Thawar Chand Gehlot: 15 ವಿಧೇಯಕಗಳಿಗೆ ರಾಜ್ಯಪಾಲರ ಅಂಗೀಕಾರ, ಮೂರು ರಾಷ್ಟ್ರಪತಿಗಳಿಗೆ
20 ಮಸೂದೆಗಳ ಪೈಕಿ 15 ವಿಧೇಯಕಗಳಿಗೆ ಒಪ್ಪಿಗೆ ನೀಡಿ ರಾಜ್ಯ ಪತ್ರ ಪ್ರಕಟಿಸಲಾಗಿದೆ. ಉಳಿದಂತೆ ಕೇಂದ್ರ ಸರ್ಕಾರದ ಕಾಯ್ದೆಗೆ ತಿದ್ದು ಪಡಿಯಾಗಿರುವ ಕಾರಣಕ್ಕಾಗಿ ನೋಂದಣಿ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಕರ್ನಾಟಕ ದೇವದಾಸಿ (ತಿದ್ದುಪಡಿ) ಕಾಯ್ದೆಗಳ ಪರಿಶೀಲನೆಗೆ ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ.

-

ಬೆಂಗಳೂರು : ಕಳೆದ ವಿಧಾನಮಂಡಲ ಅಧಿವೇಶನದಲ್ಲಿ (Assembly Session) ಮಂಡನೆಯಾಗಿದ್ದ ವಿಧೇಯಕಗಳ ಪೈಕಿ ಮೂರು ವಿಧೇಯಕಗಳನ್ನು ಅನುಮೋದನೆಗಾಗಿ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಉಳಿದ 15 ವಿಧೇಯಕಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಅನುಮೋದನೆ ನೀಡಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಿಧೇಯಕಗಳಿಗೆ (bills) ಒಂದೇ ಬಾರಿಗೆ ಅನುಮೋದನೆ ನೀಡಿರುವುದು ಇದೇ ಮೊದಲಾಗಿದೆ.
ಕೆರೆಗಳ ವಿಸ್ತೀರ್ಣ ಆಧರಿಸಿ ಸಂರಕ್ಷಿತ ವಲಯವನ್ನು ಮರು ನಿಗದಿ ಮಾಡುವ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ ಮತ್ತು ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಗಳನ್ನು ರಾಜ್ಯಪಾಲರು ಒಪ್ಪಿಗೆ ನೀಡದೆ, ತಮ್ಮ ಪರಿಶೀಲನೆಗೊಳಪಡಿಸಿದ್ದಾರೆ.
ಆಗಸ್ಟ್‌ನಲ್ಲಿ ನಡೆದ ಮಳೆಗಾಲದ ಅಧಿವೇಶನದಲ್ಲಿ ಒಟ್ಟಾರೆ 39 ಮಸೂದೆಗಳನ್ನು ಮಂಡಿಸಲಾಗಿತ್ತು. ಅದರಲ್ಲಿ 2 ವಿಧೇಯಕಗಳನ್ನು ಜಂಟಿ ಆಯ್ಕೆ ಸಮಿತಿಗೆ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಮತ್ತು ಉಳಿದ 37 ಮಸೂದೆಗಳಿಗೆ ಅನುಮೋದನೆ ನೀಡಲಾಗಿತ್ತು. ಆ ಮಸೂದೆಗಳ ಪೈಕಿ ಸೆ.2ರಂದು ಎರಡು ಮಸೂದೆ ಹಾಗೂ ಸೆ.9ರಂದು 15 ಮಸೂದೆಗಳಿಗೆ ರಾಜ್ಯಪಾಲರು ಅನುಮೋದನೆ ನೀಡಿ ರಾಜ್ಯ ಪತ್ರ ಪ್ರಕಟಿಸಿದ್ದರು.
ಇದೀಗ ಶುಕ್ರವಾರ ಉಳಿದ 20 ಮಸೂದೆಗಳ ಪೈಕಿ 15 ವಿಧೇಯಕಗಳಿಗೆ ಒಪ್ಪಿಗೆ ನೀಡಿ ರಾಜ್ಯ ಪತ್ರ ಪ್ರಕಟಿಸಲಾಗಿದೆ. ಉಳಿದಂತೆ ಕೇಂದ್ರ ಸರ್ಕಾರದ ಕಾಯ್ದೆಗೆ ತಿದ್ದು ಪಡಿಯಾಗಿರುವ ಕಾರಣಕ್ಕಾಗಿ ನೋಂದಣಿ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಕರ್ನಾಟಕ ದೇವದಾಸಿ (ತಿದ್ದುಪಡಿ) ಕಾಯ್ದೆಗಳ ಪರಿಶೀಲನೆಗೆ ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: KN Rajanna: ಸಚಿವ ರಾಜಣ್ಣ ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು