Magadi News: ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರ ಸಾವು, ನಾಲ್ವರ ರಕ್ಷಣೆ
Magadi News: ಮಾಗಡಿಯ ವೈಜಿ ಗುಡ್ಡ ಜಲಾಶಯ ವೀಕ್ಷಣೆಗೆಂದು 7 ಯುವತಿಯರು ತೆರಳಿದ್ದರು. ಈ ವೇಳೆ ಒಬ್ಬ ಯುವತಿ ನೀರಿಗೆ ಬಿದ್ದಿದ್ದು, ಆಕೆಯ ರಕ್ಷಣೆಗೆ ಉಳಿದ ಸ್ನೇಹಿತೆಯರು ತೆರಳಿದ್ದಾರೆ. ಕೂಡಲೇ ಸ್ಥಳೀಯ ಯುವಕ ನಾಲ್ವರು ಯುವತಿಯರನ್ನು ರಕ್ಷಿಸಿದ್ದು, ಇನ್ನುಳಿದ ಮೂವರು ನೀರುಪಾಲಾಗಿದ್ದಾರೆ.


ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ವೈಜಿ ಗುಡ್ಡ ಜಲಾಶಯದಲ್ಲಿ ಆಟವಾಡಲು ಹೋಗಿದ್ದ ಮೂವರು ಯುವತಿಯರು ಮೃತಪಟ್ಟಿದ್ದು (Magadi News), ಈ ವೇಳೆ ಅವರ ಜತೆಗಿದ್ದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಡ್ಯಾಮ್ ನೀರಿನಲ್ಲಿ ಮುಳುಗಿ ಬೆಂಗಳೂರು ಮೂಲದ ರಾಘವಿ (18) ಮಧುಮಿತ (20) ಹಾಗೂ ರಮ್ಯಾ (22) ಎಂಬುವವರು ಮೃತಪಟ್ಟಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ವೈ.ಜಿ. ಗುಡ್ಡ ಗ್ರಾಮದ ಸಂಬಂಧಿಕರ ಮನೆಗೆ ಯುವತಿಯರು ಬಂದಿದ್ದರು. ಮಧ್ಯಾಹ್ನ ಮನೆಯಿಂದ ಏಳು ಮಂದಿ ಸಮೀಪದ ಜಲಾಶಯಕ್ಕೆ ಭೇಟಿ ನೀಡಿದ್ದರು. ಹಿನ್ನೀರಿಗೆ ಇಳಿದು ಆಟವಾಡುತ್ತಿದ್ದ ಯುವತಿಯರ ಪೈಕಿ, ಒಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗತೊಡಗಿದ್ದಾರೆ. ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸಲು ಉಳಿದಿಬ್ಬರು ಮುಂದಾಗಿದ್ದಾರೆ. ಆಗ ಅವರು ಸಹ ನೀರಿನ ಸೆಳೆತಕ್ಕೆ ಸಿಲುಕಿ ಮುಳಗತೊಡಗಿದ್ದಾರೆ.
ಕಣ್ಣೆದುರಿಗೆ ಕುಟುಂಬದ ಯುವತಿಯರು ಮುಳುಗುತ್ತಿದ್ದನ್ನು ಕಂಡು ಉಳಿದವರು ನೆರವಿಗಾಗಿ ಕೂಗಿಕೊಂಡಿದ್ದಾರೆ. ಸ್ಥಳಕ್ಕೆ ಸ್ಥಳೀಯರು ಬರುವಷ್ಟರಲ್ಲಿ ಮೂವರು ಯುವತಿಯರು ನೀರು ಪಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿ ಮೂವರು ಯುವತಿಯರನ್ನು ಶವವನ್ನು ನೀರಿನಿಂದ ಮೇಲಕ್ಕೆತ್ತಿ, ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು. ಘಟನೆ ಕುರಿತು ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶ್ರೀಶೈಲದಿಂದ ವಾಪಸ್ಸಾಗುವಾಗ ಇನ್ನೋವಾ ಕಾರು ಪಲ್ಟಿ; ತುಮಕೂರಿನ ಮೂವರ ದುರ್ಮರಣ

ತುಮಕೂರು: ಶ್ರೀಶೈಲಂ, ಮಹಾನಂದಿ ಸೇರಿ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ವಾಪಸ್ ಆಗುತ್ತಿದ್ದಾಗ ಇನ್ನೋವಾ ಕಾರು ಪಲ್ಟಿಯಾಗಿ ತುಮಕೂರಿನ ಮೂವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Car Accident) ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯ ಪ್ಯಾಪಿಲಿ ಮಂಡಲದ ಪೋದೊಡ್ಡಿ ಗ್ರಾಮದ ಬಳಿ ಸೋಮವಾರ ಬೆಳಗ್ಗೆ ನಡೆದಿದೆ. ತುಮಕೂರು ಮೂಲದ ಆರು ಮಂದಿ ಸ್ನೇಹಿತರು ಕಾರಿನಲ್ಲಿ ಅಂಧ್ರದ ಪ್ರಸಿದ್ಧ ಶ್ರೀಶೈಲಂ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಮತ್ತು ಮಹಾನಂದಿ ದೇವಸ್ಥಾನಗಳಿಗೆ ಭೇಟಿ ನೀಡಿ ತುಮಕೂರಿಗೆ ವಾಪಸ್ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರನ್ನು ಸಂತೋಷ್, ಲೋಕೇಶ್ ಮತ್ತು ನವೀನ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಇತರ ಮೂವರು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಕುರವಪಲ್ಲಿ ಬಳಿ ಭಾನುವಾರವೂ ಭೀಕರ ರಸ್ತೆ ಅಪಘಾತ ಸಂಭವಿಸಿ, ಕರ್ನಾಟಕ ಮೂಲದ ಮೂವರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಅಪಘಾತ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಬಾವಿಗೆ ಬಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುತ್ತಕದಲ್ಲಿಯ ಲೋಕೇಶ್, ಚಂದ್ರನಹಳ್ಳಿ ನಿವಾಸಿ ಶಿವಾನಂದ ಹಾಗೂ ಕೋಲಾರ ಜಿಲ್ಲೆಯ ಸುಗಟೂರಿನ ಚಲಪತಿ ಮೃತಪಟ್ಟಿದ್ದರು.
ಅಡುಗೆ ಕೆಲಸಕ್ಕಾಗಿ ಕಾರಿನಲ್ಲಿ ಒಟ್ಟು ಐವರು ತೆರಳುತ್ತಿದ್ದಾಗ ಭಾನುವಾರ ಮುಂಜಾನೆ ಈ ಅಪಘಾತ ಸಂಭವಿಸಿತ್ತು. ವಾಹನವು ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದ್ದರಿಂದ ಲೋಕೇಶ್, ಶಿವಾನಂದ, ಚಲಪತಿ ಮೃತಪಟ್ಟು, ಇನ್ನುಳಿದ ಸುನೀಲ್, ತಿಪ್ಪಾರೆಡ್ಡಿ ಕಾರಿನ ಹಿಂಬದಿ ಗಾಜನ್ನು ಒಡೆದು ಹೊರಗೆ ಬಂದಿದ್ದರು.
ಈ ಸುದ್ದಿಯನ್ನೂ ಓದಿ | Bengaluru Rain: ಧಾರಾಕಾರ ಮಳೆಗೆ ರಾಜಧಾನಿಯಲ್ಲಿ ಮೊದಲ ಬಲಿ, ಗೋಡೆ ಕುಸಿದು ಮಹಿಳೆ ಸಾವು