ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cabinet Meeting: ಬಹುಮಹಡಿ ಕಟ್ಟಡಗಳಿಗೆ ಆಸ್ತಿ ತೆರಿಗೆಯೊಂದಿಗೆ ಶೇ.1 ಫೈರ್‌ ಸೆಸ್‌; ಸಚಿವ ಸಂಪುಟ ಅನುಮೋದನೆ

Cabinet Meeting: ಫೈರ್‌ ಸೆಸ್‌ ವಿಧಿಸುವುದು, ಗಿಗ್ ಕಾರ್ಮಿಕರ ಸುಗ್ರೀವಾಜ್ಞೆ ವಿಧೇಯಕವಾಗಿ ಪರಿವರ್ತಿಸುವುದು, ಆಂಬ್ಯುಲೆನ್ಸ್ ನಿರ್ವಹಣೆಗೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಸೇರಿ ಪ್ರಮುಖ ನಿರ್ಣಯಗಳನ್ನು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದೆ.

ಫೈರ್‌ ಸೆಸ್‌, ಆಂಬ್ಯುಲೆನ್ಸ್ ನಿರ್ವಹಣೆ ವಿಧೇಯಕಕ್ಕೆ ಸಂಪುಟ ಒಪ್ಪಿಗೆ

Prabhakara R Prabhakara R Jul 24, 2025 6:15 PM

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆದಿದ್ದು, ಬಹುಮಹಡಿ ಕಟ್ಟಡಗಳಿಗೆ ಫೈರ್‌ ಸೆಸ್‌ (Fire Cess) ವಿಧಿಸುವುದು, ಗಿಗ್ ಕಾರ್ಮಿಕರ ಸುಗ್ರೀವಾಜ್ಞೆ ವಿಧೇಯಕವಾಗಿ ಪರಿವರ್ತಿಸುವುದು, ಆಂಬ್ಯುಲೆನ್ಸ್ ನಿರ್ವಹಣೆಗೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ, ಜೀವಾವಧಿ ಶಿಕ್ಷಾ ಬಂದಿಗಳ ಬಿಡುಗಡೆ ಸೇರಿ ಪ್ರಮುಖ ನಿರ್ಣಯಗಳನ್ನು ಸಚಿವ ಸಂಪುಟ (Cabinet Meeting) ಕೈಗೊಂಡಿದೆ.

Fire Cess ವಿಧಿಸಲು ಕ್ರಮ

“ಕರ್ನಾಟಕ ಅಗ್ನಿಶಾಮಕ (ತಿದ್ದುಪಡಿ) ವಿಧೇಯಕ, 2025”ಕ್ಕೆ ಸಂಪುಟ ಅನುಮೋದನೆ ನೀಡಿದೆ. ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮೊದಲು Karnataka Fire Force Act, 1964ರ ಕಲಂ 15ಕ್ಕೆ ತಿದ್ದುಪಡಿ ತಂದು ನಂತರ ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆಯೊಂದಿಗೆ ಶೇ.1ರ ದರದಲ್ಲಿ Fire Cess ಅನ್ನು ವಿಧಿಸಲು ಕ್ರಮವಹಿಸಲು ಪ್ರಸ್ತಾಪಿಸಲಾಗಿದೆ.

ಆಂಬ್ಯುಲೆನ್ಸ್ ನಿರ್ವಹಣೆಗೆ ತಿದ್ದುಪಡಿ ವಿಧೇಯಕ

ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ ನೀಡಲಾಗಿದೆ. ಖಾಸಗಿ ಆಂಬ್ಯುಲೆನ್ಸ್ ಸೇವಾ ನಿರ್ವಾಹಕರನ್ನು ನಿಯಂತ್ರಿಸಲು ಮತ್ತು ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಯೆಂದು ನೋಂದಾಯಿಸಲು ಮತ್ತು ಮೂವತ್ತು ದಿನಗಳೊಳಗಾಗಿ ಖಾಯಂ ನೋಂದಣಿ ನೀಡಲು ತಿದ್ದುಪಡಿಯನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ.

ಗಿಗ್ ಕಾರ್ಮಿಕರ ಸುಗ್ರೀವಾಜ್ಞೆ ವಿಧೇಯಕವಾಗಿ ಪರಿವರ್ತಿಸಲು ನಿರ್ಣಯ

ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ-2025 (Earlier Ordinance Dated: 30.05.2025) ಹಾಗೂ ಸದರಿ ವಿಧೇಯಕವನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು; ಸಚಿವ ಸಂಪುಟವು ನಿರ್ಣಯಿಸಿದೆ.

