ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಭಾರತ-ಪಾಕಿಸ್ತಾನ ಟೆನ್ಷನ್ಸ್‌; ಡಿಫೆನ್ಸ್‌ ಸ್ಟಾಕ್ಸ್‌ ಅಬ್ಬರ, ಈ 4 ಕಂಪನಿಗಳಲ್ಲಿ ಹೂಡಿದ್ರೆ ಲಾಭ ಆಗುತ್ತಾ?

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಈ 4 ಡಿಫೆನ್ಸ್‌ ಸ್ಟಾಕ್ಸ್‌ಗಳಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ವಿದೇಶಿ ಸಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ ಅಂದ್ರೆ ಸಾಕಷ್ಟು ಅಧ್ಯಯನ, ಸಂಶೋಧನೆ ನಡೆಸಿದ ಬಳಿಕವಷ್ಟೇ ಹೂಡಿಕೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

ಡಿಫೆನ್ಸ್‌ ಸ್ಟಾಕ್ಸ್‌ ಅಬ್ಬರ, ಈ 4 ಕಂಪನಿಗಳಲ್ಲಿ ಹೂಡಿದ್ರೆ ಲಾಭ ಆಗುತ್ತಾ?

Profile Vishakha Bhat May 4, 2025 6:59 PM

ಕೇಶವ ಪ್ರಸಾದ ಬಿ.

ಮುಂಬೈ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಈ 4 ಡಿಫೆನ್ಸ್‌ ಸ್ಟಾಕ್ಸ್‌ಗಳಲ್ಲಿ (Stock Market) ತಮ್ಮ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ವಿದೇಶಿ ಸಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ ಅಂದ್ರೆ ಸಾಕಷ್ಟು ಅಧ್ಯಯನ, ಸಂಶೋಧನೆ ನಡೆಸಿದ ಬಳಿಕವಷ್ಟೇ ಹೂಡಿಕೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ಆ ನಾಲ್ಕು ರಕ್ಷಣಾ ವಲಯದ ಷೇರುಗಳು ಯಾವುದು ಎಂಬುದನ್ನು ಈಗ ತಿಳಿಯೋಣ.

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯ ಬಳಿಕ, ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ರಾಜತಾಂತ್ರಿಕ ಸಮರವನ್ನು ಜಾರಿಗೊಳಿಸಿದೆ. ಜತೆಗೆ ಮಿಲಿಟರಿ ಕಾರ್ಯಾಚರಣೆ ಕೂಡ ನಡೆಯಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಭಾರತ-ಪಾಕಿಸ್ತಾನದ ನಡುವಣ ಉದ್ವಿಗ್ನ ಪರಿಸ್ಥಿತಿಯ ನಡುವೆ ರಕ್ಷಣಾ ವಲಯದ ಪ್ರಮುಖ ಕಂಪನಿಗಳ ಷೇರುಗಳು ಏರುಗತಿಯಲ್ಲಿವೆ. ಎಚ್‌ಎಎಲ್‌, ಬಿಇಎಲ್‌, ಭಾರತ್‌ ಡೈನಾಮಿಕ್ಸ್‌, ಗಾರ್ಡೆನ್‌ ರೀಚ್‌ ಶಿಪ್‌ಯಾರ್ಡ್‌, ಮಜಗಾಂವ್‌ ಡೊಕ್‌ ಶಿಪ್‌ ಬಿಲ್ಡರ್ಸ್‌, ಪರಾಸ್‌ ಡಿಫೆನ್ಸ್‌ ಕಂಪನಿಯ ಷೇರುಗಳ ದರಗಳು ಏರಿಕೆಯಾಗುತ್ತಿವೆ. ನಿಫ್ಟಿ ಇಂಡಿಯಾ ಡಿಫೆನ್ಸ್‌ ಇಂಡೆಕ್ಸ್‌ ಏರಿಕೆಯಾಗಿದೆ. ಒಂದು ಕಡೆ ಭಾರತ-ಪಾಕಿಸ್ತಾನ ನಡುವಣ ಸಂಘರ್ಷ, ಮತ್ತೊಂದು ಕಡೆ ಫ್ರಾನ್ಸ್‌ನಿಂದ 26 ರಫೆಲ್‌ ಯುದ್ಧ ವಿಮಾನಗಳನ್ನು ಖರೀದಿಸಲು 60,000 ಕೋಟಿ ರುಪಾಯಿಗಳ ಒಪ್ಪಂದ ಮಾಡಿರುವುದು ಕೂಡ ಪ್ರಭಾವ ಬೀರಿದೆ. ಹಾಗಾದರೆ ಈಗ ಡಿಫೆನ್ಸ್‌ ಷೇರುಗಳನ್ನು ಖರೀದಿಸಬಹುದಾ? ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕೂ ಉತ್ತರವನ್ನು ಕಂಡುಕೊಳ್ಳೋಣ.

