ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namma Metro: ಬೆಂಗಳೂರು ಅಭಿವೃದ್ಧಿಗೆ 1.50 ಲಕ್ಷ ಕೋಟಿ ಅನುದಾನ ನೀಡಿ; ಪ್ರಧಾನಿ ಮೋದಿಗೆ ಮನವಿ ಪತ್ರ ಸಲ್ಲಿಸಿದ ಡಿಕೆಶಿ

DK Shivakumar: ಬೆಂಗಳೂರು ನಗರದಲ್ಲಿ ಟನಲ್ ರಸ್ತೆ, ಆರ್ಟಿಲರಿ ರಸ್ತೆಗಳ ಬಳಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ಪೆಪಿಫೆರಲ್ ವರ್ತುಲ ರಸ್ತೆ, ಘನತ್ಯಾಜ ವಿಲೇವಾರಿ ಸೇರಿದಂತೆ ಇತರೇ ಮೂಲಸೌಕರ್ಯಗಳ ಅಭಿವೃದ್ಧಿಗೆ 1.50 ಲಕ್ಷ‌ ಕೋಟಿ ರೂ. ನೀಡಲು ಪ್ರಧಾನಿ ಮೋದಿ ಅವರಿಗೆ ಡಿಸಿಎಂ ಡಿಕೆಶಿ ಮನವಿ ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿಗೆ 1.50 ಲಕ್ಷ ಕೋಟಿ ನೀಡಿ; ಪ್ರಧಾನಿಗೆ ಡಿಕೆಶಿ ಮನವಿ

Prabhakara R Prabhakara R Aug 10, 2025 8:14 PM

ಬೆಂಗಳೂರು, ಆ.10: "ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳಾದ ಟನಲ್ ರಸ್ತೆ, ಆರ್ಟಿಲರಿ ರಸ್ತೆಗಳ ಬಳಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ಪೆಪಿಫೆರಲ್ ವರ್ತುಲ ರಸ್ತೆ, ಘನತ್ಯಾಜ ವಿಲೇವಾರಿ ಸೇರಿದಂತೆ ಇತರೇ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಂದಾಜು 1.50 ಲಕ್ಷ‌ ಕೋಟಿ ರೂ. ಹಣ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರದಿಂದ ಸಮರ್ಪಕ ಅನುದಾನ ಒದಗಿಸಿಕೊಡಬೇಕು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಮೆಟ್ರೋ ರೈಲು ಹಳದಿ ಮಾರ್ಗ (Namma Metro) ಉದ್ಘಾಟನೆ ಸಮಾರಂಭದಲ್ಲಿ ವೇದಿಕೆ ಮೇಲೆ ಪ್ರಧಾನಿ ಅವರಿಗೆ ಡಿಸಿಎಂ ಭಾನುವಾರ ಈ ಮನವಿ ಸಲ್ಲಿಸಿದರು."ಕರ್ನಾಟಕವು ವರ್ಷಕ್ಕೆ ಸುಮಾರು 4.50 ಲಕ್ಷ ಕೋಟಿ ರೂ. ತೆರಿಗೆ ಪಾವತಿಸುತ್ತಿದೆ. ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈಗಾಗಲೇ ಕರ್ನಾಟಕ ಸರ್ಕಾರವು ಯಶಸ್ವಿಯಾಗಿ ಮೆಟ್ರೋ ಮಾರ್ಗ ಹಾಗೂ ಡಬಲ್ ಡೆಕ್ಕರ್ ಅನ್ನು ಅನುಷ್ಠಾನಗೊಳಿಸಿದೆ. ಐದನೇ ಹಂತದ‌ ಕಾವೇರಿ ಕುಡಿಯುವ ನೀರು ಯೋಜನೆ ಸಹ ಯಶಸ್ವಿಯಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕುಡಿಯುವ ನೀರಿನ ಯೋಜನೆಗಳು, ರಾಜಕಾಲುವೆಗಳ ಪಕ್ಕದಲ್ಲಿ ನೂತನ ರಸ್ತೆಗಳ ನಿರ್ಮಾಣ, ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಈ‌ ಎಲ್ಲಾ ಯೋಜನೆಗಳಿಂದ ಬೆಂಗಳೂರು ಇನ್ನಷ್ಟು ಪ್ರಮುಖ ನಗರವಾಗಿ ಅಭಿವೃದ್ಧಿಯಾಗಲಿದೆ" ಎಂದು ಮನವಿಯಲ್ಲಿ ವಿವಾರಿಸಿದ್ದರೆ.

ಮನವಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ಯೋಜನೆಗಳು ಹಾಗೂ ಅಂದಾಜು ಮೊತ್ತ, ಟನಲ್ ರಸ್ತೆ, ಎಲೆವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ 41,780 ಕೋಟಿ ರೂ., ನಗರದ ಪ್ರಮುಖ ರಸ್ತೆಗಳ ಬಳಿ ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ 15,000 ಕೋಟಿ ರೂ., ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ 27,000 ಕೋಟಿ ರೂ., ಘನತ್ಯಾಜ್ಯ ವಿಲೇವಾರಿಗೆ 3,200 ಕೋಟಿ ರೂ., ಡಬಲ್ ಡೆಕ್ಕರ್‌ಗಳ ನಿರ್ಮಾಣಕ್ಕೆ 8,916 ಕೋಟಿ ರೂ. ವೆಚ್ಚವಾಗಲಿದೆ. ಮೆಟ್ರೋ 1 ನೇ ಹಂತ ಸಂಪೂರ್ಣಗೊಂಡು, ಕಾರ್ಯ ನಿರ್ವಹಿಸುತ್ತಿದೆ. ಮೆಟ್ರೋ ಹಂತ 2, 2ಎ, 3, 3ಎ ಮೆಟ್ರೋ ರೈಲು ಯೋಜನೆಗಳ ಅನುಷ್ಠಾನದಿಂದ ರೈಲು ಮಾರ್ಗ ಒಟ್ಟು ಉದ್ದ 128 ಕಿ.ಮೀಗೆ ವಿಸ್ತಾರವಾಗಲಿದೆ. ಇದರಿಂದ ಸಂಚಾರ ದಟ್ಟಣೆ ತಪ್ಪಿಸಬಹುದು. ಈ ಯೋಜನೆಗಳಿಗೂ ಸೂಕ್ತ ಅನುದಾನ ನೀಡಿ ಎಂದು ಕೋರಲಾಗಿದೆ.

ರಾಜಕಾಲುವೆಗಳ ಪಕ್ಕ ಹೊಸ ರಸ್ತೆಗಳ ನಿರ್ಮಾಣಕ್ಕೆ 3000 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ನಗರಕ್ಕೆ ಹೆಚ್ಚುವರಿ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ 6,939 ಕೋಟಿ ರೂ. ಅನುದಾನ ಬೇಕಾಗಬಹುದು ಎಂದು ಮನವಿಯಲ್ಲಿ ಡಿಸಿಎಂ ಅವರು ತಿಳಿಸಿದ್ದಾರೆ.

ನಮೋ ಭಾರತ್ ರೈಲು ನೀಡಿ

ಇದಲ್ಲದೆ ರ‍್ಯಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ ಅನ್ನು ಬೆಂಗಳೂರಿನಲ್ಲಿ ಜಾರಿಗೆ ತರಬೇಕು ಎಂದೂ ಮನವಿ ಮಾಡಿದ್ದಾರೆ‌. ಬೆಂಗಳೂರು-ಬಿಡದಿ- ಮೈಸೂರು, ಬೆಂಗಳೂರು- ಹಾರೋಹಳ್ಳಿ- ಕನಕಪುರ, ಬೆಂಗಳೂರು- ನೆಲಮಂಗಲ- ತುಮಕೂರು, ಬೆಂಗಳೂರು- ಏರ್ ಪೋರ್ಟ್- ಚಿಕ್ಕಬಳ್ಳಾಪುರ, ಬೆಂಗಳೂರು- ಹೊಸಕೋಟೆ- ಕೋಲಾರಕ್ಕೆ ಆರ್ ಆರ್ ಟಿಎಸ್ ಯೋಜನೆಯಡಿ "ನಮೋ ಭಾರತ್ ರೈಲು ಯೋಜನೆ" ಅನುಷ್ಠಾನಗೊಳಿಸಬೇಕಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರು ನಗರದ ಒಳಗೆ 77.6 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ನಗರ ಬೆಳೆದ ಪರಿಣಾಮವಾಗಿ ಈ ಹೆದ್ದಾರಿಗಳ ಮೂಲಕ ಸುಲಭ ಸಂಚಾರ ದುಸ್ತರವಾಗಿದೆ. ಆರ್ಥಿಕ ಬೆಳವಣಿಗೆಗೂ ಸಹ ಹೊಡೆತ ಬೀಳುತ್ತಿದೆ. ಈ ಕಾರಣಕ್ಕೆ ಹೊಸೂರು ರಸ್ತೆಯಿಂದ ಬಳ್ಳಾರಿ ರಸ್ತೆವರೆಗೆ, ಎರಡನೆಯದು ಕೆ.ಆರ್.ಪುರಂನಿಂದ ಮೈಸೂರು ರಸ್ತೆವರೆಗೆ ಹಾಗೂ ಎಲೆವೇಟೆಡ್ ಕಾರಿಡಾರ್‌ ಅನ್ನು ಕನಕಪುರ ರಸ್ತೆಯ ಬಳಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪಿಪಿಪಿ ಮಾದರಿಯಡಿ ಬೆಂಗಳೂರು ಬಿಜಿನೆಸ್ ಕಾರಿಡಾರ್ ನಿರ್ಮಾಣ ಮಾಡಿದರೆ ನಗರದ ಒಳಗೆ ಸಂಚಾರ ದಟ್ಟಣೆ ತಪ್ಪಿಸಬಹುದು ಎಂದು ಹೇಳಿದ್ದಾರೆ.

