ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಇವಳೇಕೆ ಚಂದ, ಅವಳೇಕೆ ಮಂದ- ಏನಿದು ಲೆಕ್ಕಾಚಾರ ?

ಸೌಂದರ್ಯವನ್ನು ನಿರ್ದೇಶಿಸುವ ಒಂದು ಗುಣವೆಂದರೆ ಬಣ್ಣ. ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಸಿಗುವ ಹಣ್ಣು ಮತ್ತಿತರ ಆಹಾರವಸ್ತುಗಳು ತಿನ್ನಲು ಯೋಗ್ಯ ಎಂದು ನಾವು ಗುರುತಿಸುವುದು ಅವುಗಳು ಕೆಲವೊಂದು ಬಣ್ಣವನ್ನು ಪಡೆದಾಗ. ಆ ಕಾರಣಕ್ಕೆ ಕೆಂಪು, ಹಳದಿ ಮತ್ತು ಅಚ್ಚ ಹಸಿರು ನಮಗೆ ಎಲ್ಲಿಲ್ಲದ ಆಕರ್ಷಣೆ. ಆ ಬಣ್ಣಗಳು ತಕ್ಷಣ ನಮ್ಮ ಗಮನ ಸೆಳೆಯಬಲ್ಲವು.

ಇವಳೇಕೆ ಚಂದ, ಅವಳೇಕೆ ಮಂದ- ಏನಿದು ಲೆಕ್ಕಾಚಾರ ?

ಅಂಕಣಕಾರ ಶಿಶಿರ್‌ ಹೆಗಡೆ

ಶಿಶಿರಕಾಲ

shishirh@gmail.com

ಎರಡನೇ ವಿಶ್ವಯುದ್ಧ ತುರುಸಿನಲ್ಲಿ ನಡೆಯುತ್ತಿತ್ತು. ಅಮೆರಿಕ ಆಗ ತಾನೆ ಅಣುಬಾಂಬ್ ಪರೀಕ್ಷೆ ನಡೆಸಿತ್ತು. ಈಗ ಜಪಾನಿನ ಯಾವ ನಗರಗಳ ಮೇಲೆ ಮೊದಲ ಅಣುಬಾಂಬ್ ಪ್ರಯೋಗಿಸಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳು ಅದಾಗಲೇ ದಾಳಿಗೆ ಜಪಾನಿನ ಐದು ನಗರಗಳ ಪಟ್ಟಿ ತಯಾರಿಸಿ ಅಮೆರಿಕನ್ ಮಿಲಿಟರಿ ಜನರಲ್ ಮೇಜಿನ ಮೇಲಿಟ್ಟಿದ್ದವು. ಕ್ಯೋಟೋ, ಹಿರೋಷಿಮಾ, ನಾಗಸಾಕಿ, ಯೋಕೋಹಾಮ ಮತ್ತು ಕೊಕುರಾ ಈ ನಗರ ಗಳಲ್ಲಿ ಎರಡನ್ನು ಆರಿಸಬೇಕಿತ್ತು. ಅತ್ಯಂತ ಹೆಚ್ಚಿನ ಹಾನಿ ಮಾಡಬೇಕೆನ್ನುವುದು ಅಮೆರಿಕನ್ನರ ಉದ್ದೇಶ. ಅದರ ಪ್ರಕಾರ ಪ್ರಶಸ್ತ ವಾಗಿದ್ದ ನಗರಗಳೆಂದರೆ ಹಿರೋಷಿಮಾ ಮತ್ತು ಕ್ಯೋಟೋ. ಹಿರೋಷಿಮಾ ಜಪಾನಿನ ಎರಡನೇ ಮುಖ್ಯ ನಗರ. ಯುದ್ಧಕ್ಕೆ ಮಿಲಿಟರಿ ಸರಬರಾಜು ನೆರವೇರುತ್ತಿದ್ದುದು ಈ ನಗರ ದಿಂದ.

ಇದನ್ನೂ ಓದಿ: Shishir Hegde Column: ಅಮೆರಿಕ ಅಧ್ಯಕ್ಷರ ವೈಟ್‌ ಹೌಸ್‌ ಮನೆಯೊಕ್ಕಲು

ಹಾಗಾಗಿ ಅದೊಂದು ಆಯ್ಕೆಯಾಯಿತು. ಎರಡನೆಯದು ಕ್ಯೋಟೋ. ಅದು ಜಪಾನಿನ ಸಾಂಸೃತಿಕ, ಅತ್ಯಂತ ಸುಂದರ ನಗರ. ಆಗ ಹೆನ್ರಿ ಸ್ಟಿಮ್ಸನ್ ಅಮೆರಿಕದ ಯುದ್ಧ ಕಾರ್ಯಾ ಚರಣೆಯ ಕಾರ್ಯದರ್ಶಿಯಾಗಿದ್ದವನು. ಹೆನ್ರಿ ಸ್ಟಿಮ್ಸನ್ ಕೆಲವು ಸಮಯದ ಹಿಂದೆ ತನ್ನ ಹೆಂಡತಿಯ ಜತೆ ಜಪಾನಿಗೆ ಪ್ರವಾಸಕ್ಕೆಂದು ಹೋಗಿ ಬಂದಿದ್ದ. ಅವನು ಜಪಾನಿನ ಸಂಸ್ಕೃ ತಿಗೆ, ಸೌಂದರ್ಯಕ್ಕೆ ಮಾರುಹೋಗಿದ್ದ.

