Ramanand Sharma Column: ದುಬಾರಿ ಟಿಕಟ್ ದರಕ್ಕೆ ಬೀಳುತ್ತಾ ಕಡಿವಾಣ ?
ಶತದಿನೋತ್ಸವ, ರಜತ ಮಹೋತ್ಸವ ಮುಂತಾದ ಕಣ್ಣು ಕೋರೈಸುವ ಸಿನಿಮಾ ಪ್ರಚಾರದ ವೈಖರಿ ಇತಿಹಾಸದ ಪುಟ ಸೇರಿ, ‘ಯಶಸ್ವಿ 3ನೇ ದಿನ’, ‘ಯಶಸ್ವಿ 4ನೇ ಪ್ರದರ್ಶನ’ ಎಂಬ ಮಟ್ಟಕ್ಕೆ ಇಳಿದಿದೆ ಎಂಬ ಮಾತಿನಲ್ಲಿ ಕುಚೋದ್ಯವೇನೂ ಕಾಣುತ್ತಿಲ್ಲ. ಅದೆಷ್ಟೋ ಚಿತ್ರಮಂದಿರಗಳನ್ನು ನೆಲಸಮ ಮಾಡಲಾಗಿದೆ.


ಅಭಿಮತ
ರಮಾನಂದ ಶರ್ಮಾ
ರಾಜ್ಯದಲ್ಲಿ ಜನಸಾಮಾನ್ಯರ ಕೈಗೆಟುಕದಷ್ಟು ದುಬಾರಿಯಾಗಿರುವ ಸಿನಿಮಾ ಟಿಕೆಟ್ ಬೆಲೆಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಮುಂದಾಗಿದ್ದು, ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ಪ್ರವೇಶದರ ನಿಗದಿ ಸಂಬಂಧ ನಿಯಮಾವಳಿಯ ಕರಡನ್ನು ಅದು ರೂಪಿಸುತ್ತಿದೆ. ಇದರ ಪ್ರಕಾರ, ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರುಪಾಯಿಯನ್ನು (ಮನರಂಜನಾ ತೆರಿಗೆಯನ್ನೂ ಒಳಗೊಂಡು) ಮೀರಬಾರದು. ಕನ್ನಡ ಚಲನಚಿತ್ರಗಳಲ್ಲದೆ ಇತರ ಭಾಷಾ ಚಿತ್ರಗಳಿಗೂ ಈ ನಿಯಮ ಅನ್ವಯವಾಗಲಿದೆ.
ಈ ಕರಡಿನ ಸಂಬಂಧ ಏನಾದರೂ ಆಕ್ಷೇಪಣೆಯಿದ್ದರೆ 15 ದಿನದೊಳಗೆ ಸಲ್ಲಿಸುವಂತೆ ಕೇಳಲಾಗಿದೆ. 2025-26ರ ರಾಜ್ಯ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದ್ದು, ಈಗ ಸರಕಾರ ಮುಂದಿನ ಹೆಜ್ಜೆ ಯಿಡಲು ತೀರ್ಮಾನಿಸಿದೆ. ಕನ್ನಡ ಚಿತ್ರರಂಗವಿಂದು ಅತೀವ ಸಂಕಷ್ಟದಲ್ಲಿದೆ. ಇದಕ್ಕೆ ಕಾರಣಗಳು ಹಲವಿದ್ದರೂ, ಪ್ರೇಕ್ಷಕರ ಕೊರತೆಯೇ ಮುಖ್ಯವಾಗಿ ಬಾಧಿಸುತ್ತಿದೆ, ಚಿತ್ರಮಂದಿರಗಳು ಭಣಗುಡು ತ್ತಿವೆ ಎನ್ನಲಾಗಿದೆ.
