ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಮಾರಣಾಂತಿಕ ದಾಳಿ; ಭಯಾನಕ ಕ್ರೌರ್ಯ ಬಿಚ್ಚಿಟ್ಟ ಸೌರಭ್
Indian-origin man brutally attacked: ಹದಿಹರೆಯದವರ ಗುಂಪೊಂದು ಭಾರತೀಯ ಮೂಲದ ವ್ಯಕ್ತಿಯೊಬ್ಬರ ಮೇಲೆ ಮಚ್ಚಿನಿಂದ ಕ್ರೂರವಾಗಿ ಹಲ್ಲೆ ನಡೆಸಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ದಾಳಿಯಲ್ಲಿ 33 ವರ್ಷದ ಸೌರಭ್ ಆನಂದ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.


ಮೆಲ್ಬೋರ್ನ್: ಶಾಪಿಂಗ್ ಸೆಂಟರ್‌ನ ಬಳಿ ಹದಿಹರೆಯದವರ ಗುಂಪೊಂದು ಭಾರತೀಯ ಮೂಲದ ವ್ಯಕ್ತಿಯೊಬ್ಬರ ಮೇಲೆ ಮಚ್ಚಿನಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ದಾಳಿಯಲ್ಲಿ 33 ವರ್ಷದ ಸೌರಭ್ ಆನಂದ್ ಗಂಭೀರ ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ದಾಳಿ ವೇಳೆ ಸೌರಭ್ ಆನಂದ್ ಗಂಭೀರ ಗಾಯಗೊಂಡಿದ್ದು ಅವರ ಕೈ ಬಹುತೇಕ ಕತ್ತರಿಸಿಹೋಗುವ ಹಂತ ತಲುಪಿತ್ತು. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಮತ್ತೆ ಕೈಯನ್ನು ಮರುಜೋಡಿಸಿದ್ದಾರೆ.
ಜುಲೈ 19ರಂದು ಸಂಜೆ 7.30ರ ಸುಮಾರಿಗೆ ಆಲ್ಟೋನಾ ಮೆಡೋಸ್‌ನಲ್ಲಿರುವ ಸೆಂಟ್ರಲ್ ಸ್ಕ್ವೇರ್ ಶಾಪಿಂಗ್ ಸೆಂಟರ್‌ನಲ್ಲಿರುವ ಔಷಧಾಲಯದಿಂದ ಔಷಧ ಖರೀದಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಐದು ಮಂದಿ ಹದಿಹರೆಯದವರ ಗುಂಪು ಅವರ ಮೇಲೆ ಹೊಂಚು ಮಾಡಿ ದಾಳಿ ನಡೆಸಿದೆ. ತಮ್ಮ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಸೌರಭ್ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ.
ತಾನು ಸ್ನೇಹಿತನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಕಣ್ಣಿನ ಮೂಲೆಯಿಂದ ಏನೋ ಚಲನೆ ಕಂಡಿತು ಎಂದು ಹೇಳಿದರು. ತನಗೆ ಯಾವುದೇ ಶಬ್ಧ ಕೇಳಿಸಲಿಲ್ಲ. ಕೆಲವೇ ಸೆಕೆಂಡುಗಳಲ್ಲಿ ಅವರು ತನ್ನನ್ನು ಸುತ್ತುವರೆದರು. ಒಬ್ಬ ಹುಡುಗ ತನ್ನ ಜೇಬಿನಲ್ಲಿ ಹುಡುಕಾಡಿದರೆ, ಮತ್ತೊಬ್ಬ ಹುಡುಗ ನೆಲಕ್ಕೆ ಬೀಳುವವರೆಗೂ ತಲೆಗೆ ಗುದ್ದುತ್ತಲೇ ಇದ್ದ ಎಂದು ಅವರು ಹೇಳಿದರು. ನಂತರ ಮೂರನೆಯ ವ್ಯಕ್ತಿ ಮಚ್ಚನ್ನು ಹೊರತೆಗೆದು ಗಂಟಲಿನ ಬಳಿ ಇಟ್ಟಿದ್ದಾನೆ.
ಅಷ್ಟಕ್ಕೆ ಅವರ ಕ್ರೌರ್ಯ ನಿಲ್ಲಲಿಲ್ಲ. ನೆಲಕ್ಕೆ ಬಿದ್ದಿದ್ದರಿಂದ ಎದ್ದು ನಿಲ್ಲಲು ಮುಂದಾಗಿದ್ದಾರೆ. ಈ ವೇಳೆ ಮಚ್ಚಿನಿಂದ ತೋಳಿಗೆ ಹಲ್ಲೆ ನಡೆಸಿದ್ದಾರೆ. ಅವರ ಭುಜ ಮತ್ತು ಬೆನ್ನಿಗೆ ಮಾರಣಾಂತಿಕ ದಾಳಿ ನಡೆಸಲಾಗಿದೆ. ಪರಿಣಾಮ ಬೆನ್ನುಮೂಳೆ ಜಖಂಗೊಂಡಿದ್ದು, ತೋಳಿನ ಮೂಳೆಗಳು ಮುರಿದಿದ್ದು, ತಲೆಗೆ ಗಾಯಗಳಾಗಿವೆ. ತನಗೆ ನೆನಪಿರುವ ಏಕೈಕ ವಿಷಯವೆಂದರೆ ನೋವು ಮತ್ತು ತನ್ನ ಕೈ ದಾರದಿಂದ ನೇತಾಡುತ್ತಿತ್ತು ಎಂದು ಭೀಕರ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೌರಬ್ ಹೇಗೋ ಹೊರಗೆ ಬಂದು ದಾರಿಹೋಕರನ್ನು ಸಹಾಯಕ್ಕಾಗಿ ಕೂಗಿದ್ದಾರೆ. ಕೂಡಲೇ ಸಹಾಯಕ್ಕೆ ಧಾವಿಸಿದ ಆಪದ್ಭಾಂಧವರು ಅವರನ್ನು ರಾಯಲ್ ಮೆಲ್ಬೋರ್ನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಮೊದಲು ಅವರ ಎಡಗೈಯನ್ನು ಕತ್ತರಿಸಬೇಕಾಗಬಹುದು ಎಂದು ಹೇಳಿದರು. ಆದರೆ ಗಂಟೆಗಳ ಕಾಲ ತುರ್ತು ಶಸ್ತ್ರಚಿಕಿತ್ಸೆಯ ನಂತರ ಕೈಯನ್ನು ಮರುಜೋಡಿಸುವಲ್ಲಿ ಯಶಸ್ವಿಯಾದರು.
ಇನ್ನು ದಾಳಿ ನಡೆಸಿದ ಆರೋಪದ ಮೇಲೆ ನಾಲ್ವರು ಹದಿಹರೆಯದ ಹುಡುಗರನ್ನು ಪೊಲೀಸರು ಬಂಧಿಸಿದ್ದು, ಐದನೇ ಶಂಕಿತನನ್ನು ಇನ್ನೂ ಬಂಧಿಸಿಲ್ಲ.