About Us Advertise with us Be a Reporter E-Paper

ಅಂಕಣಗಳು

ಮಾಧ್ಯಮವ್ಯಸನಿ ಯುವಜನತೆಗೆ ಮಾಧ್ಯಮಗಳೇನು ಕೊಡುತ್ತಿವೆ?

ಮಂಜುನಾಥ ಉಲುವತ್ತಿ ಶೆಟ್ಟರ್, ಸಹ ಪ್ರಾಧ್ಯಾಪಕ, ಬಳ್ಳಾರಿ.

ಕಳಕಳಿ

ಶತಮಾನಗಳು ಉರುಳಿದಂತೆ ಮಾನವರು ಬುದ್ಧಿವಂತರಾದರು. ಮಾನವ ಸಂಘಜೀವಿಯಾಗಿ ಬದಲಾದ ಮೇಲೆ ಜಗತ್ತಿಗೆ ಗಡಿಗಳು ಬರಲಾರಂಭಿಸಿದವು! ಮುಂದೆ ಮಾನವರ ಬುದ್ಧಿವಂತಿಕೆಯ ಫಲವಾಗಿ ಜಗತ್ತು ನಾಗಾಲೋಟದಲ್ಲಿ ಅಭಿವೃದ್ಧಿ ಕಂಡಿತು. ದೇಶ, ಭಾಷೆ ಎಂಬ ವಿವಿಧ ಚೌಕಟ್ಟುಗಳು ಆರಂಭವಾದವು. ಹಣ, ತಂತಜ್ಞಾನ, ಸೈನ್ಯಗಳು ದೇಶಗಳಿಗೆ ಅತ್ಯಗತ್ಯ ಹೆಗ್ಗುರುತು ಎಂದಾದವು. ಇವುಗಳ ನಂತರ ಬಂದ ಮಾಧ್ಯಮ ಲೋಕ ಜಗತ್ತು ಒಂದೇ ಭಾವ ಮೂಡಿಸಲಾರಂಭಿಸಿತು.
ಅಲ್ಲಿಂದ ಆರಂಭವಾದ ಮಾಧ್ಯಮ ಮತ್ತು ಆಧುನಿಕ ಮನುಷ್ಯನ ಸಂಬಂಧ ಈಗ ಕೇವಲ ಐಷಾರಾಮವಾಗಿ ಉಳಿಯದೆ ನಿತ್ಯ ಜೀವನದ ಅಗತ್ಯ ಎನಿಸಿದೆ. ಆದರೆ ಇತ್ತೀಚೆಗೆ ಮಾಧ್ಯಮಗಳು ಕೇವಲ ವಾಣಿಜ್ಯೋದ್ದೇಶ, ಮನರಂಜನೆಗಾಗಿ ಮಾತ್ರವೇ ಬಳಕೆಯಾಗುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ಅತಿಯಾದರೆ ಅಪಾಯ ಖಂಡಿತ ತಪ್ಪಿದ್ದಲ್ಲ. ಮನರಂಜನೆಯ ಗೀಳು ಯುವ ಮನಸ್ಸುಗಳಲ್ಲಿ ಹೆಚ್ಚಾಗುತ್ತಿದ್ದು, ಇದು ಮುಂದುವರಿದರೆ ಖಿನ್ನತೆ ಆವರಿಸಿ, ಮಾನಸಿಕ, ದೈಹಿಕ ಆರೋಗ್ಯಗಳೆರಡನ್ನೂ ಅವರು ಕಳೆದುಕೊಳ್ಳುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.