ನಗರದಲ್ಲಿ ದಿನವೊಂದಕ್ಕೆ 6,500 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು ಇದರ ವೈಜ್ಞಾನಿಕ ವಿಲೇವಾರಿಗೆ ಸಿಎನ್‌ಜಿ ತಯಾರಿಕೆ ಘಟಕ, ಗೊಬ್ಬರ ಘಟಕ,‌ ವೇಸ್ಟ್ ಎನರ್ಜಿ ಘಟಕಗಳ ಸ್ಥಾಪನೆಗೆ ಬೆಂಬಲ ಕೋರಿ ಪತ್ರದಲ್ಲಿ ವಿವರಿಸಲಾಗಿದೆ. ಜೊತೆಗೆ ಮೆಟ್ರೋ ಮಾರ್ಗದ ಜೊತೆಗೆ ಡಬಲ್ ಡೆಕ್ಕರ್ ಯೋಜನೆ ಕೈಗೆತ್ತಿಕೊಂಡರೆ ಪರ್ಯಾಯ ರಸ್ತೆ ಮಾರ್ಗಗಳ ಸಮಸ್ಯೆ, ಭೂಸ್ವಾಧೀನ ಸಮಸ್ಯೆ, ಹೆಚ್ಚುವರಿ ಪರಿಹಾರ ಸಮಸ್ಯೆ ನಿವಾರಣೆಯಾಗಲಿದೆ. ಜೆ.ಪಿ.ನಗರದಿಂದ ಹೆಬ್ಬಾಳದ ವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆಯ ಮಾರ್ಗಗಳಲ್ಲಿ ಸುಮಾರು 40.65 ಕಿಮೀ ಉದ್ದ ಡಬಲ್ ಡೆಕ್ಕರ್ ನಿರ್ಮಾಣ ಮಾಡಬಹುದು ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Namma Metro Yellow Line: ಮೆಟ್ರೋ ಡಬಲ್ ಡೆಕ್ಕರ್ ಫ್ಲೈಓವರ್ ನೋಡಿ ಪ್ರಧಾನಿ ಸಂತಸಗೊಂಡರು: ಡಿಕೆಶಿ

ರಾಜಕಾಲುವೆಗಳ ಒತ್ತುವರಿ ತಡೆಯಲು ಅವುಗಳ ಪಲ್ಕದಲ್ಲಿಯೇ ರಸ್ತೆ ನಿರ್ಮಾಣ‌ ಮಾಡುವ ಆಲೋಚನೆ ಬಗ್ಗೆ ಹಾಗೂ ಹೆಚ್ಚುತ್ತಿರುವ ನಗರದ ಜನಸಂಖ್ಯೆಗೆ ಅನುಗುಣವಾಗಿ ಆರನೇ ಹಂತದ ಕುಡಿಯುವ ನೀರಿನ ಯೋಜನೆ ಮೂಲಕ ದಿನಕ್ಕೆ 500 ಎಂಎಲ್ ಡಿ ನೀರನ್ನು ಪೂರೈಕೆ ಮಾಡುವ ಬಗ್ಗೆ ಮನವಿ ಪತ್ರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉಲ್ಲೇಖಿಸಿದ್ದಾರೆ.