PM KUSUM Scheme: 2026ರ ಮಾರ್ಚ್ ವೇಳೆಗೆ ʼಪಿಎಂ ಕುಸುಮ್ʼ 2ನೇ ಹಂತದ ಯೋಜನೆ ಅನುಷ್ಠಾನ: ಜೋಶಿ
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನದ ರಾಜ್ಯ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ʼಪಿಎಂ ಕುಸುಮ್ʼ ಯೋಜನೆಯೀಗ ಬಹುತೇಕ ಎಲ್ಲ ರಾಜ್ಯಗಳಲ್ಲಿ ವೇಗ ಪಡೆದುಕೊಂಡಿದೆ ಹಾಗೂ ಮುಖ್ಯಮಂತ್ರಿಗೆ ಹೆಚ್ಚುವರಿ ಹಂಚಿಕೆಗಳಿಗೆ ಬೇಡಿಕೆ ಬಂದಿದೆ.

-

ನವದೆಹಲಿ: ರೈತರಿಗೆ ಸೌರ ವಿದ್ಯುತ್ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮಹತ್ತರ ʼಪಿಎಂ ಕುಸುಮ್ʼ 2ನೇ ಹಂತದ ಯೋಜನೆಯನ್ನು (PM KUSUM Scheme) 2026ರ ಮಾರ್ಚ್ ವೇಳೆಗೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದರು. ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನದ ರಾಜ್ಯ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿ, PM-KUSUM ಯೋಜನೆಯೀಗ ಬಹುತೇಕ ಎಲ್ಲ ರಾಜ್ಯಗಳಲ್ಲಿ ವೇಗ ಪಡೆದುಕೊಂಡಿದೆ ಹಾಗೂ ಮುಖ್ಯಮಂತ್ರಿಗಳಿಂದ ಹೆಚ್ಚುವರಿ ಹಂಚಿಕೆಗಳಿಗೆ ಬೇಡಿಕೆಯಿದೆ. ಹಾಗಾಗಿ ಪ್ರಸ್ತುತ ಹಂತ ಮುಗಿದ ಬಳಿಕ 2026ರ ಮಾರ್ಚ್ ಅಲ್ಲಿ 2ನೇ ಹಂತವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಸೂರ್ಯಘರ್ 20 ಲಕ್ಷ ಮೀರಿದೆ
ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಈಗಾಗಲೇ ಸುಮಾರು 20 ಲಕ್ಷ ಕುಟುಂಬಗಳು ಪ್ರಯೋಜನ ಪಡೆದಿವೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಅನುಗುಣವಾಗಿ ರಾಜ್ಯಗಳು ಮತ್ತು ಡಿಸ್ಕಾಮ್‌ಗಳು ತ್ವರಿತವಾಗಿ ಒಪ್ಪಂದಗಳನ್ನು ಅಂತಿಮಗೊಳಿಸಬೇಕು ಮತ್ತು ಗ್ರಾಹಕರಿಗೆ ಸಾಧ್ಯವಾದಷ್ಟು ಸರಳ ಸುಂಕದ ಸಾಲ ವಿತರಿಸಬೇಕು ಎಂದು ಕರೆ ನೀಡಿದರು.
PM ಸೂರ್ಯಘರ್ ಯೋಜನೆಯಡಿ ಸುಮಾರು ಶೇ. 50ರಷ್ಟು ಫಲಾನುಭವಿಗಳು ಈಗಾಗಲೇ ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿದ್ದಾರೆ. ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಮುನ್ನಡೆಸುವಲ್ಲಿ ರಾಜ್ಯಗಳು ಗಮನಾರ್ಹ ಪ್ರಗತಿ, ಪ್ರಯತ್ನ ತೋರಿದ್ದು, ಜಾಗತಿಕವಾಗಿ ಭಾರತದ ನಾಯಕತ್ವವನ್ನು ಬಲಪಡಿಸುತ್ತಿದೆ ಎಂದರು.
