭಾವ ಬೀರುತ್ತದೆ. ಅದಕ್ಕಾಗಿ ಕೃಷಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವುದು ಮುಖ್ಯವಾಗಿದೆ. ಆಹಾರ ಉತ್ಪಾದನೆಯಾಗುವುದು ಭೂತಾಯಿಯ ಒಡಲಿನಲ್ಲಿ. ಮತ್ತು ಅದು ರೈತನ ಪರಿಶ್ರಮದಿಂದ ನಮಗೆ ಸಿಗುತ್ತದೆ. ಅದಕ್ಕಾಗಿ ರೈತರ ಪರಿಶ್ರಮ ಮತ್ತು ತ್ಯಾಗಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಾಗಿದೆ. ಉದ್ದಿಮೆದಾರರನ್ನು ಆಕರ್ಷಿಸುವಂತಹ ವಿಶೇಷ ಪ್ಯಾಕೇಜಗಳನ್ನು ಪ್ರಕಟಿಸಿ ಈಗಿರುವ ಸರಕಾರ ಇದಕ್ಕೆ ಮುನ್ನುಡಿ ಬರೆಯುತ್ತದೆ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.

ರೈತರು ತಾವು ಬೆಳೆದ ಉತ್ಪನ್ನಗಳನ್ನು ಅತೀ ಕಡಿಮೆ ಬೆಲೆಗೆ ಸಗಟು ಮಾರುಕಟ್ಟೆಯಲ್ಲಿ  ಮಾಡುತ್ತಾರೆ. ಆದರೆ ಅದೇ ತಮ್ಮ ಜೀವನಕ್ಕೆ ಅಗತ್ಯವಾಗಿ ಬೇಕಾದ ವಸ್ತುಗಳನ್ನು ಅತಿ ಹೆಚ್ಚಿನ ಬೆಲೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಖರೀದಿ ಮಾಡುತ್ತಾರೆ. ಈ ತಾರತಮ್ಯವನ್ನು ಹೋಗಲಾಡಿಸಲು ಸರಕಾರಗಳು ಕ್ರಮ ಗಳ ನ್ನು ಕೈಗೊಳ್ಳಬೇಕು. ಸಾಲ ಅಧಿಕವಾಗಿ ರೈತರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಇಂತಹ ವಿಷಮ ಸನ್ನಿವೇಶದಲ್ಲಿ ಒಂದೇ ಆಶಾಕಿರಣವೆಂದರೆ, ದೇಶದ ಕೃಷಿ ಆಧರಿತ ಪ್ರದೇಶದ ಶೇ.25ರಷ್ಟು ಭೂಮಿಯಲ್ಲಿ ನಾವು ವರ್ಷದ  12 ತಿಂಗಳೂ ಬೆಳೆಗಳನ್ನು ಬೆಳೆಯುತ್ತಿದ್ದೇವೆ, ಈ ರೀತಿ 12  ಬೆಳೆ ಬೆಳೆಯುವ ಅವಕಾಶ ಬೇರೆ ಎಲ್ಲಾ ದೇಶಗಳಿಗೆ ಇಲ್ಲ. ತುಂಬಾ ದೇಶಗಳಲ್ಲಿ ಕೇವಲ 6 ತಿಂಗಳ ಅವಧಿಗೆ ಮಾತ್ರ ಬೆಳೆಗಳನ್ನು ಬೆಳೆಯುತ್ತಾರೆ.

ರೈತ ಬೆಳೆಗಳನ್ನು ಬೆಳೆಯುವ ಸಮಯದಲ್ಲಿ ಮಾತ್ರ ಆತಂಕದ ಲ್ಲಿರುತ್ತಾನೆ. ಪ್ರಧಾನಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದ್ದರೆ, ರಾಜ್ಯದ ಮುಖ್ಯ ಮಂತ್ರಿ ಕುಮಾರಸ್ವಾಮಿ ಸಾಲ ಮನ್ನಾ ಘೋಷಿಸಿದ್ದಾರೆ. ಈ ನಿರ್ಧಾರಗಳನ್ನು ದೇಶದ ಅನ್ನದಾತ ಸ್ವಾಗತಿಸಿದ್ದಾನೆ. ಇದೆಲ್ಲ ದರಿಂದ ರೈತನ ಸಾವಿನ ಸರಣಿ  ಭರವಸೆ ಮೂಡಿದೆ. ಸ್ಥಳೀಯ ಮಾರುಕಟ್ಟೆ , ಸ್ಥಳೀಯವಾಗಿ ಕೃಷಿ ಆಧರಿತ ಕೈಗಾರಿಕೆಗಳ ಸ್ಥಾಪನೆಯಷ್ಟೇ ಮುಖ್ಯವಾಗಿ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು, ರೈತರ ಮಕ್ಕಳಿಗೆ ಶ್ರೇಷ್ಠ ಮಟ್ಟದ ಶಿಕ್ಷಣ ಸಿಗಬೇಕು, ಸ್ಥಳೀಯವಾಗಿ ಉದ್ಯೋಗಗಳು ಸೃಷ್ಟಿಯಾಗಬೇಕು. ಈ ದಿಕ್ಕಿನಲ್ಲಿ ಮಹತ್ವದ ನಿರ್ಧಾರಗಳನ್ನು ರಾಜಕೀಯ ನಾಯಕರು ತೆಗೆದುಕೊಂಡರೆ ಬದಲಾವಣೆ ನಿಜವಾಗಿಯೂ ಸಾಧ್ಯವಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close