ಅಂಥ ಸಾಂಸ್ಕೃತಿಕ ಸೌಂದರ್ಯದ ರಾಜಧಾನಿ ಕ್ಯೋಟೋ ಮೇಲೆ ಬಾಂಬ್ ಹಾಕಿದರೆ ಜಪಾನಿಯರ ಸಂಸ್ಕೃತಿಯನ್ನು ಸರ್ವನಾಶ ಮಾಡಿದಂತಾಗುತ್ತಿತ್ತು. ಜಪಾನ್ ಅನ್ನು ಕಣ್ಣಾರೆ ಕಂಡು ಅಲ್ಲಿನ ಸೌಂದರ್ಯವನ್ನು ಸವಿದು ಬಂದ ಸ್ಟಿಮ್ಸನ್‌ಗೆ ಕ್ಯೋಟೋ ನಗರದ ಮೇಲೆ ದಾಳಿ ಮಾಡುವುದು ಸುತರಾಂ ಒಪ್ಪಿಗೆಯಿರಲಿಲ್ಲ. ಅಷ್ಟು ಸುಂದರ ನಗರವನ್ನು ರಕ್ಷಿಸಬೇಕು ಎಂಬ ಬಯಕೆ ಸ್ಟಿಮ್ಸನ್‌ಗೆ. ಅವನಿಗೆ ಜಪಾನ್ ಕಂಡುಬಂದದ್ದರಿಂದ ಅದೊಂದು ವೈಯಕ್ತಿಕ ವಿಚಾರವಾಗಿತ್ತು.

ಆತ ಅಮೆರಿಕ ಅಧ್ಯಕ್ಷ ಟ್ರೂಮನ್‌ರನ್ನು ಒಪ್ಪಿಸಿ ಕ್ಯೋಟೋ ನಗರವನ್ನು ಪಟ್ಟಿಯಿಂದ ಹೊರ ತೆಗೆಸಿದ. ಹೀಗೆ ಒಂದು ನಗರದ ಸೌಂದರ್ಯವೇ ಅಲ್ಲಿನ ನಿವಾಸಿಗಳ ಸರ್ವನಾಶ ವನ್ನು ತಡೆಯಿತು. ಸುಂದರ ಹುಡುಗಿ/ ಹುಡುಗ, ಸುಂದರ ಸಂಜೆ, ಸುಂದರ ಕಟ್ಟಡ, ಸುಂದರ ಸಂಗೀತ, ಸುಂದರ ಪ್ರಕೃತಿ, ಸುಂದರ ಜಲಪಾತ, ಹೂವು, ಸ್ಟೇಡಿಯಂ, ಪಾರ್ಕ್, ಚಿಟ್ಟೆ, ಊರು, ಚಂದಿರ ಇತ್ಯಾದಿ ಇತ್ಯಾದಿ. ನಾವೆಲ್ಲ ನಿತ್ಯ ಅದೆಷ್ಟೋ ಇಂಥ ‘ಸುಂದರ’ ಗಳನ್ನು ನೋಡುತ್ತೇವೆ.

ಅಷ್ಟಕ್ಕೂ ಸೌಂದರ್ಯ ಎಂದರೇನು ಎಂದು ಯಾವತ್ತಾದರೂ ಯೋಚಿಸಿದ್ದೀರಾ? ವಸ್ತು, 0ಜಾಗ, ವ್ಯಕ್ತಿ ಇದೆಲ್ಲ ಸುಂದರ ಎಂದೆನಿಸಿಕೊಳ್ಳುವುದು ಹೇಗೆ? ನೋಡಿದಾಕ್ಷಣ ನಮ್ಮ ಮನಸ್ಸಿಗೆ ಆಹ್ಲಾದ ಕೊಡುವುದೇ ಸೌಂದರ್ಯ ಎನ್ನುವುದಾದರೆ ಆ ಖುಷಿ ಹುಟ್ಟುವು ದಾದರೂ ಏಕೆ? ಚಂದ ಎನ್ನುವುದು ನೋಡುವವರ ಕಣ್ಣಿನಲ್ಲಿದೆ ಎಂದು ಹೇಳುವುದಿದೆ. ಆದರೆ ಜಲಪಾತವನ್ನು, ಹೂವನ್ನು, ರವಿವರ್ಮ ಬಿಡಿಸಿದ ಚಿತ್ರವನ್ನು, ಐಶ್ವರ್ಯ ರೈ ಅನ್ನು ನೋಡಿದಾಕ್ಷಣ ಎಲ್ಲರಿಗೂ ಸುಂದರವೆಂದೇ ಅನಿಸುತ್ತದೆ.

ಬೆಂಗಳೂರಿನ ವೃಷಭಾವತಿ, ಇನ್ಯಾವುದೋ ಹೊಲಸು ಕೊಳಕಾಗಿಯೇ ಕಾಣಿಸುತ್ತವೆ. ಕೆಲವು ಎಲ್ಲರಿಗೂ ಸುಂದರ ಅಥವಾ ಕೊಳಕು. ಇನ್ನು ಕೆಲವು ಕೆಲವರಿಗಷ್ಟೇ ರೂಪ ಯಾ ಕುರೂಪ. ಹಾಗಾದರೆ ಸೌಂದರ್ಯದ ಬಗೆಗಿನ ನಮ್ಮ ಲೆಕ್ಕಾಚಾರಗಳೇನು? ನಮ್ಮ ಸುತ್ತಲಿ ನವರಲ್ಲಿ ಕೆಲವರು ಚಂದ, ಇನ್ನು ಕೆಲವರು ಚಂದವಲ್ಲ, ಇದು ನಮ್ಮೆಲ್ಲರೊಳಗಿನ ನಿರಂ ತರ ಲೆಕ್ಕಾಚಾರ.

ಹಾಗೆಲ್ಲ ಬಾಹ್ಯ ಸೌಂದರ್ಯವನ್ನು ನೋಡುವುದು ಸರಿಯಲ್ಲ, ಆಂತರ್ಯದ ಸೌಂದರ್ಯ ಕಾಣಬೇಕು ಎಂಬುದೆಲ್ಲ ಸರಿ. Don't judge the book by it's cover - ಅದೂ ಸರಿ. ಆದರೆ ಪುಸ್ತಕದ ಮುಖಪುಟ ಚಂದವಿಲ್ಲದಿದ್ದಲ್ಲಿ ಅದನ್ನು ಖರೀದಿಸಲು ಹೇಗೆ ಮನಸ್ಸಾಗುವು ದಿಲ್ಲವೋ ಹಾಗೆಯೇ ನಮ್ಮ ದಿನನಿತ್ಯದ ಅದೆಷ್ಟೋ ನಿರ್ಧಾರಗಳನ್ನು ನಮ್ಮೊಳ ಗಿನ ಸೌಂದರ್ಯಮಾಪಕ ನಿರ್ದೇಶಿಸುತ್ತದೆ ಎನ್ನುವುದು ಕೂಡ ಸತ್ಯ. ಈ ಸೌಂದರ್ಯಪರ ಒಲವು ಅತ್ಯಂತ ಸಹಜ, ಸಾಮಾನ್ಯ. ಕೆಲವು ಅರಿವಿಗೆ ಬರುವಂಥವು, ಕೆಲವು ನಮಗೆ ತಿಳಿಯದೇ ನಡೆಯುವಂಥವು.

ಯಾವುದು ಸುಂದರವೋ, ಅದು ಒಳ್ಳೆಯದು. ಯಾರು ಸುಂದರವಾಗಿರುತ್ತಾರೋ, ಅವರು ಬುದ್ಧಿವಂತರು, ಗಟ್ಟಿ ಮನಸ್ಸಿನವರು, ಬಲಾಢ್ಯರು, ಸುಖಿ, ಭಾಗ್ಯವಂತರು ಇತ್ಯಾದಿ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸುಂದರವಾಗಿದ್ದಾರೆ ಎಂದರೆ ಆ ವ್ಯಕ್ತಿಗೆ ಬಹಳಷ್ಟು ಸ್ನೇಹಿತ ರಿದ್ದಾರೆ, ಅವರದು ಖುಷಿಯ ಬದುಕು, ಅವರು ಒಳ್ಳೆಯ ಅಮ್ಮ/ಅಪ್ಪ, ಅವರು ಒಳ್ಳೆಯ ಮಕ್ಕಳು. ಅವರು ಪ್ರವಾಸಕ್ಕೆಂದು ಹೋದಾಗ ಬಹಳ ಮಜ ಮಾಡುತ್ತಾರೆ, ಅವರದು ಮೋಜಿನ ಬದುಕು, ಆದರ್ಶ ಸಂಸಾರ, ಕೆಲಸ, ಬದುಕು. ಹೀಗೆ ಕೇವಲ ದೈಹಿಕ ಸೌಂದರ್ಯ ವನ್ನು ಕಂಡು ನಾವು ಏನೇನನ್ನೋ ಕಲ್ಪಿಸಿಕೊಳ್ಳುತ್ತೇವೆ.

ಸೋಷಿಯಲ್ ಮೀಡಿಯಾದಲ್ಲಿ ಈ ಅನುಭವ ಸಾಮಾನ್ಯ. ಚಂದವಿಲ್ಲದವರ ಬಗ್ಗೆ ಏನೋ ಒಂದು ತಿರಸ್ಕಾರ, ಅಸಡ್ಡೆ ಇಲ್ಲವೇ ಒಂದಿಷ್ಟು ಸಹಾನುಭೂತಿ. ಇದು ಸಾಮಾನ್ಯ ಮತ್ತು ಎಲ್ಲರೂ ತಿಳಿದೋ, ತಿಳಿಯದೆಯೋ ಮಾಡುವ ಲೆಕ್ಕಾಚಾರ, ನಡೆ, ಕೆಲಸ. ಸರಿ-ತಪ್ಪು ಅದೆಲ್ಲ ಪಕ್ಕಕ್ಕಿಡಿ. ಇಂಥ ಒಲವುಗಳಿಗೆ ಮೂಲ ಕಾರಣವೇನು? ಚಿಕ್ಕ ಮಕ್ಕಳು ತಮ್ಮೆದು ರಿನವರ ಸೌಂದರ್ಯ ನೋಡುವುದಿಲ್ಲ ಎನ್ನುವ ನಂಬಿಕೆಯೊಂದಿದೆ. ಆದರೆ ಇತ್ತೀಚೆಗೆ ತಿಳಿದುಬಂದಿರುವುದೇನೆಂದರೆ ಹುಟ್ಟಿದ ಮಗು ಮೂರು ಅಥವಾ ನಾಲ್ಕನೇ ತಿಂಗಳಿಗೆ ಇದು ಸುಂದರ, ಇದು ಸುಂದರವಲ್ಲ ಎನ್ನುವ ವಿಂಗಡಣೆಯನ್ನು ಆರಂಭಿಸಿ ಬಿಡುತ್ತದಂತೆ.

