ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Forest Department: ಇನ್ನುಮುಂದೆ ರಾಜ್ಯದ ಅರಣ್ಯಗಳಲ್ಲಿ ಜಾನುವಾರು ಮೇಯಿಸುವುದಕ್ಕೆ ನಿಷೇಧ!

Forest Department: ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುವುದರಿಂದ ಕಾಡಿನಲ್ಲಿ ಆಗಷ್ಟೇ ಮೊಳಕೆ ಒಡೆದ ಚಿಕ್ಕಪುಟ್ಟ ಸಸಿಗಳು, ಸಾಕು ಪ್ರಾಣಿಗಳಿಗೆ ಆಹಾರವಾಗಿ, ಅರಣ್ಯದಲ್ಲಿ ಹೊಸ ಗಿಡಗಳು ಬೆಳೆಯದೆ, ಅರಣ್ಯ ಸಂವರ್ಧನೆಗೆ ಅಡ್ಡಿಯಾಗುತ್ತಿದೆ ಎಂದು ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ರಾಜ್ಯದ ಅರಣ್ಯಗಳಲ್ಲಿ ಜಾನುವಾರು ಮೇಯಿಸುವುದಕ್ಕೆ ನಿಷೇಧ

Prabhakara R Prabhakara R Jul 22, 2025 8:51 PM

ಬೆಂಗಳೂರು: ರಾಜ್ಯದಲ್ಲಿನ ಎಲ್ಲ ಅರಣ್ಯ ಪ್ರದೇಶಗಳಲ್ಲಿ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮ ವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳಲು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುವುದರಿಂದ ಕಾಡಿನಲ್ಲಿ ಆಗಷ್ಟೇ ಮೊಳಕೆ ಒಡೆದ ಚಿಕ್ಕಪುಟ್ಟ ಸಸಿಗಳು, ಸಾಕು ಪ್ರಾಣಿಗಳಿಗೆ ಆಹಾರವಾಗಿ, ಅರಣ್ಯದಲ್ಲಿ ಹೊಸ ಗಿಡಗಳು ಬೆಳೆಯದೆ, ಅರಣ್ಯ ಸಂವರ್ಧನೆಗೆ ಅಡ್ಡಿಯಾಗುತ್ತಿದೆ ಎಂದು ಪರಿಸರಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಈ ಬಗ್ಗೆ ಪರಿಶೀಲಿಸಿ ಕಾನೂನು ರೀತ್ಯ ಕ್ರಮವಹಿಸಲು ಸಚಿವರು ಸೂಚಿಸಿದ್ದಾರೆ.

ದೊಡ್ಡ ಸಂಖ್ಯೆಯ ಸಾಕು ಪ್ರಾಣಿಗಳು ಕಾಡಿನಲ್ಲಿ ಮೇಯುವುದರಿಂದ ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳಿಗೂ ಮೇವಿನ ಕೊರತೆ ಉಂಟಾಗುತ್ತದೆ. ಮಿಗಿಲಾಗಿ ಊರಿನಿಂದ ಕಾಡಿಗೆ ಮೇಯಲು ಹೋಗುವ ಪ್ರಾಣಿಗಳಿಂದ ವನ್ಯಜೀವಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ.

ಅರಣ್ಯ ಸಂವರ್ಧನೆಯಾಗದಿದ್ದರೆ ಅದು ಆ ಅರಣ್ಯದಲ್ಲಿ ಹರಿಯುವ ನದಿಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳವಾಗುತ್ತದೆ, ಕಾಡಿನೊಳಗೆ ಹೋಗುವ ದನಗಾಹಿಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪರಿಹಾರ ನೀಡಲೂ ನಿಯಮದಲ್ಲಿ ಅವಕಾಶ ಇರುವುದಿಲ್ಲ. ಹೀಗಾಗಿ ಕೂಡಲೇ ಅಭಯಾರಣ್ಯಗಳಲ್ಲಿ ಮೇಕೆ, ಕುರಿ, ದನಕರುಗಳನ್ನು ಮೇಯಿಸುವುದನ್ನು ನಿಷೇಧಿಸಬೇಕು ಎಂದು ವನ್ಯಜೀವಿ ಪ್ರೇಮಿಗಳು, ಪರಿಸರವಾದಿಗಳು ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿದ್ದಾರೆ.

ಕಾಡಿನಲ್ಲಿರುವ ವನ್ಯಜೀವಿಗಳು ಮೇಯಲು ಹೋದ ದನಕರುಗಳನ್ನು ಕೊಂದಾಗ, ಆಕ್ರೋಶಗೊಂಡು ಕೆಲವರು ಮೃತ ಜಾನುವಾರುಗಳಿಗೆ ವಿಷಹಾಕುವ ಕಾರಣ ವನ್ಯಜೀವಿಗಳು ಸಾವಿಗೀಡಾಗುತ್ತವೆ. ಇದಕ್ಕೆ ಇತ್ತೀಚೆಗೆ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಸಾವಿಗೀಡಾಗಿರುವುದೇ ಸಾಕ್ಷಿಯಾಗಿದೆ.

ಈ ಸುದ್ದಿಯನ್ನೂ ಓದಿ | KUSUM-B scheme: ಕುಸುಮ್ ಬಿ ಯೋಜನೆಯಡಿ 40 ಸಾವಿರ ಪಂಪ್‌ ಸೆಟ್‌ ನೀಡಲು ಅನುಮೋದನೆ: ಸಿಎಂ

ಇನ್ನು ಮದ್ರಾಸ್ ಹೈಕೋರ್ಟ್ “ತಮಿಳುನಾಡಿನ ಅರಣ್ಯದೊಳಗೆ ಸಾಕು ಪ್ರಾಣಿಗಳನ್ನು ಮೇಯಿಸುವುದರ ವಿರುದ್ಧ ನೀಡಿದ ತೀರ್ಪಿನ ಬಳಿಕ, ನೆರೆಯ ರಾಜ್ಯದಿಂದಲೂ ನಮ್ಮ ರಾಜ್ಯಕ್ಕೆ ದನಕರುಗಳನ್ನು ತಂದು ಕಾಡಿನಲ್ಲಿ ಮೇಯಿಸಲಾಗುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದ ಅರಣ್ಯಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅರಣ್ಯ ಪ್ರದೇಶದೊಳಗೆ ಸಾಕು ಪ್ರಾಣಿಗಳನ್ನು ಮೇಯಲು ಬಿಡುವುದನ್ನು ನಿರ್ಬಂಧಿಸಲು ಮತ್ತು ನಿಷೇಧಿಸಲು ನಿಯಮಾನುಸಾರ ಕ್ರಮವಹಿಸಲು ಸಚಿವರು ಸೂಚಿಸಿದ್ದಾರೆ.