ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಈ ಆಹಾರಗಳನ್ನು ನಿತ್ಯ ಸೇವಿಸಬಾರದು ಗೊತ್ತೇ ?

ರಕ್ತ ಪರೀಕ್ಷೆಗಳು ತೀವ್ರವಾದ ಜೀರ್ಣದ ತೊಂದರೆ, ಎಲೆಕ್ಟ್ರೋಲೈಟ್ ಅಸಮತೋಲನ ಮತ್ತು ಮೂತ್ರ ಪಿಂಡದ ಒತ್ತಡದ ಆರಂಭಿಕ ಚಿಹ್ನೆಗಳನ್ನು ಬಹಿರಂಗಪಡಿಸಿದವು. ಅವರ ನಿತ್ಯ ಆಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದರೂ ಫೈಬರ್ ಸಮತೋಲನ, ಅಗತ್ಯವಾದ ಒಳ್ಳೆಯ ಜಿಡ್ಡುಗಳು, ಸೂಕ್ಷ್ಮ ಪೋಷಕಾಂಶಗಳು, ಒಳ್ಳೆಯ ಮಸಾಲೆಗಳು ಮತ್ತು ನೀರಿನಂಶದ ಕೊರತೆಯಿರುವ ಅವರ ಆಹಾರವು ಅವರ ಮೇಲೆ ಕೆಟ್ಟಪರಿಣಾಮ ಬೀರಿತು.

ಈ ಆಹಾರಗಳನ್ನು ನಿತ್ಯ ಸೇವಿಸಬಾರದು ಗೊತ್ತೇ ?

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನಶ್ರೀ

32 ವರ್ಷದ ರವಿ ಸಾಫ್ಟ್‌ ವೇರ್ ಎಂಜಿನಿಯರ್ ಆಗಿದ್ದು, ಅವರಿಗೆ ಹೊಸದಾಗಿ ಫಿಟ್ನೆಸ್ ಗೀಳು ಹಿಡಿದಿತ್ತು. ಸ್ನಾಯುಗಳ ಬೆಳವಣಿಗೆ ಮತ್ತು ‘ಕ್ಲೀನ್ ಬಲ್ಕಿಂಗ್’ ಬಗ್ಗೆ ಹಲವಾರು ಯುಟ್ಯೂಬ್ ವಿಡಿಯೋಗಳನ್ನು ನೋಡಿದ ನಂತರ, ಅವರು ಕಟ್ಟುನಿಟ್ಟಾದ, ಹೆಚ್ಚಿನ ಪ್ರೋಟೀನ್ ಅಂಶವಿದ್ದ ಆಹಾರವನ್ನು ಅಳವಡಿಸಿಕೊಂಡರು. ಅವರ ದೈನಂದಿನ ಆಹಾರಕ್ರಮ ಈ ರೀತಿಯ ಬದಲಾವಣೆ ಕಂಡಿತು- ಬೆಳಗ್ಗೆ ಒಣಗಿದ ಮಾಂಸದ ಜರ್ಕಿ (ಹಾಳಾಗುವುದನ್ನು ತಡೆಗಟ್ಟಲು ನಿರ್ಜಲೀಕರಣ ಗೊಂಡ ಒಣಗಿದ ಮಾಂಸ), ಮಧ್ಯಾಹ್ನದ ಊಟಕ್ಕೆ ಒಂದು ಬಟ್ಟಲು ಮೊಳಕೆ ಕಾಳುಗಳು ಮತ್ತು ಮೊಸರು, ರಾತ್ರಿಯ ಊಟದ ಜತೆಗೆ ಪನೀರ್ ಕ್ಯೂಬ್ಸ್. ಎಣ್ಣೆ ಇಲ್ಲ, ಮಸಾಲೆಗಳಿಲ್ಲ, ವೈವಿಧ್ಯವಿಲ್ಲ. ಈ ಆಹಾರವೇ ಸ್ನಾಯುಗಳನ್ನು ನಿರ್ಮಿಸುವ ಇಂಧನ ಎಂದು ನಂಬಿದ್ದರು.

ವಾರಗಳವರೆಗೆ, ಅವರಿಗೆ ಈ ಆಹಾರ ಒಳ್ಳೆಯ ಫಲವನ್ನೇ ನೀಡಿತು- ಶಕ್ತಿಯುತ, ದೃಢ, ಹಗುರ ಮತ್ತು ಬಲಶಾಲಿಯಾದ ಶರೀರ. ಆದರೆ ನಿಧಾನವಾಗಿ, ಅವರ ದೇಹವು ಸಂಕಷ್ಟದ ಸಂಕೇತಗಳನ್ನು ಕಳುಹಿಸಲು ಪ್ರಾರಂಭಿಸಿತು. ಮೊದಲು ಆಯಾಸ ಕಾಣಿಸಿಕೊಂಡಿತು. ನಂತರ ಹೊಟ್ಟೆಯುಬ್ಬರ.

