DK Shivakumar: ಹೆಗಡೆಯವರನ್ನು ಏಣಿಯಂತೆ ಬಳಸಿ ಎಸೆದರು: ಡಿ.ಕೆ. ಶಿವಕುಮಾರ್
DK Shivakumar: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರು ಶಾಶ್ವತವಾಗಿ ಉಳಿದುಕೊಳ್ಳಬೇಕು. ಹೀಗಾಗಿ ನಿಮ್ಮೆಲ್ಲರ ಜತೆ ಒಂದು ದಿನ ಚರ್ಚೆ ಮಾಡಿ, ಬೆಂಗಳೂರಿನ ಪ್ರಮುಖ ಸ್ಥಳಕ್ಕೆ ಅವರ ಹೆಸರು ಇಡಲಾಗುವುದು. ಇದಕ್ಕೆ ನಾನು ಬದ್ಧ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

-

ಬೆಂಗಳೂರು: ಮಾಜಿ ಸಿಎಂ ʼರಾಮಕೃಷ್ಣ ಹೆಗಡೆ ಅವರು ತಮ್ಮ ಬದುಕಿನಲ್ಲಿ ಬಿಟ್ಟುಹೋದ ಆದರ್ಶ, ಸಾಕ್ಷಿಗುಡ್ಡೆಗಳು ಇನ್ನೂ ಜೀವಂತವಾಗಿವೆ. ಅವರೊಬ್ಬ ದೂರದೃಷ್ಟಿ ನಾಯಕ. ತಮ್ಮ ಜಾತಿಯವರು, ಮನೆಯವರನ್ನು ಬೆಳೆಸಬೇಕು ಎಂಬ ಹಂಬಲ ಇರಲಿಲ್ಲ. ನೂರಾರು ನಾಯಕರನ್ನು ಅವರು ಬೆಳೆಸಿದ್ದಾರೆ. ಕೆಲವರು ಅವರ ಪ್ರಾಮಾಣಿಕತೆಗೆ ನಿಯತ್ತು ತೋರಿದರು. ಮತ್ತೆ ಕೆಲವರು ಹತ್ತಿದ ಏಣಿಯಂತೆ ಬಳಸಿಕೊಂಡು ಬಿಸಾಡಿದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶುಕ್ರವಾರ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ 99ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟನೆ ಮಾಡಿದ ದಿನ ನನಗೆ ಚೆನ್ನಾಗಿ ನೆನಪಿದೆ. ನಾನು ವಿಧಾನಸಭೆಗೆ ಹೋಗುತ್ತಿರುವಾಗ ದೇಶಪಾಂಡೆ ಅವರು ಗಾಬರಿಯಿಂದ ಕೆಳಗೆ ಇಳಿದು ಬರುತ್ತಿದ್ದರು. ನಾನು ಯಾಕೆ ಗಾಬರಿ ಎಂದು ಕೇಳಿದೆ. ಆಗ ಅವರು ಹೇಳಿದರು. ಆ ಸಂದರ್ಭದಲ್ಲಿ ಕೇವಲ ದೇಶಪಾಂಡೆ ಅವರು ಮಾತ್ರ ಧ್ವನಿ ಎತ್ತಿದ್ದರು, ಉಳಿದವರು ಅಧಿಕಾರದ ಆಸೆಗೆ ಮೌನಕ್ಕೆ ಶರಣಾಗಿದ್ದರುʼ ಎಂದು ಹೇಳಿದರು.
ಪ್ರಮುಖ ಸ್ಥಳಕ್ಕೆ ರಾಮಕೃಷ್ಣ ಹೆಗಡೆ ಅವರ ಹೆಸರು
ಬೆಂಗಳೂರಿನ ಪ್ರಮುಖ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಇಡಲಾಗುವುದು. ರಾಮಕೃಷ್ಣ ಹೆಗಡೆ ಅವರ ಹೆಸರು ಶಾಶ್ವತವಾಗಿ ಉಳಿದುಕೊಳ್ಳಬೇಕು. ಹೀಗಾಗಿ ನಿಮ್ಮೆಲ್ಲರ ಜತೆ ಒಂದು ದಿನ ಚರ್ಚೆ ಮಾಡಿ, ಬೆಂಗಳೂರಿನ ಪ್ರಮುಖ ಸ್ಥಳಕ್ಕೆ ಅವರ ಹೆಸರು ಇಡಲಾಗುವುದು. ಇದಕ್ಕೆ ನಾನು ಬದ್ಧ ಎಂದು ತಿಳಿಸಿದರು.
