ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಇವರು ಬಾಲ ಶಾಸ್ತ್ರಿ

‘ಬಾಲಶಾಸ್ತ್ರಿ’ ಎಂದೇ ಹೆಸರಾಗಿದ್ದ ಬಾಲಗಂಗಾಧರ್ ಶಾಸ್ತ್ರಿ ಜಾಂಭೇಕರ್ ಅವರು ಹುಟ್ಟಿದ್ದು ತಿಲಕರು ಹುಟ್ಟುವುದಕ್ಕಿಂತ ನಲವತ್ತನಾಲ್ಕು ವರ್ಷ ಮೊದಲು, ಶಾಸ್ತ್ರೀಜಿ ಹುಟ್ಟುವುದಕ್ಕಿಂತ ತೊಂಬತ್ತೆರಡು ವರ್ಷ ಮೊದಲು. ಅಲ್ಲದೇ ಇವರಿಬ್ಬರೂ ಹುಟ್ಟುವುದಕ್ಕಿಂತ ಮೊದಲೇ ಅವರು ಈ ಲೋಕ ತ್ಯಜಿಸಿದ್ದರು. ಅವರು ಹುಟ್ಟಿದ್ದು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿರುವ ದೇವಗಡ್ ತಾಲೂಕಿನ ಪೊಂಬುರ್ಲೆ ಎಂಬ ಒಂದು ಕುಗ್ರಾಮದಲ್ಲಿ.

Kiran Upadhyay Column: ಇವರು ಬಾಲ ಶಾಸ್ತ್ರಿ

ವಿದೇಶವಾಸಿ

dhyapaa@gmail.com

ಜುಲೈ 26, ಕನ್ನಡದ ಪುಸ್ತಕ ಲೋಕದಲ್ಲಿ ಒಂದು ಐತಿಹಾಸಿಕ ಕ್ಷಣ. ‘ವಿಶ್ವವಾಣಿ ಪುಸ್ತಕ’ ಪ್ರಕಾಶನದ ಎಂಟು ಕೃತಿಗಳು ಅಂದು ಕನ್ನಡ ಪುಸ್ತಕ ಲೋಕಕ್ಕೆ ಸೇರ್ಪಡೆಯಾದವು. ವಿಶ್ವವಾಣಿ ಸಂಪಾದಕ ರಾದ ವಿಶ್ವೇಶ್ವರ ಭಟ್ಟರ ಪ್ರಕಾರ ಅಂಕಣ ಬರಹ ಒಂದು ‘ಪ್ರಸವ’. ಅದೇ ಹೌದಾದರೆ, ಪುಸ್ತಕ ಎನ್ನುವುದು ‘ಮಹಾಪ್ರಸವ’ ಅಲ್ಲದೆ ಮತ್ತಿನ್ನೇನು? ಅಂದು ವಿಶ್ವೇಶ್ವರ ಭಟ್ಟರ ‘ವಿದೇಶ ಕಾಲ’, ‘ಆಸ್ಕ್ ದಿ ಎಡಿಟರ್ ಭಾಗ 3’, ‘ಸಂಪಾದಕರ ಸದ್ಯಶೋಧನೆ ಭಾಗ 7 ಮತ್ತು 8’ ಕೃತಿಗಳೊಂದಿಗೆ, ಅಂಕಣಕಾರ ರಾದ ಎಸ್.ಷಡಕ್ಷರಿಯವರ ‘ಯಶಸ್ವಿ ಬದುಕಿಗೆ ಸರಳ ಸೂತ್ರಗಳು’, ರಾಜು ಅಡಕಳ್ಳಿಯವರ ‘ಗೆದ್ದವರ ಕಥೆಗಳು’, ರೂಪಾ ಗುರುರಾಜ್ ಅವರ ‘ಒಂದೊಳ್ಳೆ ಮಾತು ಭಾಗ 4’ ಮತ್ತು ನನ್ನ ‘ಉಭಯದೇಶವಾಸಿ’ ಸೇರಿ ಒಟ್ಟೂ ಐದು ಅಂಕಣಕಾರರ ಎಂಟು ಪುಸ್ತಕದ ಅನಾವರಣ. ಈ ಕಾರ್ಯಕ್ರಮಕ್ಕೆ ‘ಸರಸ್ವತಿ ಸಮ್ಮಾನ್’ ಪುರಸ್ಕೃತ ಕಾದಂಬರಿಕಾರರಾದ ಡಾ.ಎಸ್.ಎಲ್. ಭೈರಪ್ಪ‌ ನವರ ಉಪಸ್ಥಿತಿ, ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯರಾದ ಡಾ.ವೀರೇಂದ್ರ ಹೆಗ್ಗಡೆ ಯವರಿಂದ ಪುಸ್ತಕ ಲೋಕಾರ್ಪಣೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಮತ್ತು ರಿಪಬ್ಲಿಕ್ ಕನ್ನಡ ಚಾನೆಲ್ ಸಂಪಾದಕಿ ಶೋಭಾ ಮಳವಳ್ಳಿ.