ನಂತರ ನಿರಂತರ ವಾಕರಿಕೆ. ಜತೆಗೆ ನಿದ್ರಾಹೀನತೆಯೂ ಪ್ರಾರಂಭವಾಯಿತು. ಅವರ ಸ್ನಾಯುಗಳು ಸದಾ, ವ್ಯಾಯಾಮ ಮಾಡದಿದ್ದಾಗಲೂ ನೋವಿನಿಂದ ಕೂಡಿದ್ದವು. ಇವೆ ಹೆಚ್ಚಾಗುತ್ತಿದ್ದರೂ ಅವರು ಅದು ‘ಡಿಟಾಕ್ಸ್’ನ ಭಾಗವೆಂದು ನಂಬಿ ಮುಂದುವರಿಸಿದರು. ರವಿ ಒಂದು ದಿನ ಅಚಾನ ಕ್ಕಾಗಿ ಕೆಲಸದಲ್ಲಿ ಕುಸಿದು ಬಿದ್ದಾಗ, ಸಹೋದ್ಯೋಗಿಗಳು ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ರಕ್ತ ಪರೀಕ್ಷೆಗಳು ತೀವ್ರವಾದ ಜೀರ್ಣದ ತೊಂದರೆ, ಎಲೆಕ್ಟ್ರೋಲೈಟ್ ಅಸಮತೋಲನ ಮತ್ತು ಮೂತ್ರಪಿಂಡದ ಒತ್ತಡದ ಆರಂಭಿಕ ಚಿಹ್ನೆಗಳನ್ನು ಬಹಿರಂಗಪಡಿಸಿದವು. ಅವರ ನಿತ್ಯ ಆಹಾರ ದಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದರೂ ಫೈಬರ್ ಸಮತೋಲನ, ಅಗತ್ಯವಾದ ಒಳ್ಳೆಯ ಜಿಡ್ಡುಗಳು, ಸೂಕ್ಷ್ಮ ಪೋಷಕಾಂಶಗಳು, ಒಳ್ಳೆಯ ಮಸಾಲೆಗಳು ಮತ್ತು ನೀರಿನಂಶದ ಕೊರತೆಯಿರುವ ಅವರ ಆಹಾರವು ಅವರ ಮೇಲೆ ಕೆಟ್ಟಪರಿಣಾಮ ಬೀರಿತು.

ಇದನ್ನೂ ಓದಿ: Dr Sadhanashree Column: ಸಂಸ್ಕಾರದಿಂದಲೇ ಸಾಧ್ಯ ಸ್ವಯಂ ಸಾಕ್ಷಾತ್ಕಾರ

ಒಣಗಿದ ಮಾಂಸ, ಮೊಳಕೆಕಾಳುಗಳು, ಮೊಸರು, ಪನೀರ್‌ಗಳು ಸರಿಯಾದ ಅಡುಗೆಯ ಸಂಸ್ಕಾರ ವಿಲ್ಲದೆ, ವೈವಿಧ್ಯವಿಲ್ಲದೆ, ಜೀರ್ಣಶಕ್ತಿ ಮತ್ತು ವಾತಾವರಣವನ್ನು ಗಮನಿಸದೆ, ಕೇವಲ ಗ್ರಾಮ್ ಲೆಕ್ಕವನ್ನೇ ಗುರಿಯಾಗಿಟ್ಟುಕೊಂಡು ಸೇವಿಸಿದ ಕಾರಣ ಆರೋಗ್ಯಕ್ಕೆ ಹಾನಿಕರವಾಯಿತು. ಈ ಕುರಿತಾಗಿ ಆಯುರ್ವೇದ ವೈದ್ಯರ ಸಲಹೆ ಪಡೆದಾಗ ಅವರು ಒಣಗಿದ ಮಾಂಸ, ಮೊಳಕೆಕಾಳು, ಮೊಸರು, ಪನೀರ್‌ಗಳನ್ನು ‘ಅಹಿತ’ ಆಹಾರವೆಂದು ಕರೆದು, ಶಾಸವು ಇವುಗಳನ್ನು ನಿತ್ಯಸೇವನೆಗೆ ನಿಷೇಽಸಿದೆ ಎಂದು ತಿಳಿಸಿದರು.

