Bengaluru News: ಭೀಮನ ಅಮಾವಾಸ್ಯೆ ದಿನ ಗಂಡನ ಪಾದ ಪೂಜೆ ಮಾಡಿದ ಬಳಿಕ ಹೆಂಡತಿ ಅನುಮಾನಾಸ್ಪದ ಸಾವು!
Bengaluru News: ಬೆಂಗಳೂರು ಹೊರವಲಯದ ದಾಸನಪುರದ ಅಂಚೆಪಾಳ್ಯದಲ್ಲಿ ಘಟನೆ ನಡೆದಿದೆ. ಭೀಮನ ಅಮಾವಾಸ್ಯೆಯಂದು ಗಂಡನ ಪಾದ ಪೂಜೆ ಮಾಡಿದ ಕೆಲ ಗಂಟೆಗಳಲ್ಲೇ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅಭಿಷೇಕ್ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ.


ಬೆಂಗಳೂರು: ಭೀಮನ ಅಮಾವಾಸ್ಯೆ ದಿನ ಗಂಡನಿಗೆ ಪೂಜೆ ಮಾಡಿದ ಬಳಿಕ ಹೆಂಡತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು (Bengaluru News) ಬೆಂಗಳೂರು ಹೊರವಲಯದ ದಾಸನಪುರದ ಅಂಚೆಪಾಳ್ಯದಲ್ಲಿ ನಡೆದಿದೆ. ವರದಕ್ಷಿಣೆ ಕಿರುಕುಳದಿಂದ ಮಹಿಳೆ ಮೃತಪಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸ್ಪಂದನಾ (24) ಮೃತ ಮಹಿಳೆ. ಬೆಂಗಳೂರಿನ ಕಾಲೇಜಿನಲ್ಲಿ ಪಿಜಿ ಓದುವಾಗ ಸ್ಪಂದನಾಗೆ ಕನಕಪುರದ ಕರಿಕಲ್ಲ ದೊಡ್ಡಿಯ ನಿವಾಸಿ ಅಭಿಷೇಕ್ ಎಂಬಾತನ ಪರಿಚಯವಾಗಿತ್ತು. ಪರಸ್ಪರ ಪ್ರೀತಿಸಿದ್ದ ಇವರು, ಪೋಷಕರ ವಿರೋಧದ ನಡುವೆ 2024ರಲ್ಲಿ ಕನಕಪುರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಈ ದಂಪತಿ ಕಳೆದ ಕೆಲ ತಿಂಗಳಿಂದ ಅಂಚೆಪಾಳ್ಯದಲ್ಲಿ ವಾಸವಿದ್ದರು.

ಆದರೆ, ಮದುವೆಯ ನಂತರ ವರದಕ್ಷಿಣೆಗಾಗಿ ಗಂಡ ಅಭಿಷೇಕ್ ಹಾಗೂ ಅವನ ತಾಯಿ ಲಕ್ಷ್ಮಮ್ಮ ನಿರಂತರ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಭೀಮನ ಅಮಾವಾಸ್ಯೆ ಪ್ರಯುಕ್ತ ಗಂಡನಿಗೆ ಗುರುವಾರ ಪಾದಪೂಜೆ ಮಾಡಿದ್ದ ಸ್ಪಂದನಾ, ಅದಾದ ಕೆಲ ಹೊತ್ತಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮಹಿಳೆಯ ಪೋಷಕರಿಗೆ ಸ್ಥಳೀಯರು ಮಾಹಿತಿ ನೀಡಿದ ಬಳಿಕ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Madikeri accident: ಮಡಿಕೇರಿಯಲ್ಲಿ ಭೀಕರ ಅಪಘಾತ; ಲಾರಿ-ಕಾರು ಡಿಕ್ಕಿಯಾಗಿ ನಾಲ್ವರ ದುರ್ಮರಣ
ಗಂಡ ಅಭಿಷೇಕ್ ಹಾಗೂ ಆತನ ತಾಯಿ ಲಕ್ಷ್ಮಮ್ಮ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಸಂಬಂಧಿತ ಆರೋಪಗಳಡಿ ಎಫ್‌ಐಆರ್ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಪಂದನಾ ಸಾವಿನ ಬಗ್ಗೆ ಪೂರ್ಣ ತನಿಖೆ ನಡೆಯಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯಾರ್ಥಿ ಸಾವು, ಇಬ್ಬರಿಗೆ ಗಂಭೀರ ಗಾಯ
ಹಾವೇರಿ: ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗಳಾಗಿರುವ ಘಟನೆ ಹಾವೇರಿ ಜಿಲ್ಲೆಯ (Haveri News) ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ನಡೆದಿದೆ. ಶಾಲೆಯ ಆವರಣದಲ್ಲಿದ್ದ ತೆಂಗಿನಮರದ ಬಳಿ ಹಾದು ಹೋಗಿದ್ದ ವಿದ್ಯುತ್ ತಂತಿ ಬಿದ್ದು ಅವಘಡ ನಡೆದಿದೆ.
ಹಂಸಭಾವಿ ಗ್ರಾಮದ ಮೃತ್ಯುಂಜಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅವಘಡ ಸಂಭವಿಸಿದೆ. ಮಹಮ್ಮದ್ ಶಾ ಗೌಸ್ ರಟ್ಟಿಹಳ್ಳಿ (12) ಮೃತ ಬಾಲಕ. ಇನ್ನಿಬ್ಬರು ಬಾಲಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯಲ್ಲಿ ಮಧ್ನಾಹ್ನ ಊಟಕ್ಕೆ ಬಿಟ್ಟ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.