ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CET 2025: ಶಿವಮೊಗ್ಗದಲ್ಲಿ ಜನಿವಾರ ವಿವಾದಕ್ಕೆ ಟ್ವಿಸ್ಟ್‌; ಅಧಿಕಾರಿ ವಿರುದ್ಧ ಕಂಪ್ಲೇಂಟ್‌, ಈವರೆಗೆ ಏನೇನು ಬೆಳವಣಿಗೆ ಆಗಿದೆ?

CET 2025: ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ವೇಳೇ ವಿದ್ಯಾರ್ಥಿಗಳ ಜನಿವಾರ ಮತ್ತು ಕಾಶಿದಾರ ತೆಗೆಸಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬ್ರಾಹ್ಮಣ ಮಹಾಸಭಾದ ಪ್ರಮುಖರು ಮನವಿ ಸಲ್ಲಿಸಿದರು. ಹೀಗಾಗಿ ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಪಡೆದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಜನಿವಾರ ವಿವಾದ; ಅಧಿಕಾರಿ ವಿರುದ್ಧ ಕಂಪ್ಲೇಂಟ್‌

Profile Prabhakara R Apr 18, 2025 9:23 PM

ಶಿವಮೊಗ್ಗ: ನಗರದಲ್ಲಿ ಸಿಇಟಿ ಬರೆಯಲು ಪರೀಕ್ಷಾ ಕೇಂದ್ರದೊಳಗೆ ತೆರಳುವಾಗ ವಿದ್ಯಾರ್ಥಿಗಳ ಜನಿವಾರ (sacred thread) ಮತ್ತು ಕಾಶಿದಾರ ತೆಗೆಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಾಗಿದೆ. ಇನ್ನೊಂದೆಡೆ, ಸಚಿವರು, ಶಾಸಕರು ಸೇರಿ ಹಲವು ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಬುಧವಾರ ಮತ್ತು ಗುರುವಾರ ಸಿ.ಇ.ಟಿ ಪರೀಕ್ಷೆ ನಡೆಯಿತು. ಶಿವಮೊಗ್ಗದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಮೂವರು ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ ಸೂಚಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳ ಜನಿವಾರ (sacred thread) ತೆಗೆಸಲಾಗಿದ್ದು, ಮತ್ತೊಬ್ಬ ವಿದ್ಯಾರ್ಥಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈತನಕ ಏನೇನು ಬೆಳವಣಿಗೆ ಆಗಿದೆ?

  • ಖಾಸಗಿ ಶಿಕ್ಷಣ ಸಂಸ್ಥೆಯ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ಪರೀಕ್ಷೆಗೆ ಬಂದ ಮೂವರು ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳ ಜನಿವಾರ (sacred thread) ತೆಗೆಸಲಾಗಿದೆ. ಮತ್ತೊಬ್ಬ ವಿದ್ಯಾರ್ಥಿ ವಿರೋಧ ವ್ಯಕ್ತಪಡಿಸಿದ್ದಾನೆ. ಆತನ ಕೈಯಲ್ಲಿದ್ದ ಕಾಶಿದಾರ ತೆಗೆಯಲಾಗಿದೆ ಎಂದು ಆರೋಪಿಸಲಾಗಿದೆ.
  • ಖಾಸಗಿ ಶಿಕ್ಷಣ ಸಂಸ್ಥೆ ಎದುರು ಬ್ರಾಹ್ಮಣ ಸಂಘದ ಪ್ರಮುಖರು ಜನಿವಾರ ತೆಗೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಸೆಕ್ಯೂರಿಟಿ ಮತ್ತು ಬ್ರಾಹ್ಮಣ ಸಂಘದ ಪ್ರಮುಖರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
  • ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬ್ರಾಹ್ಮಣ ಮಹಾಸಭಾದ ಪ್ರಮುಖರು, ಜನಿವಾರ ಮತ್ತು ಕಾಶಿದಾರ ತೆಗೆಸಿದ್ದನ್ನು ಖಂಡಿಸಿ ಗುರುವಾರ ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಶಿಕ್ಷಣ ಸಂಸ್ಥೆಯಲ್ಲಿದ್ದ ಸಿಸಿಟಿವಿ ಕ್ಯಾಮರಾದ ವಿಡಿಯೋ ದೃಶ್ಯಾವಳಿಯನ್ನ ಪಡೆದಿರುವ ಅಧಿಕಾರಿಗಳು, ಪರಿಶೀಲನೆ ನಡೆಸುತ್ತಿದ್ದಾರೆ.
  • ಜನಿವಾರ ಕತ್ತರಿಸಲು ಸೂಚಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬ್ರಾಹ್ಮಣ ಮಹಾಸಭಾದ ವತಿಯಿಂದ ಶುಕ್ರವಾರ ಸಂಜೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
  • ಮತ್ತೊಂದೆಡೆ ಕರ್ತವ್ಯಲೋಪ ಎಸಗಿದ ಅಧಿಕಾರಿಯನ್ನು ಅಮಾನತು ಮಾಡಲು ಜಿಲ್ಲಾಧಿಕಾರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | CET 2025: ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದ ಅಧಿಕಾರಿ ಸಸ್ಪೆಂಡ್

