ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಹುಷಾರ್‌! ರೋಗಗಳನ್ನು ಹೊತ್ತು ತರಬಹುದು ಪಾರಿವಾಳಗಳು

ಪಾರಿವಾಳಗಳು (Pigeons) ಇದ್ದಲ್ಲೆಲ್ಲ ಹತ್ತಿಯಂಥ ಪುಕ್ಕಗಳು, ಗರಿಯ ತುಣುಕುಗಳು ಬಿದ್ದಿರುವುದು ಅಥವಾ ಗಾಳಿಯಲ್ಲಿ ತೇಲಾಡುತ್ತಿರುವುದು ಕಾಣುತ್ತದೆ. ಮಾತ್ರವಲ್ಲ ನೆಲದ ನಕ್ಷೆಯೇ ಬದಲಾಗುವಂತೆ ಹಕ್ಕಿಪಿಕ್ಕೆಯ ರಾಶಿಯೂ ಕಾಣುತ್ತದೆ. ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಇವುಗಳು ಮೂಲ ಕಾರಣವಾಗುತ್ತದೆ.

ಪಾರಿವಾಳಗಳು ರೋಗ ಹೊತ್ತು ಬರಬಹುದು ಎಚ್ಚರ

ಬೆಂಗಳೂರು: ಒಂದು ಕಾಲದಲ್ಲಿ ಹಳ್ಳಿ, ನಗರಗಳೆನ್ನದೆ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದ ಕಾಗೆ, ಗುಬ್ಬಿಗಳು ಇಂದು ಮಾಯವಾಗಿವೆ. ಬದಲಿಗೆ ಪಾರಿವಾಳಗಳು (Pigeons) ಈಗ ತಮ್ಮ ಸಾಮ್ರಾಜ್ಯ ಸ್ಥಾಪಿಸಿಕೊಂಡಿವೆ. ಗುಬ್ಬಚ್ಚಿಗಳ ರೀತಿಯಲ್ಲೇ ಮನೆಯ ಚಾವಣಿ, ಕಿಟಕಿಯ ಸಂಧುಗಳಲ್ಲಿ, ನೀರಿನ ಟ್ಯಾಂಕ್‌ನ ಮೂಲೆಯಲ್ಲಿ... ಹೀಗೆ ಜಾಗ ಇದ್ದಲ್ಲೆಲ್ಲ, ಇಲ್ಲದಿದ್ದರೆ ಮಾಡಿಕೊಂಡು ತಮ್ಮ ಗೂಡು ಕಟ್ಟುವ ಪಾರಿವಾಳಗಳು ಮಕ್ಕಳು, ಮರಿಗಳನ್ನು ಮಾಡಿಕೊಂಡು ಆರಾಮವಾಗಿ ಕಾಲ ಕಳೆಯುತ್ತಿವೆ. ನಮಗೂ ಈಗ ʻಚಿಂವ್‌ ಚಿಂವ್‌ʼ ಬದಲಿಗೆ ಪಾರಿವಾಳಗಳ ʻಗುಟರ್‌ ಗೂʼ ಎನ್ನುವ ಶಬ್ದವೇ ಕೇಳಿಸುತ್ತಿದೆ. ಅವುಗಳಿಗೆ ಕಾಳು, ನೀರು ಎಲ್ಲವನ್ನೂ ಇಡುತ್ತೇವೆ. ಆದರೆ ನಾವು ಆಹ್ವಾನಿಸದೆ ಬರುವ ಈ ಪಾರಿವಾಳಗಳು ವಿವಿಧ ರೋಗಗಳನ್ನು (Health risks) ಹೊತ್ತು ತರಬಹುದು, ಮನೆ ಮಂದಿಯ ಆರೋಗ್ಯಕ್ಕೆ (Diseases) ಗಂಭೀರ ಆತಂಕಗಳು ಉಂಟು ಮಾಡಬಹುದು ಎಂಬುದು ಬಹುಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ಏನಿಲ್ಲ ಸಮಸ್ಯೆ?