ವಾರಗಳ ನಂತರ, ರವಿ ಚೇತರಿಸಿಕೊಂಡಂತೆ, ಅವರು ಅಯುರ್ವೇದ ತಜ್ಞರನ್ನು ಮಾತ್ತೊಮ್ಮೆ ಭೇಟಿಯಾಗಿ ಅವರಿಂದ ನಿತ್ಯ ಸೇವಿಸಲು ಯೋಗ್ಯವಾದ ‘ಹಿತ ಆಹಾರ’ಗಳ ಬಗ್ಗೆ ಮತ್ತು ನಿತ್ಯೋಪ ಯೋಗಕ್ಕೆ ವರ್ಜಿಸಬೇಕಾದ ‘ಅಹಿತ ಆಹಾರ’ಗಳ ಬಗ್ಗೆ ತಿಳಿದುಕೊಂಡರು. ಅವರ ಸಲಹೆಯಂತೆ ತಮ್ಮ ಆಹಾರವನ್ನು ಸಮಗ್ರವಾಗಿ ಸಂಯೋಜಿಸಿಕೊಂಡು ಪುನಃ ಸ್ವಾಸ್ಥ್ಯದ ಕಡೆ ಹೆಜ್ಜೆಯಿಡಲು ಪ್ರಾರಂಭಿಸಿದರು. ಬನ್ನಿ ಇಂದಿನ ಲೇಖನದಲ್ಲಿ ನಿತ್ಯಸೇವನೆಗೆ ಯೋಗ್ಯವಾದ ‘ಹಿತ ಆಹಾರ’ ಮತ್ತು ನಿಷಿದ್ಧವಾದ ‘ಅಹಿತ ಆಹಾರ’ಗಳ ಬಗ್ಗೆ ನಾವೂ ತಿಳಿದುಕೊಳ್ಳೋಣ.

ನಮ್ಮ ಕ್ಲಿನಿಕ್‌ನಲ್ಲಿ ರೋಗಿಗಳ ಜತೆ ಆಗುವ ಸಂವಾದಗಳಿಂದ ನನಗೆ ಅರ್ಥವಾದ ಕೆಲವು ವಿಷಯ ಗಳನ್ನು ನಿಮ್ಮ ಜತೆ ಹಂಚಿಕೊಳ್ಳುತ್ತೇನೆ. ನಾವೆಲ್ಲರೂ ಒಂದೇ ಪ್ರಾಂತ್ಯದಲ್ಲಿ ಜೀವಿಸುವವರಾದರೂ ನಮ್ಮ ಆಹಾರಪದ್ಧತಿಗಳು ಬೇರೆ ಬೇರೆಯಾಗಿಯೇ ಇರುತ್ತವೆ. ಒಂದು ಕುಟುಂಬಕ್ಕೂ ಇನ್ನೊಂದು ಕುಟುಂಬಕ್ಕೂ ಎಷ್ಟೊಂದು ವ್ಯತ್ಯಾಸ. ಅಷ್ಟೇ ಅಲ್ಲದೆ ಒಂದೇ ಮನೆಯಲ್ಲಿ ವಾಸಿಸುವ ಇಬ್ಬರು ವ್ಯಕ್ತಿಗಳ ಆಹಾರ ಅಭಿರುಚಿಗಳೂ ಬೇರೆ ಬೇರೆಯದ್ದಾಗಿರುತ್ತವೆ.

ಕೆಲವರಿಗೆ ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್ಪು ಬಿಸಿ ಚಹಾ ಕುಡಿಯದೇ ಇದ್ದರೆ ಏನೋ ಕಸಿವಿಸಿ. ಮತ್ತೆ ಕೆಲವರಿಗೆ, ರಾತ್ರಿ ಊಟವಾದ ಮೇಲೆ ಒಂದು ಬಾಳೆಹಣ್ಣು ಬೇಕೇ ಬೇಕು. ಬಾಳೆ ಹಣ್ಣನ್ನು ಸೇವಿಸದೇ ಇದ್ದರೆ ಮಾರನೇ ದಿನದ ಮಲಪ್ರವೃತ್ತಿ ಸರಿಯಾಗಿ ನಡೆಯುವುದಿಲ್ಲ ಎಂಬ ಭಾವನೆ ಬಲವಾಗಿ ಬೇರೂರಿರುತ್ತದೆ.