2028ಕ್ಕೆ ಸಂಪೂರ್ಣ ಸ್ವದೇಶಿ ನಿರ್ಮಿತ
ಭಾರತ 2028ರ ವೇಳೆಗೆ ಸಂಪೂರ್ಣ ಸ್ವದೇಶಿ ನಿರ್ಮಿತ ಸೌರ ಕೋಶಗಳನ್ನು ಅಳವಡಿಸುವ ಗುರಿಯತ್ತ ಸಾಗಿದೆ. ದೇಶೀಯ ವೇಫರ್, ಸೌರ ಫಲಕಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ಮುಂದಡಿ ಇಟ್ಟಿದ್ದು, ಇದು ಸಂಪೂರ್ಣ ಸೌರ ಉತ್ಪಾದನಾ ಪರಿಸರಕ್ಕೆ ಉತ್ತೇಜನ ನೀಡುತ್ತದೆ. ಅಲ್ಲದೇ, ಸೌರ ಪರಿಕರಗಳ ಮೇಲಿನ ಆಮದು ಅವಲಂಬನೆ ಕಡಿಮೆ ಮಾಡುವುದಲ್ಲದೆ ಯುವ ಕೈಗಳಿಗೆ ಹೆಚ್ಚು ಹೆಚ್ಚು ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಸಚಿವ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
251.5 GW ಪಳೆಯುಳಿಕೆಯೇತರ ಇಂಧನ
ಭಾರತ ಈಗಾಗಲೇ 251.5 GW ಪಳೆಯುಳಿಕೆಯೇತರ ಇಂಧನ ಉತ್ಪಾದನೆ ಸಾಮರ್ಥ್ಯವನ್ನು ಸಾಧಿಸಿದೆ. 2030ರ ವೇಳೆಗೆ ಇದ್ದ 500 GW ಗುರಿಯ ಶೇ.50ಕ್ಕಿಂತ ಹೆಚ್ಚು ಸಾಧನೆ ತೋರಿದೆ. ಭಾರತದ ಶುದ್ಧ ಇಂಧನ ಬೆಳವಣಿಗೆ ಮತ್ತು RE ವಲಯದಲ್ಲಿ ದೇಶೀಯ ಉತ್ಪಾದನೆ ಪರಿವರ್ತನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಆಶಯಕ್ಕೆ ಪೂರಕವಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರತಿಪಾದಿಸಿದರು.
ಭಾರತ ನಿಗದಿತ ಸಮಯಕ್ಕಿಂತ 5 ವರ್ಷಗಳ ಮೊದಲೇ ಪಳೆಯುಳಿಕೆಯೇತರ ಇಂಧನ ಉತ್ಪಾದನೆಯಲ್ಲಿ ಶೇ. 50ರಷ್ಟು ಗುರಿ ಸಾಧಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಅದಾಗ್ಯೂ ಉತ್ಪಾದನಾ ಸಾಮರ್ಥ್ಯ ಪರಿಣಾಮಕಾರಿ ಬಳಕೆಗೆ ಪೂರಕವಾಗಿರಬೇಕು. ಆಯಾ ರಾಜ್ಯಗಳು ನವೀಕರಿಸಬಹುದಾದ ಇಂಧನ ಖರೀದಿ ಬಾಧ್ಯತೆ, ವಿದ್ಯುತ್ ಖರೀದಿ ಒಪ್ಪಂದ ಮತ್ತು ಭೂ ಹಂಚಿಕೆಗಳನ್ನು ಪಾರದರ್ಶಕವಾಗಿ ತ್ವರಿತಗೊಳಿಸಬೇಕು. ಸುಂಕ ಮತ್ತಷ್ಟು ಕಡಿಮೆಯಾಗುತ್ತವೆ ಎಂಬ ನಿರೀಕ್ಷೆಯಿಂದ ಖರೀದಿ ವಿಳಂಬ ಮಾಡುತ್ತಿದ್ದರೆ ನಾವು ದೊಡ್ಡ ಕೊಡುಗೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
GST ಶೇ. 5ಕ್ಕೆ ಇಳಿಕೆ
ನವೀಕರಿಸಬಹುದಾದ ಇಂಧನ ಸಾಧನಗಳು ಮತ್ತು ಸೇವೆಗಳ ಮೇಲಿನ GSTಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಈ ಕ್ರಮ ಸ್ವಾಗತಾರ್ಹವಾಗಿದೆ. ಇದು ಸೌರ, ಪವನ, ಜೈವಿಕ ಅನಿಲ ಮತ್ತು ತ್ಯಾಜ್ಯದಿಂದ ಉತ್ಪಾದಿಸಿದ ಇಂಧನವನ್ನು ಹೆಚ್ಚು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಈ ತಂತ್ರಜ್ಞಾನಗಳನ್ನು ಹೆಚ್ಚು ಸಕ್ರಿಯವಾಗಿ ಉತ್ತೇಜಿಸಲು ರಾಜ್ಯಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
₹ 50,000 ಕೋಟಿ ಹೂಡಿಕೆ
ಹೆಚ್ಚಿನ ದಕ್ಷತೆಯ ಸೌರ ಪಿವಿ ಮಾಡ್ಯೂಲ್‌ಗಳಿಗಾಗಿ ₹ 24,000 ಕೋಟಿ ವೆಚ್ಚದಲ್ಲಿ ಹಾಕಿಕೊಂಡ ಪಿಎಲ್‌ಐ ಯೋಜನೆ ಯಶಸ್ಸು ತೋರಿದೆ. ಭಾರತ ಈಗ 100 ಗಿಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹಾಗೂ ₹ 50,000 ಕೋಟಿ ಹೂಡಿಕೆ ಮತ್ತು ಈ ಯೋಜನೆಯಡಿ 12,600ಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು.
