About Us Advertise with us Be a Reporter E-Paper

ಅಂಕಣಗಳು

ಮಾರ್ಗದರ್ಶನದೊಂದಿಗೆ ಯುವಜನತೆ ಅದ್ಭುತವನ್ನು ಸಾಧಿಸಬಲ್ಲರು

- ಮಾತಾ ಅಮೃತಾನಂದಮಯಿ

ಜೀವನದ ಅತ್ಯಂತ ಶಕ್ತಿಯುತವಾದ ಸಮಯವೆಂದರೆ ಯೌವನ. ಇದು ನಮ್ಮ ಜೀವನದ ಮಧ್ಯಭಾಗ. ಇದನ್ನು ಬಾಲ್ಯಾವಸ್ಥೆ ರೀತಿಯಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ ಅಥವಾ ವೃದ್ಧಾಪ್ಯದಂತೆ ಯೋಚನೆಗಳಲ್ಲಿ ಮುಳುಗಿಹೋಗದ ವಯೋಮಾನವಿದು. ಹೀಗಾಗಿ ಕ್ರಿಯಾತ್ಮಕವಾದ ಉದ್ದೇಶವಿಟ್ಟುಕೊಂಡು ಉತ್ಸಾಹಭರಿತ ಜೀವನ ಮತ್ತು ಅದರ ಸವಿಯುವಂತಹ ಕಾಲ, ತಾರುಣ್ಯ. ಆಗ ಜನರು ಸಾಕಷ್ಟು ಕುತೂಹಲ ಮತ್ತು ಶಕ್ತಿಯನ್ನು ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಹೊಸ ಹೊಸ ಸವಾಲುಗಳನ್ನು ತೆಗೆದುಕೊಂಡು ಮತ್ತು ಅವುಗಳಲ್ಲಿ ಯಶಸ್ವಿಯಾಗಬೇಕೆಂಬ ಹುಮ್ಮಸ್ಸು ಇರುತ್ತದೆ. ಇಂದು ಹಲವು ಯುವಕ/ಯುವತಿಯರಲ್ಲಿ ಸಾಕಷ್ಟು ಜ್ಞಾನವಿರುತ್ತದೆ. ಆದರೆ, ಅದನ್ನು ಕಾರ್ಯಗತಗೊಳಿಸಿಕೊಳ್ಳುವ ಬಗ್ಗೆ ಅರಿವು ಕಡಿಮೆ ಇರುತ್ತದೆ. ಅರಿವು ಇಲ್ಲದ ಜ್ಞಾನ ಅಪೂರ್ಣ. ಅಂದರೆ, ಸುಗಂಧವಿಲ್ಲದ ಹೂವು ಅಥವಾ ಅರ್ಥವಿಲ್ಲದ ಮಾತು ಎಂಬಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಜ್ಞಾನ ಮತ್ತು ಅರಿವು ಸಮ್ಮಿಳಿತವಾದಾಗ ಮಾತ್ರ ಸಾಧನೆ ಮಾಡುವುದು ಸಾಧ್ಯವಾಗುತ್ತದೆ.

ಯುವ ಪೀಳಿಗೆಯ ಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ದರೆ ಅವರ ಶಕ್ತಿ ಮತ್ತು ಉತ್ಸಾಹ ಕಾರ್ಯಗತವಾಗಲು ಸಾಧ್ಯವಾಗುತ್ತದೆ ಮತ್ತು ಅಸಾಧಾರಣ ಸಾಧನೆಯನ್ನು ಅವರಿಂದ ನಿರೀಕ್ಷಿಸಬಹುದು. ಹೀಗಾಗಿ ನಾವು ನಮ್ಮ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಆಧ್ಯಾತ್ಮಿಕ ಮೌಲ್ಯಗಳು, ವಿಶೇಷವಾಗಿ ಸಹಾನುಭೂತಿ, ಸಮಗ್ರತೆ, ವಿವೇಚನೆ ಮತ್ತು ಬಯಕೆಯಂತಹ ಉತ್ತಮ ಗುಣಗಳನ್ನು ಸಮಾಜಕ್ಕಾಗಿ ಅಳವಡಿಸಿಕೊಳ್ಳುವ ಬಗ್ಗೆ ಯುವಕರಲ್ಲಿ ಮನವರಿಕೆ ಮಾಡಿಕೊಡಬೇಕು. ಹೀಗಾದಲ್ಲಿ ಮಾತ್ರ ಯುವಕರು ಸಮಾಜದ ಬಗ್ಗೆ ಚಿಂತನೆ ನಡೆಸಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸೋಮಾರಿತನ, ಕಡಿಮೆ ಆತ್ಮವಿಶ್ವಾಸ ಮತ್ತು ವೈಫಲ್ಯದ ಹೆದರಿಕೆ ಇದ್ದಾಗ ನಾವು ಜೀವನವೆಂಬ ಹೋರಾಟದಲ್ಲಿ ಹಿಂದೆ ಸರಿಯುತ್ತೇವೆ. ಆದರೆ ಬಲವಾದ ಆತ್ಮವಿಶ್ವಾಸ, ಸಮರ್ಪಕವಾದ ಜ್ಞಾನ ಮತ್ತು ನಿರಂತರ ಪ್ರಯತ್ನಗಳಿಂದ ಇಂತಹ ಅಂಜಿಕೆಗಳಿಂದ ಹೊರಬರಬಹುದಾಗಿದೆ.