ಇನ್ನು ಕೆಲವರಿಗೆ ಕೆಲವು ತರಕಾರಿಗಳು ಪ್ರತಿನಿತ್ಯವೂ ಬೇಕೇ ಬೇಕು. ನಮ್ಮ ಕ್ಲಿನಿಕ್ಕಿಗೆ ಬಂದ ಒಬ್ಬರಿಗೆ ಕ್ಯಾರೆಟ್ ಇಲ್ಲದೆ ತಮ್ಮ ದಿನ ಸಮಾಪ್ತಿಯಾಗುವುದಿಲ್ಲ. ತಿಂಡಿಯ ಜತೆ ಕ್ಯಾರೆಟ್, ಊಟದ ಜತೆ ಕ್ಯಾರೆಟ್, ಮತ್ತೆ ಸಂಜೆ ಕಾಫಿಯೊಂದಿಗೆ ಕ್ಯಾರೆಟ್, ನಂತರ ರಾತ್ರಿ ಊಟದ ಜತೆಗೂ ಕ್ಯಾರೆಟ್ ಇರಲೇ ಬೇಕು. ಕ್ಯಾರೆಟ್ ದೋಸೆ, ಕ್ಯಾರೆಟ್ ಕೋಸಂಬರಿ, ಕ್ಯಾರೆಟ್ ಸೂಪ್, ಕ್ಯಾರೆಟ್ ಸಾಂಬಾರ್- ಹೀಗೆ ಯಾವುದಾದರೂ ಒಂದು ವಿಧದಲ್ಲಿ ಕ್ಯಾರೆಟ್ ಇದ್ದರೆ ಸಮಾಧಾನ.

ಮತ್ತೊಬ್ಬರಿಗೆ ಮೊಸರು ಪಂಚಪ್ರಾಣ. ನಿತ್ಯವೂ ಉಪ್ಪಿಟ್ಟು, ದೋಸೆ, ಚಪಾತಿ, ರೊಟ್ಟಿ, ಅನ್ನ, ಮುz- ಹೀಗೆ ಎಲ್ಲ ಖಾದ್ಯಗಳೊಂದಿಗೆ ಮೊಸರು ಇರಲೇಬೇಕು. ಹೀಗೆ ಕೆಲವರಿಗೆ ಕೆಲವು ಹಣ್ಣುಗಳು ಮತ್ತು ಕೆಲವರಿಗೆ ಕೆಲವು ತರಕಾರಿ, ಅಥವಾ ಮತ್ತಷ್ಟು ಜನರಿಗೆ ಕೆಲವು ಖಾದ್ಯಗಳನ್ನು ನಿತ್ಯವೂ ಬಿಡದೆ ಸೇವಿಸುವ ಅಭ್ಯಾಸವಾಗಿಬಿಟ್ಟಿರುತ್ತದೆ.

ಮತ್ತೊಂದು ಉದಾಹರಣೆ ನೆನಪಿಗೆ ಬರುತ್ತಿದೆ- ನನ್ನ ಪೇಷೆಂಟ್ ಒಬ್ಬರು ತಮ್ಮ ವ್ಯಾಸಂಗವನ್ನು ಹೊರದೇಶದಲ್ಲಿ ಮಾಡುತ್ತಿದ್ದ ಸಂದರ್ಭ. ವಿದ್ಯಾರ್ಥಿ ಜೀವನವಾದ್ದರಿಂದ ನಿತ್ಯವೂ ಅವರದ್ದೇ ನಳಪಾಕ. ಅವರು ರಜೆಯ ಸಮಯದಲ್ಲಿ ಭಾರತಕ್ಕೊಮ್ಮೆ ಬಂದಾಗ ಅವರ ಅಜ್ಜಿಯ ಬಳಿ ಒಂದು ಬಗೆಯ ’ಅವಿಯಲ್’ ಅನ್ನು ಕಲಿತುಕೊಂಡು ಹೋದರಂತೆ.

ವಾಪಸ್ಸು ಹೋದ ನಂತರ ಸತತವಾಗಿ ಮುಂದಿನ ಒಂದು ವರ್ಷ ಪ್ರತಿ ದಿನವೂ ಅವಿಯ ಅವರ ಅಡುಗೆಯಾಗಿತ್ತು. ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಬಾರಿಯೂ ಅದನ್ನೇ ಸೇವಿಸುತ್ತಿದ್ದರು. ನಂತರ ರಾತ್ರಿ ಯಾವುದಾದರೂ ಒಂದು ಹಣ್ಣನ್ನು ತಿಂದು ಮಲಗುವ ಅಭ್ಯಾಸ. ಹೀಗೆ ಒಂದೇ ಆಹಾರ ಶೈಲಿಯನ್ನು ಒಂದು ವರ್ಷ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಸಿಕೊಂಡು ಹೋಗಿದ್ದರಂತೆ.

