About Us Advertise with us Be a Reporter E-Paper

ಅಂಕಣಗಳುಯಾತ್ರಾಯಾತ್ರಾ panel 1

ನೀವು ನಿಮ್ಮ ನಾಯಿಯೊಂದಿಗೂ ವಿದೇಶ ಪ್ರಯಾಣ ಮಾಡಬಹುದು, ಆದರೆ..!

ಹಿಂದಿನ ವರ್ಷ ನಾನು ಟರ್ಕಿಯಿಂದ ಇಸ್ರೇಲಿನ ಅವಿವ್‌ಗೆ ಪ್ರಯಾಣಿಸುತ್ತಿದ್ದೆ. ನನ್ನ ಜತೆಗಿದ್ದ ಬ್ರಿಟಿಷ್ ಪ್ರಯಾಣಿಕಳೊಬ್ಬಳು ತನ್ನ ಬ್ಯಾಗುಗಳಿಗಾಗಿ ಕಾಯುತ್ತಿದ್ದಳು. ಎಷ್ಟು ಹೊತ್ತಾದರೂ ಅವಳ ಬ್ಯಾಗು ಬರಲಿಲ್ಲ. ಎಲ್ಲರ ಬ್ಯಾಗುಗಳು ಬಂದರೂ ಅವಳದು ಮಾತ್ರ ಬಂದಿರಲಿಲ್ಲ. ಅವಳ ಅಸಹನೆಯನ್ನು ಅವಳ ವರ್ತನೆ ಯಿಂದ ಗಮನಿಸಬಹುದಾಗಿತ್ತು. ತನಗೆ ಸಹಕರಿಸುವಂತೆ ಅವಳು ವಿನಂತಿಸಿದ್ದರಿಂದ ನಾನು ಅವಳ ಜತೆ ದೂರು ನೀಡಲು ಹೋದೆ.

ಆಗ ನನಗೆ ಗೊತ್ತಾಗಿದ್ದೇನೆಂದರೆ, ಅವಳ ನಾಯಿಯನ್ನು ತುಂಬಿದ ಪಂಜರ ಬಂದಿರಲಿಲ್ಲ. ಅವಳು ಯಾವ ಊರು ಅಥವಾ ದೇಶಕ್ಕೆ ಪ್ರಾಣ ಸಮವಾಗಿ ಪ್ರೀತಿಸುತ್ತಿದ್ದ ನಾಯಿಯನ್ನು ಜತೆಗೆ ವಿಮಾನದಲ್ಲಿ ಕರೆದುಕೊಂಡೇ ಹೋಗುತ್ತಾಳಂತೆ. ಆದರೆ ಈ ಸಲ ಅವಳ ನಾಯಿ ಆಕೆ ಬಂದಿದ್ದ ವಿಮಾನದಲ್ಲಿ ಬಂದಿರಲಿಲ್ಲ. ಅವಳ ಟೆನ್ಶನ್ ಕ್ಷಣ ಕ್ಷಣಕ್ಕೂ ಜಾಸ್ತಿ ಆಗುತ್ತಿತ್ತು. ದೂರು ಸ್ವೀಕರಿಸುವ ಕೌಂಟರಿನಲ್ಲಿದ್ದವರು ತಕ್ಷಣ ಎಲ್ಲೆಡೆ ಫೋನ್ ಮಾಡಿ ವಿಚಾರಿಸಲಾರಂಭಿಸಿದರು.