ಶತದಿನೋತ್ಸವ, ರಜತ ಮಹೋತ್ಸವ ಮುಂತಾದ ಕಣ್ಣು ಕೋರೈಸುವ ಸಿನಿಮಾ ಪ್ರಚಾರದ ವೈಖರಿ ಇತಿಹಾಸದ ಪುಟ ಸೇರಿ, ‘ಯಶಸ್ವಿ 3ನೇ ದಿನ’, ‘ಯಶಸ್ವಿ 4ನೇ ಪ್ರದರ್ಶನ’ ಎಂಬ ಮಟ್ಟಕ್ಕೆ ಇಳಿದಿದೆ ಎಂಬ ಮಾತಿನಲ್ಲಿ ಕುಚೋದ್ಯವೇನೂ ಕಾಣುತ್ತಿಲ್ಲ. ಅದೆಷ್ಟೋ ಚಿತ್ರಮಂದಿರಗಳನ್ನು ನೆಲಸಮ ಮಾಡಲಾಗಿದೆ.
ರಾಜ್ಯದಲ್ಲಿ 1990ರಲ್ಲಿ ಸುಮಾರು 1000 ಚಿತ್ರಮಂದಿರಗಳಿದ್ದರೆ, ಕಳೆದ 2 ದಶಕಗಳಲ್ಲಿ 350ಕ್ಕೂ ಮಿಕ್ಕಿ ಚಿತ್ರಮಂದಿರಗಳು ಜೆಸಿಬಿಗೆ ಆಹುತಿಯಾಗಿ, ಅಲ್ಲಿ ಹೋಟೆಲ್, ಮಲ್ಟಿಪ್ಲೆಕ್ಸ್, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಕಲ್ಯಾಣ ಮಂಟಪಗಳು ತಲೆಯೆತ್ತುತ್ತಿವೆ. ರಾಜ್ಯಾದ್ಯಂತ ಸದ್ಯ 630 ಏಕಪರದೆ ಚಿತ್ರಮಂದಿರಗಳು ಮತ್ತು 260 ಬಹುಪರದೆಯ ಮಲ್ಟಿಪ್ಲೆಕ್ಸ್‌ಗಳು ಇವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Srivathsa Joshi Column: ಸುವರ್ಚಲೆಯ ಒಗಟಿಗೆ ಉತ್ತರವಾಗಿ ಬಂದು ವರಿಸಿದ ಶ್ವೇತಕೇತು
ವಾಸ್ತವದಲ್ಲಿ ಚಿತ್ರಮಂದಿರಗಳ ಸಂಖ್ಯೆ ಕಮ್ಮಿಯಾದರೆ/ಅವು ಕೆಡವಲ್ಪಟ್ಟರೆ, ಮಿಕ್ಕ ಚಿತ್ರಮಂದಿರ ಗಳಲ್ಲಿ ದಟ್ಟಣೆ ಇರಬೇಕು. ಆದರೆ ಇತ್ತೀಚೆಗೆ ಚಿತ್ರಮಂದಿರಗಳು ಬಿಕೋ ಎನ್ನುತ್ತಿವೆ. ಗುಣಮಟ್ಟದ ಚಿತ್ರಗಳ ಕೊರತೆ, ವಾರಾಂತ್ಯ ಕುಟುಂಬ ಸಮೇತ ಸಿನಿಮಾ ನೋಡುವ ಪರಿಪಾಠ ತಪ್ಪಿರುವುದು, ವಿದ್ಯಾರ್ಥಿಗಳು- ಯುವಕರು ತಮ್ಮ ಹೆಚ್ಚಿನ ಸಮಯವನ್ನು ಐಷಾರಾಮಿ ಮಾಲ್ ಗಳಲ್ಲಿ ಕಳೆಯುವುದು ಈ ಪರಿಸ್ಥಿತಿಗೆ ಕಾರಣ ಎನ್ನುತ್ತಾರೆ ವಿಶ್ಲೇಷಕರು.