ಆದರೆ ಸ್ನೇಹಿತರೆ, ಹಣ್ಣನ್ನಾಗಲಿ, ತರಕಾರಿಯನ್ನಾಗಲಿ, ಯಾವುದೋ ಒಂದು ಖಾದ್ಯವನ್ನಾಗಲಿ- ಒಂದನ್ನೇ ಪ್ರತಿ ನಿತ್ಯವೂ ಬಿಡದೆ ಸೇವಿಸುವುದು ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆಯು ರ್ವೇದವು ಪ್ರತಿ ನಿತ್ಯವೂ ನಾವು ಸೇವಿಸಬಹುದಾದ ಕೆಲವು ಆಹಾರ ದ್ರವ್ಯಗಳ ಪಟ್ಟಿಯನ್ನು ಸ್ಪಷ್ಟ ವಾಗಿ ನೀಡಿದೆ.

ಆದರೆ, ಸೊಪ್ಪು/ತರಕಾರಿ ಅಥವಾ ಹಣ್ಣುಗಳು ಆ ಪಟ್ಟಿಯಲ್ಲಿ ಇಲ್ಲದಿರಲು ಕಾರಣವಿದೆ. ಇದರ ಅರ್ಥ ನಾವು ಪ್ರತಿನಿತ್ಯವೂ ಯಾವುದೋ ಒಂದೇ ಹಣ್ಣನ್ನು ಅಥವಾ ತರಕಾರಿಯನ್ನು ಸೇವಿಸ ಬಾರದು. ಪ್ರತಿಯೊಂದು ತರಕಾರಿಯಲ್ಲಿಯೂ/ಹಣ್ಣಿನಲ್ಲಿಯೂ ಒಂದೊಂದು ಬಗೆಯ ಪೋಷ ಕಾಂಶವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅದು ವಿಟಮಿನ್ ಆಗಿರಬಹುದು ಅಥವಾ ಮಿನರಲ್‌ಗಳ ಅಂಶವೇ ಇರಬಹುದು.

ಆದ್ದರಿಂದ ಒಂದೇ ಆಹಾರ ದ್ರವ್ಯದ ಅಂಶಗಳ ನಿತ್ಯ ಸೇವನೆಯಿಂದ ದೇಹದಲ್ಲಿ ಅದರ ಮಿತಿ ಮೀರಿದ ಶೇಖರಣೆಗೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಹಿತವಲ್ಲ. ಅಲ್ಲದೆ, ಬೇರೆ ತರಕಾರಿ ಗಳಲ್ಲಿ ಅಥವಾ ಹಣ್ಣುಗಳಲ್ಲಿ ಇರುವ, ದೇಹಕ್ಕೆ ಅವಶ್ಯಕವಾಗಿರುವ ಪೋಷಕಾಂಶಗಳು ದೇಹವನ್ನು ಸೇರುವುದಿಲ್ಲ. ಆದ್ದರಿಂದ ಕನಿಷ್ಠಪಕ್ಷ ಒಂದು ತಿಂಗಳ ಅವಧಿಯಲ್ಲಿ ನಮ್ಮ ದೇಹಕ್ಕೆ ಸಾತ್ಮ್ಯವಿರು ವ/ಒಗ್ಗಿರುವ ಎಲ್ಲಾ ರೀತಿಯ ತರಕಾರಿಗಳು ಅಥವಾ ಹಣ್ಣುಗಳು ನಮ್ಮ ಜೀರ್ಣಾಂಗದಲ್ಲಿ ಜೀರ್ಣ ಗೊಳ್ಳುವಂತೆ ಮಾಡುವುದು ಒಳ್ಳೆಯದು.

ಹಾಗೆಯೇ ಹಣ್ಣುಗಳು ಮತ್ತು ತರಕಾರಿಗಳು- ಅದರಲ್ಲೂ ವಿಶೇಷವಾಗಿ ತರಕಾರಿ ಮತ್ತು ಸೊಪ್ಪು ಗಳು ದೇಹದಲ್ಲಿ ಮಲಭಾಗವನ್ನೇ ಹೆಚ್ಚಾಗಿ ಪೋಷಿಸುತ್ತವೆ. ಇದು ನೇರವಾಗಿ ಧಾತು ಪೋಷಣೆ ಯನ್ನು ಮಾಡುವುದಿಲ್ಲ. ಹಾಗಾಗಿ, ಇದರ ಬಳಕೆ ಕಡಿಮೆ ಪ್ರಮಾಣದಲ್ಲಿಯೇ ಇದ್ದರೆ ಒಳಿತು.

