ಕುಟುಂಬದ ವಿರುದ್ಧ ವಿವಾಹವಾಗಿ ಮಗುವನ್ನು ನಿಭಾಯಿಸುವುದು ಇಷ್ಟೊಂದು ಕಷ್ಟನಾ? ಖರ್ಚು-ವೆಚ್ಚದ ಬಗ್ಗೆ ಮಾಹಿತಿ ಹಂಚಿಕೊಂಡ ದಂಪತಿ
ಚೆನ್ನೈಯ ದಂಪತಿ ಕುಟುಂಬದ ವಿರುದ್ಧ ವಿವಾಹವಾಗಿದ್ದು, ಮಗುವನ್ನು ನೋಡಿಕೊಳ್ಳಲು ತಿಂಗಳಿಗಾಗುವ ವೆಚ್ಚದ ಬಗ್ಗೆ ವಿವರಿಸಿದ್ದಾರೆ. ತಮ್ಮ 8.5 ತಿಂಗಳ ಮಗುವನ್ನು ನೋಡಿಕೊಳ್ಳಲು ಮಾಸಿಕ ಖರ್ಚನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ತಿಳಿಸಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ.

ಚೆನ್ನೈ: ಹೊಟ್ಟೆಪಾಡಿಗಾಗಿ ಅದೆಷ್ಟೋ ಜನ ಹಳ್ಳಿಗಳನ್ನು ಬಿಟ್ಟು ನಗರಗಳತ್ತ ವಲಸೆ ಬರುವುದು ಸಾಮಾನ್ಯ. ಆದರೀಗ ಮೆಟ್ರೋ ನಗರಗಳು ಅತ್ಯಂತ ದುಬಾರಿಯಾಗಿವೆ. ಮದುವೆಯಾಗಿ ಮಕ್ಕಳಾದ ನಂತರ ಮನೆ ಖರ್ಚು ನಿಭಾಯಿಸುವುದೇ ಬಹಳ ಕಷ್ಟ. ಅದಕ್ಕೆ ಉದಾಹರಣೆಯಂತಿದೆ ಈ ಘಟನೆ. ಚೆನ್ನೈಯ ದಂಪತಿ ಕುಟುಂಬದ ವಿರುದ್ಧವಾಗಿ ವಿವಾಹವಾಗಿದ್ದು, ಮಗುವನ್ನು ನೋಡಿಕೊಳ್ಳಲು ತಿಂಗಳಿಗಾಗುವ ವೆಚ್ಚದ ಬಗ್ಗೆ ವಿವರಿಸಿದ್ದಾರೆ.
ಮಗುವನ್ನು ಬೆಳೆಸುವಾಗ ಹಣಕಾಸು ನಿರ್ವಹಿಸುವುದು ನಂಬಲಾಗದಷ್ಟು ಸವಾಲಿನ ಕೆಲಸ. ವಿಶೇಷವಾಗಿ ಸೀಮಿತ ಆದಾಯ ಮತ್ತು ಕುಟುಂಬದವರ ಬೆಂಬಲವಿಲ್ಲದೆ ಇದ್ದಾಗ ಈ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ. ಚೆನ್ನೈ ಮೂಲದ ದಂಪತಿ ತಮ್ಮ 8.5 ತಿಂಗಳ ಮಗುವನ್ನು ನೋಡಿಕೊಳ್ಳಲು ಮಾಸಿಕ ಖರ್ಚನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ತಿಳಿಸಿದ್ದಾರೆ.
ತೆರಿಗೆ ಕಡಿತವಾಗಿ ತಿಂಗಳಿಗೆ ಬರುವ 78,000 ರೂ. ಒಟ್ಟು ಆದಾಯದಲ್ಲಿ ತಮ್ಮ ಮಗು ಹಾಗೂ ಮನೆಯ ಖರ್ಚುಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗಳಿಗಾಗಿ ಪ್ರತಿಷ್ಠಿತ ಡೇಕೇರ್‌ಗೆ ಹತ್ತಿರದಲ್ಲಿರುವ ಸುರಕ್ಷಿತ ಮನೆಯನ್ನು ಬಾಡಿಗೆಗೆ ಪಡೆಯುವ ಮೂಲಕ ಉತ್ತಮ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.