ಅದಾಗಿ ಐದು ನಿಮಿಷಗಳ ನಂತರ, ಆಕೆಯ ನಾಯಿ ಟರ್ಕಿ ವಿಮಾನ ನಿಲ್ದಾಣದಲ್ಲಿಯೇ ಇದೆಯೆಂದು ಗೊತ್ತಾಯಿತು. ಲಗೇಜ್ ತುಂಬುವ ಸಿಬ್ಬಂದಿ ನಾಯಿ ಇರುವ ಪಂಜರವನ್ನು ವಿಮಾನದೊಳಕ್ಕೆ ಅಲ್ಲಿಯೇ ಬಿಟ್ಟಿದ್ದ. ಅವಳು ಒಂದೇ ಸಮನೆ ಅಳಲಾರಂಭಿಸಿದಳು. ತನ್ನ ನಾಯಿಯ ಪಾಡನ್ನು ನೆನೆದು ಅಲ್ಲಿನ ಸಿಬ್ಬಂದಿ ಮೇಲೆ ಕಿರುಚುತ್ತಿದ್ದಳು. ಕನಿಷ್ಠ ಅದರ ಆರೈಕೆ ಯನ್ನು ಚೆನ್ನಾಗಿ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಳು. ಅವಳನ್ನು ನೋಡಿ, ಇವಳದೇ ನಾಯಿ ಪಾಡು ಆಯಿತಲ್ಲ ಎಂದು ಅಂದುಕೊಂಡೆ. ನಿನ್ನ ನಾಯಿ ನಿನಗೆ ಸುರಕ್ಷಿತವಾಗಿ ಸಿಗಲಿ ಎಂದು ಅವಳಿಗೆ ಶುಭ ಕೋರಿ ನಾನು ಬಂದೆ. ಮುಂದೇನಾಯಿತೋ ಗೊತ್ತಾಗಲಿಲ್ಲ.

ನಿಮಗೆ ನೆನಪಿದೆಯಾ, ಕಳೆದ ವರ್ಷ ಅಮೆರಿಕಾದ ಯುನೈಟೆಡ್ ಲೈನ್‌ಸ್ ಇದೇ ಕಾರಣಕ್ಕೆ ಸುದ್ದಿಯಲ್ಲಿತ್ತು. ಸುಮಾರು ಒಂದು ವಾರ ಕಾಲ ಜಗತ್ತಿನಾದ್ಯಂತ ಲಕ್ಷಾಂತರ ಜನ ಏರ್‌ಲೈನ್‌ಸ್ ನ್ನು ತರಾಟೆಗೆ ತೆಗೆದುಕೊಂಡರು. ಕಾರಣ ಲಂಡನ್ನಿನಿಂದ ಚಿಕಾಗೋಕ್ಕೆ ಬರುವ ಯುನೈಟೆಡ್ ಏರ್‌ಲೈನ್‌ಸ್ ವಿಮಾನದಲ್ಲಿದ್ದ ಸೈಮನ್ ಎಂಬ ಕಪ್ಪು ಬಣ್ಣದ ದೊಡ್ಡ ಮೊಲ ಉಸಿರುಗಟ್ಟಿ ಸತ್ತು ಹೋಯಿತು.

ಅದಾದ ಒಂದು ವಾರದ ನಂತರ ಹೂಸ್ಟನ್‌ದಿಂದ ಲಾಗೌರ್ಡಿಯಾಕ್ಕೆ ಬರುವ ಅದೇ ಯುನೈಟೆಡ್ ಏರ್‌ಲೈನ್‌ಸ್ ವಿಮಾನದಲ್ಲಿ ಗಗನಸಖಿಯ ಅಚಾತುರ್ಯದಿಂದ ಫ್ರೆಂಚ್ ಬುಲ್ಡಾಗ್ ನಾಯಿ ಸತ್ತು ಹೋಯಿತು. ತನ್ನ ಕಾಲ ಬುಡದಲ್ಲಿಯೇ ಅದನ್ನು ಇಟ್ಟುಕೊಳ್ಳುತ್ತೇನೆ ಎಂದು ಪರಿಪರಿಯಾಗಿ ಹೇಳಿದರೂ ಆಕೆ ಕೇಳಲಿಲ್ಲ. ಓವರ್ ಹೆಡ್ ಕ್ಯಾಬಿನ್‌ನಲ್ಲಿ ಇಡುವಂತೆ ಸೂಚಿಸಿದಳು. ಸಹಪ್ರಯಾಣಿಕರಿಗೆ ಕಚ್ಚಬಾರದೆಂದು ನಾಯಿಯ ಮೂತಿಗೆ ಬಲೆ ಹಾಕಿದ್ದರಿಂದ ಕೂಗಲು ಸಾಧ್ಯವಾಗದೇ, ಅದು ಅಲ್ಲಿಯೇ ಸತ್ತು ಹೋಯಿತು.

