Rani Chennabhaira Devi: ʼಕಾಳುಮೆಣಸಿನ ರಾಣಿʼ ಚೆನ್ನಾಭೈರಾದೇವಿ ನೆನಪಿನ ಅಂಚೆ ಚೀಟಿ ಬಿಡುಗಡೆಗೊಳಿಸಿದ ರಾಷ್ಟ್ರಪತಿ
Draupadi Murmu: ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಣಿ ಚೆನ್ನಭೈರಾದೇವಿ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಉತ್ತರ ಕನ್ನಡ: ‘ಕಾಳುಮೆಣಸಿನ ರಾಣಿ’ (Queen of Black Pepper) ಎಂದು ಇತಿಹಾಸದಲ್ಲಿ ದಾಖಲಾಗಿರುವ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದ ರಾಣಿ ಚೆನ್ನಭೈರಾದೇವಿ (Rani Chennabhaira Devi) ನೆನಪಿನ ಅಂಚೆ ಚೀಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ನಿನ್ನೆ ಬಿಡುಗಡೆಗೊಳಿಸಿದರು. 'ರೈನಾ-ದ ಪಿಮೆಂಟಾ' ಅಂದರೆ ಕಾಳುಮೆಣಸಿನ ರಾಣಿ ಎಂದು ಕರೆಯಲ್ಪಡುವ ರಾಣಿ ಚೆನ್ನಭೈರಾದೇವಿ ಕರ್ನಾಟಕದ ಗೇರುಸೊಪ್ಪಾದ ರಾಣಿ. ಪೋರ್ಚುಗೀಸರ ಆಕ್ರಮಣಗಳ ವಿರುದ್ಧ 54 ವರ್ಷಗಳ ಕಾಲ ತಮ್ಮ ರಾಜ್ಯವನ್ನು ಯಶಸ್ವಿಯಾಗಿ ರಕ್ಷಿಸಿದರು ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಣಿ ಚೆನ್ನಭೈರಾದೇವಿ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಚೆನ್ನಭೈರಾದೇವಿ ಕುರಿತು ಕನ್ನಡದಲ್ಲಿ ಕಾದಂಬರಿ ರಚಿಸಿರುವ ಲೇಖಕ ಗಜಾನನ ಶರ್ಮ ಕೂಡ ಉಪಸ್ಥಿತರಿದ್ದರು.
ಕರ್ನಾಟಕದ ಗೇರುಸೊಪ್ಪಿನ ರಾಣಿಯಾಗಿ, ರೈನಾ ಡಾ ಪಿಮೆಂಟಾ ಎಂದು ಪೋರ್ಚುಗೀಸರು ಕರೆಯುತ್ತಿದ್ದ ರಾಣಿ ಚೆನ್ನಭೈರಾದೇವಿ ಕರ್ನಾಟಕದ ಶಕ್ತಿಯ ಹೆಮ್ಮೆಯ ಸಂಕೇತ. 54 ವರ್ಷಗಳ ಕಾಲ ರಾಜ್ಯದ ರಕ್ಷಣೆ, ಪರಂಪರೆ ಮಾಡಿದ ಈಕೆ ಮತ್ತಷ್ಟು ಸ್ಫೂರ್ತಿ ಅಂತ ರಾಣಿಯನ್ನು ಪ್ರಹ್ಲಾದ್ ಜೋಶಿ ಸ್ಮರಿಸಿಕೊಂಡಿದ್ದಾರೆ.
ರಾಣಿ ಚೆನ್ನಭೈರಾದೇವಿ 16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ನಗರೆ ಪ್ರಾಂತ್ಯದ ಜೈನ ರಾಣಿಯಾಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪೆ ಅವರ ಆಡಳಿತ ರಾಜಧಾನಿಯಾಗಿತ್ತು. ಅವರನ್ನು ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಎಂದೂ ಕರೆಯಲಾಗುತ್ತಿತ್ತು. ಅವರು 1552ರಿಂದ 1606 ರವರೆಗೆ, 54 ವರ್ಷಗಳ ಕಾಲ ರಾಣಿಯಾಗಿ ಆಳ್ವಿಕೆ ಮಾಡಿದ್ದು, ಭಾರತೀಯ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಆಳಿದ ರಾಣಿ ಎಂದು ಪರಿಗಣಿಸಲಾಗಿದೆ. ಅವರು 1559 ಮತ್ತು 1570 ರಲ್ಲಿ ಪೋರ್ಚುಗೀಸರ ವಿರುದ್ಧದ ಯುದ್ಧಗಳಿಗೆ ಹೆಸರುವಾಸಿಯಾಗಿದ್ದಾರೆ. ಇದರಲ್ಲಿ ಅವರು ಗೆದ್ದು ಪೋರ್ಚುಗೀಸರೊಂದಿಗೆ ವಾಣಿಜ್ಯ ಸಂಬಂಧಗಳನ್ನು ಪ್ರಾರಂಭಿಸಲು ಸಹಾಯ ಮಾಡಿದರು.
ಭಟ್ಕಳ ಮತ್ತು ಹೊನ್ನಾವರ ಬಂದರುಗಳ ಮೂಲಕ ಯುರೋಪಿಯನ್ ಮತ್ತು ಅರಬ್ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದ ಕಾಳುಮೆಣಸು ಮತ್ತು ಇತರ ಮಸಾಲೆಗಳನ್ನು ರಫ್ತು ಮಾಡುತ್ತಿದ್ದರಿಂದ ಅವರು ಪೋರ್ಚುಗೀಸರಿಂದ "ದಿ ಕ್ವೀನ್ ಆಫ್ ಪೆಪ್ಪರ್" ಎಂಬ ಬಿರುದನ್ನು ಪಡೆದಿದ್ದರು.
ಇದನ್ನೂ ಓದಿ: B Sarojadevi: ಬಿ.ಸರೋಜಾದೇವಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರಕ್ಕೆ ನೈಜತೆ ತಂದಿದ್ದರು-ಬೊಮ್ಮಾಯಿ