ಷಷ್ಟಿಕಾಂಛಾಲಿಮುದ್ಗಾಂಶ್ಚ ಸೈಂಧವಾಮಲಕೆ ಯವಾನ್ | ಆಂತರೀಕ್ಷಂ ಪಯಃ ಸರ್ಪಿರ್ಜಾಂಗಲಂ ಮಧು ಚಾಭ್ಯಸೇತ್ || ಚರಕ- ಸೂತ್ರ-5 ನಿತ್ಯವೂ ನಾವು ಸೇವಿಸಬೇಕಾದ ಆಹಾರ ದ್ರವ್ಯಗಳ ಪಟ್ಟಿ ಯಲ್ಲಿ ಮೊದಲನೆಯ ಸ್ಥಾನದಲ್ಲಿರುವುದು ಷಷ್ಟಿಕ ಶಾಲಿ. ಇದು ಒಂದು ರೀತಿಯ ಅಕ್ಕಿ. ಷಷ್ಟಿಕ ಎಂದರೆ ಅರವತ್ತು. ಅರವತ್ತು ದಿನಗಳಲ್ಲಿ ಬೆಳೆಯುವ/ಕೊಯ್ಲಿಗೆ ಬರುವ ಅಕ್ಕಿಯನ್ನು ಸಂಸ್ಕೃತ ದಲ್ಲಿ ಷಷ್ಟಿಕ ಶಾಲಿ ಎಂದು ಕರೆಯುತ್ತಾರೆ. ಇದು ನಮ್ಮ ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ನಿತ್ಯವೂ ಅಗತ್ಯವಿದೆ. ಮುದ್ಗಾ ಎಂದರೆ ಹೆಸರುಬೇಳೆ. ಸಾಮಾನ್ಯವಾಗಿ ನಮಗೆ ಕೇಳುವ ಪ್ರಶ್ನೆ ಯೆಂದರೆ ಬೇಳೆಗಳಲ್ಲಿ ಯಾವ ಬೇಳೆ ಒಳ್ಳೆಯದು? ನಿತ್ಯ ಸೇವನೆಗೆ ಯಾವ ಬೇಳೆ ಯೋಗ್ಯ? ಎಂದು. ಅದಕ್ಕೆ ನಮ್ಮ ನೇರವಾದ ಉತ್ತರ ’ಹೆಸರುಬೇಳೆ’.

ಹೌದು, ಸ್ನೇಹಿತರೆ ನಿತ್ಯವೂ ನಮ್ಮ ಆಹಾರದಲ್ಲಿ ಹೆಸರುಬೇಳೆ ಇರಲೇಬೇಕು. ಬೇಳೆಯನ್ನು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿ, ನಂತರ ಸ್ವಲ್ಪ ಎಣ್ಣೆ ಮತ್ತು ಹಿಂಗಿನೊಂದಿಗೆ ಬೇಯಿಸಿ ಎಣ್ಣೆ/ತುಪ್ಪದ ಒಗ್ಗರಣೆಯೊಂದಿಗೆ ಸೇವಿಸುವುದು ಆರೋಗ್ಯಕ್ಕೆ ಸದಾ ಹಿತ. ಇನ್ನು ಉಪ್ಪಿನ ವಿಚಾರಕ್ಕೆ ಬರುವು ದಾದರೆ, ನಿತ್ಯ ಅಡುಗೆಗೆ ಮತ್ತು ಸೇವನೆಗೆ ಸೈಂಧವ ಉಪ್ಪು ಅತ್ಯಂತ ಒಳ್ಳೆಯದು. ಕಾರಣ, ಇದು ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚು ಮಾಡದೆ ಶಾರೀರಿಕ ಕ್ರಿಯೆಗಳನ್ನು ಸರಿದೂಗಿಸುತ್ತದೆ.

ಅನ್ಯ ರೀತಿಯ ಉಪ್ಪುಗಳಂತೆ ಇದು ಕಣ್ಣಿನ ಸ್ವಾಸ್ಥ್ಯವನ್ನು ಹಾಳುಮಾಡುವುದಿಲ್ಲ. ಜತೆಗೆ, ಅಕಾಲಿಕ ಚರ್ಮ ಸುಕ್ಕುಗಟ್ಟುವಿಕೆ ಮತ್ತು ಕೂದಲು ಬಿಳಿಯಾಗುವಿಕೆಯನ್ನು ಉಂಟುಮಾಡುವುದಿಲ್ಲ. ಆಮಲಕಿ ಅಂದರೆ ಬೆಟ್ಟದ ನೆಲ್ಲಿಕಾಯಿ. ಆಯುರ್ವೇದದ ಪ್ರಕಾರ ಇದು ಅತ್ಯಂತ ಶ್ರೇಷ್ಠವಾದ ರಸಾಯನ.

