ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೃಷಿ ತ್ಯಾಜ್ಯದಿಂದ ಗ್ರೀನ್‌ ಹೈಡ್ರೋಜನ್‌ ಉತ್ಪಾದನೆಯ ಯಶಸ್ವಿ ಸಂಶೋಧನೆ; ಬೆಂಗಳೂರು ಐಐಎಸ್‌ಸಿ ವಿಶಿಷ್ಠ ಸಾಧನೆ!

Pralhad Joshi: ಸಾಮಾನ್ಯವಾಗಿ ಕೃಷಿ ತ್ಯಾಜ್ಯಗಳನ್ನು ಸುಟ್ಟು ಹಾಕಲಾಗುತ್ತಿದೆ. ಇದನ್ನು ಹಾಗೇ ಬಿಟ್ಟರೂ ಇದು ವಾತಾವರಣಕ್ಕೆ ಮೀಥೇನ್ ಅನ್ನು ಹೊರಸೂಸುತ್ತವೆ. ಆದರೆ ನಮ್ಮ ಭಾರತೀಯ ವಿಜ್ಞಾನ ಸಂಸ್ಥೆ, ಕೃಷಿ ತ್ಯಾಜ್ಯ ಬಳಸಿಕೊಂಡು ಪರಿಸರ ಸ್ನೇಹಿ ಇಂಧನ ತಯಾರಿಸಲು ಸಾಧ್ಯವೆಂಬ ನಿಜವಾದ ಆತ್ಮನಿರ್ಭರ ಆವಿಷ್ಕಾರವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಐಐಎಸ್‌ಸಿಯಿಂದ ಗ್ರೀನ್‌ ಹೈಡ್ರೋಜನ್‌ ಉತ್ಪಾದಿಸುವ ನವೀನ ಆವಿಷ್ಕಾರ

Profile Siddalinga Swamy Jul 18, 2025 11:35 PM

ಬೆಂಗಳೂರು: ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (IISC) ಕೃಷಿ ತ್ಯಾಜ್ಯದಿಂದ ಗ್ರೀನ್‌ ಹೈಡ್ರೋಜನ್‌ ಉತ್ಪಾದನೆಯ ಯಶಸ್ವಿ ಸಂಶೋಧನೆ ನಡೆಸಿದ್ದು, ಕೇಂದ್ರ ಸರ್ಕಾರ ಇದಕ್ಕೆ ಉತ್ತೇಜನ ನೀಡಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು. ಶುಕ್ರವಾರ ಸಂಜೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಜೈವಿಕ ತ್ಯಾಜ್ಯದಿಂದ ಹಸಿರು ಜಲಜನಕ (Green Hydrogen) ಉತ್ಪಾದಿಸುವ ನವೀನ ಆವಿಷ್ಕಾರವನ್ನು ಖುದ್ದು ವೀಕ್ಷಿಸಿದ ಸಚಿವರು, IISCಯ ಸಂಶೋಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು.

Pralhad Joshi

ಹೊಲ-ಗದ್ದೆಗಳಲ್ಲಿ ಸುಟ್ಟು ಹಾಕುವ ಕೃಷಿ ತ್ಯಾಜ್ಯವನ್ನೇ ಬಳಸಿ IISCಯು ಪರಿಸರ ಸ್ನೇಹಿ ಶುದ್ಧ ಹಸಿರು ಇಂಧನ ಉತ್ಪಾದನೆ ಯಶಸ್ವಿ ಪ್ರಯೋಗ ನಡೆಸಿದೆ. ಸದ್ಯ ಪ್ರತಿ ಗಂಟೆಗೆ 5 ಕೆಜಿ ಪ್ರಮಾಣದಲ್ಲಿ ಶೇ.99ರಷ್ಟು ಪರಿಶುದ್ಧವಾದ ಹಸಿರು ಜಲಜನಕವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.