ಇಂದು, ’ಯೌವ್ವನ’ ಎಂಬ ಮಾನವಜೀವನದ ಹಂತ ಮಾಯವಾಗುತ್ತಿದೆ. ಜನರು ಬಾಲ್ಯದಿಂದ ನೇರವಾಗಿ ವೃದ್ಧಾಪ್ಯಕ್ಕೆ ಹಾರುತ್ತಿದ್ದಾರೆ. ಪ್ರತಿಯೊಂದು ಕ್ಷಣವನ್ನು ಜೀವಿಸಲು ಮತ್ತು ಮನಸ್ಸಿಗೆ ತರಬೇತಿ ನೀಡಲು ಮಾದರಿ ಹಂತ ಯೌವ್ವನವಾಗಿದೆ. ಆದರೆ, ಇಂದಿನ ಪೀಳಿಗೆ ಈ ಅವಧಿಯನ್ನು ಸೂಕ್ತರೀತಿಯಲ್ಲಿ ಬಳಸಿಕೊಳ್ಳುತ್ತಿದೆಯೇ? ಇದಕ್ಕೆ ಉತ್ತರಿಸುವ ಮುನ್ನ ನಿಮಗೊಂದು ಪ್ರಸಂಗ ಹೇಳಬೇಕೆನಿಸುತ್ತಿದೆ: ಒಮ್ಮೆ, ಉದ್ಯಾನವನದಲ್ಲಿ ನಡೆಯುತ್ತಿದ್ದ ಒಬ್ಬ ಮಹಿಳೆ ಅಲ್ಲಿಯೇ ಬೆಂಚ್ ಮೇಲೆ ಕುಳಿತಿದ್ದ ವೃದ್ಧನೊಬ್ಬ ತನಗೇ ತಾನೇ ಮುಗುಳ್ನಗುತ್ತಿದ್ದುದ್ದನ್ನು ನೋಡಿದಳು. ಅವನ ಬಳಿ ಸಾಗಿ ಕೇಳಿದಳು ‘ನೀವು ಎಷ್ಟೊಂದು ಆನಂದದಿಂದಿರುವಂತೆ ಕಾಣುತ್ತಿದ್ದೀರಿ! ನಿಮ್ಮ ದೀರ್ಘ ಮತ್ತು ಸಂತಸಯುತ ಜೀವನದ ಹಿಂದಿನ ರಹಸ್ಯವೇನು?’

ಅದಕ್ಕೆ ಆ ವೃದ್ಧರು ಹೀಗೆ ಉತ್ತರಿಸಿದರು: ‘ನಾನು ಬಿಟ್ಟು ಎದ್ದ ಕೂಡಲೇ ಎರಡು ಪೂರ್ಣ ಬಾಟಲಿಗಳಷ್ಟು ವಿಸ್ಕಿ ಕುಡಿಯುತ್ತೇನೆ. ಒಂದು ಪ್ಯಾಕ್ ಸಿಗರೇಟ್ ಸೇದುತ್ತೇನೆ. ಮಧ್ಯಾಹ್ನದ ಭೋಜನಕ್ಕೆ ಹುರಿದ ಚಿಕನ್ ಮತ್ತು ಸ್ಟೀಕ್‌ಗಳನ್ನು ಮನತುಂಬುವಂತೆ ಸೇವಿಸುತ್ತೇನೆ. ಉಳಿದ ದಿನವನ್ನು ಹೆವಿ ಮೆಟಲ್ ಸಂಗೀತ ಆಲಿಸುತ್ತಾ ಕಳೆಯುತ್ತೇನೆ. ಚಿಪ್‌ಸ್, ಸಿಹಿ ತಿಂಡಿಗಳು ಮತ್ತು ಇತರೆ ಹಾಳುಮೂಳು ತಿಂಡಿಗಳನ್ನು ದಿನವೆಲ್ಲಾ ಸೇವಿಸುತ್ತಿರುತ್ತೇನೆ. ಎಲ್ಲದಕ್ಕೂ ಹೆಚ್ಚಾಗಿ ವಾರಕ್ಕೆ ನಾಲ್ಕು ಅಥವ ಐದು ಬಾರಿ ಗಾಂಜಾ ಸೇದುತ್ತೇನೆ. ಮತ್ತು ವ್ಯಾಯಾಮದ ಬಗ್ಗೆ ನಾನು

ಆ ಮಹಿಳೆಗೆ ಆಘಾತವಾಯಿತು. ‘ಅಚ್ಚರಿಯ ವಿಷಯ’ ಎಂದು ಉದ್ಗರಿಸಿ ಆಕೆ ಕೇಳಿದಳು ‘ನಿಮ್ಮ ರೀತಿಯ ಜೀವನಶೈಲಿ ಹೊಂದಿರುವ ಯಾರಾದರೂ ಇಷ್ಟು ತುಂಬು ವೃದ್ಧಾಪ್ಯದವರೆಗೆ ಬದುಕಿರುವುದನ್ನು ನಾನು ಎಂದೂ ಕೇಳಿಲ್ಲ. ಅಂದ ಹಾಗೆ ನಿಮ್ಮ ವಯಸ್ಸೆಷ್ಟು?’‘ಇಪ್ಪತ್ತಾರು’ ಎಂದು ಆತ ಉತ್ತರಿಸಿದ!

ಅನೇಕರು ಇದೇ ರೀತಿಯಲ್ಲಿ ತಮ್ಮ ಅಮೂಲ್ಯ ಯೌವ್ವನವನ್ನು ವ್ಯರ್ಥ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೇನು? ಬಾಲ್ಯದಲ್ಲಿ ಅವರಿಗೆ ತಮ್ಮ ಪೋಷಕರಿಂದ ಸೂಕ್ತ ಮೌಲ್ಯಗಳ ಬಗ್ಗೆ ಅರಿವು ಲಭಿಸಿರುವುದಿಲ್ಲ. ಹಣ ಅಧ್ಯಯನದ ಮೇಲೆ ಸಂಪೂರ್ಣ ಒತ್ತು ನೀಡಲಾಗುತ್ತದೆ. ಇವುಗಳು ಅಗತ್ಯವೇ. ಆದರೆ, ನಮ್ಮ ಮಕ್ಕಳಲ್ಲಿ ನಾವು ಆದ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಲು ಎಚ್ಚರಿಕೆ ವಹಿಸುವ ಅಗತ್ಯವಿದೆ. ಒಬ್ಬ ವ್ಯಕ್ತಿ ಅತ್ಯಂತ ದುಬಾರಿಯ ಕಾರು ಖರೀದಿಸಿ, ಅದರಲ್ಲಿ ಅತ್ಯುನ್ನತ ಮಟ್ಟದ ಪೆಟ್ರೋಲ್ ತುಂಬಿಸಿದರೂ ಕೂಡ ಇಂಜಿನ್ ಆರಂಭವಾಗಲು ಬ್ಯಾಟರಿ ಅಗತ್ಯವಿದ್ದೇ ಇರುತ್ತದೆ. ಅದೇ ರೀತಿ ಜೀವನದ ವಾಹನವನ್ನು ಚಲಾಯಿಸಲು ಸತ್ಯ, ತಾಳ್ಮೆ ಮತ್ತು ಸಹಾನುಭೂತಿಗಳಂತಹ ಸಾರ್ವತ್ರಿಕ ಮೌಲ್ಯಗಳ ಅಗತ್ಯ ನಮಗಿದೆ.

ಕೆಲಸಗಳನ್ನು ಸೂಕ್ತ ನಡೆಸಲು ಸರಿಯಾದ ಮನೋವೃತ್ತಿಯನ್ನು ನಮ್ಮ ಯುವಜನತೆ ಹೊಂದಿದೆ. ಜೊತೆಗೆ ಅವರು ದಣಿವಿಲ್ಲದಂತೆ ಕೂಡ ಕಾಣುತ್ತಾರೆ. ತಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವುದನ್ನು ಕಲಿತರೆ ಸಾಕು, ಜಗತ್ತಿನಲ್ಲಿ ಅವರು ಅದ್ಭುತಗಳನ್ನು ಸಾಧಿಸಬಹುದಾಗಿದೆ. ಯುವಜನರಲ್ಲಿ ಬದಲಾವಣೆ ಉಂಟಾದ ಕೂಡಲೇ ಜಗತ್ತಿನಲ್ಲಿ ಕೂಡ ಬದಲಾವಣೆಗಳು ಕಂಡುಬರಲಿವೆ. ಸಮಾಜದ ಸುಧಾರಣೆಗಾಗಿ ನಮ್ಮ ಯುವಜನತೆಯ ಶಕ್ತಿಯನ್ನು ನಾವು ಬಳಸಲು ಇಚ್ಛಿಸಿದಲ್ಲಿ ಉತ್ತಮ ಗುರಿಗಳ ಕುರಿತು ಜಾಗೃತಿ ಹೊಂದಲು ನೆರವಾಗುವುದು ಮೊದಲು ಆಗಬೇಕು. ಉತ್ತಮ ಕೆಲಸ ಪಡೆದು ಜೀವನ ನಡೆಸುವುದಕ್ಕೆ ಮಾತ್ರ ಅವರ ಗುರಿಗಳು ಸೀಮಿತವಾಗಿರಬಾರದು. ನಾವು ಕೇವಲ ಸಾಗರದ ಮೇಲೆ ಸಾಗಿ ಮೀನು ಹಿಡಿದರೆ ಸಾಲದು. ಸಾಗರದ ಆಳಕ್ಕೆ ಮುಳುಗಿ ಮುತ್ತುಗಳನ್ನು ಸಂಗ್ರಹಿಸಲು ಸಾಧ್ಯವಾಗಬೇಕು.

ಸಮಾಜದಲ್ಲಿ ವಾಸ್ತವಿಕ ಬದಲಾವಣೆಗಳನ್ನು ಸೃಷ್ಟಿಸಲು ನಮ್ಮ ಯುವಜನತೆಗೆ ಸಾಧ್ಯವಾಗಬೇಕು. ಇದೇ ಸಮಯದಲ್ಲಿ ಅವರು ತಮ್ಮ ಸ್ವಂತ ಜೀವನವನ್ನು ಕೂಡ ಅರ್ಥಪೂರ್ಣ ಮತ್ತು ಧನ್ಯವಾಗಿಸಿಕೊಳ್ಳಬೇಕು. ಅವರು ತಮ್ಮ ಜ್ಞಾನವನ್ನು ಕೇವಲ ಲೌಕಿಕ ಕಾರ‌್ಯಗಳಿಗೆ ಸೀಮಿತಗೊಳಿಸಿಕೊಳ್ಳದಂತೆ ಖಾತ್ರಿ ಮಾಡಿಕೊಳ್ಳುವ ಅಗತ್ಯವಿರುತ್ತದೆ. ಲೌಕಿಕ ಜ್ಞಾನವನ್ನು ಅರಿವಿನೊಂದಿಗೆ ಸಂಗಮಿಸಿಕೊಳ್ಳುವ ಅಗತ್ಯ ಅವರಿಗಿದೆ. ತಮ್ಮ ಸುತ್ತಲೂ ಬಳಲುತ್ತಿರುವ ಜನರ ಬಗ್ಗೆ ಅವರಿಗೆ ಸಹಾನುಭೂತಿ ಹುಟ್ಟಬೇಕು. ಜೀವನದಲ್ಲಿ ಅತ್ಯಂತ ಹೆಚ್ಚಿನ ಪರೀಕ್ಷೆಯ ಸಮಯಗಳನ್ನು ಧೈರ್ಯದಿಂದ ಎದುರಿಸಿ ಮುಂದೆ ಸಾಗುವ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಅವರು ಗಳಿಸಿಕೊಳ್ಳಬೇಕು. ಸ್ವಯಂ ಸಮರ್ಪಣೆ ಮೂಲಕ ಮಾತ್ರವೇ ಅದ್ಭುತಗಳು ನಡೆಯುತ್ತವೆ. ಆದ್ದರಿಂದ ಅವರು ಯಾವುದೇ ತ್ಯಾಗವನ್ನು ಸಹಿಸಲು ಮತ್ತು ಯಾವುದೇ ಕಷ್ಟವನ್ನು ಅನುಭವಿಸಲು ಸಿದ್ಧವಾಗಿರಬೇಕು. ತಮಗೆ ಯಾವುದು ಒಳ್ಳೆಯದು ಎಂಬುದನ್ನು ಗುರುತಿಸುವ ಸಾಮರ್ಥ್ಯವನ್ನು ಯುವಜನತೆ ಮತ್ತು ಅದನ್ನು ತಮ್ಮ ವ್ಯಕ್ತಿತ್ವದೊಳಕ್ಕೆ ಸೇರಿಸಿಕೊಳ್ಳಬೇಕು. ಇದೇ ರೀತಿ ಅವರು ಯಾವುದು ಕೆಟ್ಟದು ಎಂಬುದನ್ನೂ ಗುರುತಿಸುವ ಮತ್ತು ಅದರಿಂದ ದೂರವಿರುವ ಶಕ್ತಿಯನ್ನು ಹೊಂದುವ ಅಗತ್ಯವಿರುತ್ತದೆ.