ಅವರು ಪ್ರತಿ ತಿಂಗಳು 46,500 ರೂ. ಬಾಡಿಗೆ ಮತ್ತು ಡೇಕೇರ್‌ಗೆ ಮಾತ್ರ ಖರ್ಚು ಮಾಡುತ್ತಾರೆ. ದುಬಾರಿ ವೆಚ್ಚದ ಹೊರತಾಗಿಯೂ, ದಂಪತಿ ತಮ್ಮ ಮಗುವಿನ ಸುರಕ್ಷತೆ ಮತ್ತು ಯೋಗಕ್ಷೇಮದ ವಿಷಯದಲ್ಲಿ ಕೆಲವು ಅಗತ್ಯ ವಸ್ತುಗಳನ್ನು ಕೊಳ್ಳಲೇಬೇಕಿದೆ. ರೆಡ್ಡಿಟ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ ದಂಪತಿ, ʼʼನಾವು ಚೆನ್ನೈಯಲ್ಲಿ ವಾಸಿಸುತ್ತಿದ್ದೇವೆ. ತೆರಿಗೆ ಕಡಿತವಾಗಿ ಒಟ್ಟು ಮಾಸಿಕ ಆದಾಯ 78,000 ರೂ. ನಮಗೆ 8.5 ತಿಂಗಳ ಮಗುವಿದೆ. ಮಗುವಿಗಾಗಿ ಉತ್ತಮ ಡೇಕೇರ್ ಗೊತ್ತು ಮಾಡಿದ್ದೇವೆ ಮತ್ತು ಅದರ ಹತ್ತಿರ ಸುರಕ್ಷಿತ ಬಾಡಿಗೆ ಮನೆಯನ್ನು ಆರಿಸಿಕೊಂಡಿದ್ದೇವೆ. ನಮ್ಮ ಮಗುವಿನ ಸುರಕ್ಷತೆ, ಶುಚಿತ್ವ ಮತ್ತು ಸಾಮೀಪ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆʼʼ ಎಂದು ಹೇಳಿದ್ದಾರೆ.
ತಮ್ಮ ಮಾಸಿಕ ಆದಾಯದ ಬಹುಪಾಲು ಬಾಡಿಗೆ ಮತ್ತು ಡೇಕೇರ್‌ಗೆ ಖರ್ಚು ಮಾಡಿದ ನಂತರ, ಅವರು ದಿನಸಿ, ಹಣ್ಣು-ತರಕಾರಿಗಳು ಮತ್ತು ಹಾಲು ಸೇರಿದಂತೆ ಆಹಾರಕ್ಕಾಗಿ ಸುಮಾರು 10,000 ರೂ.ಗಳನ್ನು ಖರ್ಚು ಮಾಡುತ್ತಾರೆ. ಅವರು ಪ್ರಯಾಣಕ್ಕಾಗಿ 8,500 ರೂ. ಖರ್ಚು ಮಾಡುತ್ತಾರೆ. ಇದರಲ್ಲಿ ಆಟೋ ಸವಾರಿ, ಮೆಟ್ರೋ ಮತ್ತು ಪೆಟ್ರೋಲ್ ಸೇರಿವೆ. ಬೇಬಿ ಡೈಪರ್‌ಗಳಿಗೆ ಅವರಿಗೆ ಇನ್ನೂ 3,000 ರೂ. ವೆಚ್ಚವಾಗುತ್ತದೆ. ವಿದ್ಯುತ್ ಮತ್ತು ಗ್ಯಾಸ್‌ಗಾಗ, ಅವರು ತಲಾ 1,000 ರೂ. ಪಾವತಿಸುತ್ತಾರೆ. ಈ ಎಲ್ಲ ನಿಯಮಿತ ವೆಚ್ಚಗಳು ಪ್ರತಿ ತಿಂಗಳು 70,000 ರೂ. ವೆಚ್ಚವಾಗುತ್ತವೆ. ಇನ್ನು ಅವರಿಗೆ ಕೊನೆಯಲ್ಲಿ ಕೇವಲ 8,000 ರೂ. ಮಾತ್ರ ಉಳಿಯುತ್ತದೆ. ಅದನ್ನು ಅವರು ಉಳಿತಾಯ ಅಥವಾ ಯಾವುದೇ ತುರ್ತು ಪರಿಸ್ಥಿತಿಗಾಗಿ ಎತ್ತಿ ಇಡುತ್ತಾರಂತೆ.