ಹೆಗಡೆ ಅವರದ್ದು ಪರಿಶುದ್ಧ ಆಡಳಿತ ಹಾಗೂ ರಾಜಕಾರಣ
ತಮಗೆ ಬಹುಮತ ಇದ್ದರೂ ಇಡೀ ದೇಶದಲ್ಲಿ ಮಧ್ಯದಲ್ಲೇ ಜನಾದೇಶ ಬಯಸಿ ಚುನಾವಣೆಗೆ ಹೋಗಿದ್ದರೆ ಅದು ರಾಮಕೃಷ್ಣ ಹೆಗಡೆ ಅವರು ಮಾತ್ರ. ಅವರಲ್ಲಿ ಕ್ಷಮಿಸುವ ಗುಣ, ಹೃದಯ ಶ್ರೀಮಂತಿಕೆ ಇತ್ತು. ಅವರಲ್ಲಿ ನಾವು ಎಂದಿಗೂ ದ್ವೇಷ ರಾಜಕಾರಣ ನೋಡಲಿಲ್ಲ. ಇದು ನಮ್ಮೆಲ್ಲರಿಗೂ ದೊಡ್ಡ ಆದರ್ಶ. ಅವರದ್ದು ಪರಿಶುದ್ಧ ಆಡಳಿತ ಹಾಗೂ ರಾಜಕಾರಣ ಎಂದರು.
ರಾಮಕೃಷ್ಣ ಹೆಗಡೆ ಅವರು ಕನಕಪುರದಿಂದ ಸ್ಪರ್ಧೆ ಮಾಡಿದ್ದರು. ಅವರನ್ನು ಸೋಲಿಸಲು ನಾನು ವಿದ್ಯಾರ್ಥಿ ನಾಯಕನಾಗಿ ಹೋರಾಟ ಮಾಡಿದೆ. ನನ್ನ ಹೋರಾಟ ಗಮನಿಸಿ 1985ರಲ್ಲಿ ಪಕ್ಷ ನನಗೆ ಟಿಕೆಟ್ ನೀಡಿತು. ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಹಿನ್ನಡೆಯಾದಾಗ, ನನ್ನ ನಾಯಕತ್ವಕ್ಕೆ ಬೆಂಬಲ ಸಿಗಲಿಲ್ಲ ಎಂದು ಮತ್ತೆ ಚುನಾವಣೆಗೆ ಹೋದರು ಎಂದು ಅವರು ಮೆಲುಕು ಹಾಕಿದರು.
ಆ ಸಂದರ್ಭದಲ್ಲಿ ನನಗೆ ದೇವೇಗೌಡರ ವಿರುದ್ಧ ಸಾತನೂರಿನಲ್ಲಿ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿತು. ಆಗ ನಾನು ಸೇರಿದಂತೆ ಬಹುತೇಕರು ಹೆಗಡೆ ಅವರ ಹೆಸರಿನ ಅಲೆಯಲ್ಲಿ ಕೊಚ್ಚಿ ಹೋದೆವು. ನಂತರ ನಾನು ಜಿಲ್ಲಾ ಪರಿಷತ್ ಸದಸ್ಯನಾಗಿ ರಾಜಕೀಯ ಮುಂದುವರಿಸಿದೆ. ರಾಜೀವ್ ಗಾಂಧಿ ಅವರು ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಮಾಡಿದಾಗ ಕರ್ನಾಟಕಕ್ಕೆ ಬಂದು ರಾಮಕೃಷ್ಣ ಹೆಗಡೆ ಅವರು ಹಾಕಿದ್ದ ಅಡಿಪಾಯ ಅಧ್ಯಯನ ಮಾಡಿದ್ದರು. ಅದರ ಪರಿಣಾಮ ಇಂದು ನಾವು ಪಂಚಾಯ್ತಿಯಿಂದ ಪಾರ್ಲಿಮೆಂಟ್‌ವರೆಗೂ ಸಾವಿರಾರು ನಾಯಕರನ್ನು ತಯಾರು ಮಾಡುತ್ತಿದ್ದೇವೆ ಎಂದು ಸ್ಮರಿಸಿದರು.
ನಾನು ವಿಧಾನಸಭೆಯಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ನೋಡಿದ್ದೇನೆ. ಟೆಲಿಫೋನ್ ಟ್ಯಾಪಿಂಗ್ ಬಗ್ಗೆ ನಡೆದ ಚರ್ಚೆಯಲ್ಲಿ ಹೆಗಡೆ ಅವರು ಮಾಡಿದ ಭಾಷಣ ನಾನು ಕಂಡ ಅತ್ಯುತ್ತಮ ಭಾಷಣಗಳಲ್ಲಿ ಒಂದು. ವೀರೇಂದ್ರ ಪಾಟೀಲರ ಜತೆ ಉತ್ತಮ ಸ್ನೇಹ ಹೊಂದಿದ್ದರೂ ಅವರು ತಮ್ಮ ಪಕ್ಷದ ಸಿದ್ಧಾಂತದ ಗೆರೆ ದಾಟಲಿಲ್ಲ ಎಂದು ಶ್ಲಾಘಿಸಿದರು.