ಔಷಧ ಖರೀದಿಗೆ ಅನುಮೋದನೆ

“2025-26ನೇ ಸಾಲಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಬೇಡಿಕೆಗಳಿಗನುಸಾರವಾಗಿ 890 ಔಷಧಗಳು, ಉಪಭೋಗ್ಯ ವಸ್ತುಗಳು ಹಾಗೂ ರಾಸಾಯನಿಕಗಳನ್ನು 880.68 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೆಟಿಪಿಪಿ ಕಾಯ್ದೆ 1999 ಹಾಗೂ ಕೆಟಿಪಿಪಿ ನಿಯಮ 2000 ಗಳನ್ನು ಅನುಸರಿಸಿ ಟೆಂಡರ್ ಮೂಲಕ ಸಂಗ್ರಹಿಸಿ ಸರಬರಾಜು ಮಾಡಲು ಹಾಗೂ ಅಗತ್ಯ ವಿರುವ ಅನುದಾನವನ್ನು ಒದಗಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಜೀವಾವಧಿ ಶಿಕ್ಷಾ ಬಂದಿಗಳ ಬಿಡುಗಡೆ

“ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ನಮೂದಿಸಿರುವ 46 ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸಲು ಹಾಗೂ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 03 ಶಿಕ್ಷಾ ಬಂದಿಗಳನ್ನು ಕೇಂದ್ರ ಗೃಹ ಮಂತ್ರಾಲಯದ ಸಹಮತಿ ದೊರಕಿದ ನಂತರ ಭಾರತ ಸಂವಿಧಾನದ ಅನುಚ್ಛೇದ-161ರ ಪ್ರಕಾರ ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ.

ಕಾಲ್ತುಳಿತ ಪ್ರಕರಣ; ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ಕಾನೂನು ಕ್ರಮ

ಆರ್.ಸಿ.ಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಲಾಗಿತ್ತು. ಕುನ್ಹಾ ಅವರ ವರದಿಯನ್ನು ರಾಜ್ಯ ಸಚಿವ ಸಂಪುಟ ಒಪ್ಪಿದೆ. ಚರ್ಚೆಯ ನಂತರ ಜೂನ್ 4, 2025ರ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಸಲ್ಲಿಸಿಕೆಯಾದ ವರದಿಯನ್ನು ಅಂಗೀಕರಿಸಲಾಗಿದೆ. ವರದಿಯಲ್ಲಿ ಉಲ್ಲೇಖಿಸಿರುವ ಖಾಸಗಿ ಸಂಸ್ಥೆಗಳ ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಿರುವ ಕ್ರಮಗಳನ್ನು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಸಚಿವ ಸಂಪುಟ ನಿರ್ಧರಿಸಿತು.

ಆರ್.ಸಿ.ಬಿ, ಡಿ.ಎನ್. ಎ ಎಂಟರ್‌ಟೈನ್‌ಮೆಂಟ್ ನೆಟ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, , ಕೆ ಎಸ್. ಸಿ ಎ ಅಧ್ಯಕ್ಷ ರಘುರಾಮ್ ಭಟ್, ಕೆ ಎಸ್ ಸಿ ಎ ಮಾಜಿ ಅಧ್ಯಕ್ಷ, ಎ ಶಂಕರ್, ಕೆ ಎಸ್ ಸಿ ಎ ಮಾಜಿ ಖಜಾಂಚಿ ಜಯರಾಮ್ ಇ.ಎಸ್, ರಾಜೇಶ್ ಮೆನನ್, ಉಪಾಧ್ಯಕ್ಷರು, ಆರ್.ಸಿ.ಬಿ.ಎಸ್.ಪಿ ಎಲ್, ಡಾ: ವೆಂಕಟವರ್ಧನ್, ಎಂ.ಡಿ. ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ ವರ್ಕ್ಸ್ ಇವರುಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ರಂಗಶಂಕರ ಸಂಸ್ಥೆ ಗುತ್ತಿಗೆ ವಿಸ್ತರಣೆ

