Operation Sindoor: ನಾಲ್ಕು ದಿನಗಳಲ್ಲಿ ಆಪರೇಶನ್ ಸಿಂದೂರ್ ಪಾಕ್‌ಗೆ ಮಾಡಿದ ಹಾನಿ ಎಷ್ಟು?
Operation Sindoor: ಕಳೆದ ಕೆಲವು ದಿನಗಳಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು ಭಾರತೀಯ ವಾಯುಪಡೆ ಪುಡಿಗಟ್ಟಿದೆ. ಭಯೋತ್ಪಾದಕ ಕೇಂದ್ರಗಳ ಜೊತೆಗೆ ಅದರ ರಾಡಾರ್ ವ್ಯವಸ್ಥೆಗಳು, ವಾಯು ರಕ್ಷಣಾ ವ್ಯವಸ್ಥೆಗಳು ನೆಲಕಚ್ಚಿವೆ. ಜೆಟ್ ಫೈಟರ್‌ಗಳು ಕೆಲಸಕ್ಕೆ ಬಾರದೇ ಹೋಗಿವೆ.


ನವದೆಹಲಿ: ಪೂರ್ಣ ಪ್ರಮಾಣದ ಯುದ್ಧಕ್ಕೆ ತಿರುಗಲಿದ್ದ ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವಿನ ಘರ್ಷಣೆಯನ್ನು (Operation Sindoor) ಅಮೆರಿಕ ಮಧ್ಯಸ್ಥಿಕೆಯಲ್ಲಿ ಜಾರಿಗೆ ತಂದ ಕದನ ವಿರಾಮ ಕೊನೆಗೊಳಿಸಿದೆ. ಆದರೂ ಪಾಕಿಸ್ತಾನದ (Pakistan) ಕಡೆಯಿಂದ ಕದನವಿರಾಮ ಉಲ್ಲಂಘನೆ ಮುಂದುವರಿದಿದೆ. ಈ ನಾಲ್ಕು ದಿನಗಳಲ್ಲಿ ಭಾರತದ (India) ಮಿಲಿಟರಿ ಕ್ರಮವು ಪಾಕಿಸ್ತಾನಕ್ಕೆ ಸಾಕಷ್ ಡ್ಯಾಮೇಜ್ ಮಾಡಿದೆ. ಇತ್ತ ಭಾರತದಲ್ಲಿ ಹಲವು ಜೀವಹಾನಿ, ಸ್ವತ್ತು ನಷ್ಟ ಸಂಭವಿಸಿದೆ.
ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನೇರ ಮಿಲಿಟರಿ ಪ್ರತಿಕ್ರಿಯೆಯಾಗಿ ಮೇ 7ರ ಮುಂಜಾನೆ ಭಾರತವು ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ತರಬೇತಿ ಶಿಬಿರಗಳನ್ನು ನಾಶಪಡಿಸಿತು. ನಿಖರವಾದ ದಾಳಿಗಳು ಕೇವಲ 26 ನಿಮಿಷಗಳಲ್ಲಿ ಸುಮಾರು 100 ಭಯೋತ್ಪಾದಕರನ್ನು ಕೊಂದವು. ಭಾರತ ಅಧಿಕೃತವಾಗಿ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಆದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇತರ ರಾಜಕೀಯ ಪಕ್ಷಗಳ ನಾಯಕರಿಗೆ ಮಾಹಿತಿ ನೀಡಿದಾಗ 100 ಸಂಖ್ಯೆಯನ್ನು ಉಲ್ಲೇಖಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿಯ ಹಿಂದೆ ಪಿಒಕೆ ಒಳಗೆ ಒಂಬತ್ತರಿಂದ 30 ಕಿ.ಮೀ. ದೂರದಲ್ಲಿ ಐದು ಭಯೋತ್ಪಾದಕ ತಾಣಗಳು ಇದ್ದವು; ಉಳಿದವು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯಿಂದ 100 ಕಿ.ಮೀ. ಒಳಗೆ ಇದ್ದವು. ಪ್ರಯೋಗಿಸಿದ ಶಸ್ತ್ರಾಸ್ತ್ರಗಳಲ್ಲಿ ರಫೇಲ್‌ನಿಂದ ಉಡಾಯಿಸಲಾದ ಸ್ಕಾಲ್ಪ್ ಕ್ರೂಸ್ ಕ್ಷಿಪಣಿಗಳು ಮತ್ತು ಹ್ಯಾಮರ್ ಸ್ಮಾರ್ಟ್ ಬಾಂಬ್‌ಗಳು, ಕಾಮಿಕೇಜ್ ಡ್ರೋನ್‌ಗಳು ಇದ್ದವು. M777 ಹೊವಿಟ್ಜರ್‌ಗಳನ್ನು ಬಳಸಲಾಗಿತ್ತು. ಇದರಿಂದ ಪಾಕ್ ಕಂಗಾಲಾಯಿತು.