ಈ ಎಲ್ಲಾ ಮೌಲ್ಯಗಳನ್ನು ಪಡೆದುಕೊಳ್ಳಲು ನಮ್ಮ ಸಮಾಜಕ್ಕೆ ನೆರವಾಗುವ ಸಂಸ್ಕೃತಿಯನ್ನು ನಮ್ಮ ದೇಶ ಹೊಂದಿದೆ. ಈ ದೇಶ ಅನೇಕ ಅದ್ಭುತ ಆಧ್ಯಾತ್ಮಿಕ ಜ್ಞಾನಿಗಳು ಮತ್ತು ಅಸಾಧಾರಣ ದಾರ್ಶನಿಕರಿಗೆ ಜನ್ಮ ನೀಡಿದೆ. ನಮ್ಮ ಹಿಂದಿನ ಕಾಲದ ಅದ್ಭುತ ಋಷಿಗಳು ಅಪಾರ ಜ್ಞಾನಭಂಡಾರವನ್ನು ಉಳಿಸಿದ್ದು, ಇದು ದುಃಖಗಳನ್ನು ಮೀರಿ ನಿಲ್ಲಲು ನಮಗೆ ನೆರವಾಗುತ್ತವೆ. ಈ ಅಮೂಲ್ಯ ನಿಧಿಯ ಕಡೆಗೆ ನಮ್ಮ ಯುವಜನತೆಯ ಶಕ್ತಿಯನ್ನು ನಾವು ನಿರ್ದೇಶಿಸುವ ಕೆಲಸ ಮಾಡಬೇಕು.

ಹೀಗೆ, ಜ್ಞಾನ ಮತ್ತು ವಿವೇಚನೆಯ ಶಕ್ತಿ ಒಂದುಗೂಡಿದಾಗ ಅದು ನಮ್ಮ ಯುವಜನತೆಯಲ್ಲಿ ಸಹಜವಾದ ಶಕ್ತಿ ಮತ್ತು ಸಕಾರಾತ್ಮಕ ಪ್ರವೃತ್ತಿಗಳನ್ನು ಹೊರ ತರುತ್ತದೆ ಮತ್ತು ಚಿರಂತನ ಪ್ರೀತಿ, ಶಾಂತಿ, ಆನಂದ ಮತ್ತು ವಿಜಯವನ್ನು ಕಾಣಲು ಅವರಿಗೆ ಇದರಿಂದ ಸಾಧ್ಯ.

Tags

Related Articles

Leave a Reply

Your email address will not be published. Required fields are marked *

Language
Close