ಅಷ್ಟು ಚಿಕ್ಕ ಮಗು ಎದುರಿಗಿಟ್ಟ ಚಾಕೊಲೇಟ್ ಗಳಲ್ಲಿ ಸುಂದರವಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ಅದೇ ಸಮಯದಲ್ಲಿ ಎದುರಿಗಿರುವ ವ್ಯಕ್ತಿಯ ಸೌಂದ ರ್ಯವನ್ನೂ ನೋಡಿ ವ್ಯವಹರಿಸುತ್ತದಂತೆ. ದೊಡ್ಡವರಿಗೆ ಏನೆಲ್ಲ ಗುಣಲಕ್ಷಣವಿದ್ದರೆ ಒಬ್ಬ ವ್ಯಕ್ತಿ ಸುಂದರವೋ ಅದೇ ಗುಣಲಕ್ಷಣವನ್ನು ಆರು ತಿಂಗಳ ಮಗು ಕೂಡ ಗ್ರಹಿಸುತ್ತದಂತೆ. ಒಂದು ಗುಣವನ್ನು ಮಗು ಅಷ್ಟು ಬೇಗ ಹೊಂದುತ್ತದೆ ಎಂದರೆ ಇದು ಕೇವಲ ಸಾಮಾಜಿಕ ಸೃಷ್ಟಿಯಷ್ಟೇ ಅಲ್ಲ ಎಂದಾಯಿತಲ್ಲ. ಹಾಗಾದರೆ ನಮ್ಮೆಲ್ಲರಲ್ಲಿ ಸೌಂದರ್ಯ ಪರತೆ ರಕ್ತಗತ ಹೇಗೆ? ಪಕ್ಷಪಾತ ಸ್ವಾಭಾವಿಕ ಹೇಗೆ? ಯಾವುದೇ ಗುಣವಿರಲಿ, ಅದು ಹುಟ್ಟು ಗುಣ ವಾಗಬೇಕೆಂದರೆ ಬಹುದೀರ್ಘ ಕಾಲ ಮನುಷ್ಯನ ಅವಶ್ಯಕತೆಯೇ ಆಗಿರಬೇಕಾಯಿತು.

ಹಾಗಾಗಿ ವಿಕಸನದ ಹಿನ್ನೆಲೆಯಲ್ಲಿಯೇ ಇದನ್ನು ನೋಡಬೇಕು. ಮನುಷ್ಯನದು ಅದೆಷ್ಟೋ ಲಕ್ಷ ವರ್ಷದ ವಿಕಸನದ ಕಥೆ. ಈ ದಾರಿಯಲ್ಲಿ ಮನುಷ್ಯನಿಗಿದ್ದುದು ಪ್ರಾಣಿಗಳಂತೆ ಕೆಲವೇ ದ್ಯತೆಗಳು. ಅದರಲ್ಲಿ ಮೊದಲನೆಯದು ತಾನು ಬದುಕಬೇಕು, ಎರಡನೆಯದು ತನ್ನ ವಂಶ ವೃದ್ಧಿಯಾಗಬೇಕು. ಹಾಗಾಗಿ ಆಕರ್ಷಣೆಯ ವಿಷಯ ಬಂದಾಗ ಸೌಂದರ್ಯ ಎಂದರೆ ಅದು ಮೂಲದಲ್ಲಿ ಆರೋಗ್ಯ. ಒಬ್ಬ ವ್ಯಕ್ತಿ ಸುಂದರವಾಗಿರುವುದೆಂದರೆ ನಮ್ಮ ಅಂತರ್‌ದೃಷ್ಟಿ ಅಲ್ಲಿ ನೋಡುವುದು ಅವರ ದೈಹಿಕ ಆರೋಗ್ಯವನ್ನು.

ಏನೋ ಒಂದು ಊನವಿದೆ ಎಂದರೆ ಆ ವ್ಯಕ್ತಿಯತ್ತ ಆಕರ್ಷಣೆ ಕಡಿಮೆ. ತನ್ನ ವಂಶ ಮುಂದುವರಿಯಬೇಕೆಂದರೆ ಸಂಗಾತಿಯ ಆರೋಗ್ಯ ಲಕ್ಷಣಗಳೇ ಮುಖ್ಯ- ಅದುವೇ ಸೌಂದ ರ್ಯವೆಂದು ಪರಿಭಾವಿಸಲ್ಪಡುವುದು. ಈ ವಂಶಾಭಿವೃದ್ಧಿ ಅಷ್ಟು ಮುಖ್ಯವಾಗಿರುವು ದರಿಂದ ಸಂಗಾತಿಯು ಸರಿಯಾದ ದೇಹವನ್ನು ಹೊಂದುವುದೂ ಮುಖ್ಯ ವಾಗುತ್ತದೆ. ಈ ಅವಶ್ಯಕತೆಯೇ ದೈಹಿಕ ಸೌಂದರ್ಯದ ಗ್ರಹಿಕೆಯ ಮೂಲ ಪರಿಮಾಣ ವಾಗಿರುವುದು. ಈ ಮೂಲಗುಣವೇ ವಿಸ್ತೃತಗೊಂಡ ಉಳಿದವರ ದೈಹಿಕ ಸೌಂದರ್ಯ ದೆಡೆಗಿನ ಗುಣಮಾಪಕ ವಾಗಿರುವುದು. ದೈಹಿಕ ಸೌಂದರ್ಯ ಎಂದರೆ ಅದು ಸಮ್ಮಿತೀಯ ವಾಗಿರಬೇಕು ( symmetrical). ಅಂದರೆ, ಸಮಪಾರ್ಶ್ವತೆ ಅಥವಾ ಸಮರೂಪತೆ ಅಲ್ಲಿ ಕಾಣಬರಬೇಕು.