ಪಾರಿವಾಳಗಳು ಇದ್ದಲ್ಲೆಲ್ಲ ಹತ್ತಿಯಂಥ ಪುಕ್ಕಗಳು, ಗರಿಯ ತುಣುಕುಗಳು ಬಿದ್ದಿರುವುದು ಅಥವಾ ಗಾಳಿಯಲ್ಲಿ ತೇಲಾಡುತ್ತಿರುವುದು ಕಾಣುತ್ತದೆ. ಮಾತ್ರವಲ್ಲ ನೆಲದ ನಕ್ಷೆಯೇ ಬದಲಾಗುವಂತೆ ಹಕ್ಕಿಪಿಕ್ಕೆಯ ರಾಶಿಯೂ ಕಂಡು ಬರುತ್ತದೆ. ಆರೋಗ್ಯ ಸಮಸ್ಯೆಗಳಿಗೆ ಇವುಗಳೇ ಮೂಲ ಕಾರಣವಾಗುತ್ತವೆ. ಪಾರಿವಾಳದ ಪಿಕ್ಕೆ ಮತ್ತು ಪುಕ್ಕಗಳಲ್ಲಿ ಹಾನಿಕಾರಕ ಶಿಲೀಂದ್ರ, ಬ್ಯಾಕ್ಟೀರಿಯಾ, ವೈರಸ್‌ಗಳು ಇರುವುದರಿಂದ ಇವು ಹಲವು ಬಗೆಯ ರೋಗಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಇವುಗಳೊಂದಿಗೆ ದೀರ್ಘ ಕಾಲ ಸಂಪರ್ಕಕ್ಕೆ ಬಂದರೆ ಆರೋಗ್ಯವಂತರಿಗೂ ಶ್ವಾಸಕೋಶದ ಸೋಂಕುಗಳು ಕಾಣಿಸಿಕೊಳ್ಳಬಹುದು. ಇನ್ನು ಸೂಕ್ಷ್ಮ ಆರೋಗ್ಯದವರಿಗಂತೂ ಬಲುಬೇಗ ಅಸ್ತಮಾ ಅಥವಾ ಇತರ ಅಲರ್ಜಿಗಳು ಕಾಡಬಹುದು.

ಪಾರಿವಾಳದ ದೇಹದಲ್ಲಿರುವ ರೋಗಾಣುಗಳು ಅದರ ಪಿಕ್ಕೆ ಅಥವಾ ರೆಕ್ಕೆ-ಪುಕ್ಕಗಳ ಮೂಲಕ ಗಾಳಿಯ ಮುಖಾಂತರ ನಮ್ಮ ದೇಹವನ್ನು ಪ್ರವೇಶಿಸಬಲ್ಲವು. ಇಂಥ ರೋಗಾಣುಗಳು ‍ಶ್ವಾಸಕೋಶ ಸೇರಿ ತರಾವರಿ ಅಲರ್ಜಿಗಳನ್ನು ಅಂಟಿಸಬಲ್ಲವು.

ಇದಿಷ್ಟೇ ಅಲ್ಲ ಹೈಪರ್‌ಸೆನ್ಸಿಟಿವಿಟಿ ನ್ಯುಮೋನೈಟಿಸ್‌ ಎನ್ನುವ ತೀವ್ರತರದ ಸಮಸ್ಯೆಯನ್ನು ಇದು ಉಂಟು ಮಾಡುತ್ತದೆ. ಇದರಲ್ಲಿ ಪುಪ್ಪುಸದಲ್ಲಿ ತೀವ್ರವಾದ ಉರಿಯೂತ ಕಾಣಿಸಿಕೊಂಡು ಜೀವಕ್ಕೆ ಅಪಾಯವಾಗುವ ಸಾಧ್ಯತೆಯೂ ಇದೆ. ಈ ಸಮಸ್ಯೆಗೆ ಆರಂಭದಲ್ಲಿ ಚಿಕಿತ್ಸೆ ನೀಡಿದರೆ ಮಾತ್ರ ರೋಗಿಯನ್ನು ಕಾಪಾಡಬಹುದು. ಅಂದರೆ ಮೊದಲ ನಾಲ್ಕಾರು ವಾರಗಳಲ್ಲಿ ಇದನ್ನು ಚಿಕಿತ್ಸೆಯ ಮೂಲಕ ಗುಣಪಡಿಸಿಕೊಳ್ಳದಿದ್ದರೆ ಆನಂತರ ಗುಣವಾಗದಂಥ ಶ್ವಾಸಕೋಶದ ಫೈಬ್ರೋಸಿಸ್‌ಗೆ ಕಾರಣವಾಗಬಹುದು.

ಮುಕ್ತಿ ಹೇಗೆ?

ನಾಲ್ಕಾರು ಮಹಡಿಗಳಷ್ಟು ಎತ್ತರದ ಕಟ್ಟಡಗಳಿದ್ದರೆ, ನೀರಿರುವ ಸ್ಥಳಗಳಿದ್ದರೆ ಮಾತ್ರವೇ ಪಾರಿವಾಳಗಳು ಬೀಡು ಬಿಡುತ್ತವೆ ಎಂದೇನಿಲ್ಲ. ಈಗ ಅವುಗಳ ಸಂಖ್ಯೆ ಎಷ್ಟೊಂದು ವೃದ್ಧಿಯಾಗಿದೆ ಎಂದರೆ ನಗರ ಪ್ರದೇಶಗಳ ಯಾವುದೇ ಜಾಗದಲ್ಲೂ ಅವುಗಳ ನೆಲೆಯನ್ನು ಕಾಣಬಹುದು. ಹಾಗಾದರೆ ನಾವು ಮಾತ್ರ ಬದುಕಬೇಕೇ? ಅವುಗಳಿಗೆ ಭೂಮಿಯ ಮೇಲೆ ಬದುಕುವ ಹಕ್ಕಿಲ್ಲವೇ? ಇದೆ. ಆದರೆ ಅದನ್ನು ಅದರಷ್ಟಕ್ಕೆ ಬಿಡಿ. ಅತಿ ಕರುಣೆಯಿಂದ ಸಾಕುವುದಕ್ಕೆ ಪ್ರಯತ್ನಿಸಬೇಡಿ. ಅವುಗಳ ಮೇಲಿನ ರೋಗಾಣುಗಳ ಸಂಪರ್ಕದಿಂದ ಪಾರಾಗುವುದಕ್ಕೆ ಇಲ್ಲಿವೆ ಸಲಹೆಗಳು.