ಬಹು ಭಾಷೆಗಳ ನಾಡಾದ ಭಾರತದಂಥ ದೇಶದಲ್ಲಿ ಒಂದೊಂದು ಭಾಷೆಗೂ ಪ್ರತ್ಯೇಕ ವಾಹಿನಿಗಳ ಅಗತ್ಯವಿರುವುದು ಸಹಜ, ಅದು ಖಂಡಿತ ತಪ್ಪು ಕೂಡ ಅಲ್ಲ. ಸದುದ್ದೇಶದಿಂದ ಪ್ರಾರಂಭವಾಗುವ ಇವುಗಳ ನಡುವೆ ಬರುಬರುತ್ತಾ ಅನಾರೋಗ್ಯಕರ ಸ್ಪರ್ಧೆ ಹೆಚ್ಚಾಗಿ, ಅಪಾಯಕಾರಿ ಸನ್ನಿವೇಶಗಳು ಸೃಷ್ಟಿಯಾಗುತ್ತಲೇ ಇವೆ. ಸುದ್ದಿವಾಹಿನಿಗಳ ಸ್ಥಾಪನೆಯ ಮೊಟ್ಟ ಮೊದಲ ಗುರಿಯೇ ಸಮಾಜಕ್ಕೆ ಸುದ್ದಿ ಸಮಾಚಾರ ತಿಳಿಸುವ ಜತೆಗೆ ಜನರ ಜ್ಞಾನ ಹೆಚ್ಚಿಸುವುದು, ವೈಚಾರಿಕತೆ ಬೆಳೆಸುವುದು, ಜನಾಭಿಪ್ರಾಯಗಳನ್ನು ರೂಪಿಸಿ, ಒಂದಷ್ಟು ಮನೋರಂಜನೆ ಒದಗಿಸುವುದಾಗಿರುತ್ತದೆ. ಭಾರತದಲ್ಲಿ ಶೇ.60ರಷ್ಟಿರುವ ಯುವ ಸಮುದಾಯವು ದೇಶದ ಪ್ರಮುಖ ಸಂಪತ್ತು ಎನಿಸಿದೆ. ಅವರು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವುದರ ಮೂಲಕ ಆರೋಗ್ಯವಂತರಾಗಿ ದೇಶದ ಪ್ರಗತಿಗೆ ಪೂರಕವಾಗಿ ವಿಕಸಿತರಾದಾಗ ಮಾತ್ರವೇ ದೇಶದ ಸಂಪತ್ತು ವೃದ್ಧಿ, ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದರೆ ಯುವಜನರೇ ಮಾಧ್ಯಮದ ನಕಾರಾತ್ಮಕ ಪ್ರಭಾವಕ್ಕೆ ಒಳಗಾಗಿ ಅಡ್ಡದಾರಿ ಹಿಡಿದರೆ ದೇಶಕ್ಕೆ ಮಾರಕ ಎನಿಸುವ ಜತೆಗೆ ಶಾಪಗ್ರಸ್ತರೆನಿಸಿಕೊಳ್ಳುತ್ತಾರೆ.

ಈಗಾಗಲೇ ನಡೆದಿರುವ ಸಂಶೋಧನೆಗಳ ಪ್ರಕಾರ, ಮಾಧ್ಯಮದ ಅಕರ್ಷಣೆಗೆ ಮರುಳಾಗಿ ಪಾಶ್ಚಾತ್ಯೀಕರಣ ಹೊಂದುವ ದಿಕ್ಕಿನಲ್ಲಿ ಕುಡಿತ, ಜೂಜು, ಮಾದಕ ವಸ್ತುಗಳ ಸೇವನೆ ಮತ್ತು ವ್ಯಭಿಚಾರಕ್ಕೆ ಯುವಜನರು ಬಲಿಯಾಗಿ ಭವಿಷ್ಯದ ಬದುಕನ್ನು ಬಲಿಕೊಡುತ್ತಿರುವುದು ಗೊತ್ತಿರುವ ವಿಚಾರವೇ. ಖ್ಯಾತ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್‌ಡ್ ಪ್ರಕಾರ, ಎಲ್ಲ ಕಾಲಕ್ಕೂ ಮನುಷ್ಯನ ನಡೆವಳಿಕೆಯನ್ನು ನಿರ್ಧರಿಸುವುದರಲ್ಲಿ ಕಾಮದ ಪಾತ್ರ ಬಹು ದೊಡ್ಡದು. ಅವರು ಪ್ರತಿಪಾದಿಸಿದಂತೆ ಐದು ವರ್ಷದಿಂದ 13 ವರ್ಷದವರೆಗೆ ಲೈಂಗಿಕ ಭಾವನೆ ಸುಪ್ತಾವಸ್ಥೆಯಲ್ಲಿ ಮೊಗ್ಗಿನಂತಿದ್ದು ಹರೆಯಕ್ಕೆ ಕಾಲಿಡುತ್ತಿದ್ದಂತೆ ಅರಳಿ ಬಿಡುತ್ತದೆ. ಆಗ ಈ ಮುಕ್ತ ಮನಸ್ಸುಗಳ ಮೇಲೆ ಲೈಂಗಿಕ ಆಕರ್ಷಣೆ ಸಹಜವಾಗಿ ಮೂಡುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಅಶ್ಲೀಲ ದೃಶ್ಯಗಳನ್ನು ಅತ್ಯಂತ ಸುಲಭವಾಗಿ, ದಿನನಿತ್ಯ, ಮಾಧ್ಯಮಗಳಲ್ಲೇ ನೋಡಿದಾಗ ಯುವ ಮನಸ್ಸುಗಳಿಗೆ ನಿಯಂತ್ರಣ ಸಾಧ್ಯವಾಗದೇ ಅನಾಹುತಕಾರಿ ಅವಾಂತರಗಳಿಗೆ ಕಾರಣವಾಗಬಹುದು.

ಈ ಬೃಹತ್ ಪ್ರಪಂಚದಲ್ಲಿ ಪ್ರತಿನಿತ್ಯ ಅಸಂಖ್ಯಾತ ಘಟನೆಗಳು ಜರುಗುತ್ತಲೇ ಇರುತ್ತವೆ. ಪ್ರಪಂಚದಲ್ಲಿರುವ ಎಲ್ಲ ಜನರಿಗೂ, ಎಲ್ಲ ಕಾಲಗಳಲ್ಲಿ ಮಾಹಿತಿಯನ್ನು ಪ್ರತ್ಯೇಕವಾಗಿ ಮುಟ್ಟಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸುಲಭ ಸಾಧನವಾಗಿ ಲಭ್ಯವಾಗುವ ಮತ್ತು ಮಾನವನ ಆವಿಷ್ಕಾರದ ಮೂಲಕ ಕಂಡುಕೊಂಡ ಸಾಧನಗಳಾಗಿ ಸಂಪರ್ಕ ಮಾಧ್ಯಮಗಳು ಹುಟ್ಟಿಕೊಂಡವು. ಇಂದು ಕಿರುತೆರೆ ಸಾಮಾನ್ಯ ಜನರು ಕಡಿಮೆ ವೆಚ್ಚದಲ್ಲಿ ನೋಡಿ ಸಂತೋಷಪಡುವ ಜನಾನುರಾಗಿ ಮಾಧ್ಯಮವೆಂದು ಪರಿಗಣಿತವಾಗಿದೆ. ಈ ಮಾಧ್ಯಮದ ಮೂಲಕ ಸಮಸ್ತ ಜನರಿಗೂ ಎಲ್ಲಾ ವಿಚಾರಗಳನ್ನು ಒಂದು ನಿಗದಿತ ಕಾಲಮಿತಿಯ ಒಳಗೆ ತಲುಪಿಸಬಹುದು. ಅದಕ್ಕಾಗಿಯೇ ಅಮೆರಿಕದ ಸಮಾಜಶಾಸ್ತ್ರಜ್ಞ ಎಲಿಯಟ್, ‘ಮಾನವ, ತನ್ನ ವಿಶ್ರಾಂತ ಸಮಯದಲ್ಲಿ ದೇಹಕ್ಕೆ, ಮನಸ್ಸಿಗೆ ಕೊಡುವ ಒಂದು ನೂತನ ಅನುಭವವೇ ಮನೋರಂಜನೆ’ ಎಂದಿದ್ದರು. ನಾವೀಗ ಇದನ್ನು ಒಂದು ಮಾಡಿಕೊಳ್ಳಬಹುದು, ಇಲ್ಲವೇ ಒಂದು ಶಾಪವಾಗಿಯೂ ಅದರಿಂದ ಅನಪೇಕ್ಷಿತ ಪ್ರಭಾವಕ್ಕೆ ಒಳಗಾಗಬಹುದು.