ಒಂದೇ ವೇದಿಕೆಯಲ್ಲಿ ಇಷ್ಟೊಂದು ದಿಗ್ಗಜರು, ಅದೂ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸೇರುವುದು ತೀರಾ ಎಂದರೆ ತೀರಾ ಅಪರೂಪ. ಅದಕ್ಕೇ ಹೇಳಿದ್ದು ಇದು ಐತಿಹಾಸಿಕ ಕ್ಷಣ ಎಂದು. ಅಂಕಣ ಬರಹ ಎಂದರೆ ಕೆಲವರಿಗೆ ವಾರದ ವೇದನೆಯಾದರೆ, ಕೆಲವರಿಗೆ ನಿತ್ಯದ ನೋವು. ಆ ನೋವಿನಲ್ಲೂ, ವೇದನೆಯಲ್ಲೂ ಒಂದು ಖುಷಿಯ, ಸಾರ್ಥಕ್ಯದ ಕ್ಷಣ. ಅದೊಂದು ಪಕ್ಕಾ ಮಗು ಹುಟ್ಟುವಾಗ ಆಗುವ ಭಾವನೆಯೇ ಸರಿ. ಆದರೆ ಮೊನ್ನೆ ಇಷ್ಟೆಲ್ಲ ನಡೆಯುವಾಗ ನನಗನಿಸಿದ್ದು, ಜನರಿಗೆ ಸುದ್ದಿ ನೀಡುವ ಪತ್ರಿಕೆಗಳಲ್ಲಿ ‘ಅಂಕಣ’ ಬರಹ ಎನ್ನುವ ಪರಿಕಲ್ಪನೆಯನ್ನು ತಂದವರು ಯಾರು? ಒಳಪುಟಗಳಲ್ಲಿ opinion journalism ಅಥವಾ ಅಭಿಪ್ರಾಯ ಪತ್ರಿಕೋದ್ಯಮವನ್ನು ಹುಟ್ಟುಹಾಕಿದವರು ಯಾರು? ಅಥವಾ ಸರಳವಾಗಿ ಹೇಳುವುದಾದರೆ, ಇತಿಹಾಸದ ಮೊತ್ತಮೊದಲ ಅಂಕಣಕಾರ ಯಾರು? ಈ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿದೆ.