ಮೂಗು, ಕಣ್ಣು, ಕೈ, ಮುಖ ಹೀಗೆ ದೇಹದ ಭಾಗಗಳೆಲ್ಲ ಸರಿಯಾದ ಅಳತೆಯಲ್ಲಿರುವುದು. ಅದರಲ್ಲಿ ಯಾವುದೇ ಒಂದು ಹೆಚ್ಚೂಕಮ್ಮಿಯಿದ್ದರೂ ಅದು ನಮಗೆ ಆಕರ್ಷಕವಲ್ಲ. ನಾವು ನೋಡುವ ಎಲ್ಲರೆಡೆಗೂ ಅನ್ಯ ಅನಿಸಿಕೆಯಿಲ್ಲದಿದ್ದರೂ ಸೌಂದರ್ಯವನ್ನು ನಿರ್ದೇ ಶಿಸುವುದು ಮಾತ್ರ ಇದೇ ಗುಣ. ನೀವಿದನ್ನು ಗ್ರಹಿಸಿರುತ್ತೀರಿ. ನಾವು ಸುಂದರವೆನ್ನುವ ಬಹುತೇಕ ವಿಷಯಗಳು ಸಮ್ಮಿತಿ ( symmetry )ಯನ್ನು ಹೊಂದಿರುತ್ತವೆ. ‌

ಮುಖ, ಕಟ್ಟಡಗಳು, ಕಾರು, ಮೊಬೈಲ್, ಮನೆಯ ವಾಸ್ತು ಹೀಗೆ ನಮ್ಮ ಬಹುತೇಕ ರಚನೆ ಗಳು ಸಮ್ಮಿತಿಯನ್ನು ಹೊಂದಿರಬೇಕು. ದೇಹದ ಎಡಭಾಗದಂತೆ ಬಲಭಾಗ ಇರಬೇಕು. ವಸ್ತುವಾಗಿದ್ದರೆ ಯಾವುದೋ ಒಂದು ಕೋನದಲ್ಲಿ ಕತ್ತರಿಸಿದರೆ ಇಬ್ಭಾಗ ಹೋಲುವಂತಿರ ಬೇಕು. ಇದರಲ್ಲಿ ಸ್ವಲ್ಪವೇ ವ್ಯತ್ಯಾಸವಿದ್ದರೂ ನಮ್ಮ ಮಿದುಳು ಅದನ್ನು ಗ್ರಹಿಸಿ ಅದು ಸುಂದರವಲ್ಲ ಎಂದು ಷರಾ ಬರೆದುಬಿಡುತ್ತದೆ.

ಇದಕ್ಕೂ ನಮ್ಮ ಮನುಷ್ಯ ಸಹಜ ಸ್ವಭಾವವೇ ಕಾರಣ. ಪ್ರಕೃತಿಯಲ್ಲಿ ಸಮ್ಮಿತಿ ಎಂದರೆ ಅದು ಭದ್ರತೆ. ಒಂದು ಹಣ್ಣು ಅಥವಾ ತರಕಾರಿ ಚೆನ್ನಾಗಿದೆಯೇ ಎಂದು ಆರಿಸಿ ಚೀಲಕ್ಕೆ ಹಾಕಿಕೊಳ್ಳುವಾಗ ಕೈಯಲ್ಲಿ ಅದನ್ನು ಹಿಡಿದು ಒಂದು ಸುತ್ತು ಸುತ್ತುವುದಿದೆ. ಆ ಪರೀಕ್ಷೆ ಯಲ್ಲಿ ಆ ಹಣ್ಣನ್ನು ಕೀಟ ತಿಂದಿದೆಯೇ, ಸರಿಯಾಗಿ ಅದು ಪಕ್ವವಾಗಿಲ್ಲವೇ ಇತ್ಯಾದಿ ನೋಡುತ್ತೇವೆ.

ಇದು ವಿಕಸನದುದ್ದಕ್ಕೂ ಮುಖ್ಯವಾಗಿತ್ತು. ಸೇವಿಸುವ ಆಹಾರ ವಾಸ್ತು ಸಮ್ಮಿತಿಯಲ್ಲಿದೆ ಎಂದಾದರೆ ಅದು ಸುರಕ್ಷಿತ. ಅದೇ ರೀತಿ ಕಟ್ಟಡಗಳು, ಸೇತುವೆ ಮೊದಲಾದವುಗಳಿಂದ ಹಿಡಿದು ವಾಹನ, ಮನೆ ಎಲ್ಲದರಲ್ಲೂ ಸಮ್ಮಿತಿ ಎಂದರೆ ಅದು ಕೂಡ ಸುರಕ್ಷಿತ, ಗಟ್ಟಿ ಎನ್ನುವ ಮಿದುಳಿನ ಲೆಕ್ಕಾಚಾರ.

ಸೌಂದರ್ಯವನ್ನು ನಿರ್ದೇಶಿಸುವ ಇನ್ನೊಂದು ಗುಣವೆಂದರೆ ಬಣ್ಣ. ಪ್ರಕೃತಿಯಲ್ಲಿ ಸ್ವಾಭಾ ವಿಕವಾಗಿ ಸಿಗುವ ಹಣ್ಣು ಮತ್ತಿತರ ಆಹಾರವಸ್ತುಗಳು ತಿನ್ನಲು ಯೋಗ್ಯ ಎಂದು ನಾವು ಗುರುತಿಸುವುದು ಅವುಗಳು ಕೆಲವೊಂದು ಬಣ್ಣವನ್ನು ಪಡೆದಾಗ. ಆ ಕಾರಣಕ್ಕೆ ಕೆಂಪು, ಹಳದಿ ಮತ್ತು ಅಚ್ಚ ಹಸಿರು ನಮಗೆ ಎಲ್ಲಿಲ್ಲದ ಆಕರ್ಷಣೆ. ಆ ಬಣ್ಣಗಳು ತಕ್ಷಣ ನಮ್ಮ ಗಮನ ಸೆಳೆಯಬಲ್ಲವು. ಅದೇ ಕಾರಣಕ್ಕೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಈ ಮೂರು ಬಣ್ಣದ ಲೈಟ್‌ಗಳನ್ನು ಬಳಸುವುದು.

