DK Shivakumar: ಪಕ್ಷ ನಿಷ್ಠನಾಗಿ ಜೈಲುವಾಸ ಆಯ್ಕೆ ಮಾಡಿಕೊಂಡೆ: ಡಿಸಿಎಂ ಡಿಕೆ ಶಿವಕುಮಾರ್
DK Shivakumar: ಸಮ್ಮಿಶ್ರ ಸರ್ಕಾರದಲ್ಲಿ ಹತ್ತು ಜನ ಶಾಸಕರು ರಾಜಿನಾಮೆ ನೀಡಲು ಹೊರಟಿದ್ದರು. ನಾನು ಐದಾರು ಜನರನ್ನು ವಾಪಸ್ ಕರೆದುಕೊಂಡು ಬಂದೆ. ಆಗ ನನಗೆ ಒಬ್ಬರಿಂದ ಫೋನ್ ಬಂತು. ಕರೆ ಮಾಡಿದವರು ನೀವು ಡಿಸಿಎಂ ಆಗುವಿರಾ ಅಥವಾ ಜೈಲಿಗೆ ಹೋಗುವಿರಾ ಎಂದು ಕೇಳಿದರು. ನಾನು ಪಕ್ಷ ನಿಷ್ಠನಾಗಿ ಜೈಲು ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ ಡಿಕೆಶಿ.

-

ಬೆಂಗಳೂರು: ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವ ವೇಳೆ ಪಕ್ಷ ನಿಷ್ಠನಾಗಿ ಜೈಲುವಾಸ ಆಯ್ಕೆ ಮಾಡಿಕೊಂಡೆ. ನನಗೆ ಎರಡು ಆಯ್ಕೆ ನೀಡಲಾಗಿತ್ತು. ಆಗ ನಾನು ನನಗೆ ಇಷ್ಟೆಲ್ಲಾ ಸ್ಥಾನ ನೀಡಿರುವ ಪಕ್ಷವನ್ನು ಬಿಡುವುದಿಲ್ಲ. ಬೇಕಾದರೆ ಜೈಲಿಗೆ ಹೋಗುತ್ತೇನೆ ಎಂದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರು ಹೇಳಿದರು. ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಬುಧವಾರ ನಡೆದ ಕೆ.ಎಂ.ರಘು ಡೈರೆಕ್ಟರ್ ಅವರು ಬರೆದಿರುವ ʼಡಿ.ಕೆ. ಶಿವಕುಮಾರ್ʼ ಪುಸ್ತಕ ಬಿಡುಗಡೆ (Book release) ಸಮಾರಂಭದಲ್ಲಿ ಡಿಸಿಎಂ ಮಾತನಾಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಹತ್ತು ಜನ ಶಾಸಕರು ರಾಜಿನಾಮೆ ನೀಡಲು ಹೊರಟಿದ್ದರು. ಕನಕಪುರದಲ್ಲಿದ್ದ ನಾನು ಬೆಂಗಳೂರಿಗೆ ಬಂದು ಐದಾರು ಜನರನ್ನು ವಾಪಸ್ ಕ್ವಾಟ್ರಸ್‌ಗೆ ಕರೆದುಕೊಂಡು ಬಂದೆ. ಆಗ ನನಗೆ ಒಬ್ಬ ಆದಾಯ ತೆರಿಗೆ ಆಡಿಟರ್ ಫೋನ್‌ನಿಂದ ಕರೆ ಬಂದಿತ್ತು. ನನ್ನ ಜೊತೆ ಡಿಜಿಯೂ ಇದ್ದರು. ಅವರು ದೂರವಾಣಿ ಕರೆಯಲ್ಲಿ ಮಾತನಾಡಿದರು. ನನ್ನ ಜೊತೆ ಡಿ.ಕೆ. ಸುರೇಶ್ ಅವರೂ ಇದ್ದರು. ಕರೆ ಮಾಡಿದವರು ನೀವು ಡಿಸಿಎಂ ಆಗುವಿರಾ ಅಥವಾ ಜೈಲಿಗೆ ಹೋಗುವಿರಾ ಎಂದು ಕೇಳಿದರು. ಎಲ್ಲಾ ಶಾಸಕರನ್ನು ವಾಪಸ್ಸು ಕರೆದುಕೊಂಡು ಬನ್ನಿ ಎಂದು ಆಯ್ಕೆ ನೀಡಿದರು ಎಂದು ತಿಳಿಸಿದರು.
ಆಗ ನಾನು ನನಗೆ ಇಷ್ಟೆಲ್ಲಾ ಸ್ಥಾನ ನೀಡಿರುವ ಪಕ್ಷವನ್ನು ಬಿಡುವುದಿಲ್ಲ. ಬೇಕಾದರೆ ಜೈಲಿಗೆ ಹೋಗುತ್ತೇನೆ ಎಂದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ರಾಜೀವ್ ಗಾಂಧಿ ಅವರು ನನಗೆ ಟಿಕೆಟ್ ನೀಡಿ, ಮಂತ್ರಿ ಮಾಡಿದ್ದರು. ಬಂಗಾರಪ್ಪ ಅವರು ನನಗೆ ಸಹಕಾರ ನೀಡಿದ್ದರು. ಈ ಪಕ್ಷದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಜೈಲು ಆಯ್ಕೆ ಮಾಡಿಕೊಂಡೆ. ಅಂದು ನಾನು ಬೇರೆ ಆಯ್ಕೆ ಮಾಡಿದ್ದರೆ ಏನೇನು ಆಗುತ್ತಾ ಇತ್ತೋ ಗೊತ್ತಿಲ್ಲ ಎಂದರು.
ಶಾಲಾ ಚುನಾವಣೆಯಲ್ಲಿಯೇ ಒತ್ತಡಗಳಿದ್ದವು
ನಾನು ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ನಾಯಕನಾಗಬೇಕು ಎನ್ನುವ ಅಭಿಲಾಷೆ ಹೊಂದಿದ್ದವನು. ಮೌಂಟ್ ಕಾರ್ಮೆಲ್ ಶಾಲಾ ಚುನಾವಣೆಯಲ್ಲಿ ಗೆದ್ದಿದ್ದ ನನಗೆ ಅಂದೇ ಅನೇಕ ಒತ್ತಡಗಳಿಂದ ಪ್ರತ್ಯೇಕ ಸ್ಥಾನ ನೀಡಲಾಯಿತು. ಚುನಾವಣೆಯ ಕೌಂಟಿಂಗ್ ಪ್ರತಿನಿಧಿಯಾಗಿದ್ದ ನನ್ನ ಸಹಪಾಠಿ ಮಾಧವ ನಾಯಕ್ ನೀನು 400 ಮತಗಳಿಂದ ಗೆಲ್ಲುತ್ತೀಯಾ ಎಂದಿದ್ದನು. ಆದರೆ ಬೆಳಿಗ್ಗೆ ಫಲಿತಾಂಶ ಘೋಷಣೆ ಮಾಡುವಾಗ ಬೇರೆ ಯಾವುದೋ ಹುಡುಗಿಯ ಹೆಸರನ್ನು ಘೋಷಣೆ ಮಾಡಲಾಯಿತು. ನನಗೆ ಪ್ರತ್ಯೇಕವಾಗಿ ಕ್ರೀಡಾ ಕಾರ್ಯದರ್ಶಿ ಹುದ್ದೆ ನೀಡಲಾಯಿತು ಎಂದರು.
ರಾಜಕಾರಣದಲ್ಲಿಯೂ ಸುಮಾರು ಶೇ.80 ರಷ್ಟು ಜನ ದುಡಿಯುತ್ತಲೇ ಇದ್ದಾರೆ. ಶೇ. 20 ರಷ್ಟು ಜನರಿಗೆ ಮಾತ್ರ ಸಣ್ಣಪುಟ್ಟ ಸ್ಥಾನಮಾನ ಸಿಕ್ಕಿದೆ. ನನಗೂ 63 ವರ್ಷವಾಯಿತು. ನಾವುಗಳೇ ಇನ್ನೆಷ್ಟು ದಿನ ರಾಜಕಾರಣ ಮಾಡಲು ಸಾಧ್ಯ. ಹೊಸಬರು ಬರಬೇಕು. ಐದು ಪಾಲಿಕೆಗಳು ಮಾಡಿದ ಕಾರಣಕ್ಕೆ ಬೆಂಗಳೂರಿನಲ್ಲಿ ಹೊಸದಾಗಿ 500ಕ್ಕೂ ಹೆಚ್ಚು ನಾಯಕರು ಬೆಳಕಿಗೆ ಬರಲಿದ್ದಾರೆ ಎಂದರು.