ಇದನ್ನೂ ಓದಿ: Kiran Upadhyay Column: ಅಲ್ಲೂ, ಇಲ್ಲೂ, ಎಲ್ಲೆಲ್ಲೂ ಸಲ್ಲುವ ಸೈಕಲ್

ಇದಮಿತ್ಥಂ ಎಂಬ ಉತ್ತರ ಸಿಗಲಿಲ್ಲ. ಹುಡುಕಾಟ ಜಾರಿಯಲ್ಲಿದೆ, ಸಿಕ್ಕರೆ ಮುಂದೊಮ್ಮೆ ಹೇಳುತ್ತೇನೆ. ಆದರೆ ಈ ಹುಡುಕಾಟದಲ್ಲಿ ಒಬ್ಬ ಅಸಾಮಾನ್ಯ ಪತ್ರಕರ್ತ, ಸಂಪಾದಕ, ಅಂಕಣಕಾರರ ಬಗ್ಗೆ ತಿಳಿದುಕೊಂಡೆ. ‘ಬಾಲ ಗಂಗಾಧರ ಶಾಸ್ತ್ರಿ’ ಹೆಸರು ಎಷ್ಟು ಜನ ಕೇಳಿದ್ದಿರೋ ಗೊತ್ತಿಲ್ಲ. ನಮಗೆ ಬಾಲಗಂಗಾಧರ್ ತಿಲಕ್ ಗೊತ್ತು, ಲಾಲ್ ಬಹಾದುರ್ ಶಾಸ್ತ್ರಿ ಗೊತ್ತು. ಬಾಲಗಂಗಾಧರ ಶಾಸ್ತ್ರಿ? ಊಹೂಂ... ಈ ಹೆಸರು ಕೇಳಿದವರು ಬಹಳ ಕಡಿಮೆ. ‘ಬಾಲಶಾಸ್ತ್ರಿ’ ಎಂದೇ ಹೆಸರಾಗಿದ್ದ ಬಾಲಗಂಗಾಧರ್ ಶಾಸ್ತ್ರಿ ಜಾಂಭೇಕರ್ ಅವರು ಹುಟ್ಟಿದ್ದು ತಿಲಕರು ಹುಟ್ಟುವುದಕ್ಕಿಂತ ನಲವತ್ತನಾಲ್ಕು ವರ್ಷ ಮೊದಲು, ಶಾಸ್ತ್ರೀಜಿ ಹುಟ್ಟುವುದಕ್ಕಿಂತ ತೊಂಬತ್ತೆರಡು ವರ್ಷ ಮೊದಲು. ಅಲ್ಲದೇ ಇವರಿಬ್ಬರೂ ಹುಟ್ಟುವುದಕ್ಕಿಂತ ಮೊದಲೇ ಅವರು ಈ ಲೋಕ ತ್ಯಜಿಸಿದ್ದರು. ಅವರು ಹುಟ್ಟಿದ್ದು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿರುವ ದೇವಗಡ್ ತಾಲೂಕಿನ ಪೊಂಬುರ್ಲೆ ಎಂಬ ಒಂದು ಕುಗ್ರಾಮದಲ್ಲಿ. ಅವರು ಬಾಲ್ಯದಿಂದಲೂ ಪ್ರತಿಭಾನ್ವಿತ ಮತ್ತು ಅಸಾಮಾನ್ಯ ಬುದ್ಧಿವಂತರಾಗಿದ್ದರು. ಬಾಲಶಾಸ್ತ್ರಿ ಪ್ರೌಢಾವಸ್ಥೆಯಲ್ಲಿಯೇ ಅನೇಕ ವಿಷಯಗಳ ಕುರಿತು ಅಧ್ಯಯನ ನಡೆಸಿದರು.

ತಾವು ಮಾಡಿದ ಸಂಶೋಧನೆಯಿಂದಾಗಿ ಊರಿನ ಸುತ್ತಮುತ್ತ ‘ವಿದ್ವಾಂಸ’ ಎಂದು ಕರೆಸಿಕೊಂಡರು. ಅವರು ಮಾಡಿದ ಕೆಲಸ ಅಸಾಮಾನ್ಯವಾದದ್ದರಿಂದ ಭಾರತದ ಇತಿಹಾಸದಲ್ಲಿ, ಅದರಲ್ಲೂ ಪತ್ರಿಕೋದ್ಯಮದಲ್ಲಿ ಶಾಶ್ವತವಾದ ಮುದ್ರೆಯೊಂದನ್ನು ಒತ್ತಿಹೋದರು.

ಹೇಳಬೇಕು ಎಂದರೆ, ಬಾಲಶಾಸ್ತ್ರಿಯವರು ಸಕ್ರಿಯರಾಗಿದ್ದದ್ದು ಕೆಲವೇ ವರ್ಷಗಳು ಮಾತ್ರ. ಆದರೆ ಬದುಕಿದ್ದಷ್ಟು ದಿನ ಪೂರ್ಣ ಪ್ರಮಾಣದಲ್ಲಿ ಸಕ್ರಿಯರಾಗಿದ್ದರು. ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಬದುಕಿದಷ್ಟು ವರ್ಷ ಹೇಗೆ ಬದುಕಿದ ಎನ್ನುವುದಕ್ಕೆ ಉತ್ತಮ ಉದಾಹರಣೆ ಬಾಲಶಾಸ್ತ್ರಿ ಜಾಂಭೇಕರ್. ಅವರು ಜನಿಸಿದಾಗ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಇತ್ತು.