ಮಾತ್ರವಲ್ಲದೆ, ವಾರಾಂತ್ಯದ ದಿನಗಳಲ್ಲಿ ನಗರದಿಂದಾಚೆ ಪ್ರವಾಸಕ್ಕೆ ಹೋಗುವುದು, ಮನೆಯಲ್ಲೇ ಕುಳಿತು ಆಹ್ಲಾದಕರ ವಾತಾವರಣದಲ್ಲಿ ಒಟಿಟಿ ಮತ್ತು ನೆಟ್ ಫ್ಲಿಕ್ಸ್ ಮುಂತಾದ ಮಾಧ್ಯಮಗಳ ಮೂಲಕ ತಮ್ಮ ಅನುಕೂಲದ ಸಮಯದಲ್ಲಿ ತಮ್ಮಿಷ್ಟದ ಸಿನಿಮಾ ನೋಡುವ ಸೌಲಭ್ಯಗಳಿಂದಾಗಿ ಸಿನಿಪ್ರಿಯರು ಚಿತ್ರಮಂದಿರಗಳಿಂದ ದೂರವಾಗುತ್ತಿದ್ದಾರೆ ಎಂಬ ಅಭಿಪ್ರಾಯವೂ ಇದೆ.
ವಾಸ್ತವದಲ್ಲಿ ಈ ಸಮಸ್ಯೆಯನ್ನು ಇನ್ನೂ ಆಳವಾಗಿ ವಿಶ್ಲೇಷಿಸಿದರೆ, ಚಿತ್ರಮಂದಿರಗಳಲ್ಲಿನ ದುಬಾರಿ ಪ್ರವೇಶದರವೇ ಆ ಕಡೆ ಪ್ರೇಕ್ಷಕರು ಹೆಜ್ಜೆ ಹಾಕದಿರುವುದಕ್ಕೆ ಕಾರಣ ಎನ್ನಬಹುದು. ದುಬಾರಿ ಪ್ರವೇಶದರದಿಂದಾಗಿ, ಚಲನಚಿತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಆನಂದಿಸಿ ಚಿತ್ರೋದ್ಯಮ ವನ್ನು ಪ್ರೋತ್ಸಾಹಿಸುತ್ತಿರುವ ಕೆಳ ಮತ್ತು ಮಧ್ಯಮ ವರ್ಗದವರು ಚಿತ್ರಮಂದಿರಗಳಿಂದ ವಿಮುಖ ರಾಗುವಂತಾಗಿದೆ.
ಇನ್ನು ಥಿಯೇಟರ್‌ನಲ್ಲಿ ಮಾರುವ ತಿಂಡಿ-ತಿನಿಸು, ತಂಪುಪಾನೀಯಗಳ ದರವೂ ಅತಿರೇಕದ ಮಟ್ಟದಲ್ಲಿರುತ್ತದೆ. ಪ್ರೇಕ್ಷಕರು ಕನಿಷ್ಠಪಕ್ಷ ಕುಡಿಯುವ ನೀರನ್ನೂ ಚಿತ್ರಮಂದಿರದೊಳಗೆ ತೆಗೆದು ಕೊಂಡು ಹೋಗುವಂತಿಲ್ಲ. ಇನ್ನು ವಾಹನ ನಿಲುಗಡೆ ಶುಲ್ಕವೂ ದುಬಾರಿ. ‘ಮಲ್ಟಿಪ್ಲೆಕ್ಸ್‌ಗಳಿಗೆ ಹೋದರೆ, ಮನೆಗೆ ಮರಳುವಾಗ ಜೇಬು ಖಾಲಿ; ಇಲ್ಲಿ ಸಿನಿಮಾ ನೋಡುವುದು ಆರಂಕಿಗಿಂತ ಕಡಿಮೆ ಸಂಬಳದವರಿಗೆ ಸಾಧ್ಯವಿಲ್ಲ’ ಎಂದು ಜನರು ಜೋಕ್ ಮಾಡುವುದಿದೆ. ಇದು ವಾಸ್ತವವೂ ಹೌದು.
ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರವೀಕ್ಷಣೆಯ ಅನುಭವವೇ ಬೇರೆ, ಏಕಪರದೆಯ ಚಿತ್ರಮಂದಿರಗಳ ಸಂಗಡ ಅವನ್ನು ಹೋಲಿಸಲಾಗದು ಮತ್ತು ಅವುಗಳಂತೆ ಪ್ರವೇಶದರವನ್ನು ನಿಗದಿಪಡಿಸುವುದೂ ಕಷ್ಟವೇ. ಹಾಗಂತ ಪ್ರವೇಶದರವು ಸಿನಿಪ್ರಿಯರನ್ನು ಹೊಡೆದೋಡಿಸುವಂತೆ ಇರಬಾರದಲ್ಲವೇ? ವಿಪರ್ಯಾಸವೆಂದರೆ, ಜೇಬನ್ನು ಲೂಟಿಮಾಡುವ ಇಂಥ ಪ್ರವೇಶದರವು ಕರ್ನಾಟಕಕ್ಕೆ, ಮುಖ್ಯವಾಗಿ ಬೆಂಗಳೂರಿಗೆ ಸೀಮಿತವಾಗಿದೆ ಎನ್ನಲಾಗುತ್ತದೆ.
ಏಕೆಂದರೆ, ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್ ಮುಂತಾದೆಡೆ ಪ್ರವೇಶದರ ಮಿತಿಯಲ್ಲಿದೆ. ಅತಿರೇಕದ ಪ್ರವೇಶದರದ ವಿರುದ್ಧ ಸಿನಿಪ್ರಿಯರು ಮತ್ತು ಚಿತ್ರೋದ್ಯಮದವರು ಭಾರಿ ಆಕ್ರೋಶ ವ್ಯಕ್ತಪಡಿಸಿದಾಗ, ಕರ್ನಾಟಕ ಸರಕಾರವು 2017ರಲ್ಲಿ ಪ್ರವೇಶದರಕ್ಕೆ 200 ರುಪಾಯಿಯ ಗರಿಷ್ಠ ಮಿತಿಯನ್ನು ಹೇರಿತ್ತು. ಆದರೆ ಇದಕ್ಕೆ ತಡೆ ಒದಗಿತ್ತು.
ಇತ್ತೀಚೆಗೆ ಈ ಪ್ರವೇಶದರದ ವಿರುದ್ಧ ಸಿನಿಪ್ರಿಯರ ಮತ್ತು ಉದ್ಯಮದವರ ಕೂಗು ಸ್ವಲ್ಪ ಜೋರಾಗಿದ್ದು, ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪದ ದರವನ್ನು ನಿಗದಿಪಡಿಸುವ ಬಗ್ಗೆ 2025-26ರ ಆಯವ್ಯಯದಲ್ಲಿ ಪ್ರಸ್ತಾವನೆ ಮಾಡಲಾಗಿತ್ತು. ಈಗ ಮುಂದಿನ ಹಂತದ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ.
ಚಿತ್ರಮಂದಿರಗಳಲ್ಲಿನ ಅತಿರೇಕದ ಪ್ರವೇಶದರದ ಬಗ್ಗೆ ಜನಸಾಮಾನ್ಯರಂತೆ ಚಿತ್ರೋದ್ಯಮದವರೂ ಅಸಮಾಧಾನ ವ್ಯಕ್ತಪಡಿಸುತ್ತಿರುವುದರಲ್ಲಿ ಅರ್ಥವಿದೆ. ‘ಮೀಟರ್ ಬಡ್ಡಿ’ಯವರಿಂದ ಕೋಟಿಗಟ್ಟಲೆ ಹಣವನ್ನು ಸಾಲ-ಸೋಲ ಮಾಡಿ (ಬ್ಯಾಂಕುಗಳು ಚಿತ್ರೋದ್ಯಮಕ್ಕೆ ಸಾಲ ನೀಡುವುದು ಕಡಿಮೆ) ಚಿತ್ರನಿರ್ಮಾಣಕ್ಕೆ ಹೂಡಿಯೂ, ದುಬಾರಿ ಟಿಕೆಟ್ ದರದ ಕಾರಣಕ್ಕೆ ಜನರು ಚಿತ್ರವನ್ನು ನೋಡ ದಿದ್ದರೆ, ನಿರ್ಮಾಪಕರು ರಸ್ತೆಗೆ ಬೀಳಬೇಕಾಗುತ್ತದೆ.