ಆದರೆ ಆರ್ಥಿಕ ಉದಾರೀಕರಣದ ಮನ್ವಂತರದ ಉತ್ತುಂಗ ಕಾಲದಲ್ಲಿ ಸಿನಿಮಾ ಮತ್ತು ಕಿರುತೆರೆ ಅತ್ಯಂತ ಯಶಸ್ವಿ ಮನೋರಂಜನಾ ಮಾಧ್ಯಮ ಎನಿಸಿಕೊಂಡವು. ಇತರ ಸಂಪರ್ಕ ಮಾಧ್ಯಮಗಳಾದ ದಿನಪತ್ರಿಕೆ, ಆಕಾಶವಾಣಿ, ದೂರವಾಣಿ, ಅಂಚೆ, ಧ್ವನಿಸುರುಳಿ ಮತ್ತು ಮುದ್ರಣಗಳಿಗಿಂತ ಹೆಚ್ಚು ಪ್ರಭಾವಶಾಲಿ ಹಾಗು ಪರಿಣಾಮಕಾರಿ ಸಂಹವನವಾಗಿ ಅಭಿವೃದ್ಧಿಗೊಂಡವು. ಈ ಹಿನ್ನೆಲೆಯಲ್ಲಿ ಮಾಧ್ಯಮ ಲೋಕವನ್ನೇ ಬಂಡವಾಳ ಮಾಡಿಕೊಂಡ ದೇಶದ ವಾಣಿಜ್ಯ ಮನೋಭಾವದ ನಿರ್ಮಾಪಕ ಮತ್ತು ದೃಷ್ಟಿಕೋನದಲ್ಲಿ ಬಹಳಷ್ಟು ಬದಲಾವಣೆಗಳಾದವು. ಬಹುತೇಕರು ಲಾಭ ಮತ್ತು ಪ್ರಚಾರದ ಹುಚ್ಚಿಗೆ ಬಿದ್ದು ‘ಮಸಾಲಾ’ ಸೂತ್ರಕ್ಕೆ ಕಟ್ಟುಬಿದ್ದರು. ಪರಿಣಾಮವಾಗಿ ವೀಕ್ಷಕರು ಸುಲಭವಾಗಿ ಬಲಿಬೀಳುವ ಕೀಳು, ಅಶ್ಲೀಲ ಅಭಿರುಚಿ ಬೆಳೆಸುವಂತಹ ಸಾಮಗ್ರಿಯನ್ನು ಜನರಿಗೆ ನೀಡಿ ಒಂದು ಗೀಳನ್ನು ಸೃಷ್ಟಿಸಿದವು. ಅದನ್ನು ಬಂಡವಾಳ ಮಾಡಿಕೊಳ್ಳುವ ಎಲ್ಲ ಅವಕಾಶಗಳನ್ನು ಕಿರುತೆರೆಯನ್ನು ಒಳಗೊಂಡಂತೆ ಸಮಸ್ತ ಮಾಧ್ಯಮ ಜಗತ್ತು ಸದಾಕಾಲ ಪ್ರಯತ್ನಿಸುತ್ತ ಸಾಂದರ್ಭಿಕ ಅವಾಂತರ ಸೃಷ್ಟಿಸುತ್ತಲೇ ಇದೆ.

ಪ್ರಸ್ತುತ ಕೆಲವು ಚಲನಚಿತ್ರಗಳು ಒಳ್ಳೆಯದಾಗಿದ್ದು ಉದಾತ್ತ ಭಾವನೆಗಳನ್ನು ನೀಡುತ್ತಿವೆ. ಇನ್ನಿತರ ಬಹುತೇಕ ಭಾಗಗಳಲ್ಲಿ ದ್ವಂದ್ವಾರ್ಥದ ಅಭಿರುಚಿಯಿಂದಾಗಿ ಯುವ ಮನಸ್ಸುಗಳ ಮನಸ್ಸಿನಲ್ಲಿ ನಕಾರಾತ್ಮಕ ನಿಲುವುಗಳೇ ಹೆಚ್ಚಾಗುವಂತೆ ಮಾಡುತ್ತಿವೆ. ವಸ್ತುಸ್ಥಿತಿ ಹೀಗಿರುವಾಗ ಮಾಧ್ಯಮಗಳ ಜಗತ್ತು ನಮ್ಮನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎಂಬುದನ್ನು ನಾವೊಮ್ಮೆ ಪರಾಮರ್ಶೆ ಮಾಡಬೇಕಾಗುತ್ತದೆ.

ಅಶ್ಲೀಲ ಮತ್ತು ಹಿಂಸಾತ್ಮಕ ದೃಶ್ಯಗಳು ಕೇವಲ ಯಾವುದೇ ಒಂದು ಭಾಷೆಯ ಮಾಧ್ಯಮಗಳಿಗೆ ಸೀಮಿತವಾಗಿರದೇ ಇಡೀ ಭಾರತೀಯ ದೃಶ್ಯ ಮಾಧ್ಯಮವನ್ನೇ ಆವರಿಸಿದೆ ಎಂದರೆ ತಪಾಗದು. ಯಾವುದಾದರೊಂದು ಒಳ್ಳೆಯ(ಅಶ್ಲೀಲ ರಹಿತ) ಚಲನಚಿತ್ರ ಬಂದಿದೆ ಎಂದರೆ ಅದೇ ನಮ್ಮ ಎಂಬಂತಹ ಸನ್ನಿವೇಶ ಸೃಷ್ಟಿಯಾಗಿದೆ. ಕೌಟುಂಬಿಕ ಕಥೆಯ ಹಿನ್ನೆಲೆ ಹೊಂದಿರುವ ಕೆಲ ಚಿತ್ರಗಳಲ್ಲಿಯೂ ಬಾಕ್‌ಸ್ ಆಫೀಸ್ ದೃಷ್ಟಿಯನ್ನಿಟ್ಟುಕೊಂಡು ಮಸಾಲೆ ಸೇರಿಸಿ ಹಣ ಗಳಿಸುವುದು ಇಂದಿನ ಅಗತ್ಯ ಮತ್ತು ಸಾಮಾನ್ಯ ಸಂಗತಿ ಎನಿಸಿದೆ. ಇದರಿಂದಾಗಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕೂತು ನೋಡುವಂತಹ ಚಿತ್ರಗಳೇ ಭವಿಷ್ಯದಲ್ಲಿ ನೋಡಲು ಸಾದ್ಯವಿಲ್ಲವೇನೋ ಎಂಭ ಭಾವನೆ ಮನದಾಳದಲ್ಲಿ ಮೂಡುತ್ತಿರುವುದಂತೂ ಕಟು ಸತ್ಯ.

