ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AI city at Bidadi: ಬಿಡದಿಯಲ್ಲಿ ಭಾರತದ ಪ್ರಪ್ರಥಮ ಎಐ ಸಿಟಿ ನಿರ್ಮಾಣ; ಇಲ್ಲಿ ಏನೆಲ್ಲಾ ಇರಲಿದೆ?

Greater Bengaluru Integrated Township: ಎಐ ಸಿಟಿ ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಹಿತಿ ಹಂಚಿಕೊಂಡಿದ್ದು, ಮಹತ್ವಾಕಾಂಕ್ಷೆಯ ಎಐ ಸಿಟಿಯನ್ನು ಸುಮಾರು 9,000 ಎಕರೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇಲ್ಲಿ ಎಐ ಉದ್ಯಮಗಳಿಗೆ 2000 ಎಕರೆ ಮೀಸಲಿಡಲಾಗುತ್ತದೆ.

ಬಿಡದಿಯಲ್ಲಿ ಭಾರತದ ಪ್ರಪ್ರಥಮ ಎಐ ಸಿಟಿ ನಿರ್ಮಾಣ; ಇಲ್ಲಿ ಏನೆಲ್ಲಾ ಇರಲಿದೆ?

-

Prabhakara R Prabhakara R Sep 5, 2025 3:17 PM

ಬೆಂಗಳೂರು: ರಾಜಧಾನಿ ಹೊರವಲಯದಲ್ಲಿ ಭಾರತದ ಪ್ರಪ್ರಥಮ ಎಐ ಸಿಟಿ (AI city) ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 'ಗ್ರೇಟರ್ ಬೆಂಗಳೂರು ಇನ್ನೋವೇಶನ್ ಆ್ಯಂಡ್ ಟೆಕ್ ಸಿಟಿ'ಗೆ (GBIT) ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಚಾಲನೆ ನೀಡಿದ್ದಾರೆ.

ಈ ಬಗ್ಗೆ ಡಿಸಿಎಂ ಡಿಕೆಶಿ ಅವರು ಮಾಹಿತಿ ಹಂಚಿಕೊಂಡಿದ್ದು, ಮಹತ್ವಾಕಾಂಕ್ಷೆಯ ಎಐ ಸಿಟಿಯನ್ನು ಸುಮಾರು 9,000 ಎಕರೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇಲ್ಲಿ ಎಐ ಉದ್ಯಮಗಳಿಗೆ 2000 ಎಕರೆ ಮೀಸಲಿಡಲಾಗುತ್ತದೆ. ಇದರಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಉದ್ಯೋಗಳಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗಲಿದೆ. ಇನ್ನು 950 ಎಕರೆಯಲ್ಲಿ ಉದ್ಯಾನಗಳು ಮತ್ತು ಕೆರೆಗಳ ನಿರ್ಮಾಣವಾಗಲಿದೆ. ಜೀರೋ ಟ್ರಾಫಿಕ್‌, ಅತ್ಯಾಧುನಿಕ ಸಾರಿಗೆ-ಸಂಪರ್ಕ ಸೇರಿ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.



ಇನ್ನು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಕನಕಪುರ ಮೆಡಿಕಲ್‌ ಕಾಲೇಜಿಗೆ ಅನುಮೋದನೆ ದೊರಕಿದೆ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ನಮ್ಮ ಕಾಲೇಜು ನೀವು ತೆಗೆದುಕೊಂಡು ಹೋಗ್ತಿದ್ದೀರಿ ಎಂದು ಧರಣಿ ಮಾಡಿದ್ದರು. ಆಗ ನೀವು ಏನ್‌ ಬೇಕಾದ್ರೂ ಟೀಕೆ ಮಾಡಿ, ರಾಮನಗರ ಹಾಗೂ ಕನಕಪುರದಲ್ಲಿ ಮೆಡಿಕಲ್‌ ಕಾಲೇಜು ಮಾಡ್ತೀನಿ ಎಂದು ಹೇಳಿದ್ದೆ. ಅದರಂತೆ ಈಗ ಕನಕಪುರ ಮೆಡಿಕಲ್‌ ಕಾಲೇಜಿಗೆ ಹೌಸಿಂಗ್‌ ಬೋರ್ಡ್‌ನಿಂದ 25 ಎಕರೆ ಜಮೀನಿಗೆ 60 ಕೋಟಿ ರೂಪಾಯಿ ಮೀಸಲಿಡಲಿಕ್ಕೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗಾಗಲೇ ರಾಮನಗರ ಮೆಡಿಕಲ್‌ ಕಾಲೇಜು ಕೆಲಸ ನಡೆಯುತ್ತಿದ್ದು, ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದ್ದಾರೆ.



2006ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ರಾಮನಗರ, ಸೋಲೂರು, ಸಾತನೂರು, ಬಿಡದಿ ಸೇರಿದಂತೆ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ನಿರ್ಮಾಣ ಮಾಡಲು ಹೊರಟು, ಗ್ಲೋಬಲ್‌ ಟೆಂಡರ್‌ ಸಹ ಕರೆದಿದ್ದರು. ಗ್ರೇಟರ್‌ ಬೆಂಗಳೂರು ಇಂಟಿಗ್ರೇಟೆಡ್‌ ಟೌನ್‌ಶಿಪ್ ಮಾಡಲು ನಾವು ಬಯಸಿದ್ದೇವೆ. ಬಿಡದಿ ಟೌನ್‌ಶಿಪ್ ಯೋಜನೆ ಒಮ್ಮೆ ನೋಟಿಫಿಕೇಷನ್‌ ಆದ್ಮೇಲೆ ಮತ್ತೆ ಡಿನೋಟಿಫೈ ಮಾಡಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ನಮ್ಮ ಉದ್ದೇಶ ಒಂದೇ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಬೇಕು. ಆಸ್ತಿ ಮೌಲ್ಯ ಹೆಚ್ಚಾಗಬೇಕು. ಆಸ್ಪತ್ರೆ, ಕೈಗಾರಿಕೆ, ಎಐ ಎಲ್ಲವೂ ನಮ್ಮ ಜಿಲ್ಲೆಗೆ ಬರಬೇಕು. ಎಐ ಸಿಟಿಯಾಗಿ ನಮ್ಮ ನಗರ ಬೆಳೆಯಬೇಕು. ಮುಂದಿನ ದಿನಗಳಲ್ಲಿ ಮೆಟ್ರೋ ಕೂಡ ಇಲ್ಲಿಗೆ ಬರಬೇಕು ಎನ್ನುವುದು.

ನಮ್ಮ ಜಿಲ್ಲೆಯ ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದ್ರು, ಮಾಗಡಿ ಕೆಂಪೇಗೌಡರು ಬೆಂಗಳೂರು ಕಟ್ಟಿದ್ರು. ಕೆಂಪೇಗೌಡರು ಬೆಂಗಳೂರು ನಗರ ಇಷ್ಟು ಬೆಳೆಯುತ್ತೆ ಎಂದು ಯೋಚಿಸಿರಲಿಲ್ಲ. ಪ್ರತಿದಿನ 75 ಲಕ್ಷ ಜನ ಹೊರಗಿನಿಂದ ಬಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ನಗರದ ಜನರಿಗೆ ಮೊದಲು ಕೆಲಸ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.