IISCಯಿಂದ ಆತ್ಮನಿರ್ಭರ ಆವಿಷ್ಕಾರ

ಸಾಮಾನ್ಯವಾಗಿ ಕೃಷಿ ತ್ಯಾಜ್ಯಗಳನ್ನು ಸುಟ್ಟು ಹಾಕಲಾಗುತ್ತಿದೆ. ಇದನ್ನು ಹಾಗೇ ಬಿಟ್ಟರೂ ಇದು ವಾತಾವರಣಕ್ಕೆ ಮೀಥೇನ್ ಅನ್ನು ಹೊರಸೂಸುತ್ತವೆ. ಆದರೆ ನಮ್ಮ ಭಾರತೀಯ ವಿಜ್ಞಾನ ಸಂಸ್ಥೆ ʼಕೃಷಿ ತ್ಯಾಜ್ಯ ಬಳಸಿಕೊಂಡು ಪರಿಸರ ಸ್ನೇಹಿ ಇಂಧನ ತಯಾರಿಸಲು ಸಾಧ್ಯʼ ವೆಂಬ "ನಿಜವಾದ ಆತ್ಮನಿರ್ಭರ ಆವಿಷ್ಕಾರ" ವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕೃಷಿ ತ್ಯಾಜ್ಯದಿಂದ ಗ್ರೀನ್‌ ಹೈಡ್ರೋಜನ್‌ ಉತ್ಪಾದಿಸುವ ಇದೊಂದು ಇಂಗಾಲ-ತಗ್ಗಿಸುವ ವಿಶಿಷ್ಠ ಸಂಶೋಧನೆಯಾಗಿದೆ. ಇಲ್ಲಿ ಉತ್ಪತ್ತಿಯಾಗುವ ಪ್ರತಿ ಕಿಲೋಗ್ರಾಂ ಜಲಜನಕವು ವಾತಾವರಣದಿಂದ ಒಂದು ಕಿಲೋಗ್ರಾಂಗಿಂತ ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕುತ್ತದೆ ಎಂದು ಹೇಳಿದರು.

ಭಾರತದ ಶುದ್ಧ ಇಂಧನ ಭವಿಷ್ಯವನ್ನು ರೂಪಿಸುವಲ್ಲಿ IISC ಪ್ರಮುಖ ಪಾತ್ರ ವಹಿಸಿದೆ. ನವೀನ ಸಂಶೋಧನೆ ಮೂಲಕ ಜಾಗತಿಕ ಗೌರವ ಮತ್ತು ರಾಷ್ಟ್ರೀಯ ಹೆಮ್ಮೆಗೆ ಪಾತ್ರವಾಗಿದೆ. IISC ನಿರ್ದೇಶಕ ಪ್ರೊ. ರಂಗರಾಜನ್, ಬೋಧಕ ವರ್ಗದ ಸದಸ್ಯರು ಮತ್ತು ಸಂಶೋಧಕರಿಗೆ ಸಚಿವರು ಇದೇ ವೇಳೆ ಧನ್ಯವಾದ ಅರ್ಪಿಸಿದರು.

IISC ಪ್ರೊಫೆಸರ್ ದಾಸಪ್ಪ ಮತ್ತವರ ತಂಡ ಅಭಿವೃದ್ಧಿಪಡಿಸಿದ ಅತ್ಯಂತ ಸುಧಾರಿತ ಜೈವಿಕ ತ್ಯಾಜ್ಯದಿಂದ ಹಸಿರು ಜಲಜನಕ ಉತ್ಪಾದನೆ ವ್ಯವಸ್ಥೆ ಬಗ್ಗೆ ಸಂಪೂರ್ಣ ಮಾಹಿತಿ ಸಹ ತಿಳಿದುಕೊಂಡ ಸಚಿವರು, ಇದು ಕೇವಲ ರಾಷ್ಟ್ರೀಯ ಸಾಧನೆಯಲ್ಲ; "ಜಾಗತಿಕ ಸಾಧನೆ" ಎಂದು ಬಣ್ಣಿಸಿದರು.

