Tigers Death: ಹುಲಿಗಳ ಸಾವು, 4 ಅಧಿಕಾರಿಗಳ ಅಮಾನತಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಶಿಫಾರಸು
Tigers Death: ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಏಪ್ರಿಲ್ ತಿಂಗಳಾಂತ್ಯಕ್ಕೇ ಹಣ ಬಿಡುಗಡೆಯಾಗಿದ್ದರೂ, ಜೂನ್ ತಿಂಗಳವರೆಗೆ ವೇತನ ಪಾವತಿಸದಿರುವುದು ಡಿಸಿಎಫ್ ಚಕ್ರಪಾಣಿ ಅವರ ಮೂಲಭೂತ ಕರ್ತವ್ಯ ಲೋಪವಾಗಿದ್ದು, ಇದು ಗಸ್ತು ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ. ಈ ಸಂಬಂಧ ಡಿಸಿಎಫ್ ಚಕ್ರಪಾಣಿ ಅಮಾನತಿಗೆ ಶಿಫಾರಸು ಮಾಡಿ, ಇಲಾಖಾ ವಿಚಾರಣೆ ಮಾಡಲು ಶಿಫಾರಸು ಮಾಡಿದ್ದಾರೆ.

ಈಶ್ವರ ಖಂಡ್ರೆ

ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟ (Male Mahadeshwara hills) ರಕ್ಷಿತಾರಣ್ಯ ವ್ಯಾಪ್ತಿಯ ಮೀಣ್ಯಂನಲ್ಲಿ 5 ಹುಲಿಗಳ ಅಸಹಜ ಸಾವಿನ (tigers death) ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ ಡಿಸಿಎಫ್ ಚಕ್ರಪಾಣಿ ಮತ್ತು ಮೂವರು ಅಧಿಕಾರಿಗಳನ್ನು ಅಮಾನತು ಮಾಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Minister Eshwara Khandre) ಶಿಫಾರಸು ಮಾಡಿದ್ದಾರೆ. ಉನ್ನತ ಮಟ್ಟದ ವಿಚಾರಣಾ ಸಮಿತಿಯ ಪ್ರಾಥಮಿಕ ವರದಿ ಸ್ವೀಕರಿಸಿ, ಪರಾಮರ್ಶಿಸಿದ ಸಚಿವರು, ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಈ ಶಿಫಾರಸು ಮಾಡಿದ್ದಾರೆ.
ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಏಪ್ರಿಲ್ ತಿಂಗಳಾಂತ್ಯಕ್ಕೇ ಹಣ ಬಿಡುಗಡೆಯಾಗಿದ್ದರೂ, ಜೂನ್ ತಿಂಗಳವರೆಗೆ ವೇತನ ಪಾವತಿಸದಿರುವುದು ಡಿಸಿಎಫ್ ಚಕ್ರಪಾಣಿ ಅವರ ಮೂಲಭೂತ ಕರ್ತವ್ಯ ಲೋಪವಾಗಿದ್ದು, ಇದು ಗಸ್ತು ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ. ಈ ಸಂಬಂಧ ಡಿಸಿಎಫ್ ಚಕ್ರಪಾಣಿ ಅಮಾನತಿಗೆ ಶಿಫಾರಸು ಮಾಡಿ, ಇಲಾಖಾ ವಿಚಾರಣೆ ಮಾಡಲು ಶಿಫಾರಸು ಮಾಡಿದ್ದಾರೆ.
ಹೊರಗುತ್ತಿಗೆ ಸಿಬ್ಬಂದಿ ಮಾರ್ಚ್‌ನಿಂದ 3 ತಿಂಗಳ ವೇತನ ಪಾವತಿ ಆಗಿಲ್ಲ ಎಂದು ಜೂನ್ 23ರಂದು ಪ್ರತಿಭಟನೆ ನಡೆಸಿದ್ದರು. ಸಕಾಲದಲ್ಲಿ ವೇತನ ಸಿಗದೆ ಮುಂಚೂಣಿಯ ಸಿಬ್ಬಂದಿ ಕರ್ತವ್ಯ ವಿಮುಖರಾಗಲು ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸುಮಾರು 11 ವರ್ಷದ ತಾಯಿ ಹುಲಿ ಮತ್ತು 10-11 ತಿಂಗಳ 4 ಮರಿ ಹುಲಿಗಳ ಸಾವಿಗೆ ಹುಲಿ ದಾಳಿ ಮಾಡಿ ಕೊಂದ ಹಸುವಿನ ಮೃತದೇಹದ ಒಳಗೆ ಸೇಡು ತೀರಿಸಿಕೊಳ್ಳಲು ಸಿಂಪಡಿಸಲಾದ ರಾಸಾಯನಿಕ ಸಂಯುಕ್ತ ಕಾರಣ ಎಂಬುದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದುಬಂದಿದೆ.
ಗಸ್ತು ಸಿಬ್ಬಂದಿಯ ಕಾರ್ಯಕ್ಷಮತೆಯ ಮೇಲೆ ಸಂಬಂಧಿತ ವಲಯದ ಎ.ಸಿ.ಎಫ್, ಆರ್.ಎಫ್.ಓ. ಮತ್ತು ಡಿ.ಆರ್.ಎಫ್.ಓ. ನಿಗಾ ಇಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅರಣ್ಯ ರಕ್ಷಣೆಯ ತಮ್ಮ ಮೂಲಭೂತ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುತ್ತಾರೆ ಎಂದು ತಿಳಿಸಿರುವ ಈಶ್ವರ ಖಂಡ್ರೆ, ಮೂರು ಸಿಬ್ಬಂದಿಯನ್ನು ಅಮಾನತು ಮಾಡಿ, ಇಲಾಖಾ ವಿಚಾರಣೆ ನಡೆಸಲು ಸೂಚನೆ ನೀಡಿದ್ದಾರೆ.
ಪ್ರಾಥಮಿಕ ತನಿಖಾ ವರದಿ ಸಲ್ಲಿಸಿರುವ ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಶ್ಕರ್ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಶ್ರೀನಿವಾಸುಲು, ಚಾಮರಾಜನಗರ ಸಿಸಿಎಫ್ ಹೀರಾಲಾಲ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಎ.ಐ.ಜಿ ಹರಿಣಿ ವೇಣುಗೋಪಾಲ್, ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಮತ್ತು ಮೈಸೂರು ಮೃಗಾಲಯದ ಸಹಾಯಕ ನಿರ್ದೇಶಕ ಡಾ. ಶಶಿಧರ್ ಸದಸ್ಯರಾಗಿದ್ದರು. ಈ ಸಮಿತಿಗೆ ಅಂತಿಮ ವರದಿಯನ್ನು ಇದೇ ತಿಂಗಳ 10ರೊಳಗೆ ಸಲ್ಲಿಸುವಂತೆಯೂ ಅರಣ್ಯ ಸಚಿವರು ಸೂಚಿಸಿದ್ದಾರೆ.
ಇದನ್ನೂ ಓದಿ: Tigers death: ಹುಲಿಗಳ ಸಾವು, ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