NEET UG 2025: ನೀಟ್ ಯುಜಿ 2025 ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ
NEET UG 2025: ಕರ್ನಾಟಕದ ವಿವಿಧ ವೈದ್ಯಕೀಯ, ದಂತ, ಆಯುರ್ವೇದ, ಯುನಾನಿ, ಹೋಮಿಯೋಪಥಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ನೀಟ್ ಯುಜಿ 2025 ಕೌನ್ಸೆಲಿಂಗ್‌ಗೆ ನೋಂದಣಿ ಮಾಡಿಸಿ, ದಾಖಲೆಗಳ ಪರಿಶೀಲನೆ ಮಾಡಿಸಬೇಕಾಗುತ್ತದೆ ಎಂದು ಕೆಇಎ ತಿಳಿಸಿದೆ.


ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕರ್ನಾಟಕ ನೀಟ್ ಯುಜಿ 2025 ಕೌನ್ಸೆಲಿಂಗ್‌ಗೆ (NEET UG 2025) ಅರ್ಜಿ ಸಲ್ಲಿಸಲು ಜುಲೈ 17 ಕೊನೆಯ ದಿನವಾಗಿದ್ದು, ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಗುರುವಾರ ಬೆಳಗ್ಗೆ 11 ಗಂಟೆಯೊಳಗೆ ರಾಜ್ಯದ ಕೌನ್ಸೆಲಿಂಗ್ ಪ್ರಕ್ರಿಯೆಗೆ ನೋಂದಣಿ ಮಾಡಿಸಲು ಅವಕಾಶವಿದೆ. ಅರ್ಹ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್ https://cetonline.karnataka.gov.in/kea/ ಮೂಲಕ ಅರ್ಜಿ ಸಲ್ಲಿಸಬಹುದು.
ಕರ್ನಾಟಕದ ವಿವಿಧ ವೈದ್ಯಕೀಯ, ದಂತ, ಆಯುರ್ವೇದ, ಯುನಾನಿ, ಹೋಮಿಯೋಪಥಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ನೀಟ್ ಯುಜಿ 2025 ಕೌನ್ಸೆಲಿಂಗ್‌ಗೆ ನೋಂದಣಿ ಮಾಡಿಸಿ, ದಾಖಲೆಗಳ ಪರಿಶೀಲನೆ ಮಾಡಿಸಬೇಕಾಗುತ್ತದೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೂ ನೋಂದಣಿ ಮಾಡದಿರುವವರಿಗೆ ಅನುಕೂಲವಾಗಲಿ ಎಂದು ಜು.17ರವರೆಗೆ ಅರ್ಜಿ ಸಲ್ಲಿಕೆಯನ್ನು ವಿಸ್ತರಿಸಲಾಗಿತ್ತು. ಈವರೆಗೆ ನೋಂದಣಿ ಮಾಡಿಸದವರು ಹೊಸದಾಗಿ ನೋಂದಣಿ ಮಾಡಲು ಅರ್ಜಿ ಸಲ್ಲಿಸಬಹುದು. ಹಾಗೆಯೇ ನೀಟ್ ರೋಲ್ ನಂಬರ್ ದಾಖಲಿಸುವವರಿಗೂ ಜು.17ರವರೆಗೆ ಅವಕಾಶ ನೀಡಲಾಗಿದೆ.
ಕೆಇಎ ಪ್ರಕಟಿಸಿದ ಅಧಿಕೃತ ಸೂಚನೆಯಂತೆ, ಯಶಸ್ವಿಯಾಗಿ ನೋಂದಣಿ ಮಾಡಿದ ಅಭ್ಯರ್ಥಿಗಳು ದಾಖಲೆ ಪರಿಶೀಲನೆ ಹಂತಕ್ಕೆ ಹಾಜರಾಗಬೇಕಾಗುತ್ತದೆ. ಈ ಹಂತ ಜುಲೈ 18 ರಿಂದ ಜುಲೈ 19 ವರೆಗೆ ನಡೆಯಲಿದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕಾಗಿದೆ.
ದಾಖಲೆಗಳ ಪರಿಶೀಲನೆ ಕಡ್ಡಾಯ
ಎನ್‌ಎಮ್‌ಸಿ ಹಾಗೂ ಆಯುಷ್ ಇಲಾಖೆಯ ಸೂಚನೆಗಳನ್ವಯ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಸೇರಿ ಎಲ್ಲಾ ಸುತ್ತಿನ ಸೀಟು ಹಂಚಿಕೆಯನ್ನು ಆನ್‌ಲೈನ್ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ನಡೆಸುವುದರಿಂದ, ಯುಜಿ ನೀಟ್ 2025 ರಲ್ಲಿ ಅರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳು ಕರ್ನಾಟಕ ರಾಜ್ಯದಲ್ಲಿನ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗಲು ಕೆಇಎನಲ್ಲಿ ಆನ್‌ಲೈನ್ ಮೂಲಕ ನೊಂದಾಯಿಸಿ, ದಾಖಲೆಗಳ ಪರಿಶೀಲನಾ ಪ್ರಕ್ರಿಯೆಯನ್ನು (ಕೌನ್ಸೆಲಿಂಗ್) ಪೂರ್ಣಗೊಳಿಸಲು ಸೂಚಿಸಲಾಗಿದೆ.
ಇನ್ನು ಎಸ್‌ಸಿ, ಎಸ್‌ಟಿ, ಒಬಿಸಿ ಅರ್ಹತಾ ಮಾನದಂಡಗಳು ಕರ್ನಾಟಕದ SC/ST/OBC ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕೆಇಎ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | 10 ನಗರಗಳಲ್ಲಿ ಉದ್ಯೋಗಾವಕಾಶ: ಲಿಂಕ್ಡ್ ಇನ್ ಸಿಟೀಸ್ ಆನ್ ದಿ ರೈಸ್ 2025 ವರದಿ ಬಿಡುಗಡೆ
ಜುಲೈ 17ಕ್ಕೆ ಕನ್ನಡ ಭಾಷೆ ಪರೀಕ್ಷೆ
ಯುಜಿ ನೀಟ್ 2025ಕ್ಕೆ ಅರ್ಜಿ ಸಲ್ಲಿಸಿರುವ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಜುಲೈ 17ರಂದು ಮಧ್ಯಾಹ್ನ 3.30 ರಿಂದ 4.30 ಗಂಟೆಯವರೆಗೆ ಕನ್ನಡ ಭಾಷೆ ಪರೀಕ್ಷೆ ನಡೆಸಲಾಗುತ್ತದೆ. ಏಪ್ರಿಲ್ 15 ರಂದು ನಡೆದ ಯುಜಿ ಸಿಇಟಿ-2025 ಕನ್ನಡ ಭಾಷೆ ಪರೀಕ್ಷೆ ಬರೆಯದವರು ಈ ಕನ್ನಡ ಭಾಷೆ ಪರೀಕ್ಷೆಗೆ ಹಾಜರಾಗಬಹುದು.
ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಕನ್ನಡ ಭಾಷೆ ಪರೀಕ್ಷೆಗೆ ಹಾಜರಾಗಬಹುದಾಗಿದೆ.