ಮೆ|| ಸಂಕೇತ್ ಟ್ರಸ್ಟ್ ಅವರ ಪರವಾಗಿ “Establishing Theatre for performing Arts” ಉದ್ದೇಶಕ್ಕಾಗಿ ಹಂಚಿಕೆ ಮಾಡಿರುವ ಜೆ.ಪಿ ನಗರ 2ನೇ ಹಂತದ ಬಡಾವಣೆಯಲ್ಲಿನ 1354.50 ಚ.ಮೀ ವಿಸ್ತೀರ್ಣದ ನಾಗರೀಕ ಸೌಲಭ್ಯ ನಿವೇಶನ ಸಂಖ್ಯೆ: 36/2ಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವಿಧಿಸಿರುವ ಒಟ್ಟಾರೆ ಗುತ್ತಿಗೆ ಮೌಲ್ಯ / ವರ್ಷಾಸನದ ಶೇ.25 ರಷ್ಟು ಮೊತ್ತವನ್ನು ಮತ್ತು ಅದಕ್ಕೆ ಅನ್ವಯಿಸುವ ಜಿ.ಎಸ್.ಟಿ ಅನ್ನು ಗುತ್ತಿಗೆ ಮೌಲ್ಯವಾಗಿ ಪಾವತಿಸಿಕೊಂಡು ಗುತ್ತಿಗೆ ನವೀಕರಿಸಲು ಅನುಮತಿ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಅಲ್ಲೀಪುರ ಗ್ರಾಮ ಪಂಚಾಯಿತಿ ಇನ್ನು ಪಟ್ಟಣ ಪಂಚಾಯಿತಿ

“ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ-3, 4, 9, 349, 350, 351 ಮತ್ತು 355 ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಲ್ಲೀಪುರ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ‘ಅಲ್ಲೀಪುರ ಪಟ್ಟಣ ಪಂಚಾಯಿತಿ’ ಪ್ರದೇಶವೆಂದು ಉದ್ಘೋಷಿಸಲು; ಸಚಿವ ಸಂಪುಟ ನಿರ್ಧರಿಸಿದೆ.

ಸೂಳೆಕೆರೆ ಆಧುನೀಕರಣ

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೂಳೆಕೆರೆಯ ಜೀರ್ಣೋದ್ಧಾರ ಕಾಮಗಾರಿಯನ್ನು ರೂ.34.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಮದಗ-ಮಾಸೂರು ಕೆರೆ ಆಧುನೀಕರಣ

ಹಾವೇರಿ ಜಿಲ್ಲೆ, ರಟ್ಟಿಹಳ್ಳಿ ತಾಲ್ಲೂಕು ಮದಗ-ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ರೂ.52.20 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.

ನಂಜಾಪುರ ಏತ ನೀರಾವರಿ ಆಧುನೀಕರಣ

ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕಿನ ನಂಜಾಪುರ ಏತ ನೀರಾವರಿ ಯೋಜನೆಯ ಆಧುನೀಕರಣ ಕಾಮಗಾರಿಗಳ ರೂ.20.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಸೂಳೆಕೆರೆ ಉತ್ತರ ನಾಲೆಗಳ ಅಭಿವೃದ್ಧಿ

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೂಳೆಕೆರೆಯ ಉತ್ತರ ನಾಲೆಗಳ ಅಭಿವೃದ್ಧಿ ಕಾಮಗಾರಿಯನ್ನು ರೂ.47.75 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.

18 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ

““Scheme to lift water from Nagamangala Branch Canal under HLBC near Muddanahally to fill D.Tumkur & other 18 tanks in Hirisave hobli of Channarayapatna Taluk for drinking water purpose ಕಾಮಗಾರಿಯ ರೂ.74.00 ಕೋಟಿ ಮೊತ್ತದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಬಾಲ್ಯವಿವಾಹ ಅಷ್ಟೇ ಅಲ್ಲ ನಿಶ್ಚಿತಾರ್ಥವು ಶಿಕ್ಷಾರ್ಹ

“ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025”ಕ್ಕೆ ಅನುಮೋದನೆ ಮತ್ತು ಸದರಿ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಧರಿಸಿದೆ.

215.37 ಕೋಟಿ ರೂ.ಗಳ ವೆಚ್ಚದಲ್ಲಿ ಸವದತ್ತಿ ಯಲ್ಲಮ್ಮ ಗುಡ್ಡ ಅಭಿವೃದ್ಧಿ

ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಸ್ಕಿ ಯೋಜನೆಯಡಿ 100 ಕೋಟಿ, ಪ್ರಸಾದ ಯೋಜನೆಯಡಿ 18 ಕೋಟಿ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ನಿಧಿಯಿಂದ 97 ಕೋಟಿ ಪ್ರವಾಸೋದ್ಯಮ ಇಲಾಖೆಯ 15 ಕೋಟಿ ಸೇರಿದಂತೆ 215.37 ಕೋಟಿ ರೂ.ಗಳ ಮೊತ್ತದಲ್ಲಿ ಕೆಟಿಟಿಪಿ ಕಾಯ್ದೆಯಡಿ ಅನುಷ್ಠಾನ ಗೊಳಿಸಲು ಡಿಪಿಎಆರ್‌ ಗೆ ಸರ್ಕಾರದ ಅನುಮೋದನೆ ನೀಡಲು ಪ್ರವಾಸೋದ್ಯಮ ಇಲಾಖೆಯ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಜಿಲ್ಲಾಧಿಕಾರಿಗಳನ್ನು ಅನುಷ್ಠಾನ ಅಧಿಕಾರಿಯನ್ನಾಗಿ ನೇಮಿಸಲು ಹಾಗೂ ಯೋಜನೆ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಚಿವ ಸಂಪುಟದ ಇತರ ಪ್ರಮುಖ ನಿರ್ಣಯಗಳು

