ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sushila Karki: ನೇಪಾಳದಲ್ಲಿ ರಾಜಕೀಯ ಕ್ರಾಂತಿ; ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಆಯ್ಕೆ; ಏನಿವರ ಹಿನ್ನೆಲೆ?

Nepal Gen Z Protest: ಜೆನ್‌ ಝಿಗಳ ಹೋರಾಟ ಸಿಕ್ಕಿ ನಲುಗಿದ ನೇಪಾಳದ ಹಂಗಾಮಿ ಸರ್ಕಾರದ ಮುಖ್ಯಸೃರಾಗಿ ಇದೀಗ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಮಕವಾಗಿದ್ದಾರೆ. 72 ವರ್ಷ ವಯಸ್ಸಿನ ಸುಶೀಲಾ ಕರ್ಕಿ ನೇಪಾಳದ ಇತಿಹಾಸದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೇಪಾಳ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಸುಶೀಲಾ ಕರ್ಕಿ ನೇಮಕ

ಸುಶೀಲಾ ಕರ್ಕಿ -

Ramesh B Ramesh B Sep 10, 2025 7:48 PM

ಕಠ್ಮಂಡು: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ನಡೆದ ಮಾದರಿಯ ರಾಜಕೀಯ ಕ್ರಾಂತಿಗೆ ನೇಪಾಳ ಸಾಕ್ಷಿಯಾಗಿದ್ದು, ಜೆನ್‌ ಝಿಗಳ ಆಕ್ರೋಶಕ್ಕೆ ತುತ್ತಾಗಿ ಸರ್ಕಾರ ಉರುಳಿದೆ. ಪ್ರಧಾನಿ ಕೆ.ಪಿ. ಶರ್ಮಾ ಒಲಿ (KP Sharma Oli) ಮತ್ತು ರಾಷ್ಟ್ರಾಧ್ಯಕ್ಷ ರಾಮಚಂದ್ರ ಪೌಡೆಲ್‌ (Ram Chandra Poudel) ರಾಜೀನಾಮೆ ನೀಡುವುದರೊಂದಿಗೆ ಪ್ರತಿಭಟನಾಕಾರರು ಮೇಲುಗೈ ಸಾಧಿಸಿದ್ದು, ಇದೀಗ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ (Sushila Karki) ಅವರನ್ನು ಜೆನ್‌ ಝಿ ಹೋರಾಟಗಾರರು ಆಯ್ಕೆ ಮಾಡಿದ್ದಾರೆ.

ದೇಶಾದ್ಯಂತ ನಡೆದ ವರ್ಚುವಲ್ ಸಭೆಯಲ್ಲಿ 5,000ಕ್ಕೂ ಹೆಚ್ಚು ಯುವಕರು ಭಾಗಿಯಾಗಿ ಸುಶೀಲಾ ಕರ್ಕಿ ಅವರನ್ನು ಬೆಂಬಲಿಸಿದರು. ಸಾಮಾಜಿಕ ಜಾಲತಾಣದ ಮೇಲಿನ ನಿರ್ಬಂಧ ಮತ್ತು ಮಿತಿ ಮೀರಿದ ಭ್ರಷ್ಟಾಚಾರವನ್ನು ವಿರೋಧಿಸಿ ಸಾವಿರಾರು ಸಂಖ್ಯೆಯಲ್ಲಿ ಯುವ ಜನತೆ ಬೀದಿಗಿಳಿಯುವ ಮೂಲಕ ಹೋರಾಟ ಆರಂಭವಾಯಿತು. ಬಳಿಕ ಇದು ಹಿಂಸಾರೂಪ ತಾಳಿದ್ದು, ಇದುವರೆಗೆ 21 ಮಂದಿ ಬಲಿಯಾಗಿದ್ದಾರೆ. ಮಾಜಿ ಪ್ರಧಾನಿಯ ಪತ್ನಿ ಕೂಡ ಪ್ರತಿಭಟನಾಕಾರರ ಆಕ್ರೋಶದ ಕಿಚ್ಚಿಗೆ ಸಜೀವ ದಹನವಾಗಿದ್ದು, ಅಲ್ಲಿನ ಪರಿಸ್ಥಿತಿ ಕೈಮೀರಿ ಹೋಗಿದೆ. ಸದ್ಯ ಸೋಶಿಯಲ್‌ ಮೀಡಿಯಾದ ಮೇಲೆ ಹೇರಿದ್ದ ನಿರ್ಬಂಧವನ್ನು ಹಿಂಪಡೆದಿದ್ದರೂ ಪರಿಸ್ಥಿತಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಈ ಮಧ್ಯೆ ಮಧ್ಯಂತರ ಸರ್ಕಾರದ ಮುಖ್ಯಸ್ಥ ನೇಮಕವಾಗಿದ್ದು ಪರಿಸ್ಥಿತಿ ತಿಳಿಯಾಗುವ ಭರವಸೆ ಮೂಡಿಸಿದೆ.



ಈ ಸುದ್ದಿಯನ್ನೂ ಓದಿ: Nepal Gen Z Protest: ಜೆನ್‌ ಝಿ ಪ್ರತಿಭಟನೆಗೆ ಮಣಿದು ನೇಪಾಳ ಪ್ರಧಾನಿ ಒಲಿ, ಅ‍ಧ್ಯಕ್ಷ ರಾಮಚಂದ್ರ ಪೌಡೆಲ್‌ ರಾಜೀನಾಮೆ

ಉನ್ನತ ಹುದ್ದೆಗೆ ಯಾರನ್ನು ನೇಮಿಸಬೇಕೆಂಬ ಬಗ್ಗೆ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. ಆರಂಭದಲ್ಲಿ ಕಠ್ಮಂಡು ಮೇಯರ್ ಬಾಲೆನ್ ಶಾ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥ ಹುದ್ದೆಗೆ ಪರಿಗಣಿಸಲಾಗಿತ್ತು. ಆದರೆ ಅವರನ್ನು ಸಂಪರ್ಕಿಸಲು ಪದೇ ಪದೆ ಪ್ರಯತ್ನಿಸಿದರೂ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

"ಅವರು ನಮ್ಮ ಕರೆಗಳನ್ನು ಸ್ವೀಕರಿಸದ ಕಾರಣ ಬೇರೆ ನಾಯಕರನ್ನು ಉನ್ನತ ಹುದ್ದೆಗೆ ಪರಿಗಣಿಸಿದೆವು. ಈ ವೇಳೆ ಹೆಚ್ಚಿನ ಬೆಂಬಲ ಸುಶೀಲಾ ಕರ್ಕಿ ಅವರಿಗೆ ಬಂದಿದೆ" ಎಂದು ಜೆನ್‌ ಝಿ ಪ್ರತಿನಿಧಿಯೊಬ್ಬರು ನೇಪಾಳಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ರೇಸ್‌ನಲ್ಲಿದ್ದ ನೇಪಾಳ ವಿದ್ಯುತ್ ಪ್ರಾಧಿಕಾರದ ಮುಖ್ಯಸ್ಥ ಕುಲ್ಮನ್ ಘಿಸಿಂಗ್, ಯುವ ನಾಯಕ ಸಾಗರ್ ಧಕಲ್ ಮತ್ತು ಧರಣ್ ಮೇಯರ್ ಹರ್ಕಾ ಸಂಪಂಗ್ ಅವರನ್ನು ಹಿಂದಿಕ್ಕಿ ಕರ್ಕಿ ಆಯ್ಕೆಯಾಗಿದ್ದಾರೆ. ಕರ್ಕಿ ಅವರಿಗೆ ಬೆಂಬಲ ಸೂಚಿಸಿ 2,500ಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್‌ 8ರಂದು ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿ, ಸಂಸತ್ತು ಭವನ, ಅಧ್ಯಕ್ಷರ ಕಚೇರಿ, ಪ್ರಧಾನ ಮಂತ್ರಿ ನಿವಾಸ ಮತ್ತು ಹಿರಿಯ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂದು ಮೂಲಗಳು ತಿಳಿಸಿವೆ.



ಯಾರು ಈ ಸುಶೀಲಾ ಕರ್ಕಿ?

72 ವರ್ಷ ವಯಸ್ಸಿನ ಸುಶೀಲಾ ಕರ್ಕಿ ನೇಪಾಳದ ಇತಿಹಾಸದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2016ರಲ್ಲಿ ಆಗಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೇತೃತ್ವದ ಸಾಂವಿಧಾನಿಕ ಮಂಡಳಿಯ ಶಿಫಾರಸಿನ ಮೇರೆಗೆ ಅಂದಿನ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಕರ್ಕಿ ಅವರನ್ನು ಈ ಉನ್ನತ ಹುದ್ದೆಗೆ ನೇಮಿಸಿದ್ದರು. ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಕರ್ಕಿ ಯಾವುದೇ ರಾಜಕೀಯ ಪಕ್ಷದ ಹಿನ್ನೆಲೆ ಹೊಂದಿಲ್ಲ.

ಕರ್ಕಿ 2006ರ ಸಾಂವಿಧಾನಿಕ ಕರಡು ಸಮಿತಿಯ ಭಾಗವಾಗಿದ್ದರು ಮತ್ತು 2009ರಲ್ಲಿ ಸುಪ್ರೀಂ ಕೋರ್ಟ್‌ನ ತಾತ್ಕಾಲಿಕ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಮುಂದಿನ ವರ್ಷ ಖಾಯಂ ಆದರು. 2016ರಲ್ಲಿ ಅವರು ಔಪಚಾರಿಕವಾಗಿ ಉನ್ನತ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.