ಹೆಗಡೆ ಅವರ ಬೆಂಬಲ ಕೋರಿದ್ದೆ
ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಸಂಸತ್ ಚುನಾವಣೆಗೆ ನಿಲ್ಲಬೇಕಾದ ಪರಿಸ್ಥಿತಿ ಬಂದಿತು. ಆಗ ದೇವೇಗೌಡರು ಹಾಗೂ ರಾಮಕೃಷ್ಣ ಹೆಗಡೆ ಅವರ ನಡುವೆ ಭಿನ್ನಾಭಿಪ್ರಾಯ ಇತ್ತು. ಆಗ ನಾನು ಹೆಗಡೆ ಅವರ ಬೆಂಬಲ ಕೊರಲು ಹೋಗಿ ಭೇಟಿ ಮಾಡಿದ್ದೆ. ನಾನು ಪಕ್ಷದ ವ್ಯವಸ್ಥೆಯಲ್ಲಿದ್ದು ನಿನಗೆ ಬೆಂಬಲ ನೀಡುವ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ನಿನಗೆ ಒಳ್ಳೆಯದಾಗಲಿ ಎಂದು ನೇರವಾಗಿ ಹೇಳಿದರು. ಅವರ ಪಕ್ಷದ ಅಭ್ಯರ್ಥಿಗೆ ಹೆಗಡೆ ಅವರು ಸಹಾಯ ಮಾಡದೇ ಇದ್ದಿದ್ದರೆ ಆ ಚುನಾವಣೆಯಲ್ಲಿ ನಾನು ಗೆದ್ದು ಸಂಸತ್ತಿಗೆ ಹೋಗುತ್ತಿದ್ದೆ ಎಂದು ತಿಳಿಸಿದರು.
ಬೆಂಗಳೂರಿನ ಅಭಿವೃದ್ಧಿಗೆ ಅಡಿಪಾಯ ಹಾಕಿದರು
ಬೆಂಗಳೂರು ಜಾಗತಿಕ ನಗರವಾಗಿದೆ. 25 ಲಕ್ಷ ಐಟಿ ಉದ್ಯೋಗಿಗಳು ಇಲ್ಲಿದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಇಂದು ಈ ಮಟ್ಟಕ್ಕೆ ಬೆಳೆಯಲು ರಾಮಕೃಷ್ಣ ಅವರ ಕಾಲದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಕೊಟ್ಟ ಅನುಮತಿಯೂ ಒಂದು ಕಾರಣ. ಅದರಿಂದ ಬೆಂಗಳೂರಿನಲ್ಲಿ ಕೈಗಾರಿಕಾ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಇಲ್ಲಿನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಜ್ಜನ್ ಜಿಂದಾಲ್ ಸೇರಿದಂತೆ ಅನೇಕ ಉದ್ಯಮಿಗಳು ಹೊರಗಿಂದ ಬಂದು ಇಲ್ಲಿ ಓದಿದರು ಎಂದರು.
ಬೆಂಗಳೂರಿಗೆ ಕಾವೇರಿ ನೀರು ಬರಲು ಕಾರಣವಾಗಿದ್ದೇ ರಾಮಕೃಷ್ಣ ಹೆಗಡೆ ಅವರು ಹಣಕಾಸು ಸಚಿವರಾಗಿದ್ದ ಕಾಲದಲ್ಲಿ. ನಾವು ಈಗ ಆರನೇ ಹಂತದ ಯೋಜನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು
ಬಹಳ ಉತ್ಸಾಹದಿಂದ ಬೆಂಗಳೂರು ನಾಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಬೆಂಗಳೂರಿನ ಮೂಲ ಸೌಕರ್ಯ ವಿಚಾರವಾಗಿ ಅನೇಕರು ಟೀಕೆ ಮಾಡುತ್ತಿದ್ದಾರೆ. ಬೆಂಗಳೂರು ಯೋಜಿತ ನಗರವಲ್ಲ ಆದರೂ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರವೂ ಕೆಲಸ ಮಾಡಬೇಕು. ಅದಕ್ಕೆ ಜನರು, ವಿರೋಧ ಪಕ್ಷಗಳು ಸಹಕಾರ ನೀಡಬೇಕು. ಕೇವಲ ಟೀಕೆ ಮಾಡಿದರೆ ಪ್ರಯೋಜನವಿಲ್ಲ. ತಪ್ಪು ಹುಡುಕುವುದು ಬಹಳ ಸುಲಭ ಎಂದು ತಿಳಿಸಿದರು.