ಇದು ಎಲ್ಲಾ ಧಾತುಗಳನ್ನು ಪೋಷಿಸಿ, ಮೇಧಾಶಕ್ತಿಯನ್ನು ವೃದ್ಧಿಸಿ, ಆಯುಷ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿಯೇ ಯಾವುದಾದರೂ ಒಂದು ರೀತಿಯಲ್ಲಿ ಈ ಬೆಟ್ಟದ ನೆಲ್ಲಿಕಾಯಿಯನ್ನು ಪ್ರತಿನಿತ್ಯವೂ ಸೇವಿಸಲು ಶಾಸ್ತ್ರವು ಹೇಳುತ್ತದೆ. ಯವ ಎಂದರೆ ಬಾರ್ಲಿ. ಆಯುರ್ವೇದದ ಪ್ರಕಾರ ಬಾರ್ಲಿಯೂ ಎಲ್ಲರೂ ನಿತ್ಯವೂ ಸೇವಿಸಬಹುದಾದಂಥ ಹಿತವಾದ ಆಹಾರ ದ್ರವ್ಯ. ಅಂತರಿಕ್ಷ ಜಲವೆಂದರೆ ಮಳೆನೀರು. ನೇರವಾಗಿ ಆಕಾಶದಿಂದ ಸುರಿದ ಮಳೆನೀರನ್ನು ಸಂಗ್ರಹಿಸಿ ಸೇವಿಸುವುದು ಅತ್ಯಂತ ಹಿತಕರ.

ಆಯುರ್ವೇದದ ಪ್ರಕಾರ ಮಳೆ ನೀರು ಅತ್ಯಂತ ಪರಿಶುದ್ಧವಾದ ನೀರು. ಆದ್ದರಿಂದ ಇದು ನಿತ್ಯ ಸೇವನೆ ಯೋಗ್ಯಸರ್ಪಿ ಎಂದರೆ ತುಪ್ಪ. ತುಪ್ಪದ ವಿಷಯವಂತು ನಾನು ನನ್ನ ಪ್ರತಿ ಲೇಖನ ದಲ್ಲಿಯೂ ಒಂದಲ್ಲ ಒಂದು ವಿಧವಾಗಿ ನಿಮ್ಮ ಜತೆ ಹಂಚಿಕೊಂಡಿದ್ದೇನೆ. ನಮ್ಮ ಶರೀರದ ಎಲ್ಲಾ ಕ್ರಿಯೆಗಳನ್ನು ಹಾಗೂ ಮಾನಸಿಕ ಸ್ಥಿತಿಯನ್ನು ಸದಾ ಪೋಷಿಸುವ ಮತ್ತು ಸಮತೋಲನದಲ್ಲಿರಿ ಸುವ ಬಹಳ ಮುಖ್ಯವಾದ ಆಹಾರದ್ರವ್ಯ ಈ ತುಪ್ಪ. ಆಯುರ್ವೇದದ ಪ್ರಕಾರ ನಿತ್ಯಸೇವನೆಗೆ ಹಸುವಿನ ತುಪ್ಪ ಶ್ರೇಷ್ಠವಾದದ್ದು.

ಜಾಂಗಲ ಮಾಂಸ ಅಂದರೆ ಒಣಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳ ಮಾಂಸ. ಇದು ನಿತ್ಯಸೇವನೆಗೆ ಸೂಕ್ತವಾದದ್ದು. ಮಾಂಸ ಸೇವನೆಯ ಅಭ್ಯಾಸವಿರುವವರು ಈ ಒಂದು ವಿಷಯವನ್ನು ಅರಿತು ಮಾಂಸದ ಆಯ್ಕೆಯನ್ನು ಮಾಡಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು.

ಮಧು ಎಂದರೆ ಜೇನುತುಪ್ಪ. ಇದನ್ನು ಸಹ ಎಲ್ಲರೂ ಸಾಮಾನ್ಯವಾಗಿ ನಿತ್ಯವೂ ಆಹಾರದಲ್ಲಿ ಹಿತಮಿತ ಪ್ರಮಾಣದಲ್ಲಿ ಬಳಸಬಹುದು. ಆದರೆ, ನೆನಪಿನಲ್ಲಿಡಬೇಕಾದ ವಿಷಯವೆಂದರೆ ಜೇನು ತುಪ್ಪವನ್ನು ಎಂದಿಗೂ ಬಿಸಿ ಮಾಡದೆ ಅಥವಾ ಬಿಸಿ ಪದಾರ್ಥ/ಉಷ್ಣ ಪ್ರಕೃತಿ ಇರುವವರು ಸೇವಿಸ ಬಾರದು.