ಅದಾಗಿ ಮೂರು ತಿಂಗಳ ನಂತರ, ಕನ್ಸಾಸ್ ಚೀಟಿಗೆ ಹೋಗಬೇಕಾದ ಜರ್ಮನ್ ಶೆಪರ್ಡ್ ನಾಯಿ ಲಗೇಜ್ ಸಿಬ್ಬಂದಿ ಮೂರ್ಖತನದಿಂದ ಟೋಕಿಯೋಕ್ಕೆ ಹೋಯಿತು. ಕಳೆದ ವರ್ಷ ಯುನೈಟೆಡ್ ಏರ್‌ಲೈನ್‌ಸ್ ಸುಮಾರು 75 ಸಾವಿರ ಪ್ರಾಣಿಗಳನ್ನು ಸಾಗಿಸಿದೆ. ಆದರೆ ಹದಿನೆಂಟು ಪ್ರಾಣಿಗಳು ಸತ್ತು ಹೋಗಿವೆ. ಸಾಗಿಸಿದ ಪ್ರಾಣಿಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ. ಆದರೆ ಬೇರೆ ಏರ್‌ಲೈನ್‌ಸ್ ಗಳಲ್ಲಿ ಒಂದೇ ಒಂದು ಅವಘಡ ಆಗದಂತೆ ಸಾಗಿಸಿರುವ ನಿದರ್ಶನಗಳೂ ಇವೆ.

ಎಮಿರೇಟ್‌ಸ್, ಕತಾರ್, ಸಿಂಗಾಪುರ್, ಮಲೇಷಿಯನ್, ಲುಫ್ತಾನ್ಸಾ, ಏರ್ ಫ್ರಾನ್‌ಸ್ ಮುಂತಾದ ಏರ್ ಲೈನ್‌ಸ್ಗಳು ಪ್ರಯಾಣಿಕರಿಗೆ ತೋರುವ ಕಾಳಜಿ, ಎಚ್ಚರವನ್ನು ಸಾಕುಪ್ರಾಣಿಗಳಿಗೂ ತೋರುತ್ತವೆ. ಸಾಕು ಪ್ರಾಣಿಗಳನ್ನು ಹ್ಯಾಂಡಲ್ ಮಾಡಲೆಂದೇ ಗ್ರೌಂಡ್ ಸ್ಟಾಫ್ ಗಳನ್ನು ಈ ವಿಮಾನ ಇಟ್ಟಿರುತ್ತವೆ. ನಾಯಿ, ಬೆಕ್ಕು, ಮೊಲ, ಗಿಣಿ.. ಮುಂತಾದ ಸಾಕು ಪ್ರಾಣಿಪಕ್ಷಿಗಳೊಂದಿಗೆ ತೆರಳುವ ಪ್ರಯಾಣಿಕರಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತವೆ. ಅಲ್ಲದೆ ಸಾಕುಪ್ರಾಣಿಗಳಿಗೆ ವೆಟರ್ನರಿ ವೈದ್ಯರ ಉಪಚಾರ, ಲಘು ಆಹಾರಗಳನ್ನು ನೀಡುತ್ತವೆ. ಪ್ರಾಣಿ ಪಕ್ಷಿಗಳಿಗೆ ಸ್ವಲ್ಪ ತೊಂದರೆಯಾದರೂ ಪ್ರಾಣಿ ದಯಾ ಸಂಘ ಕೂಗೆಬ್ಬಿಸುತ್ತವೆ ಎಂಬುದು ಈ ಏರ್ ಲೈನ್‌ಸ್ಗಳಿಗೆ ಗೊತ್ತು.