ನಾನು ಜಾತ್ಯತೀತ ತತ್ವದಲ್ಲಿ ಬೆಳೆದವನು
ನಾನು ಜಾತ್ಯತೀತ ತತ್ವದಲ್ಲಿ ಬೆಳೆದವನು. ಸದನದಲ್ಲಿ ಆರ್ ಎಸ್ ಎಸ್ ಬಗ್ಗೆ ತಿಳಿದಿದೆ ಎಂದು ಹೇಳಿದೆ ಅಷ್ಟೇ ಅದನ್ನೇ ದೊಡ್ಡದಾಗಿ ಬಿಂಬಿಸಲಾಯಿತು. ಕಾರ್ಯಕರ್ತರಿಗೆ, ನನ್ನ ನಂಬಿಕೊಂಡವರಿಗೆ ನೋವಾಗಬಾರದು ಎಂದು ನಾನು ಏನೂ ಮಾತನಾಡಲಿಲ್ಲ. ನಾನು ಪುಸ್ತಕ ಓದುವವನಲ್ಲ. ಶಾಲೆ, ಕಾಲೇಜುಗಳಲ್ಲಿ ಓದಲಿಲ್ಲ. ಅಂದಿನಿಂದಲೂ ರಾಜಕಾರಣ ಮಾಡಿಕೊಂಡು ಬೆಳೆದವನು ನಾನು. ಅಂತಿಮ ಪದವಿ ಓದುವಾಗ ಟಿಕೆಟ್ ದೊರೆಯುತು. ಇದನ್ನು ಯಾರೂ ಸಹ ಊಹಿಸಲೂ ಸಾಧ್ಯವಿಲ್ಲ. ಅಂದಿನಿಂದ ಎಂಟು ಬಾರಿ ಶಾಸಕನಾಗಿ ಇಂದು ಉಪಮುಖ್ಯಮಂತ್ರಿಯಾಗಿದ್ದೇನೆ ಎಂದರು.
ರಾಜೀವ್ ಗಾಂಧಿ ಮಾತಿನ ಮೇಲೆ ನಂಬಿಕೆ
ಈ ಪುಸ್ತಕ ರಾಜಕೀಯದಲ್ಲಿ ಬೆಳೆಯಬೇಕು ಎನ್ನುವವರಿಗೆ ಒಂದಷ್ಟು ಮಾರ್ಗದರ್ಶನ ನೀಡಬಹುದು. ಏಕೆಂದರೆ ನಾನು ರಾಜೀವ್ ಗಾಂಧಿ ಅವರ ಮಾತಿನ ಮೇಲೆ ನಂಬಿಕೆ ಇಟ್ಟವನು. ಹಿಂಬಾಲಕರನ್ನ ಸೃಷ್ಟಿಸಬೇಡಿ ನಾಯಕರನ್ನು ಸೃಷ್ಟಿಸಿ ಎನ್ನುವ ಮಾತನ್ನು ಹೆಚ್ಚು ನಂಬುವವನು ಎಂದರು.
ನಾನು ಇಷ್ಟು ಎತ್ತರಕ್ಕೆ ಬೆಳೆಯಲು ನನ್ನ ಕ್ಷೇತ್ರದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ಕಾರಣ. ತಿಹಾರ್ ಜೈಲಿಗೆ ನನ್ನ ಮೇಲೆ ಷಡ್ಯಂತ್ರ ಮಾಡಿ ಕಳುಹಿಸಿದಾಗಲೂ ಈ ಜನ ನನ್ನ ಜೊತೆ ನಿಂತಿದ್ದಾರೆ. ಲಕ್ಷಾಂತರ ಜನರು, ತಾಯಂದಿರು ಹರಕೆ ಕಟ್ಟಿಕೊಂಡು ನನ್ನ ಪರವಾಗಿ ಪ್ರಾರ್ಥನೆ ಮಾಡಿದ್ದರು. ಎಲ್ಲರ ಹರಕೆ, ಹಾರೈಕೆಯಿಂದ ನಾನು ನಿಮ್ಮ ಮುಂದೆ ನಿಂತಿದ್ದೇನೆ ಎಂದರು.
ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸುವೆ
ಟೀಕೆಗಳನ್ನು ಮುಕ್ತವಾಗಿ ನಾನು ಸ್ವೀಕಾರ ಮಾಡುತ್ತೇನೆ. ಸ್ನೇಹಿತರು ಟೀಕೆ ಮಾಡುತ್ತಾರೆ. ವೈರಿಗಳು ನನ್ನ ಬಗ್ಗೆ ಇಲ್ಲ ಸಲ್ಲದ ಸಂಗತಿಗಳನ್ನು ಕಟ್ಟಿ ಮಾತನಾಡುತ್ತಾರೆ. ಆಪಾದನೆಗಳನ್ನು ಮಾಡುತ್ತಾರೆ. ಆದರೂ ನಾನು ಸಂತೋಷದಿಂದ ಕೇಳಿಸಿಕೊಳ್ಳುತ್ತೇನೆ ಎಂದರು.