ಬ್ರಿಟಿಷರನ್ನು ಭಾರತದಿಂದ ಹೊರದಬ್ಬಿ ಭಾರತಕ್ಕೆ ಸ್ವಾತಂತ್ರ್ಯ ಪಡೆಯಬೇಕಾದರೆ ಜನಸಾಮಾನ್ಯ ರನ್ನು ಜಾಗೃತಗೊಳಿಸುವುದು ಅತ್ಯಗತ್ಯ ಎಂಬುದು ಅವರ ಗ್ರಹಿಕೆಗೆ ಬಂದಿತ್ತು. ಅದಕ್ಕೆ ಮುದ್ರಣ ಅಥವಾ ಪತ್ರಿಕೆ ಉತ್ತಮ ಮಾಧ್ಯಮ ಮತ್ತು ಆಯುಧ ಎಂಬುದನ್ನು ತಿಳಿದು ಅವರು ಒಂದು ಪತ್ರಿಕೆಯನ್ನು ಆರಂಭಿಸಿದ್ದರು. ಅವರು ಆರಂಭಿಸಿದ ‘ದರ್ಪಣ್’ ಮರಾಠಿ ಭಾಷೆಯ ಮೊದಲ ಪತ್ರಿಕೆ ಎಂದು ಕರೆಯಲ್ಪಟ್ಟಿತು.

ಅದು ಮರಾಠಿ ಪತ್ರಿಕೋದ್ಯಮದಲ್ಲಿ ಮೊದಲ ಹೆಜ್ಜೆ. ಬಾಲಶಾಸ್ತ್ರಿ ಪತ್ರಿಕೆಯನ್ನು ಆರಂಭಿಸಿದ್ದಷ್ಟೇ ಅಲ್ಲ, ಆ ಪತ್ರಿಕೆಯ ಸಂಪಾದಕರೂ ಆಗಿದ್ದರು. ಆ ಸಾಹಸಕ್ಕೆ ಮುಂದಾದಾಗ ಬಾಲಶಾಸ್ತ್ರಿ ಜಾಂಭೇ‌ ಕರ್ ಅವರಿಗೆ ಕೇವಲ ಇಪ್ಪತ್ತು ವರ್ಷ ವಯಸ್ಸಾಗಿತ್ತು. ದರ್ಪಣ್ ಪತ್ರಿಕೆಯ ಮೊದಲ ಸಂಚಿಕೆ ಜನವರಿ 1832ರಂದು ಪ್ರಕಟಗೊಂಡಿತು.

ಪತ್ರಿಕೆಯನ್ನು ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿ ಪ್ರತ್ಯೇಕವಾಗಿ ಮುದ್ರಿಸಲಾಗುತ್ತಿತ್ತು. ಮರಾಠಿ ಪತ್ರಿಕೆ ಸಾರ್ವಜನಿಕರಿಗಾದರೆ, ಇಂಗ್ಲಿಷ್ ಪತ್ರಿಕೆಯನ್ನು ಅಂದು ದೇಶವನ್ನು ಆಳುತ್ತಿದ್ದ ಬ್ರಿಟಿಷರಿ ಗಾಗಿ ಮುದ್ರಿಸಲಾಗುತ್ತಿತ್ತು. ಆ ಕಾಲದಲ್ಲಿ ಈ ಪತ್ರಿಕೆಯ ಬೆಲೆ ಒಂದು ರುಪಾಯಿ ಆಗಿತ್ತು. ಆ ಸಮಯದಲ್ಲಿ ಭಾರತದ ಇತಿಹಾಸದಲ್ಲಿಯೇ ಇದೊಂದು ಹೊಸ ಕಲ್ಪನೆಯಾಗಿತ್ತು. ಆದ್ದರಿಂದ ಆರಂಭದಲ್ಲಿ ಪತ್ರಿಕೆಗೆ ಚಂದಾದಾರರು ಅಥವಾ ಕೊಳ್ಳುವವರು ಹೆಚ್ಚೇನೂ ಇರಲಿಲ್ಲ. ಆದರೆ ನಿಧಾನವಾಗಿ ಜನರೂ ಅದನ್ನು ಮೆಚ್ಚತೊಡಗಿದರು. ಕಾರಣ, ಪತ್ರಿಕೆಯಲ್ಲಿ ಬಾಲಶಾಸ್ತ್ರಿಯವರು ವ್ಯಕ್ತಪಡಿಸುತ್ತಿದ್ದ ಆಲೋಚನೆಗಳು ಜನರಿಗೆ ಒಪ್ಪಿಗೆಯಾಗುತ್ತಿದ್ದವು.