ಬಹುತೇಕ ಎಲ್ಲ ವಿಮಾನ ಸಂಸ್ಥೆಗಳೂ ಸಾಕುಪ್ರಾಣಿಗಳ ಸಾಗಾಟಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿನಿಯಮಗಳನ್ನು ಹೊಂದಿವೆ. ಒಂದೊಂದು ಸಂಸ್ಥೆ ಒಂದೊಂದು ನಿಯಮ ಹೊಂದಿದೆ. ಭಾರತದಲ್ಲಿ ಬಹುತೇಕ ಎಲ್ಲಾ ವಿಮಾನಗಳೂ ಸಾಕು ಪ್ರಾಣಿಗಳನ್ನು ವಿಮಾನದೊಳಗೆ ಸೇರಿಸಿಕೊಳ್ಳುವುದಿಲ್ಲ. ಅವುಗಳನ್ನು ಕಾರ್ಗೋ ಸೆಕ್ಷನ್ ನಲ್ಲಿಟ್ಟು ಸಾಗಿಸುತ್ತವೆ. ಕೆಲವು ವಿಮಾನಗಳಲ್ಲಿ ಸಾಕು ಪ್ರಾಣಿಗಳಿಗೆಂದೇ ಪ್ರತ್ಯೇಕ ವಿಭಾಗವೂ ಇರುತ್ತವೆ. ಅಲ್ಲಿ ಹಿತಕರ ತಾಪಮಾನ ಒದಗಿಸಲಾಗುತ್ತದೆ.

ಇನ್ನು ಕೆಲವು ವಿಮಾನಗಳು ಎಲ್ಲ ಲಗೇಜ್ ಜತೆಗೇ ಸಾಕು ಪ್ರಾಣಿಗಳನ್ನು ಸಾಗಿಸುತ್ತವೆ. ಎಲ್ಲ ವಿಮಾನಗಳಲ್ಲೂ ಈ ಸೌಲಭ್ಯ ಇರುತ್ತವೆ ಎಂದು ಹೇಳಲಾಗುವುದಿಲ್ಲ. ಸಾಮಾನು ಸರಂಜಾಮು ಗಳ ಜತೆಗೇ ಸಾಕು ಪ್ರಾಣಿಗಳ ಪಂಜರವನ್ನು ಸಾಗಿಸುವು ದುಂಟು. ಅಂಥ ಸಂದರ್ಭದಲ್ಲಿ ಪ್ರಾಣಿಪಕ್ಷಿಗಳು ಉಸಿರುಗಟ್ಟಿ ಸಾಯುವುದುಂಟು. ಇಂಥ ವಿಮಾನ ಯಾನ ಸಂಸ್ಥೆಗಳು ಸಾಕುಪ್ರಾಣಿ ಸಾಗಾಟಕ್ಕೆ ಅಷ್ಟೊಂದು ಮಹತ್ವ ನೀಡುವುದಿಲ್ಲ.

ವಿಮಾನದ ಕಾರ್ಗೋ ವಿಭಾಗ ಲಗೇಜುಗಳಿಗೆಂದು ಇರುವ ತಾಣ. ಅಲ್ಲಿ ಸಾಕುಪ್ರಾಣಿಗಳಿಗೆಂದು ಪ್ರತ್ಯೇಕ ಜಾಗ ಕಲ್ಪಿಸಿದರೆ, ಅವುಗಳು ಇಲ್ಲದ ಸಂದರ್ಭದಲ್ಲಿ ಅನವಶ್ಯಕವಾಗಿ ಜಾಗ ನಿರರ್ಥಕವಾಗುತ್ತದೆ. ಕಾರಣ ಪ್ರತಿದಿನ ಯಾರೂ ಸಾಕುಪ್ರಾಣಿ ಗಳನ್ನು ವಿಮಾನದಲ್ಲಿ ಒಯ್ಯುವುದಿಲ್ಲ. ಹೀಗಾಗಿ ನಾಯಿ, ಬೆಕ್ಕುಗಳನ್ನು ವಿಮಾನದಲ್ಲಿ ಕರೆದೊಯ್ಯುವುದು ಸ್ವಲ್ಪ ಕಿರಿಕಿರಿಯೇ. ವಿದೇಶಗಳಲ್ಲಿ ವಿಮಾನದೊಳಗೆ ಕರೆದೊಯ್ಯಲು ಅವಕಾಶವಿದೆ. ಆಗಲು ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸ ಬೇಕಾಗುತ್ತದೆ. ಸಾಕುಪ್ರಾಣಿಗಳನ್ನು ಸಾಕಿಸಲೆಂದೇ ತಳ್ಳುಗಾಡಿಗಳು, ಬ್ಯಾಗುಗಳನ್ನು ರಚಿಸಲಾಗಿದೆ.

ನಾಯಿಗಳ ಆಕಾರದ ಆಧಾರದಿಂದ, ವಿಮಾನದೊಳಗೆ ಅಥವಾ ಕಾರ್ಗೋ ವಿಭಾಗದೊಳಗೆ ಕರೆದೊಯ್ಯಬಹುದೇ ಎಂಬುದನ್ನು ನಿರ್ಧರಿಸಲಾಗುತ್ತದೆ. ದೊಡ್ಡ ನಾಯಿಯನ್ನು ವಿಮಾನದೊಳಗೆ ಒಯ್ಯುವುದರಿಂದ ಇತರ ಪ್ರಯಾಣಿಕರಿಗೆ ಕಿರಿಕಿರಿಯಾಗಬಹುದು. ಇನ್ನು ಕೆಲವರು ಭಯಬೀತರಾಗಬಹುದು. ರೂಢಿಯಿಲ್ಲದಿದ್ದರೆ ನಾಯಿಗಳೂ ವಿಚಿತ್ರವಾಗಿ ವರ್ತಿಸಬಹುದು. ಇದರಿಂದ ವಿಮಾನ ದೊಳಗೆ ಆತಂಕದ ವಾತಾವರಣ ಸೃಷ್ಟಿಯಾಗಬಹುದು. ಒಂದು ಅಡಿಗಿಂತ ಎತ್ತರದ ನಾಯಿಯನ್ನು ವಿಮಾನದಲ್ಲಿ ಪ್ರಯಾಣಿಕರ ಸಾಗಿಸುವುದು ಸುರಕ್ಷಿತವಲ್ಲ.

ಕೆಲವು ಪ್ರಯಾಣಿಕರು ಸಾಕುಪ್ರಾಣಿಗಳ ಜತೆ ಅದೆಷ್ಟು ಗಾಢ ಮತ್ತು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆಂದರೆ, ಎಲ್ಲಿಗೆ ಹೋಗುವುದಿದ್ದರೂ ಅದನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಅದರಲ್ಲೂ ವಿದೇಶಗಳಿಗೆ ಪ್ರವಾಸ ಅಥವಾ ವಿಹಾರ ಹೋಗುವಾಗಲೂ ಅದು ಇರಲೇಬೇಕು. ಇಂಥವರ ಬೇಡಿಕೆಗಳನ್ನು ಈಡೇರಿಸುವುದು ವಿಮಾನಯಾನ ಸಂಸ್ಥೆಗಳ ಜವಾಬ್ದಾರಿ.