ಕೆಂಪು ಎಂದರೆ ಅದು ಬಲಿತ ಹಣ್ಣು. ಆ ಕಾರಣಕ್ಕೆ, ಬಣ್ಣವಿಲ್ಲದ ಗೋಬಿಮಂಚೂರಿಗಿಂತ ಕೆಂಪಗಿನ ಗೋಬಿ ಮಂಚೂರಿಯಿಂದ ಹೆಚ್ಚಿನ ರುಚಿಯ ಅನುಭವವಾಗುತ್ತದೆ. ರುಚಿ ಒಂದೇ ಇದ್ದರೂ ಕೆಂಪಗಿನದರೆಡೆಗೆ ಸಹಜ ಆಕರ್ಷಣೆ. ಬಣ್ಣಗಳೆಡೆಗೆ ನಮಗಿರುವ ಈ ಆಕರ್ಷಣೆಯನ್ನೇ ಬೇಕರಿಗಳು, ಆಹಾರ ತಯಾರಿಸಿ ಮಾರಾಟ ಮಾಡುವ ಕಂಪನಿಗಳು ಬಳಸಿಕೊಳ್ಳುವುದು.

ಹೋಟೆಲ್ಲಿನ ಮಸಾಲೆ ದೋಸೆಗೆ ಬಣ್ಣ ಬರಲಿ ಎಂದು ಸಕ್ಕರೆ ಬೆರೆಸುವುದು ಇತ್ಯಾದಿ. ಚಿಕ್ಕ ಮಕ್ಕಳೆದುರು ಬಣ್ಣಬಣ್ಣದ ಚಾಕೊಲೇಟ್ ಇಟ್ಟರೆ ಮಗು ಮೊದಲಿಗೆ ಆಯ್ಕೆ ಮಾಡಿ ಕೊಳ್ಳುವುದು ಹಣ್ಣಿನ ಬಣ್ಣಗಳಾದ ಹಳದಿ, ಕೆಂಪನ್ನು. ಮೇಲಿಂದ ಚಾಕೊಲೇಟ್ ಹಣ್ಣಿನ ಆಕಾರದ್ದಿದ್ದರೆ ಅದನ್ನು ಮಗು ಮೊದಲು ಆಯ್ಕೆಮಾಡಿಕೊಳ್ಳುವುದು ಈ ಕಾರಣಕ್ಕೆ. ಮಂದ ಬಣ್ಣಕ್ಕಿಂತ ಗಾಢ ಬಣ್ಣ ಹೆಚ್ಚು ಆಕರ್ಷಣೀಯ.

ಸೌಂದರ್ಯ ಗ್ರಹಿಕೆಯ ಈ ಲೆಕ್ಕಾಚಾರಕ್ಕೆ ಗಣಿತದಂದು ಸೂತ್ರವೂ ಇದೆ. ನೀವು ಗೋಲ್ಡನ್ ರೇಷಿಯೋ ಬಗ್ಗೆ ಕೇಳಿರಬಹುದು. ಥೀಟಾ = 1.618 ಇದು ಮನುಷ್ಯ ಕುಲದ ಸೌಂದರ್ಯ ಗ್ರಹಿಕೆಯ ಸೂತ್ರ. ಅದರ ಬಗ್ಗೆ ವಿವರಿಸಲಿಕ್ಕೆ ಹೋಗುವುದಿಲ್ಲ. ಆದರೆ ವಿಷಯ ಇಷ್ಟೆ. ವ್ಯಕ್ತಿ, ವಸ್ತು ಏನೇ ಇರಲಿ, ಈ ಒಂದು ಅನುಪಾತದಲ್ಲಿದ್ದರೆ ನಮಗೆಲ್ಲರಿಗೂ ಚಂದ ವೆನಿಸುತ್ತದೆ. ಈ ಥೀಟಾ ಅನುಪಾತವನ್ನು ಬಹಳ ಹಿಂದೆಯೇ ಭಾರತೀಯರು ಗ್ರಹಿಸಿದ್ದರು. ಏಕೆಂದರೆ ಭಾರತೀಯ ವಾಸ್ತುಶಾಸದಲ್ಲಿ ಈ ಗೋಲ್ಡನ್ ಅನುಪಾತ ಇರುವುದನ್ನು ಎಡೆ ಯೂ ಕಾಣಬಹುದು.

ತಮಿಳುನಾಡಿನ ಬೃಹದೀಶ್ವರ ದೇವಸ್ಥಾನ, ಕೋನಾರ್ಕ್‌ನ ಸೂರ್ಯ ದೇವಾಲಯ, ಮಧುರೈ ಮೀನಾಕ್ಷಿ ದೇಗುಲ ಇವೆಲ್ಲವೂ ಇದೇ ಅನುಪಾತದಲ್ಲಿರುವವು. ಅಷ್ಟೇ ಅಲ್ಲ, ನಟರಾಜನ ವಿಗ್ರಹ, ಶ್ರೀ ಯಂತ್ರ, ಇತರ ಯಂತ್ರಗಳು, ದೇವರ ವಿಗ್ರಹ, ಈಶ್ವರ ಲಿಂಗ ಎಲ್ಲವೂ ಏಕ್‌ದಂ ಇದೇ ಅನುಪಾತದಲ್ಲಿವೆ. ಅಷ್ಟೇ ಏಕೆ, ಇಡೀ ಕಾಶಿ (ವಾರಾಣಸಿ) ನಗರವೇ ಇರುವುದು ಈ ಚಿನ್ನದ ಅನುಪಾತದಲ್ಲಿ. ವಿಕ್ರಂ ಸಂಪತ್ ಅವರ Waiting For Shiva
ಪುಸ್ತಕದ ಮುನ್ನುಡಿಯಲ್ಲಿಯೇ ಈ ಬಗ್ಗೆ ವಿವರವಿದೆ.