ಕಾಳೆಸೆಯಬೇಡಿ

ತಮ್ಮ ಆಹಾರವನ್ನು ಅರಸುವುದು ಪ್ರಾಣಿಗಳ ಮೂಲ ಪ್ರವೃತ್ತಿಗಳಲ್ಲಿ ಒಂದು. ಎಲ್ಲಿ ಆಹಾರ ದೊರೆತರೂ ಅವು ಅಲ್ಲಿಗೆ ಬರುವುದು ಸಹಜ. ಪಾರಿವಾಳಗಳ ಮೇಲಿನ ಅತಿ ಕರುಣೆಯಿಂದ ಕಾಳು, ನೀರು ಇಡುತ್ತೀರಿ ಎಂದಾದರೆ ಅವು ಹೆಚ್ಚೆಚ್ಚು ಬರುತ್ತವೆ. ಇದರಿಂದ ನಿಮಗೆ ತೊಂದರೆ, ಎಚ್ಚರವಿರಲಿ.

ಇದನ್ನೂ ಓದಿ: ಇಳಿವಯಸ್ಸಿನವರ ಕುರಿತು ಅರ್ಥ ಮಾಡಿಕೊಳ್ಳಲು ಅಧ್ಯಯನ ವರದಿ ಬಿಡುಗಡೆ : ರೋಹಿಣಿ ನಿಲೇಕಣಿ ಲೋಕೋಪಕಾರಿ ಸಂಸ್ಥೆ ಸಹಭಾಗಿತ್ವದಲ್ಲಿ ವರದಿ ತಯಾರಿ

ಕಿಟಕಿ, ಬಾಲ್ಕನಿ ಸುರಕ್ಷಿತವಾಗಿರಿಸಿ

ಇಂಥ ಜಾಗಗಳಲ್ಲಿ ಅವು ನೆಲೆ ಮಾಡಿಕೊಳ್ಳುವುದು ಹೆಚ್ಚು. ಇಂಥ ಜಾಗಗಳಿಗೆ ಪಾರಿವಾಳದ ನೆಟ್‌ ಹಾಕಿಸಿಕೊಳ್ಳಿ. ಕೆಲವೊಮ್ಮೆ ಚೂಪಾದ ವಸ್ತುಗಳನ್ನು ಇರಿಸುವುದರಿಂದ ಅವು ಕುಳಿತುಕೊಳ್ಳುವುದರಿಂದ ತಡೆಯಬಹುದು. ಅಂತೂ ಅವುಗಳು ನಿಮ್ಮ ಆವರಣ ಪ್ರವೇಶ ಮಾಡದಂತೆ ನಿರ್ಬಂಧಿಸಿ. ಇದರಿಂದ ಅವುಗಳ ನೇರ ಸಂಪರ್ಕದಿಂದ ತಪ್ಪಿಸಿಕೊಳ್ಳಬಹುದು.

ಸ್ವಚ್ಛತೆ ಕಾಪಾಡಿಕೊಳ್ಳಿ

ಅವುಗಳ ಉಚ್ಚಿಷ್ಟಗಳು ಬೀಳುವಂತಹ ಜಾಗಗಳನ್ನು ಪದೇಪದೆ ಸ್ವಚ್ಛ ಮಾಡುವುದು ಅನಿವಾರ್ಯ. ಇಂಥ ಸಂದರ್ಭದಲ್ಲಿ ಕೈಗಳಿಗೆ ಗ್ಲೌಸ್‌ ಹಾಕಿ, ಮುಖಕ್ಕೆ ಎನ್‌ 95 ಮಾದರಿಯ ಮಾಸ್ಕ್‌ ಹಾಕಿಕೊಳ್ಳಿ. ಈ ಮೂಲಕ ರೋಗಾಣುಗಳ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬಹುದು. ನೆಲಕ್ಕೆ ಸೂಕ್ತವಾದ ಸೋಂಕು ನಿರೋಧಕ ದ್ರಾವಣಗಳನ್ನು ಬಳಸಿ.