ಇದರಿಂದ ಓದುಗರ ಸಂಖ್ಯೆ ಬೆಳೆಯಿತು. ಈ ಪತ್ರಿಕೆ ಸುಮಾರು ಎಂಟೂವರೆ ವರ್ಷಗಳ ಕಾಲ ಪ್ರಕಟವಾಯಿತು. ಪತ್ರಿಕೆಯ ಕೊನೆಯ ಸಂಚಿಕೆ 1840ರ ಜುಲೈನಲ್ಲಿ ಪ್ರಕಟವಾಗಿ, ನಂತರ ನಿಂತು ಹೋಯಿತು. ಮುಂದುವರಿಯುವುದಕ್ಕಿಂತ ಮೊದಲು ಇಲ್ಲಿ ಒಂದು ಮಾತನ್ನು ಹೇಳಲೇಬೇಕು. ಆ ಕಾಲದಲ್ಲಿ ಸ್ವಲ್ಪ ಹೆಚ್ಚು ಎಂದೆನಿಸಿದರೂ ಒಂದು ರುಪಾಯಿ ಕೊಟ್ಟು ಜನ ಪತ್ರಿಕೆ ಯನ್ನು ಕೊಂಡುಕೊಳ್ಳುತ್ತಿದ್ದರು.

ಇಂದು ಹೆಚ್ಚು ಕಮ್ಮಿ ನೂರ ಎಂಬತ್ತೈತೈದು ವರ್ಷ ಕಳೆದಿದೆ. ಅಂದಿನ ರುಪಾಯಿಯ ಮೌಲ್ಯಕ್ಕೂ ಇಂದಿನ ರುಪಾಯಿಯ ಮೌಲ್ಯಕ್ಕೂ ಎಷ್ಟು ಪಟ್ಟು ಹೆಚ್ಚಾಗಿದೆ ಎಂದು ನೀವೇ ಲೆಕ್ಕ ಹಾಕಿಕೊಳ್ಳಿ. ಆದರೆ ಇಂದು ಪ್ರಕಟವಾಗುತ್ತಿರುವ ಬಹುತೇಕ ದಿನಪತ್ರಿಕಗಳ ಬೆಲೆ ಐದರಿಂದ ಆರು ರುಪಾಯಿ ಮಾತ್ರ ಇದೆ. ಆದರೂ ಪತ್ರಿಕೆಯನ್ನು ಕೊಂಡು ಓದುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಅಲ್ಲದೆ, ಇನ್ನು ಒಂದು ರುಪಾಯಿ ಹೆಚ್ಚು ಮಾಡಿದರೂ ಕೊಂಡುಕೊಳ್ಳುವವರ ಸಂಖ್ಯೆ ಇನ್ನಷ್ಟು ಕಡಿಮೆಯಾಗುತ್ತದೆ.

ಪತ್ರಿಕೆ ಇನ್ನೂ ಹೆಚ್ಚು ದಿನ ನಡೆಯುತ್ತಿತ್ತೋ ಏನೋ, ವಿಧಿವಶಾತ್ ಬಾಲಶಾಸ್ತ್ರಿ ಅವರ ಉಸಿರು ನಿಂತುಹೋಯಿತು. ತಮ್ಮ ಮೂವತ್ನಾಲ್ಕನೇ ವರ್ಷದಲ್ಲಿಯೇ ಅವರು ಕೊನೆಯುಸಿರೆಳೆದಿದ್ದರು. ಆದರೂ ಅವರನ್ನು ‘ಮರಾಠಿ ಪತ್ರಿಕೋದ್ಯಮದ ಪಿತಾಮಹ’ ಎಂದೇ ಇಂದಿಗೂ ನೆನೆಸಿಕೊಳ್ಳ ಲಾಗುತ್ತಿದೆ.