ಸಾಕುಪ್ರಾಣಿಗಳನ್ನು ಸಾಗಿಸಲು ಅನುಮತಿ ನಿರಾಕರಿಸಿದ ಏರ್‌ಲೈನ್‌ಸ್ ವಿರುದ್ಧ ಪ್ರಯಾಣಿಕರು ಕೋರ್ಟುಗಳಿಗೆ ಹೋದ ನಿದರ್ಶನ ಗಳು ಹಲವಾರು. ಸಾಕು ಪ್ರಾಣಿಗಳೆಂದರೆ ಮಕ್ಕಳಿದ್ದ ಹಾಗೆ ಎಂಬುದು ಅವರ ವಿಮಾನದಲ್ಲಿ ಕರೆದೊಯ್ಯುವ ಮುನ್ನ ಕೆಲವು ಏರ್‌ಲೈನ್ ಗಳು ನಾಯಿಗಳಿಗೆ ತರಬೇತಿ ಕೊಡುವ ಸೌಲಭ್ಯವನ್ನು ಸಹ ಒದಗಿಸುತ್ತವೆ. ಪ್ರಾಣಿ ದಯಾ ಸಂಘದವರ ಪ್ರಕಾರ, ಮನುಷ್ಯರಿಗೆ ಎಷ್ಟು ಹಕ್ಕಿದೆಯೋ, ಪ್ರಾಣಿಗಳಿಗೂ ಅಷ್ಟೇ ಹಕ್ಕಿದೆ. ಹೀಗಾಗಿ ವಿಮಾನದಲ್ಲಿ ಕರೆದೊಯ್ಯುವುದಿಲ್ಲ ಎಂದು ಹೇಳುವಂತಿಲ್ಲ. ಆದರೆ ಏರ್‌ಲೈನ್‌ಗಳು ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಷ್ಟೆ.

ವಿಮಾನದೊಳಗೆ ನಾಯಿಯನ್ನು ಕರೆದೊಯ್ಯುವ ಸಂದರ್ಭ ದಲ್ಲಿ ಪೈಲಟ್ ನಿಗೆ ಮೊದಲೇ ತಿಳಿಸಿರಬೇಕು. ಪೈಲಟ್ ಕೂಡ ಇತರ ಪ್ರಯಾಣಿಕರಿಗೆ ನಾಯಿಯಿರುವುದನ್ನು ಧ್ವನಿವರ್ಧಕದ ಮೂಲಕ ಒಂದೆರಡು ತಾಸಿನ ವಿಮಾನ ಪ್ರಯಾಣವಾದರೆ ಪರವಾಗಿಲ್ಲ. ಎಂಟುಹತ್ತು ತಾಸಿನ ಪ್ರಯಾಣವಾದರೆ ನಾಯಿಗೂ, ಸಹ ಪ್ರಯಾಣಿಕರಿಗೂ ಕಿರಿಕಿರಿ ಆಗಬಹುದು. ನಾಯಿ ಗಳಿಗೆಂದೇ ಪ್ರತ್ಯೇಕ ಪಾಸ್ಪೋರ್ಟನ್ನು ನೀಡಲಾಗುತ್ತದೆ. ವೆಟರಿನರಿ ವೈದ್ಯರಿಂದ ಲಸಿಕೆ ಹಾಕಿಸಿ, ಅದರ ಆರೋಗ್ಯದ ಬಗ್ಗೆ ಅವರಿಂದ ಸರ್ಟಿಫಿಕೇಟ್ ಪಡೆದರೆ ಪಾಸ್‌ಪೋರ್ಟ್ ನೀಡಲಾಗುತ್ತದೆ.

ಮುಂದಿನ ಸಲ ನೀವು ನಾಯಿಯೊಂದಿಗೆ ವಿದೇಶ ಪ್ರಯಾಣ ಮಾಡಬಹುದು, ಆದರೆ ಈ ಎಲ್ಲ ಸಂಗತಿಗಳನ್ನು ಗಮನಿಸಬೇಕಷ್ಟೆ.

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close