Transport Workers Strike: ಸಾರಿಗೆ ಮುಷ್ಕರ ಮಾಡಿದ್ದ ನೌಕರರಿಗೆ ಶಾಕ್; ನಿಗಮಗಳಿಂದ ನೋಟಿಸ್
Transport Workers Strike: ಕೋರ್ಟ್ ಆದೇಶದ ನಡುವೆ ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಕೆಲಸದಿಂದ ವಜಾ ಮಾಡುವ ಕುರಿತಾಗಿ ನೋಟಿಸ್ ನೀಡಲಾಗಿದೆ. ಸಾರಿಗೆ ಇಲಾಖೆಯ 4 ನಿಗಮಗಳ ಎಂಡಿಗಳು ಸಾರಿಗೆ ನೌಕರರಿಗೆ ನೋಟಿಸ್ ನೀಡಿದ್ದು, ಇದರಿಂದ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ.


ಬೆಂಗಳೂರು: ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ಮುಷ್ಕರ ನೌಕರರು ನಡೆಸಿದ್ದ ನೌಕರರಿಗೆ ಸಾರಿಗೆ ನಿಗಮಗಳು ಶಾಕ್ ನೀಡಿವೆ. ಹೈಕೋರ್ಟ್ ಸೂಚನೆ ಉಲ್ಲಂಘಿಸಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರಿಗೆ ನೋಟಿಸ್ ಜಾರಿಯಾಗಿದ್ದು, ಕೆಲಸದಿಂದ ವಜಾಗೊಳಿಸುವ ಕುರಿತಾಗಿ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಮುಷ್ಕರಕ್ಕೆ ಕರೆ ಕೊಟ್ಟಿದ್ದ ಸಾರಿಗೆ ನೌಕರರ ಸಂಘಟನೆಗಳಿಗೆ ಮುಷ್ಕರ ಮುಂದೂಡುವಂತೆ ಹೈಕೋರ್ಟ್ ಸೋಮವಾರ ಸೂಚನೆ ನೀಡಿತ್ತು. ಸಾರ್ವಜನಿಕರ ಹಿತಾಸಕ್ತಿ ಹಿನ್ನೆಲೆಯಲ್ಲಿ ಮುಷ್ಕರ ನಡೆಸದಂತೆ ನಿರ್ದೇಶಿಸಿತ್ತು. ಹಾಗಿದ್ದರೂ ಕೋರ್ಟ್ ಸೂಚನೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಲಾಗಿತ್ತು. ಹೀಗಾಗಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಿಗಮಗಳು ಮುಂದಾಗಿವೆ.
ಮುಷ್ಕರದಿಂದ ಕರ್ತವ್ಯಕ್ಕೆ ಗೈರಾಗಿದ್ದ ಬಿಎಂಟಿಸಿ, ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿಯ ನೌಕರರಿಗೆ ನೋಟಿಸ್ ನೀಡಿದೆ. ನಿನ್ನೆ ಒಂದೇ ದಿನ ಸಾವಿರಾರು ನೌಕರರಿಗೆ ನೋಟಿಸ್ ತಲುಪಿದ್ದು, ನೋಟಿಸ್ಗೆ ಸಕಾರಣ ನೀಡದಿದ್ದರೆ ವಜಾ ಮಾಡುವ ಎಚ್ಚರಿಕೆ ನೀಡಲಾಗಿದೆ. ಇದರಿಂದ ನೋಟಿಸ್ ಪಡೆದ ನೌಕರರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಮಂಗಳವಾರ ಮುಷ್ಕರ ಮುಂದೂಡುವಂತೆ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದೂಡಲಾಗಿತ್ತು. ಮುಷ್ಕರಕ್ಕೆ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠಿದಂದ ವಿಚಾರಣೆ ನಡೆಸಿ, ಮುಷ್ಕರಕ್ಕೆ ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ನ್ಯಾಯಾಲಯ ಎರಡು ದಿನಗಳ ಕಾಲ ವಿಸ್ತರಣೆ ಮಾಡಿದೆ. ಅಲ್ಲದೆ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 7 ಕ್ಕೆ ಮುಂದೂಡಿಕೆ ಮಾಡಿದೆ.