ಈ ಅನುಪಾತದಲ್ಲಿರುವವನ್ನು ನಾವು ಚಂದವೆಂದು ಗ್ರಹಿಸುವುದು. ಹಾಗಂತ ಚಂದ ವೆನಿಸುವವೆಲ್ಲವೂ ಈ ಅನುಪಾತದಲ್ಲಿಯೇ ಇರಬೇಕೆಂಬ ನಿಯಮವೆನಿಲ್ಲ. ಉದಾಹರಣೆಗೆ ಐಶ್ವರ್ಯ ರೈ ಚಂದವೆಂದು ಕಾಣಿಸಲಿಕ್ಕೆ ಅವಳ ಮುಖ-ದೇಹ ಈ ಅನುಪಾತದಲ್ಲಿರುವುದು ಕಾರಣ. ಆದರೆ ಅವರವರ ಹೆಂಡತಿ ಅವರಿಗೆ ಐಶ್ವರ್ಯ ರೈಗಿಂತಲೂ ಚಂದ ಎಂದೆನಿಸಿದರೆ ಅದು ಅಳತೆಯ ಅಳತೆ ಮೀರಿದ ಭಾವನಾತ್ಮಕ ಲೆಕ್ಕಾಚಾರ.

ಹಾಗಾಗಿ ಈ ಅನುಪಾತದ ಲೆಕ್ಕಾಚಾರಕ್ಕೆ ಹೊರತಾದದ್ದು ನಮಗೆ ಸುಂದರವೆನಿಸುತ್ತಿದೆ ಎಂದರೆ ಒಂದೋ ಸಾಂಸ್ಕೃತಿಕವಾಗಿ ನಮ್ಮ ಹಿನ್ನೆಲೆ ಕಾರಣವಿರಬೇಕು ಅಥವಾ ಭಾವನಾ ತ್ಮಕ ಕಾರಣವಿರಬೇಕು. ಮಾಡರ್ನ್ ಆರ್ಟ್ ಸುಂದರವೆನಿಸುವುದು ಏಕೆಂದರೆ ಅವು ಅಕರಾಳ ವಿಕರಾಳವಿದ್ದರೂ ನಮ್ಮೊಳಗಿನ ಕೆಲವು ಸುಪ್ತ ಭಾವನೆಗಳನ್ನು ಜಾಗೃತ ಗೊಳಿಸಬಲ್ಲವು. ಇದೆಲ್ಲ ವೈಯಕ್ತಿಕ.ಈ ಸೌಂದರ್ಯ ಪಕ್ಷಪಾತವೇ ಮನುಷ್ಯನನ್ನು ಮನುಷ್ಯನನ್ನಾಗಿಸಿರುವುದು. ಮನುಷ್ಯ ಸಂತತಿ ಇಂದಿಗೂ ಉಳಿದಿದೆ ಎಂದರೆ ಈ ಪಕ್ಷ ಪಾತದಿಂದ ಮಾಡಿಕೊಂಡ ನಿರಂತರ ಆಯ್ಕೆಗಳೇ ಕಾರಣ ಎನ್ನುವುದು ನಿರ್ವಿವಾದ. ಜೀವಜಗತ್ತಿನ ಎಲ್ಲವೂ ಸೌಂದರ್ಯವನ್ನು ಗ್ರಹಿಸಬಲ್ಲವು.

ಅವುಗಳ ಲೆಕ್ಕಾಚಾರ ನಮಗಿಂತ ಭಿನ್ನವಿರಬಹುದು. ದುಂಬಿಗೆ ಹೂವು ಚಂದವಾಗಿಯೇ ಕಾಣಿಸಬೇಕು. ಅಂತೆಯೇ ನೊಣಕ್ಕೆ ಹೊಲಸು. ಇವೆಲ್ಲವೂ ಪ್ರತಿಯೊಂದು ಜೀವಿಯಲ್ಲಿ ಯೂ ಅಚ್ಚೊತ್ತಿದ ಗುಣ. ಹಾಗಾಗಿ ಅವನ್ನು ಬದಲಾಯಿಸಲಿಕ್ಕಾಗುವುದಿಲ್ಲ. ಮನುಷ್ಯ ನದೂ ಅದೇ ಕಥೆ. ಆದರೆ ನಮಗೆ ಮಾತ್ರ ನಮ್ಮ ಸೌಂದರ್ಯಪ್ರeಯ ಒಲವಿನ ಬಗ್ಗೆ ವಿಚಾರ ಮಾಡುವ ಶಕ್ತಿಯಿದೆ. ಹಾಗಂತ ಇಂಥದ್ದನ್ನೆಲ್ಲ ನಾವು ಯೋಚನೆ ಮಾಡು ವುದು ಕಡಿಮೆ. ಏಕೆಂದರೆ ನಮ್ಮೆಲ್ಲರ ಬೇಸಿಕ್ ಇನ್‌ಸ್ಟಿಂಕ್ಟ್ - ಮೂಲಗುಣ ಅದೆಲ್ಲವನ್ನೂ ನೇಪಥ್ಯದಲ್ಲಿಟ್ಟಿರುತ್ತದೆ.