ಮರುದಿನ ರಾತ್ರಿ ಪಾಕಿಸ್ತಾನ ಭಾರತದ ಉತ್ತರ ಮತ್ತು ಪಶ್ಚಿಮದ 15 ನಗರಗಳ ಹಲವಾರು ಮಿಲಿಟರಿ ಗುರಿಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳೊಂದಿಗೆ ದಾಳಿ ಮಾಡುವ ಪ್ರಯತ್ನ ಮಾಡಿತು. ಅದನ್ನು ಭಾರತದ ಸೇನೆ ವಿಫಲಗೊಳಿಸಿತು. ಮತ್ತು ಪಾಕಿಸ್ತಾನದ ಲಾಹೋರ್ ಮತ್ತು ಕರಾಚಿಯಲ್ಲಿನ ಹಲವು ವಾಯು ರಕ್ಷಣಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಪ್ರತಿದಾಳಿ ನಡೆಸಿ ಅವುಗಳನ್ನು ನಾಶ ಮಾಡಿತು.
ಕಳೆದ ನಾಲ್ಕು ದಿನಗಳಲ್ಲಿ ಭಾರತೀಯ ಪಡೆಗಳು ಪಾಕಿಸ್ತಾನದಿಂದ ಬಂದ ವೈಮಾನಿಕ ಬೆದರಿಕೆಗಳನ್ನು ತಟಸ್ಥಗೊಳಿಸಿದವು. ಇದಕ್ಕೆ ಹಲವಾರು ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಳಸಿದವು. ಇವುಗಳಲ್ಲಿ ರಷ್ಯಾ ಮೂಲದ S-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆ, ಸ್ಥಳೀಯವಾಗಿ ನಿರ್ಮಿತ ಆಕಾಶ್ ಕ್ಷಿಪಣಿಗಳು, ಬರಾಕ್ 8 ವಾಯು ರಕ್ಷಣಾ ವ್ಯವಸ್ಥೆ, ವಿವಿಧ ರೀತಿಯ ಡ್ರೋನ್ ವಿರೋಧಿ ವ್ಯವಸ್ಥೆಗಳು, ರಾಡಾರ್‌ಗಳ ಸಂಯೋಜಿತ ಜಾಲ, ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆಗಳು ಸೇರಿವೆ.
ಎಲ್‌ಒಸಿ ಉದ್ದಕ್ಕೂ ಫಿರಂಗಿ ಮತ್ತು ಶೆಲ್ ಗುಂಡಿನ ವಿನಿಮಯ ನಡೆಯಿತು. ಎರಡೂ ಕಡೆಯಲ್ಲೂ ಮಿಲಿಟರಿ ಮತ್ತು ನಾಗರಿಕ ಸಾವುನೋವುಗಳು ಸಂಭವಿಸಿವೆ. ಮೇ 8-9ರ ಮಧ್ಯರಾತ್ರಿ ಪಾಕಿಸ್ತಾನ ಭಾರತದ 36 ಸ್ಥಳಗಳ ಮೇಲೆ ದಾಳಿ ನಡೆಸಿತು- ದೇಶದ ಉತ್ತರದಲ್ಲಿರುವ ಲೇಹ್, ಜಮ್ಮು ಮತ್ತು ಬಟಿಂಡಾದಿಂದ ಪಶ್ಚಿಮದಲ್ಲಿರುವ ಸರ್ ಕ್ರೀಕ್ ವರೆಗೆ- 300-400 ಟರ್ಕಿಶ್ ಮೂಲದ ಆಸಿಸ್‌ಗಾರ್ಡ್ ಸೊಂಗರ್ ಸಶಸ್ತ್ರ ಡ್ರೋನ್‌ಗಳೊಂದಿಗೆ ದಾಳಿ ನಡೆಯಿತು. ಹೆಚ್ಚಿನ ಡ್ರೋನ್‌ಗಳನ್ನು ಭಾರತೀಯ ಪಡೆಗಳು ಹೊಡೆದುರುಳಿಸಿದವು. ಭಾರತೀಯ ಪ್ರತಿದಾಳಿಯು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಾಶಪಡಿಸಿತು.
ಮರುದಿನ ಪಾಕಿಸ್ತಾನ ಎಲ್‌ಒಸಿ ಮತ್ತು ಐಬಿ ಉದ್ದಕ್ಕೂ 26 ಸ್ಥಳಗಳಲ್ಲಿ ಡ್ರೋನ್ ದಾಳಿಗಳನ್ನು ನಡೆಸಿತು. ಭಾರತೀಯ ಪಡೆಗಳು ಪ್ರತಿ-ಡ್ರೋನ್ ಶಸ್ತ್ರಾಸ್ತ್ರಗಳು ಸೇರಿದಂತೆ ತನ್ನ ವಾಯು ರಕ್ಷಣಾ ವ್ಯವಸ್ಥೆಗಳೊಂದಿಗೆ ಬೆದರಿಕೆಗಳನ್ನು ಹಿಮ್ಮೆಟ್ಟಿಸಿದವು. ಮೇ 10ರ ಮುಂಜಾನೆ, ಭಾರತೀಯ ವಾಯುಪಡೆಯು ವಾಯುನೆಲೆಗಳು, ರಾಡಾರ್ ಘಟಕಗಳು ಮತ್ತು ಮದ್ದುಗುಂಡುಗಳ ನೆಲೆಗಳು ಸೇರಿದಂತೆ ಪಾಕಿಸ್ತಾನದ ಎಂಟು ಮಿಲಿಟರಿ ತಾಣಗಳನ್ನು ವಾಯು-ಉಡಾವಣಾ ನಿಖರ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿ ಉಡೀಸ್ ಮಾಡಿತು. ಇದು ಪಾಕಿಸ್ತಾನಕ್ಕೆ ಬಿದ್ದ ಅತ್ಯಂತ ಕೆಟ್ಟ ಹೊಡೆತ.
ರಫೀಕಿ, ಮುರಿದ್, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್, ಚುನಿಯನ್, ಪಸ್ರೂರ್ ಮತ್ತು ಸಿಯಾಲ್‌ಕೋಟ್‌ಗಳಲ್ಲಿನ ಮಿಲಿಟರಿ ಗುರಿಗಳ ಮೇಲೆ ಐಎಎಫ್ ದಾಳಿ ನಡೆಸಿತು. ಭಾರತ ದಾಳಿ ಮಾಡಿದ ಗುರಿಗಳಲ್ಲಿ ತಾಂತ್ರಿಕ ಮೂಲಸೌಕರ್ಯ, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ರಾಡಾರ್ ತಾಣಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಪ್ರದೇಶಗಳು ಸೇರಿವೆ.
ಕಳೆದ ಕೆಲವು ದಿನಗಳಲ್ಲಿ ಪಾಕಿಸ್ತಾನ ಭಾರೀ ನಷ್ಟಗಳನ್ನು ಅನುಭವಿಸಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದರು. "ಸ್ಕಾರ್ಡು, ಸರ್ಗೋಧಾ, ಜಕೋಬಾಬಾದ್ ಮತ್ತು ಭೋಲಾರಿಯಂತಹ ನಿರ್ಣಾಯಕ ಪಾಕಿಸ್ತಾನಿ ವಾಯುನೆಲೆಗಳಿಗೆ ವ್ಯಾಪಕ ಹಾನಿಯಾಗಿದೆ. ವಾಯು ರಕ್ಷಣಾ ಶಸ್ತ್ರಾಸ್ತ್ರಗಳು ಮತ್ತು ರಾಡಾರ್‌ಗಳ ನಷ್ಟವು ಪಾಕಿಸ್ತಾನಿ ವಾಯುಪ್ರದೇಶದ ರಕ್ಷಣೆಯನ್ನು ಅಸಾಧ್ಯವಾಗಿಸಿದೆ. ಎಲ್‌ಒಸಿಯಾದ್ಯಂತ ಮಿಲಿಟರಿ ಮೂಲಸೌಕರ್ಯ, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಮತ್ತು ಲಾಜಿಸ್ಟಿಕ್ಸ್ ಸ್ಥಾಪನೆಗಳಿಗೆ ವ್ಯಾಪಕ ಮತ್ತು ನಿಖರವಾದ ಹಾನಿಯಾಗಿದ್ದು, ಅದರ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಸಾಮರ್ಥ್ಯದ ಸಂಪೂರ್ಣ ಸ್ಥಗಿತಕ್ಕೆ ಕಾರಣವಾಗಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: Operation Sindoor: ಪಾಕಿಸ್ತಾನದ ನೈಜ ಪವರ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಬಳಿ?