ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KV Prabhakar: ಜೀವನೋತ್ಸಾಹಕ್ಕೆ ಪ್ರಕೃತಿಗಿಂತ ದೊಡ್ಡ ಗುರು ಬೇಕಿಲ್ಲ: ಕೆ.ವಿ.ಪ್ರಭಾಕರ್

KV Prabhakar: ಕತ್ತಲಾದ ಮೇಲೆ ಮತ್ತೆ ಬೆಳಕು ಆಗಲೇ ಬೇಕು ಎನ್ನುವುದು ಪ್ರಕೃತಿಯ ನಿಯಮ. ಹಾಗೆಯೇ ಮನುಷ್ಯ ಜೀವನದಲ್ಲೂ ಕಷ್ಟದ ಸಂದರ್ಭಗಳು ಬರಬಹುದು, ಆ ಸಂದರ್ಭಗಳೂ ಅಳಿಸಿ ಹೋಗುತ್ತವೆ ಎನ್ನುವುದರ ಸಂಕೇತ ಇದು ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.

ಜೀವನೋತ್ಸಾಹಕ್ಕೆ ಪ್ರಕೃತಿಗಿಂತ ದೊಡ್ಡ ಗುರು ಬೇಕಿಲ್ಲ: ಕೆ.ವಿ.ಪ್ರಭಾಕರ್

Profile Siddalinga Swamy May 23, 2025 6:36 PM

ಬಿಳಿಗಿರಿರಂಗನಬೆಟ್ಟ: ಇಂದು ಮನೆಗಳಲ್ಲಿ ಕೊಠಡಿಗಳು ಹೆಚ್ಚಾಗುತ್ತಾ, ಮನಸ್ಸುಗಳು ದೂರವಾಗುತ್ತಾ ಮೊಬೈಲ್ ಮತ್ತು ರಿಮೋಟ್ ಕೈಗೆ ಜೀವನೋತ್ಸಾಹ ಬಲಿ ಕೊಡುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ.ಪ್ರಭಾಕರ್ (KV Prabhakar) ತಿಳಿಸಿದರು. ಸುತ್ತೂರು ಶ್ರೀಕ್ಷೇತ್ರ, ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠ ಆಯೋಜಿಸಿದ್ದ ʼಜೀವನೋತ್ಸಾಹʼ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೃದ್ದಾಶ್ರಮಗಳು, ಆಸ್ಪತ್ರೆಗಳು ಹೆಚ್ಚಾಗುತ್ತಿರುವುದು ಆರೋಗ್ಯಕರ ಸಮಾಜದ ಲಕ್ಷಣ ಅಲ್ಲ. ದುಡಿಮೆ, ಹಣ ಪರಿಹಾರವಾಗುವ ಬದಲಿಗೆ, ಸಮಸ್ಯೆ ಮಾಡಿಕೊಂಡಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಕೃತಿಯ ಮಡಿಲಿನಲ್ಲಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ʼಜೀವನೋತ್ಸಾಹ ಶಿಬಿರʼ ವನ್ನು ಶ್ರೀಮಠ ಆಯೋಜಿಸಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ನಾನು ಕಾಂಕ್ರೀಟ್ ಕಾಡಿನಿಂದ ಹೊರಟು, ಪ್ರಕೃತಿಕ ಸಾಲಿನಲ್ಲಿ ಈ ಬೆಟ್ಟಕ್ಕೆ ಬರುವಾಗ ನನಗೆ ಅನ್ನಿಸಿದ್ದು, ಪ್ರಕೃತಿಯೆ ಜೀವನೋತ್ಸಾಹದ ಚಿಲುಮೆ ಆಗಿದೆ ಎಂದು ಬಣ್ಣಿಸಿದರು.