ʼನನ್ನ ಆರನೇ ವಯಸ್ಸಿನಿಂದ ನಾನು ಬೆಂಗಳೂರಿನಲ್ಲೇ ಇದ್ದು, ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಇಲ್ಲಿನ ಕಸ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯಾವುದೇ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ನಾನು ಅನೇಕ ಪ್ರಯತ್ನ ಮಾಡುತ್ತಿದ್ದು, ಇನ್ನು ಸರಿಯಾಗಿ ಯಶಸ್ಸು ಸಾಧಿಸಲು ಆಗುತ್ತಿಲ್ಲ. ಕಸದ ವಿಚಾರದಲ್ಲಿ ಅಷ್ಟು ದೊಡ್ಡ ಮಾಫಿಯಾ ಇದೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, 1.14 ಕೋಟಿ ವಾಹನಗಳಿವೆ. ಹಳೆ ಕಾಲದ ರಸ್ತೆಗಳನ್ನು ಅಗಲೀಕರಣ ಮಾಡಲು ಸಾಧ್ಯವಿಲ್ಲ. ಈಗಿನ ಕಾನೂನು ಪ್ರಕಾರ ಭೂಸ್ವಾಧೀನ ಮಾಡಿಕೊಂಡರೆ ಆ ಆಸ್ತಿ ಮೌಲ್ಯಕ್ಕಿಂತ ದುಪ್ಪಟ್ಟು ಪರಿಹಾರ ನೀಡಬೇಕು. ಹೆಗಡೆ ಅವರ ಕಾಲದಲ್ಲಿ ರಾಜ್ಯದ ಬಜೆಟ್ 16 ಸಾವಿರ ಕೋಟಿ ಇತ್ತು. ಕೃಷ್ಣ ಅವರ ಕಾಲದಲ್ಲಿ ಅದು 27ಸಾವಿರ ಮುಟ್ಟಿತು. ಈಗ 4.07 ಲಕ್ಷ ಕೋಟಿ ಇದೆ ಎಂದರು.
ʼಇಂಧನ ಸಚಿವನಾಗಿದ್ದಾಗ ನಮ್ಮವರೇ ಟೀಕೆ ಮಾಡಿದರೂ ಸೋಲಾರ್ ಪಾರ್ಕ್ ಸ್ಥಾಪನೆ ಮಾಡಿದೆ. ನಾನು ಅಧಿಕಾರದಿಂದ ಕೆಳಗೆ ಇಳಿಯುವಾಗ ರಾಜ್ಯದಲ್ಲಿ 24 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಯಲಹಂಕದಲ್ಲಿ 345 ಮೆ.ವ್ಯಾ. ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಿದ್ದೇವೆ. ಸಂಚಾರ ದಟ್ಟಣೆ ನಿವಾರಣೆಗೆ ಪೆರಿಫರಲ್ ರಿಂಗ್ ರಸ್ತೆ ಮಾಡಲು ತೀರ್ಮಾನಿಸಿದ್ದೇವೆ. ಅದರ ಜತೆಗೆ ಎರಡು ಟನಲ್ ರಸ್ತೆ ಮಾಡಲು ಮುಂದಾಗಿದ್ದೇವೆ. 112ಕಿ.ಮೀ ಎಲಿವೆಟೆಡ್ ಕಾರಿಡಾರ್, 47 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೆಲ್ಸೇತುವೆ, ಮೆಟ್ರೋ ವಿಸ್ತರಣೆ ಸೇರಿದಂತೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 1 ಲಕ್ಷ ಕೋಟಿ ಯೋಜನೆ ರೂಪಿಸಲಾಗಿದೆʼ ಎಂದರು.
ʼಬೆಂಗಳೂರಿನಲ್ಲಿ ಸಂಪನ್ಮೂಲ ಸೋರಿಕೆ ತಡೆಯಲು ಮುಂದಾಗಿದ್ದೇವೆ. ಇ ಖಾತಾ ಮೂಲಕ ಎಲ್ಲಾ ಆಸ್ತಿಗಳ ದಾಖಲೆ ಡಿಜಿಟಲ್ ಮಾಡಲಾಗುತ್ತಿದೆ. ಆ ಮೂಲಕ ಎಲ್ಲವನ್ನು ಸುವ್ಯವಸ್ಥೆಯಡಿ ತರಲಾಗುತ್ತಿದೆ. ನನ್ನ ಬದುಕಿನಲ್ಲಿ ಸಾಕ್ಷಿಗುಡ್ಡೆ ಬಿಟ್ಟುಹೋಗಬೇಕು ಎಂದು ಕೆಲಸ ಮಾಡುತ್ತಿದ್ದೇನೆ. ಕೆಲವರು ಟೀಕೆ ಮಾಡುತ್ತಾರೆ ಮಾಡಲಿ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.