ಜನಪ್ರತಿನಿಧಿಗಳು, ಸಂಘಟನೆಗಳ ಆಕ್ರೋಶ

ಜನಿವಾರ ಮತ್ತು ಕಾಶಿದಾರ ತೆಗೆಸಿದ್ದಕ್ಕೆ ಸಚಿವರು, ಶಾಸಕರು, ವಿವಿಧ ಸಂಘಟನೆಗಳ ಪ್ರಮುಖರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸಚಿವರುಗಳು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

image

ಇಂತಹ ಸೂಚನೆ ನೀಡಿದವರು ಯಾರು ಎಂಬುದು ಪರಿಶೀಲಿಸಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಘಟನೆ ಸಂಭವಿಸಿದೆ. ಸಂಬಂಧಪಟ್ಟ ಇಲಾಖೆ ಜೊತೆಗೆ ಚರ್ಚೆ ನಡೆಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಾತಿ, ಧರ್ಮದ ನಂಬಿಕೆಗಳಿಗೆ ಗೌರವ ಕೊಡುವ ಕೆಲಸ ಮಾಡಬೇಕು.

ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
image

ಸಿಇಟಿ ಕೇಂದ್ರದಲ್ಲಿ ಜನಿವಾರ, ಶಿವದಾರ, ರುದ್ರಾಕ್ಷಿಸರವನ್ನು ತೆಗೆಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಇದರಿಂದ ಹಿಂದೂಗಳ ಭಾವನೆಗೆ ತೀವ್ರ ಧಕ್ಕೆ ಉಂಟಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದೆ ಹೀಗೆ ಆಗದಂತೆ ಕ್ರಮ ವಹಿಸಬೇಕು.

ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ

ಅಧಿಕಾರಿಗಳ ವಿರುದ್ಧ ಕೆ.ಎಸ್‌. ಈಶ್ವರಪ್ಪ ಕಿಡಿ

ಜನಿವಾರ, ಶಿವಾದಾರ ಹಾಗೂ ಇನ್ನಿತರ ಹಿಂದೂ ಧಾರ್ಮಿಕ ಸಂಕೇತಗಳನ್ನು ಒತ್ತಾಯಪೂರ್ವಕವಾಗಿ ತೆಗೆಸಿದ್ದು, ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ವರ್ತಿಸಿದ್ದಾರೆ. ಕರ್ತವ್ಯಲೋಪ ಎಸಗಿರುವವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

ಪರೀಕ್ಷಾ ಪ್ರಾಧಿಕಾರದ ಕ್ರಮ ಖಂಡನೀಯ

ಶಿವಮೊಗ್ಗದ ಕಾಲೇಜು ಒಂದರಲ್ಲಿ ಪರೀಕ್ಷೆಗೆ ತೆರಳಿದ್ದ ವೀರಶೈವ–ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳ ಕೊರಳಲ್ಲಿದ್ದ ಶಿವದಾರ ಹಾಗೂ ರುದ್ರಾಕ್ಷಿ ತೆಗೆಸಲಾಗಿದೆ. ಸರ್ಕಾರ ಸುತ್ತೋಲೆ ಹೊರಡಿಸದಿದ್ದರೂ ಇದನ್ನೆಲ್ಲಾ ತೆಗೆಸಿರುವ ಪರೀಕ್ಷಾ ಪ್ರಾಧಿಕಾರದ ಕ್ರಮ ಖಂಡನೀಯ ಎಂದು ಕಾಂಗ್ರೆಸ್‌ ಮುಖಂಡ ಎಚ್.ಸಿ.ಯೋಗೇಶ್‌ ತಿಳಿಸಿದ್ದಾರೆ.

image

ಸಿ.ಸಿ.ಟಿವಿ ಕ್ಯಾಮೆರಾ ಪರಿಶೀಲಿಸಿ ವಾರದೊಳಗೆ ವರದಿ ನೀಡುವಂತೆ ಪರೀಕ್ಷಾ ಕೇಂದ್ರಗಳ ನೋಡಲ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ್ದರೆ ಕ್ರಮ ಕೈಗೊಳ್ಳುತ್ತೇವೆ.

ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