ಕಾರಣ ಅವರು ತಮ್ಮ ‘ದರ್ಪಣ’ ಪತ್ರಿಕೆಯಲ್ಲಿ ಬರೆದಂಥ ಅಂಕಣಗಳು. ಎಲ್ಲೋ ಒಂದು ಕಡೆ ಭಾರತದ ಪ್ರಥಮ ಅಂಕಣ ಪ್ರಕಟವಾದದ್ದು ದರ್ಪಣ್ ಪತ್ರಿಕೆಯಲ್ಲಿ ಎಂದು ನಮೂದಿಸಲಾಗಿದೆ. ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಬಾಲಶಾಸಿ ಮಾತ್ರ ಆ ಕಾಲದಲ್ಲಿ ತಮ್ಮ ಅಂಕಣ ಗಳಿಂದಾಗಿ ಬಹಳ ಪ್ರಸಿದ್ಧಿಯನ್ನು ಪಡೆದಿದ್ದರು. ಅವರು ತಮ್ಮ ಪತ್ರಿಕೆಯಲ್ಲಿ, ವಿಧವಾ ಪುನರ್ ವಿವಾಹದ ಸಮಸ್ಯೆಯಿಂದ ಹಿಡಿದು ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿಯವರೆಗಿನ ಹಲವು ಲೇಖನಗಳನ್ನು ಬರೆದು ಪ್ರಕಟಿಸಿದರು.

ಇದು ಸಮಾಜದಲ್ಲಿ ದೊಡ್ಡ ಪ್ರಮಾಣದ ಚರ್ಚೆಗೆ ಕೂಡ ಕಾರಣವಾಯಿತು. ವಿಧವಾ ಪುನರ್‌ ವಿವಾಹವಂತೂ ಆ ಕಾಲದಲ್ಲಿ ಒಂದು ಚಳವಳಿಯಾಗಿ ಮಾರ್ಪಟ್ಟಿತು. ಅಂದಿನ ಅಶಿಕ್ಷಿತ ಸಮಾಜದಲ್ಲಿ ಜ್ಞಾನ ಪಸರಿಸಬೇಕೆಂದು ಉತ್ಕಟವಾಗಿ ಬಯಸಿದವರಲ್ಲಿ ಬಾಲಶಾಸ್ತ್ರಿ ಒಬ್ಬರಾ ಗಿದ್ದರು.

ಅದಕ್ಕಾಗಿ ದರ್ಪಣವನ್ನು ಮಾಧ್ಯಮವನ್ನಾಗಿಸಿಕೊಂಡರು. ತಮ್ಮ ಗುರಿಯನ್ನು ಸಾಧಿಸಲು ಇದು ಅವರಿಗೆ ಸಾಧನವಾಗಿತ್ತು. ವೈಜ್ಞಾನಿಕ ತಿಳಿವಳಿಕೆ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಂದು ಇರುವ ದೃಷ್ಟಿಕೋನವನ್ನು ಬದಲಾಯಿಸಲು ಸಾಕಷ್ಟು ತರ್ಕವನ್ನು ಅವರು ನೀಡುತ್ತಿದ್ದರು. ಅದರೊಂದಿಗೆ ಸಾಮಾನ್ಯ ಜನರಲ್ಲಿ ಉಪಯುಕ್ತ ಶಿಕ್ಷಣ ಮತ್ತು ಆರೋಗ್ಯಕರ ಪ್ರಜ್ಞೆಯನ್ನು ಮೂಡಿಸುವಲ್ಲಿ ನಿರಂತರ ಪ್ರಯತ್ನವನ್ನು ಮಾಡಿದರು. ಆ ಶಿಕ್ಷಕರಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದ ಸಾಮಾಜಿಕ ಕಾರ್ಯಕರ್ತರಲ್ಲಿ ಬಾಲಶಾಸ್ತ್ರಿ ಅಗ್ರಪಂಕ್ತಿಯಲ್ಲಿ ಒಬ್ಬರಾದರು.

