SSLC-2nd PUC Exam: ರಾಜ್ಯದಲ್ಲಿ ಇನ್ನುಮುಂದೆ ಎಸ್‌ಎಸ್ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಶೇ. 33 ಅಂಕ ಬಂದ್ರೂ ಪಾಸ್; ಅಧಿಸೂಚನೆ ಪ್ರಕಟ
Passing Marks in SSLC-2nd PUC Exam: ರಾಜ್ಯದಲ್ಲಿ ಇನ್ನುಮುಂದೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯಲ್ಲೇ ಎಸ್‌ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದು, ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಹಾಗೂ ಆಂತರಿಕ ಅಂಕಗಳೂ ಸೇರಿ 100ಕ್ಕೆ ಕನಿಷ್ಠ ಶೇ. 33 ಅಂಕ ಪಡೆದರೂ ಉತ್ತೀರ್ಣರಾಗಲಿದ್ದಾರೆ.


ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳು ಇನ್ನುಮುಂದೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯಲ್ಲೇ ಎಸ್‌ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ (SSLC-2nd PUC Exam) ಬರೆಯಲಿದ್ದು, ಲಿಖಿತ ಪರೀಕ್ಷೆ ಹಾಗೂ ಆಂತರಿಕ ಅಂಕಗಳೂ ಸೇರಿ 100ಕ್ಕೆ ಕನಿಷ್ಠ ಶೇ. 33 ಅಂಕ ಪಡೆದರೂ ಉತ್ತೀರ್ಣರಾಗಲಿದ್ದಾರೆ. ಇದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಗುರುವಾರ ಅಧಿಸೂಚನೆ ಹೊರಡಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಾಯ್ದೆ, 1966 (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 16) ಸೆಕ್ಷನ್ 26 ಮತ್ತು ಸೆಕ್ಷನ್ 27 ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು, ಕರ್ನಾಟಕ ಸರ್ಕಾರದ ಅನುಮೋದನೆ ಮೇರೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮೊದಲ ನಿಯಮಾವಳಿಗಳು, 1966ಗೆ ತಿದ್ದುಪಡಿ ಮಾಡಿದೆ.
ಅದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿ ಕರ್ನಾಟಕ ಸರ್ಕಾರವು 1983 ರ ಕರ್ನಾಟಕ ಶಿಕ್ಷಣ ಕಾಯ್ದೆಯ (1995ರ ಕರ್ನಾಟಕ ಕಾಯ್ದೆ- 1) ಸೆಕ್ಷನ್ 7ರ ಉಪವಿಭಾಗ (1) ರ ಷರತ್ತು (i) ಮತ್ತು ಸೆಕ್ಷನ್ 145 ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರಡು ತಿದ್ದುಪಡಿ ನಿಯಮಗಳನ್ನು ಪ್ರಕಟಿಸಲಾಗಿದೆ. ಈ ನಿಯಮಗಳು 2025-26ನೇ ಶೈಕ್ಷಣಿಕ ವರ್ಷದಿಂದ ಮತ್ತು ನಂತರದ ಶೈಕ್ಷಣಿಕ ವರ್ಷದಿಂದ ಮಂಡಳಿಯ ಪರೀಕ್ಷೆಗೆ ಹಾಜರಾಗುವ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತವೆ.
ಇದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳ ಅವಧಿ ಮುಗಿದ ನಂತರ ಕರಡು ನಿಯಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಈ ಎರಡು ಕರಡಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯಿಂದ ಮಂಡಳಿಗೆ ಸ್ವೀಕೃತವಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ಮಂಡಳಿಯು ಪರಿಗಣಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸಿಂಗ್ ಮಾರ್ಕ್ಸ್
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆ ಎರಡೂ ಸೇರಿ ಒಟ್ಟಾರೆ ಸರಾಸರಿ 33% ಅಂಕಗಳನ್ನು ಪಡೆದು, ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಿದಲ್ಲಿ ಮತ್ತು ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ 30% ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ನಿಯಮಗಳು
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಭ್ಯರ್ಥಿಯು ಪ್ರತಿ ವಿಷಯದಲ್ಲಿ ಲಿಖಿತ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಅಥವಾ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಒಳಗೊಂಡಂತೆ ಪ್ರತಿ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ 30% ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ 33% ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಘೋಷಿಸಲಾಗುತ್ತದೆ.
ಯಾವುದೇ ಪ್ರಾಯೋಗಿಕ ಪರೀಕ್ಷೆ ಅಥವಾ ಆಂತರಿಕ ಮೌಲ್ಯಮಾಪನವಿಲ್ಲದ ವಿಷಯಗಳಲ್ಲಿ, 80 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಘೋಷಿಸಲು, ಅಭ್ಯರ್ಥಿಯು ಅಂತಹ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 24 ಅಂಕಗಳನ್ನು ಪಡೆಯಬೇಕಾಗುತ್ತದೆ.