ರಕ್ಷಣಾ ವಲಯದ ಈ ಕಂಪನಿಗಳು ಆರ್ಥಿಕವಾಗಿ ಸದೃಢವಾಗಿವೆ. ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿಕೊಂಡಿವೆ. ಹೀಗಾಗಿ ದೀರ್ಘಾವಧಿಗೆ ಇವುಗಳ ಷೇರುಗಳು ಹೂಡಿಕೆದಾರರಿಗೆ ಉತ್ತಮ ಲಾಭ ನೀಡುವ ಸಾಧ್ಯತೆ ಇದೆ ಎನ್ನುತ್ತಾರೆ ಎಸ್‌ಎಸ್‌ಜಿ ಫೈನಾನ್ಸ್‌ & ಸೆಕ್ಯುರಿಟೀಸ್‌ ಕಂಪನಿಯ ವಿಶ್ಲೇಷಕತರಾದ ಅತೀಶ್‌ ಮಾಟ್ಲವಾಲಾ.

ಭಾರತದ ಡಿಫೆನ್ಸ್‌ ಕಂಪನಿಗಳ ಷೇರುಗಳ ಇತ್ತೀಚಿನ ದರ ಏರಿಕೆಗೆ ಪ್ರಮುಖವಾಗಿ ಮೂರು ಕಾರಣಗಳು ಇವೆ. ಅವುಗಳ ಬಗ್ಗೆ ಸ್ವಲ್ಪ ವಿವರಗಳನ್ನು ತಿಳಿಯೋಣ.

  1. ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಸಂಘರ್ಷ:

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಂಧೂ ನದಿ ಜಲ ಹಂಚಿಕೆಯ ಒಪ್ಪಂದವನ್ನು ಭಾರತವು ರದ್ದುಪಡಿಸಿದೆ. ಎಲ್ಲ ರೀತಿಯ ವ್ಯಾವಹಾರಿಕ ಸಂಬಂಧಗಳನ್ನು ಕಡಿತಗೊಳಿಸಲು ಚಿಂತನೆ ನಡೆಯುತ್ತಿದೆ. ಮಿಲಿಟರಿ ಕಾರ್ಯಾಚರಣೆಯ ಸಾಧ್ಯತೆಯೂ ಇದೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ಡಿಫೆನ್ಸ್‌ ಸ್ಟಾಕ್ಸ್‌ಗಳ ದರ ಏರುಗತಿಯಲ್ಲಿದೆ.

  1. ಸ್ಟ್ರಾಂಗ್‌ ಆರ್ಡರ್‌ ಬುಕ್:‌

ರಕ್ಷಣಾ ವಲಯದ ಕೆಲವು ಕಂಪನಿಗಳಿಗೆ ಭಾರಿ ಮೊತ್ತದ ಆರ್ಡರ್‌ಗಳು ಲಭಿಸಿವೆ. ಉದಾಹರಣೆಗೆ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಅಥವಾ ಎಚ್‌ಎಎಲ್‌ಗೆ ಹೆಲಿಕಾಪ್ಟರ್‌ಗಳ ತಯಾರಿಕೆಗೆ 62,700 ಕೋಟಿ ರುಪಾಯಿಗಳ ಭಾರಿ ಆರ್ಡರ್‌ ನೀಡಲಾಗಿದೆ. ಇದು ಆರ್ಮಿ ಮತ್ತು ಏರ್‌ ಫೋರ್ಸ್‌ನ ಬಳಕೆಗೆ ಸಿಗಲಿದೆ.

ಭಾರತ್‌ ಡೈನಾಮಿಕ್ಸ್‌ (BDL) ಸಂಸ್ಥೆಗೆ 2025ರ ಏಪ್ರಿಲ್‌ 1ರಂದು 22,700 ಕೋಟಿ ರುಪಾಯಿಗಳ ಆರ್ಡರ್‌ ಲಭಿಸಿದೆ.

ಭಾರತ್‌ ಎಲೆಕ್ಟ್ರಾನಿಕ್ಸ್‌ ಕಂಪನಿಗೆ ಏಪ್ರಿಲ್‌ ಅಂತ್ಯದ ವೇಳೆಗೆ 2.803 ಕೋಟಿ ರುಪಾಯಿಗಳ ಆರ್ಡರ್‌ ಇತ್ತು.

  1. ರಕ್ಷಣಾ ಕ್ಷೇತ್ರದ ಉದ್ದಿಮೆಗೆ 2025-26ರಲ್ಲಿ ಬೆಳವಣಿಗೆಯ ಮುನ್ನೋಟ:

ಬಹುತೇಕ ವಿಶ್ಲೇಷಕರ ಪ್ರಕಾರ 2025-26ರ ಸಾಲಿನಲ್ಲಿ ರಕ್ಷಣಾ ವಲಯದ ಉದ್ದಿಮೆಯ ಮುನ್ನೋಟ ಉತ್ತಮವಾಗಿದೆ. ಇದರಿಂದಾಗಿ ಹೂಡಿಕೆದಾರರ ಆಸಕ್ತಿ ಹೆಚ್ಚುತ್ತಿದೆ. ಇದೊಂದು ಬೆಳೆಯುವ ಸೆಕ್ಟರ್‌ ಆಗಿ ಹೊರಹೊಮ್ಮಿದೆ. ರಕ್ಷಣಾ ಕ್ಷೇತ್ರದ ಆತ್ಮನಿರ್ಭರತೆ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ.

ಆರಂಭದಲ್ಲೇ ತಿಳಿಸಿದಂತೆ 4 ಡಿಫೆನ್ಸ್‌ ಷೇರುಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ಅವುಗಳ ವಿವರವನ್ನು ತಿಳಿದುಕೊಳ್ಳೋಣ. ಈಕ್ವಿಟಿ ಮಾಸ್ಟರ್‌ ತಜ್ಞರು ಈ ವಿವರವನ್ನು ಒದಗಿಸಿದ್ದಾರೆ.

  1. ಪರಾಸ್‌ ಡಿಫೆನ್ಸ್‌ ‍ ಸ್ಪೇಸ್‌ ಟೆಕ್ನಾಲಜೀಸ್:‌ ‌

Paras Defence & Space Technologies

ಷೇರಿನ ಈಗಿನ ದರ : 1,343 ರುಪಾಯಿ.

2024ರ ಮೇನಲ್ಲಿ ದರ : 712 ರುಪಾಯಿ.

ಒಂದು ವರ್ಷದಲ್ಲಿ ಎಷ್ಟು ಹೆಚ್ಚಳ : 89%

ಮಾರ್ಕೆಟ್‌ ಕ್ಯಾಪ್‌ : 5041 ಕೋಟಿ ರುಪಾಯಿ

P/E ratio : 98:30

52 wk high : 1,592/-

52 wk low : 681/-

ಪರಾಸ್‌ ಡಿಫೆನ್ಸ್ ಆಂಡ್‌ ಸ್ಪೇಸ್‌ ಟೆಕ್ನಾಲಜೀಸ್‌ ಮುಂಬಯಿ ಮೂಲದ ಖಾಸಗಿ ವಲಯದ ಕಂಪನಿಯಾಗಿದೆ. ಇದು ರಕ್ಷಣಾ ಕ್ಷೇತ್ರ ಮತ್ತು ಬಾಹ್ಯಾಕಾಶ ಅಥವಾ ಸ್ಪೇಸ್‌ ಸೆಕ್ಟರ್‌ಗೆ ಸಂಬಂಧಿಸಿದ ಕಂಪನಿಯಾಗಿದೆ. ಡಿಫೆನ್ಸ್‌ ಮತ್ತು ಸ್ಪೇಸ್‌ ಅಪ್ಲಿಕೇಶನ್ಸ್‌ಗಳನ್ನು ಒದಗಿಸುತ್ತದೆ. ಮುಖ್ಯವಾಗಿ ನಾಲ್ಕು ಸೆಗ್ಮೆಂಟ್‌ಗಳಲ್ಲಿ ಸೇವೆ ನೀಡುತ್ತಿದೆ. ಡಿಫೆನ್ಸ್‌ ಮತ್ತು ಸ್ಪೇಸ್‌ ಆಪ್ಟಿಕ್ಸ್‌, ಡಿಫೆನ್ಸ್‌ ಎಲೆಕ್ಟ್ರಾನಿಕ್ಸ್‌, ಹೆವಿ ಎಂಜಿನಿಯರಿಂಗ್‌ ಮತ್ತು ಎಲೆಕ್ಟ್ರೊ ಮ್ಯಾಗ್ನೆಟಿಕ್‌ ಪಲ್ಸ್‌ ಪ್ರೊಟೆಕ್ಷನ್ ಸಲ್ಯೂಷನ್ಸ್.‌

ಆಪ್ಟಿಕ್ಸ್‌ ಆಂಡ್‌ ಆಪ್ಟ್ರೋನಿಕ್‌ ಸಿಸ್ಟಮ್ಸ್‌, ಡಿಫೆನ್ಸ್‌ ಎಂಜಿನಿಯರಿಂಗ್‌ ಸೇವೆಯನ್ನು ಗ್ರಾಹಕರಿಗೆ ನೀಡುತ್ತದೆ. 40 ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಉದ್ದಿಮೆಯನ್ನು ನಡೆಸುತ್ತಿದೆ. ರಾಕೆಟ್‌ಗಳು, ಕ್ಷಿಪಣಿಗಳು, ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಆಂಡ್‌ ಸರ್ವೆಯಲನ್ಸ್‌, ಎಲೆಕ್ಟ್ರೊ ಮ್ಯಾಗ್ನೇಟ್‌ ಶೀಲ್ಡಿಂಗ್‌ ಇತ್ಯಾದಿಗಳನ್ನು ನೀಡುತ್ತದೆ. 600 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡಿರುವ ಉತ್ಪಾದನಾ ಘಟಕವನ್ನು ಒಳಗೊಂಡಿದೆ. ‌

ಪರಾಸ್‌ ಡಿಫೆನ್ಸ್ ಆಂಡ್‌ ಸ್ಪೇಸ್‌ ಟೆಕ್ನಾಲಜೀಸ್‌ಗೆ 86% ಆದಾಯವು ಭಾರತದಿಂದಲೇ ಲಭಿಸುತ್ತಿದೆ. ಉಳಿದ 14% ಆದಾಯವು ರಫ್ತಿನಿಂದ ಸಿಗುತ್ತಿದೆ. ಕಂಪನಿಯು ಎಚ್‌ಎಎಲ್‌, ಇಸ್ರೊ, ಡಿಆರ್‌ಡಿಒ, ಭಾರತ್‌ ಎಲೆಕ್ಟ್ರಾನಿಕ್ಸ್‌, ಗೋದ್ರೇಜ್‌, ಟಾಟಾ ಪವರ್‌, ಎಲ್ಬಿಟ್‌ ಸಿಸ್ಟಮ್ಸ್‌, ಕೊಚ್ಚಿನ್‌ ಶಿಪ್‌ ಯಾರ್ಡ್‌, ಗೋವಾ ಶಿಪ್‌ ಯಾರ್ಡ್‌, ಸಿಂಗಾಪುರ್‌ ಎಲೆಕ್ಟ್ರಾನಿಕ್ಸ್‌ಗೆ ತನ್ನ ಸೇವೆಯನ್ನು ನೀಡಿದೆ. ಈ ಕಂಪನಿಯಲ್ಲಿ ಎಫ್‌ಐಐಗಳು ಇತ್ತೀಚೆಗೆ ತಮ್ಮ ಷೇರು ಹೂಡಿಕೆಯನ್ನು ಹೆಚ್ಚಿಸಿದ್ದಾರೆ.

  1. ಅಪೊಲೊ ಮೈಕ್ರೊ ಸಿಸ್ಟಮ್ಸ್

Apollo Micro Systems

ಷೇರಿನ ಈಗಿನ ದರ : 115 ರುಪಾಯಿ.

2024ರ ಮೇನಲ್ಲಿ ದರ : 105 ರುಪಾಯಿ.

ಒಂದು ವರ್ಷದಲ್ಲಿ ಎಷ್ಟು ಹೆಚ್ಚಳ : 9.5%

ಮಾರ್ಕೆಟ್‌ ಕ್ಯಾಪ್‌ : 3,060 ಕೋಟಿ ರುಪಾಯಿ

P/E ratio : 61.05

52 wk high : 1,57/-

52 wk low : 87/-

ಹೈದರಾಬಾದ್‌ ಮೂಲದ ಅಪೊಲೊ ಮೈಕ್ರೊ ಸಿಸ್ಟಮ್ಸ್ ನಲ್ಲಿ ಇತ್ತೀಚೆಗೆ ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ಈ ಕಂಪನಿಯು ಏರೊಸ್ಪೇಸ್‌, ಡಿಫೆನ್ಸ್‌, ಟ್ರಾನ್ಸ್‌ಪೋರ್ಟೇಶನ್‌ ಸೆಕ್ಟರ್‌ಗಳಿಗೆ ಅಗತ್ಯವಿರುವ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಸಲ್ಯೂಷನ್ಸ್‌ಗಳನ್ನು ನೀಡುತ್ತದೆ. ಎಲೆಕ್ಟ್ರಾನಿಕ್‌ ಮತ್ತು ಎಲೆಕ್ಟ್ರೊ-ಮೆಕಾನಿಕಲ್‌ ಮತ್ತು ಎಂಜಿನಿಯರಿಂಗ್‌ ಉತ್ಪನ್ನಗಳ ಡಿಸೈನ್‌, ಡೆವಲಪ್‌ಮೆಂಟ್‌, ಅಸೆಂಬ್ಲಿ, ಟೆಸ್ಟಿಂಗ್‌ನಲ್ಲಿ ಕಂಪನಿಯು ಮುಂಚೂಣಿಯಲ್ಲಿದೆ.

ಕಂಪನಿಯ ಉಪನ್ನಗಳು ಏರೊಸ್ಪೇಸ್‌ ಸಿಸ್ಟಮ್ಸ್‌, ಗ್ರೌಂಡ್‌ ಡಿಫೆನ್ಸ್‌, ಸ್ಪೇಸ್‌, ಏವಿಯಾನಿಕ್ಸ್‌ ಸಿಸ್ಟಮ್ಸ್‌, ಸೆಕ್ಯುರಿಟಿ, ಟ್ರಾನ್ಸ್‌ಪೋರ್ಟೇಶನ್‌ ಸೆಕ್ಟರ್‌ನಲ್ಲಿ ಬಳಕೆಯಾಗುತ್ತದೆ. ಡಿಆರ್‌ಡಿಒ, ಭಾರತೀಯ ಸೇನೆ, ಇಂಡಿಯನ್‌ ನೇವಿ, ಅದಾನಿ ಗ್ರೂಪ್‌, ಎಲ್‌ &ಟಿಗೆ ತನ್ನ ಪ್ರಾಡಕ್ಟ್‌ಗಳನ್ನು ನೀಡುತ್ತದೆ. 300ಕ್ಕೂ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿದೆ.

‌3. ಭಾರತ್‌ ಡೈನಾಮಿಕ್ಸ್

Bharat Dynamics

ಷೇರಿನ ಈಗಿನ ದರ : 1,484 ರುಪಾಯಿ.

2024ರ ಮೇನಲ್ಲಿ ದರ : 920 ರುಪಾಯಿ.

ಒಂದು ವರ್ಷದಲ್ಲಿ ಎಷ್ಟು ಹೆಚ್ಚಳ : 55%

ಮಾರ್ಕೆಟ್‌ ಕ್ಯಾಪ್‌ : 54,540 ಕೋಟಿ ರುಪಾಯಿ

P/E ratio : 96.19

52 wk high : 1,794/-

52 wk low : 890/-

ಭಾರತ ಡೈನಾಮಿಕ್ಸ್‌ ಹೈದರಾಬಾದ್‌ ಮೂಲದ ಡಿಫೆನ್ಸ್‌ ಕಂಪನಿಯಾಗಿದೆ. 1970ರಲ್ಲಿ ಸ್ಥಾಪನೆಯಾಗಿರುವ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ. ಇದು ಮಿಸೈಲ್ಸ್‌, ಅಂಡರ್‌ವಾಟರ್‌ ವೆಪ್ಪನ್ಸ್‌, ಏರ್‌ಬೋರ್ನ್‌ ಪ್ರಾಡಕ್ಟ್ಸ್‌ಗಳನ್ನು ತಯಾರಿಸುತ್ತಿದೆ. ಡಿಆರ್‌ ಡಿಒ ಜತೆಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಕಂಪನಿಯ 71% ಆದಾಯವು ಭಾರತ ಸರಕಾರದಿಂದ ಲಭಿಸುತ್ತಿದೆ. 7% ರಫ್ತಿನಿಂದ ಸಿಗುತ್ತಿದೆ. 12% ಇತರ ಆದಾಯ ಮೂಲಗಳಿಂದ ದೊರೆಯುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಂಪನಿಯಲ್ಲಿ ಇತ್ತೀಚೆಗೆ ಹೂಡಿಕೆಯನ್ನು ಹೆಚ್ಚಿಸಿದ್ದಾರೆ.

ಬೆಮೆಲ್‌

BEML Ltd

ಷೇರಿನ ಈಗಿನ ದರ : 3,200 ರುಪಾಯಿ.

2020ರಲ್ಲಿ ದರ : 560 ರುಪಾಯಿ.

5 ವರ್ಷದಲ್ಲಿ ಎಷ್ಟು ಹೆಚ್ಚಳ : 466%

ಮಾರ್ಕೆಟ್‌ ಕ್ಯಾಪ್‌ : 13000 ಕೋಟಿ ರುಪಾಯಿ

P/E ratio : 50.95

52 wk high : 5,488/-

52 wk low : 2,350/-

ಬೆಂಗಳೂರು ಮೂಲದ ಡಿಫೆನ್ಸ್‌ ಕಂಪನಿಯಾಗಿರುವ ಬೆಮೆಲ್‌, ರಕ್ಷಣಾ ವಲಯ ಮತ್ತು ರೈಲ್ವೆಗೆ ತನ್ನ ಹೆವಿ ಎಕ್ವಿಪ್‌ಮೆಂಟ್‌ಗಳನ್ನು ತಯಾರಿಸುತ್ತದೆ. ಭಾರತ್‌ ಅರ್ತ್‌ ಮೂವರ್ಸ್‌ ಲಿಮಿಟೆಡ್‌ ಕಂಒನಿಯು ಅರ್ತ್‌ ಮೂವಿಂಗ್‌ ಸಾಧನಗಳ ತಯಾರಿಕೆಯಲ್ಲಿ ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಕಂಪನಿಯಾಗಿದೆ. 1964ರಲ್ಲಿ ಸ್ಥಾಪನೆಯಾಗಿರುವ ಕಂಪನಿಯು ಕ್ಷಿಪಣಿ ತಯಾರಿಕೆ, ಬುಲ್ಡೋಜರ್‌ ನಿರ್ಮಾಣದಿಂದ ಮೆಟ್ರೊ ಕೋಚ್‌ಗಳನ್ನೂ ತಯಾರಿಸುತ್ತದೆ. ಬೆಮೆಲ್‌ ಷೇರುಗಳಲ್ಲಿಯೂ ವಿದೇಶಿ ಹೂಡಿಕೆದಾರರು ಇತ್ತೀಚೆಗೆ ಹೂಡಿಕೆಯನ್ನು ಹೆಚ್ಚಿಸಿದ್ದಾರೆ.

5 ಪೈಸಾ ಡಾಟ್‌ ಕಾಮ್‌ ಸಂಸ್ಥೆಯು 10 ಡಿಫೆನ್ಸ್‌ ಸ್ಟಾಕ್ಸ್‌ಗಳನ್ನು ಈಗ ಹೂಡಿಕೆಗೆ ಯೋಗ್ಯವೆಂದು ಶಿಫಾರಸು ಮಾಡಿದೆ. ಅವುಗಳು ಯಾವುದು ಎಂಬುದನ್ನು ನೋಡೋಣ.

Bharat Dynamics Ltd : ಷೇರಿನ ಈಗಿನ ದರ : 1,484 ರುಪಾಯಿ.

Hindustan Aeronautics Ltd. ಷೇರಿನ ಈಗಿನ ದರ : 4,492 ರುಪಾಯಿ.

Cochin Shipyard Ltd. : 1530 ರುಪಾಯಿ.

Garden Reach Shipbuilders & Engineers Ltd : 1880 ರುಪಾಯಿ.

Bharat Electronics Ltd. : 311 ರುಪಾಯಿ.

BEML Ltd : 3200 ರುಪಾಯಿ.

Astra Microwave Products Ltd : 830 ರುಪಾಯಿ

Data Patterns (India) Ltd : 410 ರುಪಾಯಿ

ಈ ಸುದ್ದಿಯನ್ನೂ ಓದಿ: Stock Market: ಷೇರು ಮಾರುಕಟ್ಟೆ ಇಂಡೆಕ್ಸ್ ಕುಸಿತದ ವೇಳೆ ಯಾವ ಷೇರು ಬೆಸ್ಟ್?

ಕೊನೆಯದಾಗಿ ಬೆಂಗಳೂರಿನ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ ಅಥವಾ ಎಚ್‌ಎಎಲ್‌ ಬಗ್ಗೆ ಹೇಳಲೇಬೇಕು. ಎಚ್‌ಎಎಲ್‌ ಇಡೀ ದೇಶದ ಪ್ರಮುಖ ಡಿಫೆನ್ಸ್‌ ಕಂಪನಿಯಾಗಿದೆ. ಡಿಫೆನ್ಸ್‌ ಉತ್ಪಾದನೆ, ಸೇವೆ ಮತ್ತು ಇತರ ಚಟುವಟಿಕೆಗಳಲ್ಲಿ ಇದು ಸಕ್ರಿಯವಾಗಿದೆ. ಕಂಪನಿಯು 20 ಪ್ರೊಡಕ್ಷನ್‌ ಡಿವಿಶನ್‌ಗಳನ್ನು ಒಳಗೊಂಡಿದೆ. ಈಗ 1 ಲಕ್ಷದ 84 ಸಾವಿರ ಕೋಟಿಗೂ ಹೆಚ್ಚಿನ ಆರ್ಡರ್‌ಗಳನ್ನು ತನ್ನದಾಗಿಸಿದೆ. ಕಳೆದ ಎರಡು ವರ್ಷಗಳಲ್ಲಿ ಎಚ್‌ಎಎಲ್‌ ಷೇರು ಹೂಡಿಕೆದಾರರಿಗೆ 207% ಲಾಭ ಕೊಟ್ಟಿದೆ. 5 ವರ್ಷಗಳಲ್ಲಿ 1,600 % ರಿಟರ್ನ್ಸ್‌ ಕೊಟ್ಟಿದೆ.