ಸಾರ್ವಜನಿಕ ಗ್ರಂಥಾಲಯಗಳ ಮಹತ್ವವನ್ನು ಅರ್ಥ ಮಾಡಿಕೊಂಡ ಬಾಲಶಾಸ್ತ್ರಿ ಜಾಂಭೆಕರ್, ‘ದಿ ಬಾಂಬೆ ನೇಟಿವ್ ಜನರಲ್ ಲೈಬ್ರರಿ’ಯನ್ನು ಸ್ಥಾಪಿಸಿದರು. ಅವರು ‘ನೇಟಿವ್ ಇಂಪ್ರೂವ್‌ಮೆಂಟ್ ಸೊಸೈಟಿ’ ಸ್ಥಾಪಿಸಿ, ಅದರಲ್ಲಿ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಮತ್ತು ವೈಜ್ಞಾನಿಕ ಉಪಶಾಖೆಯನ್ನು ನಿರ್ಮಿಸಿದರು. ದಾದಾಬಾಯಿ ನವರೋಜಿಯಂಥವರು ಈ ಸಂಸ್ಥೆಗಳ ಮೂಲಕ ಸ್ಪೂರ್ತಿ ಪಡೆದರು. 1840ರಲ್ಲಿ ಮೊದಲ ಮರಾಠಿ ಮಾಸಿಕ ‘ದಿಗ್ದರ್ಶನ್’ ಪತ್ರಿಕೆ ಪ್ರಕಟಿಸಿದರು. ಈ ನಿಯತ ಕಾಲಿಕವನ್ನು ಸುಮಾರು ಐದು ವರ್ಷಗಳ ಕಾಲ ಸಂಪಾದಿಸಿದರು. ದಿಗ್ದರ್ಶನ್ ನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗೋಳ, ಇತಿಹಾಸ ಇತ್ಯಾದಿ ವಿಷಯಗಳ ಕುರಿತು ಲೇಖನ ಗಳನ್ನು ಪ್ರಕಟಿಸಿದರು.

ಅವರು ಮರಾಠಿ, ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ವನ್ನು ಪಡೆದಿದ್ದರು. ಇದಲ್ಲದೆ, ಗ್ರೀಕ್, ಲ್ಯಾಟಿನ್, ಫ್ರೆಂಚ್, ಗುಜರಾತಿ ಮತ್ತು ಬಂಗಾಳಿ ಭಾಷೆಗಳನ್ನೂ ಬಲ್ಲವರಾಗಿದ್ದರು. ‘ಏಷಿಯಾಟಿಕ್ ಸೊಸೈಟಿ’ಯ ತ್ರೈಮಾಸಿಕ ಜರ್ನಲ್‌ನಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ ಮೊದಲ ಭಾರತೀಯ ಬಾಲಶಾಸ್ತ್ರಿ.

1845ರಲ್ಲಿ ‘ಜ್ಞಾನೇಶ್ವರಿ’ಯನ್ನು (ಸಂತ ಜ್ಞಾನೇಶ್ವರರು ಬರೆದ ಭಗವದ್ಗೀತೆಯ ಮರಾಠಿ ವ್ಯಾಖ್ಯಾನ) ಮುದ್ರಿಸಿದ ಮೊದಲ ವ್ಯಕ್ತಿ ಅವರು. ಇದು ಮೊದಲ ಮುದ್ರಿತ ಆವೃತ್ತಿ ಎಂದೂ ಕರೆಯಲ್ಪಟ್ಟಿತು. ಬಾಲಶಾಸ್ತ್ರಿ ಮುಂಬೈನ ಎಲಿನ್‌ಸ್ಟನ್ ಕಾಲೇಜಿನಲ್ಲಿ ಮೊದಲ ಹಿಂದಿ ಪ್ರಾಧ್ಯಾಪಕರಾಗಿ ಪಾಠ ಮಾಡಿ ಪ್ರಸಿದ್ಧರಾಗಿದ್ದರು. ಅವರು ಕೊಲಾಬಾ ವೀಕ್ಷಣಾಲಯದಲ್ಲಿ ನಿರ್ದೇಶಕರಾಗಿಯೂ ಕೆಲಸ ಮಾಡಿದರು.

ಬಾಲಶಾಸ್ತ್ರಿಯವರು ’Encyclopedic History of England', 'English grammar', 'History of India', 'Mathematics based on Zero’ ಮುಂತಾದ ಪುಸ್ತಕಗಳನ್ನೂ ಬರೆದರು.