ಆದರೆ, ಈ ಕನಿಷ್ಠ ಅಂಕಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ಮತ್ತು ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ಷರತ್ತುಗಳಿಗೆ ಒಳಪಟ್ಟು ಸಡಿಲಿಸಬಹುದು ಅಥವಾ ಮಾರ್ಪಡಿಸಬಹುದು.
ಪ್ರಾಯೋಗಿಕ ಪರೀಕ್ಷೆ ಅಥವಾ ಆಂತರಿಕ ಮೌಲ್ಯಮಾಪನ ಇರುವ ವಿಷಯಗಳಲ್ಲಿ 70 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಅಭ್ಯರ್ಥಿಯು ಅಂತಹ ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 21 ಅಂಕಗಳನ್ನು ಪಡೆಯಬೇಕು
ಆದರೆ, ಈ ಕನಿಷ್ಠ ಅಂಕಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ಮತ್ತು ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ಷರತ್ತುಗಳಿಗೆ ಒಳಪಟ್ಟು ಸಡಿಲಿಸಬಹುದು ಅಥವಾ ಮಾರ್ಪಡಿಸಬಹುದು.
ಪ್ರಾಯೋಗಿಕ ಪರೀಕ್ಷೆಗಳಿಗೆ ಸಾಮಾನ್ಯ ಷರತ್ತುಗಳು:
ದ್ವಿತೀಯ ಪಿಯುಸಿಯಲ್ಲಿ ಪ್ರಾಯೋಗಿಕ ಅಂಶವನ್ನು ಹೊಂದಿರುವ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಷರತ್ತುಗಳ ಪ್ರಕಾರ, ಪ್ರಾಯೋಗಿಕ ಪರೀಕ್ಷೆಗೆ ಅಸ್ತಿತ್ವದಲ್ಲಿರುವ 30 ಅಂಕಗಳ ಹಂಚಿಕೆಯಿಂದ ವಿಚಲನಗೊಂಡು, ಪ್ರಾಯೋಗಿಕ ಪರೀಕ್ಷೆಯನ್ನು ಗರಿಷ್ಠ 20 ಅಂಕಗಳಿಗೆ ನಡೆಸಲಾಗುವುದು ಮತ್ತು ಉಳಿದ 10 ಅಂಕಗಳನ್ನು ಈ ಕೆಳಗಿನ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗೆ ನೀಡಲಾಗುತ್ತದೆ, ಅವುಗಳೆಂದರೆ
(ಎ) ಪ್ರತಿ ವಿಷಯದಲ್ಲೂ (ತಾತ್ವಿಕ ಮತ್ತು ಪ್ರಾಯೋಗಿಕ ತರಗತಿಗಳು ಸೇರಿದಂತೆ) ಕನಿಷ್ಠ 75% ಹಾಜರಾತಿಯನ್ನು ಹೊಂದಿದಲ್ಲಿ, ಅಂತಹ ಅಭ್ಯರ್ಥಿಯು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಅರ್ಹರಾಗುತ್ತಾರೆ.
(ಬಿ) ಅಭ್ಯರ್ಥಿಯು ಪ್ರತಿಯೊಂದು ಪ್ರಾಯೋಗಿಕ ವಿಷಯಕ್ಕೆ ನಿರ್ದಿಷ್ಟಪಡಿಸಿದ ಕನಿಷ್ಠ ಸಂಖ್ಯೆಯ ಪ್ರಾಯೋಗಗಳನ್ನು ನಿರ್ವಹಿಸಿರಬೇಕು.
(ಸಿ) ಅಭ್ಯರ್ಥಿಯು ಪ್ರಾಯೋಗಿಕ ದಾಖಲೆ ಪುಸ್ತಕಗಳಲ್ಲಿ ನಿರ್ವಹಿಸಿದ ಪ್ರಯೋಗಗಳನ್ನು ದಾಖಲಿಸಿ ಅದನ್ನು ಸಂಬಂಧಿಸಿದ ವಿಷಯದ ಉಪನ್ಯಾಸಕರಿಂದ ದೃಢೀಕರಿಸಿ ಸಲ್ಲಿಸಿರಬೇಕು; ಮತ್ತು
(ಡಿ) ಅಭ್ಯರ್ಥಿಯು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿರಬೇಕು.

ಈ ಸುದ್ದಿಯನ್ನೂ ಓದಿ | SSLC Exam: ರಾಜ್ಯದಲ್ಲಿ ಸಿಬಿಎಸ್‌ಇ ಮಾದರಿಯಲ್ಲೇ ಎಸ್‌ಎಸ್ಎಲ್‌ಸಿ ಪರೀಕ್ಷೆ; ಶೇ.33 ಅಂಕ ಪಡೆದರೂ ಪಾಸ್