ನೇಹಾ ಹಿರೇಮಠ ಹತ್ಯೆಯಾಗಿ 1 ವರ್ಷ: ಶ್ರೀರಾಮ ಸೇನೆಯಿಂದ ಮಹಿಳೆಯರಿಗೆ ತ್ರಿಶೂಲ ದೀಕ್ಷೆ
ನೇಹಾ ಹಿರೇಮಠ ಹತ್ಯೆಗೆ ಏಪ್ರಿಲ್ 18ಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ನೇಹಾ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ, ಶ್ರೀರಾಮ ಸೇನೆ ವತಿಯಿಂದ ಹುಬ್ಬಳ್ಳಿಯ ಮಿನಿವಿಧಾನಸೌಧದ ಮುಂಭಾಗದಲ್ಲಿರುವ ಶಿವಕೃಷ್ಣ ಮಂದಿರದಲ್ಲಿ ಸ್ವರಕ್ಷಣೆಗಾಗಿ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ಮತ್ತು ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡಲಾಯಿತು.


ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಆಗಿ ಏಪ್ರಿಲ್ 18ಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ನ್ಯಾಯಕ್ಕಾಗಿ ಆಗ್ರಹಿಸಿ, ಶ್ರೀರಾಮ ಸೇನೆ ವತಿಯಿಂದ ಹುಬ್ಬಳ್ಳಿಯ ಮಿನಿವಿಧಾನಸೌಧದ ಮುಂಭಾಗದಲ್ಲಿರುವ ಶಿವಕೃಷ್ಣ ಮಂದಿರದಲ್ಲಿ ಸ್ವರಕ್ಷಣೆಗಾಗಿ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ಮತ್ತು ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡಲಾಯಿತು. ಇದಕ್ಕೂ ಮೊದಲು ನೇಹಾ ಹಿರೇಮಠ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪೂರ್ಣಾಹುತಿ ಹೋಮ, ಹವನ ಮಾಡಲಾಯಿತು. ಅಲ್ಲದೇ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ನೇಹಾ ಹಿರೇಮಠ ಅವರನ್ನು ಹಾಡಹಗಲೇ ಹತ್ಯೆ ಮಾಡಲಾಗಿತ್ತು. ಈ ಘಟನೆಗೆ ಇಂದು ಒಂದು ವರ್ಷ ಆಗಿದೆ. ಈ ಹಿನ್ನೆಲೆ ಶ್ರೀರಾಮ ಸೇನೆ ಸಂಘಟನೆ ವಾರ್ಷಿಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ. ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡುವಲ್ಲಿ ಕೋರ್ಟ್, ಪೊಲೀಸ್ ಠಾಣೆ, ರಾಜಕಾರಣಿಗಳು ವಿಫಲರಾಗಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಪ್ರಕ್ರಿಯೆ ಆಗಿಲ್ಲ, ಇದು ಗಂಭೀರವಾಗಿದೆ. ಇದೇ ಮಾದರಿಯಲ್ಲಿ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಇದಕ್ಕೆ ಕಾರಣ ರಾಜಕಾರಣಿಗಳು, ಕಾಂಗ್ರೆಸ್, ಕೋರ್ಟ್, ಪೊಲೀಸರು, ಮೇಲಿಂದ ಮೇಲೆ ಆಗುತ್ತಿರುವ ಘಟನೆಗಳಿಗೆ ನಿರ್ಣಯ ಕೊಡದೇ ನಿರ್ಲಕ್ಷ್ಯ ವಹಿಸುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಮಹಿಳೆಯರ ಸುರಕ್ಷತೆ ರಾಜಕಾರಣಿಗಳಿಗೆ ಬೇಡಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಶ್ರೀರಾಮ ಸೇನೆಯಿಂದ ಒಂದು ಸಾವಿರ ಮಹಿಳೆಯರಿಗೆ ಶ್ರೀಶೂಲ ದೀಕ್ಷೆ ಕೊಡಲಾಗಿದೆ. ಇವತ್ತು ಸಾಂಕೇತಿಕವಾಗಿ ಚಾಲನೆ ನೀಡಿದ್ದೇವೆ, ಮಹಿಳೆಯರಲ್ಲಿ ಧೈರ್ಯ, ಸ್ಥೈರ್ಯ, ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದೇವೆ, ಹಿಂದೂ ಮಹಿಳೆಯರ ಸುರಕ್ಷತೆಗಾಗಿ ಇದೇ ತ್ರಿಶೂಲದಿಂದ ಉತ್ತರ ಕೊಡುವ ದೃಷ್ಟಿಯಿಂದ ಇದನ್ನು ಆಚರಣೆ ಮಾಡುತ್ತಿದ್ದೇವೆ ಎಂದರು.
ಈ ಸುದ್ದಿಯನ್ನೂ ಓದಿ | Karnataka Weather: ನಾಳೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಈ ಹಿಂದೆ ನೇಹಾ ಹಿರೇಮಠ ಪ್ರಕರಣದಲ್ಲಿ ಎನ್‌ಕೌಂಟರ್ ಮಾಡಿದ್ರೆ, ಮುಂದೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ, ಯಾಕೆಂದರೆ ಎನ್‌ಕೌಂಟರ್ ಮಾಡದೇ ಇರುವುದು, ಕೋರ್ಟ್ ನಿರ್ಣಯ ವಿಳಂಬಗಳೇ ಇದಕ್ಕೆ ಕಾರಣವಾಗಿವೆ. ರಾಜಕಾರಣಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ ಎಂದು ದೂರಿದರು. ಹುಬ್ಬಳ್ಳಿಯಲ್ಲಿ ನಡೆದ ಎನ್‌ಕೌಂಟರ್ ಮಾದರಿಯಲ್ಲಿ ಅಪರಾಧಿಗಳಿಗೆ ಉತ್ತರ ಕೊಡಬೇಕು, ಜೈಲಿಗೆ ಹೋಗಬಾರದು, ಘಟನೆ ನಡೆದ ತಕ್ಷಣವೇ ಉತ್ತರ ಕೊಡಬೇಕು ಎಂದು ಅವರು ತಿಳಿಸಿದರು.
ಇನ್ನು ಶಿವಮೊಗ್ಗ ನಗರದಲ್ಲಿ ಪರೀಕ್ಷೆ ಸಮಯದಲ್ಲಿ ಜನಿವಾರವನ್ನು ತೆಗೆಸಿ ಕಸದ ಬುಟ್ಟಿಯಲ್ಲಿ ಹಾಕಿದ್ದು ಅಪರಾಧ, ಅಂತವರನ್ನು ಅಮಾನತು ಮಾಡಬೇಕು. ಧಾರ್ಮಿಕ ಸಂಕೇತಗಳಿಗೆ ದಕ್ಕೆ ತರುವ ಕೆಲಸ ಖಂಡನೀಯ, ಇಂತಹ ಘಟನೆಗಳು ಕಾಂಗ್ರೆಸ್ ನಡೆಯಿಂದ ನಡೆಯುತ್ತಿದೆ ಎಂದು ಆರೋಪಿಸಿದರು.