ಇವಿಷ್ಟು ಹಿತ ಆಹಾರಗಳಾದರೆ, ಈಗ ಅಹಿತ ಆಹಾರಗಳ ಬಗ್ಗೆ ಸ್ವಲ್ಪ ಗಮನಹರಿಸೋಣ: ವಲ್ಲೂ ರಂ ಶುಷ್ಕಶಾಕಾನಿ ಶಾಲೂಕಾನಿ ಬಿಸಾನಿ ಚ ನಾಭ್ಯಸೆದ್ಗೌರವಾನ್ಮಾಂಸಂ ಕೃಶಂ ನೈವೋಪಯೋಜ ಯೇತ್ |ಕೂರ್ಚಿಕಾಂಶ್ಚ ಕಿಲಾಟಾಂಶ್ಚ ಶೌಕರಂ ಗವ್ಯಮಾಹಿಷೆ ಮತ್ಸ್ಯಾನ್ ದಧಿ ಚ ಮಾಷಾಂಶ್ಚ ಯವಕಾಂಶ್ಚ ನ ಶೀಲಯೇತ್ || ಚರಕ- ಸೂತ್ರ-5 ಒಣಗಿದ ಮಾಂಸ, ಒಣಗಿದ ತರಕಾರಿ (ಮೊಳಕೆ ಕಾಳುಗಳು ಸೇರಿ), ತಾವರೆಗಡ್ಡೆ, ತಾವರೆ ದಂಟು ನಿತ್ಯಸೇವನೆಗೆ ನಿಷಿದ್ಧ. ಕುದಿಸಿದ ಮಜ್ಜಿಗೆ, ಹಾಲನ್ನು ಒಡೆದು ವಿಕೃತಗೊಳಿಸಿ ಮಾಡುವ ಪನೀರ್ ಕೂಡ ಅಹಿತವೆಂದು ನೆನಪಿರಲಿ.

ಮೊಸರು, ಉದ್ದು, ಉಷ್ಣವೀರ್ಯ ಹೊಂದಿದ ಯವಕವೆಂಬ ಒಂದು ವಿಧವಾದ ಅಕ್ಕಿ, ರೋಗದಿಂದ ಬಳಲುತ್ತಿರುವ ಪ್ರಾಣಿಗಳ ಮಾಂಸ, ಹಂದಿ ಮಾಂಸ, ದನದ ಮಾಂಸ, ಎಮ್ಮೆಯ ಮಾಂಸ ಹಾಗೂ ಮೀನು- ಇವುಗಳನ್ನು ದಿನವೂ ಬಳಸಿದ್ದೇ ಆದರೆ ಮುಂದಿನ ದಿನಗಳಲ್ಲಿ ರೋಗಗಳು ಕಟ್ಟಿಟ್ಟ ಬುತ್ತಿ. ನಿತ್ಯ ಬಳಕೆಗೆ ಮೊಸರು, ಉದ್ದಿನ ಪದಾರ್ಥಗಳಾದ ದೋಸೆ, ಇಡ್ಲಿ, ವಡೆಗಳನ್ನು ಸೇವಿಸುವುದನ್ನು ವರ್ಜಿಸಬೇಕು.

ಮೊಸರಿನ ಬದಲಿಗೆ ಮಜ್ಜಿಗೆಯ ನಿತ್ಯಬಳಕೆ ಒಳ್ಳೆಯದು. ಜೀರ್ಣಕ್ಕೆ ಜಡವಾದ ಮಾಂಸಗಳೆಲ್ಲವೂ ನಮ್ಮನ್ನು ರೋಗಗಳ ಗೂಡನ್ನಾಗಿಸುವುದರಲ್ಲಿ ಸಂಶಯವೇ ಇಲ್ಲ ಎಂಬುದು ಚರಕಸಂಹಿತೆಯ ಮಾತ್ರಾಶಿತೀಯ ಅಧ್ಯಾಯದ ಸ್ಪಷ್ಟಾಭಿಪ್ರಾಯ.

ಒಟ್ಟಾರೆ, ಚರಕಾಚಾರ್ಯರು ಹೇಳಿದ ಹಿತ ಆಹಾರ ದ್ರವ್ಯಗಳನ್ನು ನಿತ್ಯ ಸೇವಿಸುವುದರಿಂದ ಸ್ವಾಸ್ಥ್ಯ ಸಂರಕ್ಷಣೆಯಾಗುವುದರ ಜತೆಗೆ ಇನ್ನೂ ಉತ್ಪತ್ತಿಯೇ ಆಗದಿರುವ ರೋಗಗಳನ್ನೂ ಇದು ತಡೆಗಟ್ಟು ತ್ತದೆ. ಸ್ಸ್ವಾಸ್ಥ್ಯವೆಂಬ ಸ್ವಾತಂತ್ರ್ಯವನ್ನು ಅನುಭವಿಸಲು ಇನ್ನೇನು ಬೇಕು ಹೇಳಿ?!