ಹಸಿರು ಹೈಡ್ರೋಜನ್‌ ಮಿಷನ್‌ಗೆ ₹19,744 ವೆಚ್ಚ

ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿಯಿಂದಾಗಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಸ್ಥಾಪಿಸಿ ₹19,744 ಕೋಟಿ ಬಂಡವಾಳ ಮೀಸಲಿರಿಸಿದ್ದು, ಇಂದು ಸಾರ್ಥಕತೆ ಕಾಣುತ್ತಿದೆ. ಆದರೆ, ಯಾವುದೇ ರಾಷ್ಟ್ರೀಯ ಯೋಜನೆ ಧನ ಸಹಾಯದಿಂದ ಮಾತ್ರವಲ್ಲ ಇಚ್ಛಾಶಕ್ತಿಯಿಂದ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

5 ದಶಲಕ್ಷ ಮೆ.ಟನ್ ಹಸಿರು ಜಲಜನಕ

ಭಾರತವೀಗ ವಾರ್ಷಿಕ 5 ದಶಲಕ್ಷ ಮೆಟ್ರಿಕ್ ಟನ್ ಹಸಿರು ಜಲಜನಕ ಉತ್ಪಾದನೆ ಹಾಗೂ 125 ಗಿಗಾವ್ಯಾಟ್ ಹೆಚ್ಚುವರಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಿದೆ. ಒಟ್ಟು ಹೂಡಿಕೆಯಲ್ಲಿ ₹8 ಲಕ್ಷ ಕೋಟಿ ವ್ಯಯಿಸುತ್ತಿದ್ದು, 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿದೆ. ಅಲ್ಲದೇ, ಪ್ರತಿ ವರ್ಷ 50 ದಶಲಕ್ಷ ಮೆಟ್ರಿಕ್‌ ಟನ್‌ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಗುರಿ ಸಾಧಿಸುತ್ತಿದೆ ಎಂದರು.

ವಾರ್ಷಿಕ 3,000 ಮೆಗಾವ್ಯಾಟ್ ಎಲೆಕ್ಟ್ರೋಲೈಸರ್ ಉತ್ಪಾದನಾ ಸಾಮರ್ಥ್ಯಕ್ಕೆ ಈಗಾಗಲೇ ಪ್ರೋತ್ಸಾಹಧನ ನೀಡಲಾಗಿದೆ ಮತ್ತು ವರ್ಷಕ್ಕೆ 8.6 ಲಕ್ಷ ಟನ್ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯವನ್ನು ಹಂಚಿಕೆ ಮಾಡಲಾಗಿದೆ ಎಂದ ಸಚಿವರು, ಪೈಲಟ್ ನಿಯೋಜನೆ, ಗಾತ್ರ ಹೆಚ್ಚಳಕ್ಕಾಗಿ ಧನಸಹಾಯ ಮತ್ತು ಕೈಗಾರಿಕಾ ಪಾಲುದಾರಿಕೆಗೆ ಸಹಯೋಗದ ಭರವಸೆ ನೀಡಿದರು.

ಶೈಕ್ಷಣಿಕ ಮತ್ತು ವೈಜ್ಞಾನಿಕ ಸಮುದಾಯದ ಮುಂದೆ ಜಲಜನಕ ಸಂಗ್ರಹಣೆ, ಎಲೆಕ್ಟ್ರೋಲೈಸರ್‌ ವ್ಯವಸ್ಥೆಗಳ ವೆಚ್ಚ ಕಡಿತ, ಜಲಜನಕ ಚಾಲಿತ ಉಪಕರಣಗಳ ವೆಚ್ಚ ಮತ್ತು ಹಸಿರು ಜಲಜನಕ ಬೆಲೆ ಕಡಿಮೆ ಮಾಡುವ ನಾಲ್ಕು ಪ್ರಮುಖ ರಾಷ್ಟ್ರೀಯ ಸವಾಲುಗಳಿವೆ. IISC ಈ ಸವಾಲುಗಳೊಂದಿಗೆ ಹಸಿರು ಜಲಜನಕ ಸಂಶೋಧನೆಯಲ್ಲಿ ಭಾರತವನ್ನು ಮುನ್ನಡೆಸಬೇಕು ಮತ್ತು ಸುಸ್ಥಿರ ಹೈಡ್ರೋಜನ್ ತಂತ್ರಜ್ಞಾನದಲ್ಲಿ ಭಾರತವನ್ನು ವಿಶ್ವದ ನಾಯಕನನ್ನಾಗಿ ಮಾಡಲಿ ಎಂದು ಸಲಹೆ ನೀಡಿದರು.

