ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honor killing: ಬೇರೆ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಲೆಗೈದು ನದಿಗೆ ಶವ ಎಸೆದ ತಂದೆ!

Honor killing: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದರಿಂದ ಮಗಳನ್ನು ಕೊಲೆ ಮಾಡಿರುವುದಾಗಿ ತಂದೆ ತಪ್ಪೊಪ್ಪಿಕೊಂಡಿದ್ದಾನೆ. ಮಗಳನ್ನು ಕೊಲೆ ಮಾಡಿ ಮೂಟೆ ಕಟ್ಟಿ ನದಿಗೆ ಎಸೆದಿರುವುದಾಗಿ ತಿಳಿಸಿದ್ದಾನೆ.

ಬೇರೆ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಲೆಗೈದ ತಂದೆ!

Profile Prabhakara R Apr 29, 2025 10:14 PM

ರಾಯಚೂರು: ಬೇರೆ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿ ಶವವನ್ನು ನದಿಗೆ ಎಸೆದಿರುವ ಘಟನೆ (Honor killing) ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಯುವಕನ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ಆರೋಪಿಯೇ ನ್ಯಾಯಾಲಯದಲ್ಲಿ ನಿಜಾಂಶ ತಿಳಿಸಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.

2024ರ ಸೆಪ್ಟೆಂಬರ್ 29ರಂದು ಪುತ್ರಿ ರೇಣುಕಾಳನ್ನು (18) ಕೊಲೆ ಮಾಡಿದ್ದ ತಂದೆ ಲಕ್ಕಪ್ಪ ಕಂಬಳಿ ಶವವನ್ನು ಮೂಟೆಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದ. ಗ್ರಾಮದ ಅನ್ಯ ಜಾತಿಯ ಯುವಕ ಹನುಮಂತನನ್ನು ರೇಣುಕಾ ಪ್ರೀತಿಸಿದ್ದಳು. ಮದುವೆಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಇಬ್ಬರೂ ಗ್ರಾಮ ಬಿಟ್ಟು ಓಡಿಹೋಗಿದ್ದರು. ಆಗ ರೇಣುಕಾಗೆ 17 ವರ್ಷ ವಯಸ್ಸಾಗಿತ್ತು. ಮಗಳು ಅಪ್ರಾಪ್ತ ವಯಸ್ಕಳಾಗಿದ್ದರಿಂದ ಆಕೆಯ ತಂದೆ ಲಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಹನುಮಂತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.

ಪೋಕ್ಸೋ ಪ್ರಕರಣದಡಿ ಪೊಲೀಸರು ಹನುಮಂತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ರೇಣುಕಾ ಮಾತ್ರ ಹನುಮಂತನನ್ನೇ ಮದುವೆ ಆಗುತ್ತೇನೆಂದು ಪಟ್ಟು ಹಿಡಿದಿದ್ದಳು. ಇದಾದ ಕೆಲವು ದಿನಗಳ ನಂತರ ಹನುಮಂತ ಜಾಮೀನು ಮೇಲೆ ಹೊರ ಬಂದಿದ್ದ. ಬಳಿಕ ಆತನ ಜತೆ ರೇಣುಕಾ ಓಡಾಟ ಆರಂಭಿಸಿದ್ದಳು. ಎಷ್ಟೇ ಬುದ್ಧಿ ಹೇಳಿದರೂ ಕೇಳದೆ, ಹನುಮಂತನನ್ನೇ ಮದುವೆ ಆಗುವೆ ಎಂದಿದ್ದಳು. ಇದರಿಂದ ಕೋಪಗೊಂಡು ಮಗಳನ್ನು ಕೊಲೆ ಮಾಡಿರುವುದಾಗಿ ತಂದೆ ಲಕ್ಕಪ್ಪ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Bribery case: ಯಾದಗಿರಿ ಪಿಡಬ್ಲ್ಯುಡಿಯಲ್ಲಿ ಭಾರಿ ಭ್ರಷ್ಟಾಚಾರ; 17 ಲಕ್ಷ ಬಿಲ್ ಪಾವತಿಗೆ 4.80 ಲಕ್ಷ ಲಂಚ ಪಡೆದ ಅಧಿಕಾರಿಗಳು!

ಪೋಕ್ಸೋ ಪ್ರಕರಣದ ವಿಚಾರಣೆಗೆ ಹಲವು ಬಾರಿ ಪುತ್ರಿ ರೇಣುಕಾ ಗೈರಾದ ಬಗ್ಗೆ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಮಗಳನ್ನು ವಿಚಾರಣೆಗೆ ಹಾಜರುಪಡಿಸುವಂತೆ ತಾಕೀತು ಮಾಡಿದ್ದಾರೆ. ಈ ವೇಳೆ ಲಕ್ಕಪ್ಪ ಅನಿವಾರ್ಯವಾಗಿ ತಪ್ಪೊಪ್ಪಿಕೊಳ್ಳಬೇಕಾಗಿ ಬಂದಿದೆ. ಮಗಳನ್ನು ಕೊಲೆ ಮಾಡಿ ಮೂಟೆ ಕಟ್ಟಿ ನದಿಗೆ ಎಸೆದಿರುವುದಾಗಿ ಲಕ್ಕಪ್ಪ ಕೋರ್ಟ್​ಗೆ ಹೇಳಿಕೆ ನೀಡಿದ್ದಾನೆ. ಇದರಿಂದಾಗಿ ಮರ್ಯಾದಾ ಹತ್ಯೆ ಪ್ರಕರಣ ಕೊನೆಗೂ ಬಯಲಾಗಿದೆ.