Karnataka Rains: ನಾಳೆ ಉತ್ತರ ಕನ್ನಡ, ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ!
Weather Forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 20°C ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಬೆಂಗಳೂರು: ಹೊನ್ನಾವರ, ಗೋಕರ್ಣ, ಆಗುಂಬೆ, ಸುಳ್ಯ, ಕೋಟ, ಸಿದ್ದಾಪುರ ಸೇರಿ ರಾಜ್ಯದ ವಿವಿಧೆಡೆ ಮಂಗಳವಾರ ಭಾರಿ ಮಳೆಯಾಗಿದೆ (Karnataka Rains). ಅದೇ ರೀತಿ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ವ್ಯಾಪಕ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಇನ್ನು ಜುಲೈ 24ರಂದು ಉತ್ತರ ಕನ್ನಡ, ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಿದ್ದು, ಭರ್ಜರಿ ಮಳೆಯಾಗುವ (Heavy Rainfall) ಸಾಧ್ಯತೆ ಇದೆ. ಇನ್ನುಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದ್ದು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೀನುಗಾರರಿಗೆ ಎಚ್ಚರಿಕೆ
ಕರ್ನಾಟಕ ರಾಜ್ಯದ ಕರಾವಳಿ ತೀರದಲ್ಲಿ ಜುಲೈ 23 ರಿಂದ 27 ರವರೆಗೆ, ಜೋರಾದ ಗಾಳಿಯು ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದ್ದು, ಪ್ರತಿ ಗಂಟೆಗೆ 60 ಕಿ.ಮೀ ತಲುಪುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಮುದ್ರದ ಅಲೆಗಳು ಉಲ್ಬಣಗೊಳ್ಳಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಮುದ್ರತೀರದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
#ಮೀನುಗಾರರಿಗೆ #ಎಚ್ಚರಿಕೆ#Fishermen #WARNING @DCDKOfficial @dcudupi @dcuttarakannada #KSNDMC pic.twitter.com/mXr6rffseK
— Karnataka State Natural Disaster Monitoring Centre (@KarnatakaSNDMC) July 23, 2025
ಇನ್ನು ಜುಲೈ 25ರಂದು ಕೂಡ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದ್ದು, ಬಿರುಸಿನ ಮಳೆಯಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದ್ದು, ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ.
ಜುಲೈ 26ರಂದು ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ವರುಣಾರ್ಭಟ ಜೋರಾಗಿರಲಿದೆ. ಅದೇ ರೀತಿ ಇನ್ನುಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಈ ಸುದ್ದಿಯನ್ನೂ ಓದಿ | Health Tips: ಮೂತ್ರ ವಿಸರ್ಜನೆ ವೇಳೆ ಈ ತಪ್ಪುಗಳನ್ನು ಮಾಡದಿರಿ
ಜುಲೈ 27ರಂದು ಕೂಡ ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ವರುಣ ಅಬ್ಬರಿಸಲಿದ್ದಾನೆ. ಇನ್ನುಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.