ಯಾವುದೇ ಚಿತ್ರದ ಯಶಸ್ಸಿಗೆ ಅದು ಆಯ್ದ ಕಥೆ, ತಾಂತ್ರಿಕತೆ, ನಿರೂಪಣೆ, ನಟನೆ ಮುಂತಾದವು ಕಾರಣವಾಗುವುದರ ವಿಶಾಲ ಪರದೆಯ ಮೇಲೆ ಈ ಎಲ್ಲ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರವೇ ಯಶಸ್ಸು ದೊರೆಯಲು ಸಾಧ್ಯ. ಆದರೆ ಇಂದು ಹಣ ಗಳಿಕೆಯೇ ಒಂದು ಪ್ರಧಾನ ಉದ್ದೇಶವಾಗಿರುವ ಈ ಸಂದರ್ಭದಲ್ಲಿ ಅಶ್ಲೀಲ ದೃಶ್ಯ, ಸಂಭಾಷಣೆಗಳನ್ನು ಉದ್ದೇಶಪೂರ್ವಕವಾಗಿ ಬೆರೆಸಿ, ಅಗತ್ಯವಿರದಿದ್ದರೂ ತುರುಕಿ, ಅಗ್ಗದ ಪ್ರಚಾರದ ಮೂಲಕ ವೈಭವೀಕರಿಸಲಾಗುತ್ತದೆ. ಇತ್ತೀಚಿನ ಸಿನಿಮಾ ಮತ್ತು ಕಿರುತೆರೆ ಮಾಧ್ಯಮದಲ್ಲಿ ಲೈಂಗಿಕತೆ ಮತ್ತು ಹಿಂಸಾಚಾರ ದೃಶ್ಯಗಳು ಸರ್ವೇ ಸಾಮಾನ್ಯ ಎನಿಸಿವೆ. ಇದರ ದೀರ್ಘಕಾಲೀನ ಪರಿಣಾಮ ಗಂಭೀರ ಪರಿಣಾಮಗಳನ್ನು ಖಂಡಿತ.

ಕೆಲ ನಿರ್ಮಾಪಕರು ಲಾಭದಾಸೆಗಾಗಿ ತಯಾರಿಸಲಾಗುವ ಚಿತ್ರಗಳಲ್ಲಿ ಅರೆನಗ್ನ, ವ್ಯಭಿಚಾರ, ಅತ್ಯಾಚಾರ, ವಂಚನೆ ಮತ್ತು ಹತ್ಯೆ ಘಟನೆಗಳು ಚಿತ್ರಕ್ಕೆ ಪೂರಕವಿರದಿದ್ದರೂ ತಂದು ಹಾಕುತ್ತಿದ್ದಾರೆ. ಅವುಗಳೀಗ ಮಿತಿ ಮೀರಿ ಹೋಗಿರುವುದು ದುರಂತದ ಪರಮಾವಧಿ ಎಂದೇ ಭಾವಿಸಬೇಕು. ಯುವಕರು ತಮ್ಮ ಮೆಚ್ಚಿನ ನಾಯಕ ನಾಯಕಿಯರನ್ನು ಅನುಕರಿಸ ಹೋಗಿ ಮೋಜಿನ ಜೀವನಕ್ಕೆ ಕಟ್ಟುಬಿದ್ದು ಅತಂತ್ರರಾಗಿ ಹಾಳಾಗುತ್ತಿರುವ ಉದಾಹರಣೆಗಳು ಪ್ರತಿದಿನ ನಮಗೆ ಸಿಗುತ್ತಿವೆ.
ಲೈಂಗಿಕ ಪ್ರಚೋದನೆ, ಚುಂಬನ ದೃಶ್ಯಗಳು ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗದೇ ಮೇಲೆ ಬಹಿರಂಗವಾಗುತ್ತ್ತಿರುವುದರ ಪರಿಣಾಮವೇನು ಎಂಬುದು ಸದ್ಯಕ್ಕೆ ನಿಲುಕದಾಗಿರಬಹುದು. ಆದರೆ ಹೆಣ್ಣಿಗೆ ಒಂದು ಘನತೆಯ ಸ್ಥಾನಮಾನ ಇರಬೇಕಾದ ಸಮಾಜದಲ್ಲಿ ಆಕೆಯನ್ನು ಕೀಳಾಗಿ ಚಿತ್ರಿಸುತ್ತಿರುವುದು ಗಂಡು ಹೆಣ್ಣಿನ ಅಂತರ ಇನ್ನೂ ಹೆಚ್ಚಾಗಲು ಕಾರಣವಾಗುತ್ತಿವೆ ಎನಿಸಿದರೆ ತಪ್ಪಿಲ್ಲ.

ಇದರ ನೇರ ಪರಿಣಾಮವೆಂದರೆ, ನಗರ ಸಮಾಜದಲ್ಲಿ ಈಗಾಗಲೇ ಹೆಚ್ಚಾಗಿರುವ ವಿವಾಹ ವಿಚ್ಛೇದನದಂತಹ ಸಮಸ್ಯೆಗಳು ಸಾಮಾನ್ಯವಾದ ಸಮಸ್ಯೆಗಳಾಗಿ ಕೂಡು ಕುಟುಂಬದಲ್ಲಿನ ನೆಮ್ಮದಿ ಹಾಳಾಗಿದೆ. ಮಕ್ಕಳು, ತಂದೆ-ತಾಯಿಗಳ ನಿರ್ಲಕ್ಷ್ಯಕ್ಕೆ ಒಳಗಾಗುವುದರಿಂದ ಹಲವಾರು ಅಪರಾಧಗಳ ಹೆಚ್ಚಳಕ್ಕೆ ಎಡೆ ಮಾಡಿಕೊಡುತ್ತಿವೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕೆನ್ನುವುದು ಸಹಜ. ಅದಕ್ಕಿಂತಲೂ ಸಮಾಜದ ಹಿತ ಬಹು ಮುಖ್ಯ. ಆದರೆ ಎಲ್ಲ ವಿಧದ ಮಾಧ್ಯಮಗಳಲ್ಲಿಯೂ ಇಂದು ಹೆಚ್ಚಾಗುತ್ತಿರುವ ಅಶ್ಲೀಲತೆ, ಹಿಂಸಾಚಾರ, ದ್ವಂದಾರ್ಥ ಪದಗಳ ಬಳಕೆ ಯಿಂದ ಸಮಾಜದಲ್ಲಿ ಅತ್ಯಾಚಾರ, ದರೋಡೆ, ಕೊಲೆ, ವ್ಯಭಿಚಾರ, ಜೂಜು ಇತ್ಯಾದಿಗಳು ಹೆಚ್ಚುತ್ತಿವೆ. ಅಸುರಕ್ಷಿತ ಸಮಾಜದಿಂದಾಗಿ ಸಾಮಾಜಿಕ ಮೌಲ್ಯಗಳು ಅಗ್ಗವಾಗಿವೆ. ಅನ್ಯಾಯ, ಅನೀತಿಗಳ ಪ್ರಮಾಣವು ಹೀಗೆಯೇ ಹೆಚ್ಚಾದರೆ ಭವಿಷ್ಯದ ಸಮಾಜದಲ್ಲಿ ಅಶಾಂತಿ ಪಸರಿಸುತ್ತಲೇ ಹೋಗಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ.

ಸಮಾಜದ ಕೆಡುಕಿಗೆ ನೇರ ಕಾರಣ ಅಲ್ಲ ಎಂದು ವಾದಿಸಬಹುದಾದರೂ ಪ್ರಚೋದನೆ ನೀಡುವ ಸಾಧನಗಳಾಗುತ್ತವೆ ಎಂಬುದನ್ನಂತೂ ತಳ್ಳಿಹಾಕಲಾಗದು. ಪ್ರಪಂಚದೊಡನೆ ಮನುಷ್ಯ ತನಗಿರುವ ಸಂಬಂಧವನ್ನು ಅರಿತು ಕೊಳ್ಳದಿದ್ದರೆ, ಅವನು ವಾಸಿಸುವ ಸ್ಥಳವೂ ಕೂಡ ಸೆರೆಮನೆಯಾಗುತ್ತದೆ ಎಂದು ಹೇಳಿದ್ದ ರವೀಂದ್ರನಾಥ ಠಾಕೂರ್ ಅವರ ನುಡಿ ಇಂದು ಸಹ ಪ್ರಸ್ತುತವಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close