ತಮ್ಮ ಕುಟುಂಬಗಳ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣ ಅವರಿಂದ ಯಾವುದೇ ಸಹಾಯ ಸಿಗುತ್ತಿಲ್ಲ ಎಂದು ದಂಪತಿ ತಿಳಿಸಿದ್ದಾರೆ. ಈಗ ಪತ್ನಿ ಮನೆಯಿಂದ ಮಾಡಬಹುದಾದ ಅರೆಕಾಲಿಕ ಅಥವಾ ಆನ್‌ಲೈನ್ ಕೆಲಸವನ್ನು ಹುಡುಕುತ್ತಿದ್ದಾಳೆ. ಅವಳಿಗೆ ಪ್ರತಿದಿನ ಒಂದು ಗಂಟೆ ಮಾತ್ರ ಸಮಯವಿದೆ. ಆದ್ದರಿಂದ ಆ ಸಮಯದ ಚೌಕಟ್ಟಿಗೆ ಸರಿಹೊಂದುವ ಕೆಲಸವನ್ನು ಅವಳು ಹುಡುಕುತ್ತಿದ್ದಾಳೆ ಎಂದು ವಿವರಿಸಿದ್ದಾರೆ.
ಅಂದಹಾಗೆ, ಬೆಂಗಳೂರಿನ ಸ್ಟಾರ್ಟ್‌ಅಪ್ ಸಂಸ್ಥಾಪಕಿ ಮೀನಲ್ ಗೋಯೆಲ್, ಭಾರತೀಯ ನಗರಗಳಲ್ಲಿ ಮಗುವನ್ನು ಬೆಳೆಸುವುದು ಎಷ್ಟು ದುಬಾರಿಯಾಗಿದೆ ಎಂಬುದರ ಕುರಿತು ಈ ಹಿಂದೆ ಹಂಚಿಕೊಂಡಿದ್ದರು. ಇಂದಿನ ಕಾಲದಲ್ಲಿ ಮಗುವನ್ನು ಬೆಳೆಸುವ ಒಟ್ಟು ವೆಚ್ಚವು 45 ಲಕ್ಷ ರೂ.ಗಳವರೆಗೆ ಹೆಚ್ಚಾಗಬಹುದು ಎಂದು ಅವರು ಹೇಳಿದ್ದರು. ಅನೇಕ ಪೋಷಕರು ಹೆಚ್ಚುವರಿ ವೆಚ್ಚಗಳನ್ನು ನಿಭಾಯಿಸಲು ಕಷ್ಟಪಡುತ್ತಿದ್ದಾರೆ ಎಂದು ಮೀನಲ್ ವಿವರಿಸಿದ್ದರು. ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ಶಾಲಾ ಶುಲ್ಕದಿಂದ ಹಿಡಿದು ಮೂಲಭೂತ, ದೈನಂದಿನ ಅಗತ್ಯಗಳವರೆಗೆ ಎಲ್ಲವೂ ಮೊದಲಿಗಿಂತ ಹೆಚ್ಚು ಖರ್ಚಾಗುತ್ತಿದೆ ಎಂದು ತಿಳಿಸಿದ್ದರು.