Mysuru Dasara 2025: ಮೈಸೂರು ದಸರಾ; ಈ ವರ್ಷವೂ ತಪ್ಪದ ಪಾಸ್ ಅವ್ಯವಸ್ಥೆ!
Mysuru Dasara Pass: ಬುಧವಾರ ಮಧ್ಯಾಹ್ನ 2 ಗಂಟೆಗೆ ಏರ್ ಶೋಗೆ ಪ್ರವೇಶ ಪಡೆದವರು ರಾತ್ರಿ ಸಂಜೆ 7ರಿಂದ 10 ಗಂಟೆ ತನಕ ನಡೆಯುವ ಪಂಜಿನ ಕವಾಯತು ಪೂರ್ವಾಭ್ಯಾಸ ನೋಡಲು ಕಾದು ಕುಳಿತುಕೊಳ್ಳುವ ಅನಿವಾರ್ಯತೆಯನ್ನು ಅಧಿಕಾರಿಗಳು ಸೃಷ್ಟಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

-

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ವರ್ಷವೂ ಪಾಸ್ ಅವ್ಯವಸ್ಥೆ ಕಂಡುಬಂದಿದೆ. ಏರ್ ಶೋ ಮತ್ತು ಪಂಜಿನ ಕವಾಯತು ವೀಕ್ಷಣೆಗೆ ಪಾಸ್ ಪಡೆದು ಬಂದ ನೂರಾರು ನಾಗರಿಕರು ಒಳಗಡೆ ಪ್ರವೇಶ ಸಿಗದೇ, ನಿರಾಶರಾಗಿ ಹಿಂತಿರುಗಬೇಕಾಯಿತು. ಎರಡೂ ಕಾರ್ಯಕ್ರಮಗಳಿಗೂ ಒಂದೇ ಪಾಸ್ ವಿತರಣೆ ಮಾಡಿರುವುದು ಸಮಸ್ಯೆಗೆ ಕಾರಣವಾಯಿತು.
ಮಧ್ಯಾಹ್ನ 2 ಗಂಟೆಗೆ ಏರ್ ಶೋಗೆ ಪ್ರವೇಶ ಪಡೆದವರು ರಾತ್ರಿ ಸಂಜೆ 7ರಿಂದ 10 ಗಂಟೆ ತನಕ ನಡೆಯುವ ಪಂಜಿನ ಕವಾಯತು ಪೂರ್ವಾಭ್ಯಾಸ ನೋಡಲು ಕಾದು ಕುಳಿತುಕೊಳ್ಳುವ ಅನಿವಾರ್ಯತೆಯನ್ನು ಅಧಿಕಾರಿಗಳು ಸೃಷ್ಟಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಪಂಜಿನ ಮೆರವಣಿಗೆಯನ್ನು ಮಾತ್ರ ನೋಡುವ ಉದ್ದೇಶದಿಂದ ಮಹಿಳೆಯರು, ಮಕ್ಕಳನ್ನು ಕರೆದುಕೊಂಡು ಸಂಜೆ ನಾಲ್ಕರ ಸುಮಾರಿಗೆ ಬಂದವರು ನಿರಾಶರಾಗಿ ಹಿಂತಿರುಗಬೇಕಾಯಿತು. ಇಷ್ಟಾದರೂ ಪೊಲೀಸರು ಮತ್ತು ಇತರ ಹಿರಿಯ ಅಧಿಕಾರಿಗಳ ಶಿಫಾರಸು ಪಡೆದವರು ಸುಲಭವಾಗಿ ಪ್ರವೇಶ ಪಡೆಯುತ್ತಿದ್ದದ್ದು ಕಂಡುಬಂತು.

ಇನ್ನು ದಸರಾ ಪಾಸ್ ಅವ್ಯವಸ್ಥೆ ಮೈಸೂರಿಗರಿಗೆ ಹೊಸತೇನೂ ಅಲ್ಲ. ಆದರೆ ದಸರಾ ವೈಭವ ಕಣ್ತುಂಬಿಕೊಳ್ಳಲೇಬೇಕೆಂಬ ಆಸೆಯಿಂದ ದೂರದೂರಿನಿಂದ ಬಂದವರು ನಿರಾಸೆಯಿಂದ ಮರಳಬೇಕಾಯಿತು.
ಟಿಕೆಟ್ ದರ ಯಾವುದಕ್ಕೆ ಎಷ್ಟು?
ದಸರಾ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ (ಪಾಸ್) ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿತ್ತು. ದಸರಾ ಗೋಲ್ಡ್ ಕಾರ್ಡ್‌ಗೆ 6500 ರೂ, ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಟಿಕೆಟ್ 3500 ರೂ. ಹಾಗೂ ಪಂಜಿನ ಕವಾಯತು ಟಿಕೆಟ್‌ಗೆ 1,500 ರೂಪಾಯಿ. ಡ್ರೋನ್ ಶೋಗೆ 1000 ನಿಗದಿ ಮಾಡಲಾಗಿದೆ.
ಗೋಲ್ಡ್ ಕಾರ್ಡ್ ಖರೀದಿಸಿರುವವರೆಗೆ (ಒಬ್ಬರಿಗೆ 6500 ರೂ.) ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ (ವಿಶೇಷ ದರ್ಶನ), ಮೈಸೂರು ಅರಮನೆಗೆ ಒಂದು ಬಾರಿ ಉಚಿತವಾಗಿ ಪ್ರವೇಶ ದೊರೆಯಲಿದೆ. ಅಲ್ಲದೆ ಡ್ರೋನ್ ಶೋ, ಜಂಬೂಸವಾರಿ ಹಾಗೂ ಪಂಜಿನ ಕವಾಯಿತು ವೀಕ್ಷಣೆಗೆ ಪ್ರತ್ಯೇಕವಾಗಿ ಆಸನಗಳನ್ನು ವ್ಯವಸ್ಥೆ ಮಾಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ | Mysuru Dasara 2025: ಮೈಸೂರು ಅರಮನೆಯಲ್ಲಿ ‘ಆಯುಧ ಪೂಜೆ’ ನೆರವೇರಿಸಿದ ಯದುವೀರ್ ಒಡೆಯರ್
ಇನ್ನು ಮೈಸೂರು ನಗರ ಹೊರವಲಯದ ಉತ್ತನಹಳ್ಳಿ ಬಳಿ ಸೆ.23ರಿಂದ 27ರವರೆಗೆ ಆಯೋಜಿಸಿದ್ದ 'ಯುವ ದಸರಾ'ದಲ್ಲಿ ಪಾಲ್ಗೊಳ್ಳಲು 5 ಸಾವಿರ ಹಾಗೂ 2,500 ಟಿಕೆಟ್ ಪರಿಚಯಿಸಲಾಗಿತ್ತು.