ಕಳಪೆಯಾಗಿರುವ ಕಾರಣಕ್ಕೆ ಚಿತ್ರವು ಸೋಲುವುದು ಬೇರೆ ಮಾತು; ಆದರೆ ಜನರು ನೋಡದೆಯೇ ಡಬ್ಬಾ ಸೇರಿದರೆ ಅದು ದುರಂತವಲ್ಲವೇ? ಇನ್ನೊಂದು ವಿಚಿತ್ರವೆಂದರೆ, ಕೆಲವು ಜನಪ್ರಿಯ ಸ್ಟಾರ್ ಗಳ ಚಿತ್ರವು ಬಿಡುಗಡೆಯಾದಾಗ ಟಿಕೆಟ್ ದರ ಇನ್ನೂ ಹೆಚ್ಚಾಗುತ್ತದೆ. ಇದು ಹಾಕಿದ ಬಂಡವಾಳ ವನ್ನು ವಾರದಲ್ಲೇ ಹಿಂಪಡೆಯುವ ತಂತ್ರವೋ ಏನೋ?! ಪರಭಾಷಾ ಚಿತ್ರಗಳ ಟಿಕೆಟ್ ದರವು, ಕನ್ನಡ ಚಿತ್ರಗಳಿಗಿಂತ ಹೆಚ್ಚು. ಇದು ಒಂದು ರೀತಿಯಲ್ಲಿ ನಂದರಾಯನ ದರ್ಬಾರಿನಂತೆ ಪ್ರದರ್ಶಕರ ವಲಯದಲ್ಲಿ ನಡೆಯುತ್ತಿದೆ.
ಹೀಗಾಗಿ ಸರಕಾರ ಆಶಿಸಿರುವ ಈ ಹೊಸ ನಿಯಮಾವಳಿಗೆ ಯಾವುದೇ ಅಡೆತಡೆ ಬರದಿದ್ದರೆ, ಚಿತ್ರೋದ್ಯಮದ ಪ್ರದರ್ಶಕರ ವಲಯದಲ್ಲಿ ಒಂದಷ್ಟು ಶಿಸ್ತು ಮೂಡುವ ಆಶಾಭಾವನೆ ಕಾಣುತ್ತಿದೆ. ಜತೆಗೆ ಚಿತ್ರೋದ್ಯಮದವರು ಮತ್ತು ಪ್ರೇಕ್ಷಕರೂ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಆದರೆ ಸಿನಿಮಾ ವ್ಯಾಮೋಹವು ಕನ್ನಡಿಗರಿಗಿಂತ ಕನ್ನಡೇತರರಲ್ಲಿ ಹೆಚ್ಚಿರುವುದರಿಂದ, ಈ ನಿಯಮಾ ವಳಿಯಿಂದ ಪರಭಾಷಾ ಚಿತ್ರೋದ್ಯಮಕ್ಕೆ ಅನುಕೂಲವಾಗುವ ಸಂಭವ ಹೆಚ್ಚು ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿನ ಸಿನಿಮಾ ಪ್ರೇಕ್ಷಕರಲ್ಲಿ ಕನ್ನಡೇತರರು ಗಣನೀಯ ಸಂಖ್ಯೆಯಲ್ಲಿದ್ದಾರೆ ಎಂಬುದು ಒಪ್ಪುವ ಮಾತೇ. ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡುವ ಮಜವೇ ಬೇರೆ. ಕೈಗೆಟುಕುವ ದರದಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ ಆಗುವಂತಾದರೆ ಹೆಚ್ಚು ಜನರು ಚಿತ್ರಮಂದಿರಗಳೆಡೆಗೆ ಧಾವಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಯಾವುದಕ್ಕೂ ಕಾದು ನೋಡೋಣ.
(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)