ಹುಚ್ಚು ಹಿಡಿಯೋದು ಮನುಷ್ಯನಿಗೆ ಮತ್ತು ಮನುಷ್ಯನ ಸಹವಾಸದಲ್ಲಿರುವ ಪ್ರಾಣಿಗಳಿಗೆ ಮಾತ್ರ. ಮನುಷ್ಯನಿಗೆ ಹುಚ್ಚಾಸ್ಪತ್ರೆಗಳಿವೆ. ಕಾಡು ಪ್ರಾಣಿಗಳಿಗೆ ಅಂತ ಹುಚ್ಚಾಸ್ಪತ್ರೆ ಇರುವುದು ನನಗಂತೂ ಗೊತ್ತಿಲ್ಲ. ಹಾಗೆಯೇ ಜೀವನದ ಸವಾಲುಗಳನ್ನು ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗುವ ಪ್ರವೃತ್ತಿ ಇರುವುದೂ ಕೂಡ ಮನುಷ್ಯನಲ್ಲೇ. ಎಂಥಾದ್ದೇ ಕಠಿಣ ಸಂದರ್ಭವನ್ನೂ ಜೀರ್ಣಿಸಿಕೊಂಡು ಬದುಕುವುದನ್ನು ಪ್ರಕೃತಿ ನಮಗೆ ಕಲಿಸುತ್ತದೆ. ಎಂಥಾದ್ದೇ ಭೀಕರ ಬರಗಾಲ, ಪ್ರವಾಹ, ಮಳೆ, ಗಾಳಿ, ಬೆಂಕಿ, ಕಾಡ್ಗಿಚ್ಚು ಬಂದರೂ ಪ್ರಕೃತಿ ಮತ್ತೆ ತಲೆ ಎತ್ತಿ ನಿಲ್ಲುತ್ತದೆ ಎಂದು ಹೇಳಿದ ಅವರು, ಕತ್ತಲಾದ ಮೇಲೆ ಮತ್ತೆ ಬೆಳಕು ಆಗಲೇ ಬೇಕು ಎನ್ನುವುದು ಪ್ರಕೃತಿಯ ನಿಯಮ. ಹಾಗೆಯೇ ಮನುಷ್ಯ ಜೀವನದಲ್ಲೂ ಕಷ್ಟದ ಸಂದರ್ಭಗಳು ಬರಬಹುದು, ಆ ಸಂದರ್ಭಗಳೂ ಅಳಿಸಿ ಹೋಗುತ್ತವೆ ಎನ್ನುವುದರ ಸಂಕೇತ ಇದು ಎಂದರು.

ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು, ನಮ್ಮ ಸಂತೋಷ, ದುಃಖ ಮತ್ತು ಭಯ, ಅಭದ್ರತೆಗಳ ನಡುವೆಯೂ ನಾವು ಸಮಾಧಾನದಿಂದ ಜೀವನ ರೂಪಿಸಿಕೊಳ್ಳಬಹುದು ಎನ್ನುವ ಭರವಸೆ ನಮಗೆ ಪ್ರಕೃತಿಯಿಂದ ಸಿಗುತ್ತದೆ. ಪಕ್ಷಿಗಳು ಎಲ್ಲೋ ಹಣ್ಣು ತಿಂದು ಇನ್ನೆಲ್ಲೋ ಬೀಜಗಳನ್ನು ವಿಸರ್ಜಿಸುತ್ತವೆ. ಆ ಬೀಜಗಳು ಬಿದ್ದ ಜಾಗದಲ್ಲೇ ಮೊಳಕೆಯೊಡೆಯುತ್ತವೆ ಎಂದು ತಿಳಿಸಿದರು.

ಪರಿಸರದಲ್ಲಿ ಸಮತೋಲನ ತಪ್ಪಿದ್ದರಿಂದ ನೂರಾರು ರೀತಿಯ ವೈರಸ್ ಗಳು, ಬ್ಯಾಕ್ಟೀರಿಯಾಗಳು ಸೃಷ್ಟಿ ಆಗುತ್ತಿವೆ. ಕೋವಿಡ್, ಆಂಥ್ರಾಕ್ಸ್ ರೋಗಗಳು ಬರಲು ಪ್ರಾಕೃತಿಕ ಸಮತೋಲನ ತಪ್ಪಿದ್ದೇ ಕಾರಣ ಎಂದು ಜೀವ ವಿಜ್ಞಾನಿಗಳು ಎಚ್ಚರಿಸಿದ್ದನ್ನು ನಾವು ನೆನಪಿಸಿಕೊಳ್ಳಬೇಕು ಎಂದರು.

ಈ ಸುದ್ದಿಯನ್ನೂ ಓದಿ | IOB Recruitment 2025: ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ನಲ್ಲಿದೆ 400 ಹುದ್ದೆ; ಹೀಗೆ ಅಪ್ಲೈ ಮಾಡಿ

ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಕೆಪಿಎಸ್ಸಿ ಸದಸ್ಯ ಪ್ರಭುದೇವ, ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.