ತಂದೆ ತಾಯಿಗೆ ತಮ್ಮ ಮಕ್ಕಳಲ್ಲಿ ಸುಂದರವಾಗಿರುವ ಮಗುವಿನ ಬಗ್ಗೆ ಜಾಸ್ತಿ ಒಲವು, ಕಾಳಜಿ ಇರುತ್ತದೆ. ಏಕೆಂದರೆ ಮೂಲದಲ್ಲಿ ಆ ಮಗುವಿನಿಂದ ಮುಂದಾಗುವ ಸಂತಾನೋ ತ್ಪತ್ತಿ ಸುಂದರವಾಗಿ- ಅನುಪಾತದಲ್ಲಿ, ಆರೋಗ್ಯಕರವಾಗಿ ಇರಬಹುದೆಂಬ ಸುಪ್ತ ನಂಬಿಕೆ. ಒಂದು ಮಗುವಿನಲ್ಲಿ ಏನೋ ಒಂದು ವಿರೂಪವಿದ್ದರೆ, ಗ್ರಹಿಕೆಯಂತೆ ಕುರೂಪ ವೆನಿಸಿದರೆ ಆ ಮಗುವಿನ ಬಗ್ಗೆ ಅಕ್ಕರೆಗಿಂತ ಹೆಚ್ಚಾಗಿ ಅಲ್ಲಿರುವುದು ಅನುಕಂಪ.

ಸಮತೂಕದ ಪ್ರೀತಿ ಕೊಡಬೇಕೆಂಬ ಒತ್ತಡ. ಒಂದಕ್ಕಿಂತ ಹೆಚ್ಚಿನ ಮಕ್ಕಳಿದ್ದಲ್ಲಿ ಈ ಅನುಕಂಪ ಮತ್ತು ಸಹಜ ಒಲವಿನ ನಡುವೆ ಪಾಲಕರ ಮನಸ್ಸು ಹೊಯ್ದಾಡುತ್ತಿರುತ್ತದೆ. ಅಂತೆಯೇ ಶಾಲೆಯಲ್ಲಿ ಶಿಕ್ಷಕರಿಗೆ, ಆಫೀಸಿನಲ್ಲಿ ಹೀಗೆ ಎಂದರಲ್ಲಿ ಸೌಂದರ್ಯ ಪಕ್ಷಪಾತ ನಮ್ಮೆಲ್ಲರ ನಡೆಯನ್ನು ನಿರ್ದೇಶಿಸುತ್ತದೆ.

ಈಗ ಕಾಲ, ಜಗತ್ತು ಎಲ್ಲವೂ ಬದಲಾಗಿದೆ. ಹಾಗಾಗಿ ನಮ್ಮ ಮೂಲಗುಣವು ತಪ್ಪು ನಿರ್ಧಾ ರಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ ಆಫೀಸಿನಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವಾಗ ಮಾಡುವ ಸಂದರ್ಶನ ಇತ್ಯಾದಿ ಸಂದರ್ಭಗಳಲ್ಲಿ ನಮ್ಮೊಳಗಿನ ಸೌಂದರ್ಯ ಪಕ್ಷಪಾತ ವನ್ನು ಮೀರಿ ನಡೆದರಷ್ಟೇ ಸರಿ, ಲಾಭದಾಯಕ. ಇದೆಲ್ಲ ಹೇಳಿದಷ್ಟು, ಕೇಳಿದಷ್ಟು ಸುಲಭವಲ್ಲ.

ಏಕೆಂದರೆ ನಮ್ಮ ಮನಸ್ಸು ಅದನ್ನು ಅಷ್ಟು ಸುಲಭಕ್ಕೆ ಒಪ್ಪುವುದಿಲ್ಲ. ಅದರದೂ ತಪ್ಪಲ್ಲ, ಏಕೆಂದರೆ ಇದೆಲ್ಲ ವಂಶವಾಹಿನಿಯಿಂದ ಪ್ರಾಪ್ತವಾದಂಥವು. ಯಾವುದೇ ಮೂಲಗುಣ ವನ್ನು ಮೀರಿ ನಡೆಯುವುದನ್ನು ಮನಸ್ಸು ಅಪಾಯವೆಂದೇ ಗ್ರಹಿಸುತ್ತದೆ. ಇಂಥ ಅದೆಷ್ಟೋ ನಿತ್ಯಕರ್ಮಗಳಲ್ಲಿ ಈ ನಮ್ಮ ಬೇಸಿಕ್ ಇನ್‌ಸ್ಟಿಂಕ್ಟ್ - ಮನುಷ್ಯನ ಮೂಲ, ಪ್ರಾಣಿ ಸಹಜ ಗುಣವನ್ನು ಮೀರಲೇಬೇಕಾಗುತ್ತದೆ. ಅದು ಅನಿವಾರ್ಯ. ಹಾಗಾಗಿ ಯಾವ ಸಮಯ-ಸಂದರ್ಭದಲ್ಲಿ ಈ ಮೂಲಗುಣವನ್ನು ಬಳಸಿಕೊಳ್ಳಬೇಕು ಮತ್ತು ಯಾವಾಗ ಅದನ್ನು ಅದುಮಿಡಬೇಕು ಎನ್ನುವ ನಿರಂತರ ಜಾಗ್ರತೆ ನಮಗಿದ್ದರೆ ಅದರಿಂದ ಬಹಳಷ್ಟು ಲಾಭವಿದೆ.

ಆಧುನಿಕ ಬದುಕಿನಲ್ಲಿ ನಮ್ಮ ಹತ್ತು ಹಲವು ಮನುಷ್ಯ ಮೂಲಗುಣವನ್ನು ಮೀರುವುದೇ ಅವಶ್ಯಕತೆ ಮತ್ತು ಸವಾಲಿನ ಕೆಲಸ. ಅದರಲ್ಲಿ ಸೌಂದರ್ಯಪ್ರe- ಒಲವು ಕೂಡ ಒಂದು.