ದೇವೆಗೌಡರು, ಕುಮಾರಸ್ವಾಮಿ ವಿರುದ್ಧ ರಾಜಕೀಯ ಮಾಡಿದ್ದೇನೆ. ಜಾತ್ಯತೀತತೆ ಉಳಿಯಬೇಕು ಎನ್ನುವ ಕಾರಣಕ್ಕೆ, ಹೈ ಕಮಾಂಡ್ ಹೇಳಿದಕ್ಕೆ ಅವರ ಕೈ ಹಿಡಿದು ಮೇಲಕ್ಕೆತ್ತಿ ಮುಖ್ಯಮಂತ್ರಿ ಮಾಡಿದ್ದೇವೆ. ನನ್ನ ಮನಸ್ಸು ಒಪ್ಪಿತೋ ಇಲ್ಲವೋ ಬೇರೆ ವಿಚಾರ. ಆದರೆ ಪಕ್ಷದ ಮಾತಿಗೆ ನಿಷ್ಠನಾಗಿ ನಡೆದುಕೊಂಡೆ. ನಾನು ಜೈಲಿಗೆ ಹೋದ ತಕ್ಷಣ ನಾವೇನಾದರೂ ದುಡ್ಡು ಹೊಡೆಯಲು ಹೇಳಿದ್ದೆವೇಯೇ ಎನ್ನುವ ಮಾತನ್ನೂ ಇದೇ ಕಿವಿಯಲ್ಲಿ ಕೇಳಿದ್ದೇನೆ ಎಂದರು.
ಪುಸ್ತಕದಲ್ಲಿ 99%ರಷ್ಟು ಸತ್ಯ ಸಂಗತಿಗಳು ಕಾಣುತ್ತಿವೆ
ಪುಸ್ತಕದ ಲೇಖಕ ರಘು ನನಗೆ ಪರಿಚಿತನಲ್ಲ, ಪುಸ್ತಕ ಬರೆಯುತ್ತೇನೆ ಎಂದು ಅನುಮತಿ ಪಡೆದಿಲ್ಲ, ನನ್ನ ಬಳಿ ಹತ್ತು ನಿಮಿಷ ಮಾತನಾಡಿಲ್ಲ. ಆದರೆ ತನ್ನದೇ ಆದ ಮಾದರಿಯಲ್ಲಿ ಸಂಶೋಧನೆ ಮಾಡಿದ್ದಾರೆ. ನನ್ನ ಭಾಷಣಗಳು ಸೇರಿದಂತೆ ಇತರೇ ಮಾತುಗಳನ್ನು ಕೇಳಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಇದರಲ್ಲಿ ಶೇ.99 ರಷ್ಟು ಸತ್ಯ ಸಂಗತಿಗಳು ಕಾಣುತ್ತಿವೆ ಎಂದರು.
ಮೈಸೂರಿನ ರಮ್ಯ ಎಂಬ ಪಿಎಚ್ ಡಿ ವಿದ್ಯಾರ್ಥಿನಿ ನನ್ನ ಬಗ್ಗೆ ಕಳೆದ ಆರೇಳು ವರ್ಷಗಳಿಂದ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದಿದ್ದಾರೆ. ಆಕೆ ಸಹ ನನ್ನ ಬಗ್ಗೆ ಬರೆದಿರುವ ಪುಸ್ತಕ ಬಿಡುಗಡೆಗೆ ಬಂದಿಲ್ಲ. ಈ ಪುಸ್ತಕ ಬಿಡುಗಡೆಗೆ ಹೋಗುತ್ತಿದ್ದೀರಿ ಎಂದು ಬೇಸರಿಸುತ್ತಿದ್ದಳು. ನನ್ನ ಬಗ್ಗೆ ಅತ್ಯುತ್ತಮವಾಗಿ ಸಂಶೋಧನೆ ನಡೆಸಿ ರಘು ಅವರು ಪುಸ್ತಕ ಬರೆದಿದ್ದಾರೆ. ನನ್ನ ಬಗ್ಗೆ ತಿಳಿದುಕೊಳ್ಳಲು, ನನ್ನ ಹೆಜ್ಜೆಗಳನ್ನು ಅರಿಯಲು ಈ ಪುಸ್ತಕ ನೆರವಾಗುತ್ತದೆ. ನನ್ನ ಶ್ರಮ, ಫಲವನ್ನು ಈ ಪುಸ್ತಕದ ಮೂಲಕ ತಿಳಿದುಕೊಳ್ಳಬಹುದು ಎಂದರು.
ಸಮಾರಂಭದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಡಿಸಿಎಂ ಅವರು, ಜಾತಿಗಣತಿಗೆ ಮಾಹಿತಿ ನೀಡುವುದಿಲ್ಲ ಎನ್ನುವ ಸುಧಾಮೂರ್ತಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಯಾರನ್ನೂ ಮಾಹಿತಿ ನೀಡಿ ಎಂದು ಬಲವಂತ ಮಾಡಲು ಆಗುವುದಿಲ್ಲ. ಇದು ಅವರ ಇಚ್ಚೆ" ಎಂದರು.