  • ಸ್ಪೇಸ್‌ ಟೆಕ್‌ನಲ್ಲಿ ಉತ್ಕೃಷ್ಟತಾ ಕೇಂದ್ರವನ್ನು (Centre of Excellence) ಮುಂದಿನ 5 ವರ್ಷಗಳ ಅವಧಿಯಲ್ಲಿ ರೂ. 10.00 ಕೋಟಿಗಳ ಮೊತ್ತದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
  • ಅಭಿವೃದ್ಧಿಗೊಳ್ಳುತ್ತಿರುವ ವಲಯಗಳಲ್ಲಿ ನಾವೀನ್ಯತೆ ಹಾಗೂ ಉದ್ಯಮಶೀಲತೆ ಹೆಚ್ಚಿಸಲು LEAP (Local Economy Accelerator Program) ಯೋಜನೆಯನ್ನು ಮುಂದಿನ 5 ವರ್ಷಗಳ ಅವಧಿಯಲ್ಲಿ ರೂ.1000.00 ಕೋಟಿಗಳ ಮೊತ್ತದಲ್ಲಿ (ಪ್ರತಿ ವರ್ಷ ರೂ.200.00 ಕೋಟಿಗಳು) ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆಯನ್ನ ಸಚಿವ ಸಂಪುಟ ನೀಡಿದೆ.
  • ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕವನ್ನು 50.00 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ಥಾಪಿಸಲು ಹೆಚ್ಚುವರಿಯಾಗಿ ಅವಶ್ಯವಿರುವ ವೈದ್ಯಕೀಯ ಉಪಕರಣ, ಪೀಠೋಪಕರಣ ಹಾಗೂ ಇತರೆ ಬಾಬುಗಳ ಒಟ್ಟಾರೆ ರೂ.62.00 ಕೋಟಿಗಳ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.
  • ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿರುವ ಯರಗಟ್ಟಿ ಏತನೀರಾವರಿ ಯೋಜನೆಯ ನವೀಕರಣ ಕಾಮಗಾರಿಗೆ 25 ಕೋಟಿ ರೂಗಳಲ್ಲಿ ಕೈಗೊಳ್ಳಲು ಹಾಗೂ ಇದೇ ತಾಲ್ಲೂಕಿನಲ್ಲಿ ರೇಣುಕಾ ಏತ ನೀರಾವರಿಯ ನವೀಕರಣ ಕಾಮಗಾರಿಗೆ 20 ಕೋಟಿ ರೂಗಳಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.
  • ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಾಲಗುಂದ ಗ್ರಾಮದ ಹತ್ತಿರ ತುಂಗಭದ್ರಾ ನದಿಯಿಂದ ನೀರನ್ನೆತ್ತಿ ತುಂಗಭದ್ರಾ ಎಡದಂಡೆ ಕಾಲುವೆಯ D-32 ಮತ್ತು D-36 ವ್ಯಾಪ್ತಿಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಸಾಲಗುಂದ ಏತ ನೀರಾವರಿ ಯೋಜನೆಯನ್ನು ರೂ.178.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿದೆ.
  • ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಕುಡಿಯುವ ನೀರಿಗಾಗಿ ಹಂಚಿಕೆಯಾಗಿರುವ 0.512 టిఎంసి ನೀರನ್ನು ಸಂಗ್ರಹಣಾ ಸ್ಥಳಕ್ಕೆ ಪೂರೈಸಲು ಅರಸೀಕೆರೆ ತಾಲ್ಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ರೂ..148.80 ಕೋಟಿಗಳ ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.
  • ಹಾವೇರಿ ಜಿಲ್ಲೆ, ರಟ್ಟಿಹಳ್ಳಿ ತಾಲ್ಲೂಕು ಮದಗ-ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ರೂ.52.20 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ
  • ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕಿನ ನಂಜಾಪುರ ಏತ ನೀರಾವರಿ ಯೋಜನೆಯ ಆಧುನೀಕರಣ ಕಾಮಗಾರಿಗಳ ರೂ.20.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಈ ಸುದ್ದಿಯನ್ನೂ ಓದಿ | Bengaluru Stampede: ಕಾಲ್ತುಳಿತ ಪ್ರಕರಣ; ಆರ್‌ಸಿಬಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಸಚಿವ ಸಂಪುಟ ನಿರ್ಧಾರ