ಈ ಸುದ್ದಿಯನ್ನೂ ಓದಿ | Transport Strike: ಸಾರಿಗೆ ಮುಷ್ಕರ; ರಾಯಚೂರಿನಲ್ಲಿ ಆಂಧ್ರ, ತೆಲಂಗಾಣ ಬಸ್‌ಗಳ ಮೊರೆ ಹೋದ ಪ್ರಯಾಣಿಕರು
ಹೈಕೋರ್ಟ್ ತರಾಟೆ ಹಿನ್ನೆಲೆ ಸಾರಿಗೆ ಮುಷ್ಕರ ಮುಂದೂಡಿಕೆ; ರಸ್ತೆಗಿಳಿದ ಬಸ್‌ಗಳು
ಬೆಂಗಳೂರು: ಹೈಕೋರ್ಟ್ ತರಾಟೆ ಹಿನ್ನೆಲೆ ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆಯಾಗಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿಕೆ ಮಾಡುತ್ತಿರುವುದಾಗಿ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾಸಮಿತಿಯ ಅಧ್ಯಕ್ಷ ಅನಂತ ಸುಬ್ಬಾರಾವ್ ಘೋಷಿಸಿದ್ದಾರೆ. ಹೀಗಾಗಿ ಮಂಗಳವಾರ ಸಂಜೆ ಎಂದಿನಂತೆ ಸಾರಿಗೆ ಬಸ್‌ಗಳ (Transport Strike) ಸಂಚಾರ ಆರಂಭವಾದವು.
ಜನರಿಗೆ ನಿಮ್ಮ ಮುಷ್ಕರದಿಂದ ಸಮಸ್ಯೆ ಆಗಬಾರದು. ಮುಷ್ಕರ ನಿಂತಿರುವ ಬಗ್ಗೆ ನಾಳೆ ಮಾಹಿತಿ ನೀಡಬೇಕು. ಇಲ್ಲವಾದರೆ ನ್ಯಾಯಾಂಗ ನಿಂದನೆ ಕೇಸ್ ದಾಖಲು ಮಾಡುವುದಾಗಿ ಹೈಕೋರ್ಟ್ ಸಿಜೆ ವಿಭು ಬಖ್ರು, ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ನ್ಯಾಯಪೀಠವು ಎಚ್ಚರಿಕೆ ನೀಡಿದೆ. ಹೀಗಾಗಿ ರಾಜ್ಯಾದ್ಯಂತ ಈ ಕ್ಷಣದಿಂದಲೇ ಹೈಕೋರ್ಟ್ ಸೂಚನೆಯ ಮೇರೆಗೆ ನಾವು ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿಕೆ ಮಾಡಿದ್ದೇವೆ, ಮುಷ್ಕರ ಕೈಬಿಟ್ಟಿಲ್ಲ, ಮುಂದಿನ ದಿನಾಂಕ ಘೋಷಿಸುತ್ತೇವೆ ಎಂದು ಅನಂತ ಸುಬ್ಬಾರಾವ್ ತಿಳಿಸಿದ್ದಾರೆ.
ಇಂದು ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದಂತ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದೆ. ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಪೀಠವು, ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ನೋಟಿಸ್ ನೀಡಿದೆ. ಇದೇ ಸಂದರ್ಭದಲ್ಲಿ ಮುಷ್ಕರ ಮುಂದುವರಿಸಿದರೇ ಎಸ್ಮಾ ಅಡಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂಬುದಾಗಿಯೂ ಹೈಕೋರ್ಟ್ ತಿಳಿಸಿದೆ.
ಹೈಕೋರ್ಟ್ ತರಾಟೆಗೆ ಸಾರಿಗೆ ನೌಕರರ ಸಂಘಟನೆಯ ಜಂಟಿ ಕ್ರಿಯಾ ಸಮಿತಿ ಪರ ವಕೀಲರು ತಬ್ಬಿಬ್ಬಾದರು. ಹೀಗಾಗಿ ಬುಧವಾರ ಸಾರಿಗೆ ಮುಷ್ಕರ ನಡೆಸುವುದಿಲ್ಲವೆಂದು ನೌಕರರ ಸಂಘಟನೆ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.