ಸಾಮೂಹಿಕ ಪ್ರಯತ್ನಕ್ಕೆ ಕರೆ
ನವೀಕರಿಸಬಹುದಾದ ಇಂಧನ ಬೆಳವಣಿಗೆ ಹಾಗೂ ಭಾರತದ ಇಂಧನ ಪರಿವರ್ತನೆಗೆ ಕೇಂದ್ರ ಸರ್ಕಾರದೊಂದಿಗೆ ಎಲ್ಲಾ ರಾಜ್ಯಗಳು, ಕೈಗಾರಿಕೆಗಳು, ಪಾಲುದಾರರು ಮತ್ತು ನಾಗರೀಕರ ಸಾಮೂಹಿಕ ಪ್ರಯತ್ನ, ಬೆಂಬಲ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಮಾತನಾಡಿ, PM-KUSUM ಯೋಜನೆ ನಮ್ಮ ರೈತರಲ್ಲಿ ನಿಜವಾದ ಬದಲಾವಣೆ ತಂದಿದೆ. ಹಂಚಿಕೆಯಾದ 49 ಲಕ್ಷ ಸೌರ ಪಂಪ್‌ಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಸ್ಥಾಪಿಸಲಾಗಿದೆ. ಇದರಿಂದ ವಾರ್ಷಿಕವಾಗಿ 1.3 ಬಿಲಿಯನ್ ಲೀಟರ್ ಡೀಸೆಲ್ ಬಳಕೆ ಕಡಿಮೆ ಮಾಡಿದೆ. 40 ಮಿಲಿಯನ್ ಟನ್ CO₂ ಹೊರಸೂಸುವಿಕೆ ಕಡಿತಗೊಳಿಸಿದೆ ಮತ್ತು ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಿದೆ ಎಂದರು.
ಈ ಸುದ್ದಿಯನ್ನೂ ಓದಿ | IBPS Recruitment 2025: ಬ್ಯಾಂಕ್ ಉದ್ಯೋಗಾರ್ಥಿಗಳಿಗೆ ಸಿಹಿ ಸುದ್ದಿ; ಬರೋಬ್ಬರಿ 13,217 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ IBPS
ಇದೇ ವೇಳೆ PM ಸೂರ್ಯ ಘರ್ ಮತ್ತು PM-KUSUM ರಾಜ್ಯವಾರು ಮೌಲ್ಯಮಾಪನ ನಡೆಸಲಾಯಿತು. ನವೀಕರಿಸಬಹುದಾದ ಇಂಧನ ವಲಯದಲ್ಲಿನ ಪ್ರಸ್ತುತ ಸಮಸ್ಯೆಗಳ ಕುರಿತು ಕೈಗಾರಿಕಾ ಸಂಘಗಳು ಚರ್ಚಿಸಿದವು. PM-KUSUM 2.0 ವಿನ್ಯಾಸ ಮತ್ತು ಅನುಷ್ಠಾನ ಕುರಿತು ಸಮಾಲೋಚನೆ ಸಹ ನಡೆಸಲಾಯಿತು. ಎಂಎನ್ಆರ್‌ಇ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ ಮತ್ತಿತರರು ಇದ್ದರು.