ಬಾಲಶಾಸ್ತ್ರಿ ಬದುಕಿದ್ದು ಕೇವಲ ಮೂವತ್ನಾಲ್ಕು ವರ್ಷ. ಅದರಲ್ಲಿ ಬಾಲ್ಯ, ಯೌವನದ ಇಪ್ಪತ್ತು ವರ್ಷಗಳನ್ನು ತೆಗೆದು ಬಿಡಿ. ಉಳಿದ ಹದಿನಾಲ್ಕು ವರ್ಷಗಳಲ್ಲಿ ಅವರು ಜನರಿಗೆ ಶಿಕ್ಷಣ ನೀಡಲು ಮತ್ತು ವೈಜ್ಞಾನಿಕ ಮನಸ್ಥಿತಿಯನ್ನು ಬೆಳೆಸಲು ಪ್ರಯತ್ನಿಸಿದರು. ಅಲ್ಪಾವಧಿಯಲ್ಲಿ ಅವರು ಮಾಡಿದ ಸಾಧನೆಯಿಂದಾಗಿ, ಕೇವಲ ಮಹಾರಾಷ್ಟ್ರಕ್ಕಷ್ಟೇ ಸೀಮಿತವಾಗಿರದೆ, ಭಾರತದ ವಿಶಿಷ್ಟ ಪತ್ರಕರ್ತ ಮತ್ತು ಸಮಾಜ ಸುಧಾರಕ ಎಂದು ಕರೆಸಿಕೊಂಡರು. ಇಂದಿಗೂ ದರ್ಪಣ್ ಮೊದಲ ಸಂಚಿಕೆ ಪ್ರಕಟಣೆಗೊಂಡ ದಿನ ಮತ್ತು ಬಾಲಶಾಸ್ತ್ರಿ ಜಾಂಭೇಕರ್ ಅವರ ಸ್ಮರಣಾರ್ಥ, ಜನವರಿ ೬ರಂದು ಮಹಾರಾಷ್ಟ್ರದಲ್ಲಿ ಪತ್ರಕರ್ತರ ದಿನವಾಗಿ ಆಚರಿಸಲಾಗುತ್ತದೆ.

ಇಷ್ಟೆ ಆದರೂ ಬಾಲಶಾಸ್ತ್ರಿ ಜಾಂಭೇಕರ್ ಅವರ ಹುಟ್ಟಿದ ಸರಿಯಾದ ದಿನಾಂಕ ಎಲ್ಲಿಯೂ ಉಖವಾಗಲಿಲ್ಲ. ಅವರ ಜನ್ಮದಿನದ ಬಗ್ಗೆ ಈಗಲೂ ಗೊಂದಲಗಳಿವೆ. ಅವರೂ ಎಲ್ಲಿಯೂ ತಮ್ಮ ಜನ್ಮದಿನಾಂಕವನ್ನು ಹೇಳಿಕೊಳ್ಳಲಿಲ್ಲ. ಆಗಿನ ಕಾಲದಲ್ಲಿ ಅದು ಅಷ್ಟು ಮಹತ್ವದ್ದೂ ಆಗಿರಲಿಲ್ಲ ವೇನೋ. ಮೊಂಬತ್ತಿ ಹಚ್ಚುವುದು, ಆರಿಸುವುದು, ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು, ಮಣಭಾರದ ಹೂವಿನ ಹಾರ ಹಾಕುವುದು, ಯಾವುದೂ ಅತಿರೇಕದಲ್ಲಿ ಇರಲಿಲ್ಲವೋ ಅಥವಾ ಇದ್ದರೂ ಬಾಲಶಾಸ್ತ್ರಿಯವರಿಗೆ ಅದರಲ್ಲಿ ಆಸಕ್ತಿ ಇರಲಿಲ್ಲವೋ ಗೊತ್ತಿಲ್ಲ.

ಲಭ್ಯವಿರುವ ದಾಖಲೆಗಳ ಹಾಗೂ ಅಧ್ಯಯನದ ಆಧಾರದ ಮೇಲೆ, ಕಳೆದ ಐದು ವರ್ಷದ ಹಿಂದೆ ಹೊರಡಿಸಲಾದ ಸರಕಾರಿ ಆದೇಶದ ಪ್ರಕಾರ, ಬಾಲಶಾಸ್ತ್ರಿ ಜಾಂಭೇಕರ್ ಜನ್ಮದಿನವನ್ನು ಫೆಬ್ರವರಿ 20 ಎಂದು ನಿಗದಿಮಾಡಿ, ಆ ದಿನ ವಾರ್ಷಿಕೋತ್ಸವವನ್ನು ಅಧಿಕೃತವಾಗಿ ಆಚರಿಸಲಾಗುತ್ತದೆ. ಅವರ ಬಗ್ಗೆ ಓದುತ್ತಿದ್ದಂತೆ, ಬರಹಕ್ಕೆ, ಸಾಧನೆಗೆ, ಯಾವುದೇ ಕಾಲ, ಸ್ಥಳ, ವಯಸ್ಸು, ಆಡಳಿತ, ಸಮಾಜ, ಯಾವ ಪಾಬಂದಿಯೂ ಇಲ್ಲ ಎಂದೆನಿಸಿತು.