ಜಲಜನಕ ಸಂಗ್ರಹ ಕಷ್ಟಕರವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತ ಮತ್ತು ಕೈಗೆಟುಕುವ ಜಲಜನಕ ಶೇಖರಣಾ ಪರಿಹಾರಗಳ ಬಗ್ಗೆ ಗಂಭೀರ ಹಾಗೂ ವಿಶೇಷ ಸಂಶೋಧನಾ ಕಾರ್ಯಕ್ರಮ ನಡೆಸುವುದು ಮುಖ್ಯವಾಗಿದೆ. ಎಲೆಕ್ಟ್ರೊಲೈಸರ್‌ ವ್ಯವಸ್ಥೆಗಳ ವೆಚ್ಚ ಕಡಿಮೆ ಮಾಡುವತ್ತಲೂ ಗಮನ ಹರಿಸಬೇಕಿದೆ ಎಂದು ಸಚಿವರು, ಸಂಶೋಧಕರ ಗಮನ ಸೆಳೆದರು.

9 ಹಸಿರು ಇಂಧನ ಮರುಪೂರಣ ಕೇಂದ್ರ

ಜಲಜನಕ ಚಾಲಿತ ವಾಹನಗಳ ವೆಚ್ಚ ಕಡಿಮೆ ಮಾಡುವ ಮತ್ತು ಕೈಗೆಟುಕುವ ಜಲಜನಕ ಇಂಧನ ಮರುಪೂರಣ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಹೆಚ್ಚಿನ ಕಾರ್ಯಕ್ಷಮತೆ, ಕಡಿಮೆ ವೆಚ್ಚದ ಇಂಧನ ಕೋಶ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ IISC ಮಹತ್ವದ ಪಾತ್ರ ಹೊಂದಿದೆ. 37 ಹೈಡ್ರೋಜನ್-ಇಂಧನ ವಾಹನಗಳಿಗೆ 5 ಪ್ರಾಯೋಗಿಕ ಯೋಜನೆಗಳು ಮತ್ತು 9 ಇಂಧನ ಮರುಪೂರಣ ಕೇಂದ್ರಗಳನ್ನು ಈಗಾಗಲೇ ಎನ್‌ಜಿಎಚ್ಎಂ ಅಡಿಯಲ್ಲಿ ನೀಡಲಾಗಿದೆ ಎಂದು ಹೇಳಿದರು.‌

ಈ ಸುದ್ದಿಯನ್ನೂ ಓದಿ | IBPS Recruitment 2025: 6,215 ಹುದ್ದೆಗಳ ಭರ್ತಿಗೆ ಮುಂದಾದ ಐಬಿಪಿಎಸ್‌; ಅಪ್ಲೈ ಮಾಡುವ ವಿಧಾನ ಇಲ್ಲಿದೆ

ಹಸಿರು ಜಲಜನಕದ ಪ್ರಸ್ತುತ ವೆಚ್ಚವನ್ನು ಪ್ರತಿ ಕಿಲೋಗ್ರಾಂಗೆ ₹300-400 ರಿಂದ ₹100ಕ್ಕೆ ಇಳಿಸುವುದು ತುರ್ತು ಅಗತ್ಯವಾಗಿದೆ. 2030ರ ವೇಳೆಗೆ ಪ್ರತಿ ಕೆ.ಜಿ.ಗೆ 1 ಡಾಲರ್‌ಗೆ ತರುವ ಅಮಿತಾಭ್ ಕಾಂತ್ ಅವರ ಗುರಿಯನ್ನು ಉಲ್ಲೇಖಿಸಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಅವರು, ಇದನ್ನು ಗಮನಾರ್ಹ ರೀತಿಯಲ್ಲಿ ಪರಿಗಣಿಸಬೇಕಿದೆ ಎಂದು ಹೇಳಿದರು.