Sofia Qureshi: ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿ ಮನೆ ಮೇಲೆ ದಾಳಿ; ಸುಳ್ಳು ಸುದ್ದಿ ಹಬ್ಬಿಸಿದ ಯುವಕ!
Sofia Qureshi: ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವುದು ಕಂಡುಬಂದಿದೆ. ಅನಿಸ್ ಉದ್ದೀನ್ ಎಂಬಾತ, ಸೇನಾಧಿಕಾರಿ ಸೋಫಿಯಾ ಖುರೇಷಿ ಅವರ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ಪತಿ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಹಳೆ ಪೋಟೋ ಒಂದನ್ನು ಸೇರಿಸಿ, ಸುಳ್ಳು ಸುದ್ದಿ ಹಬ್ಬಿಸಿದ್ದಾನೆ.


ಬೆಳಗಾವಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಇತ್ತೀಚೆಗೆ ನಡೆಸಿದ್ದ ಆಪರೇಷನ್ ಸಿಂದೂರ ಕಾರ್ಯಾಚರಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ (Sofia Qureshi) ಅವರ ಮನೆ ಮೇಲೆ, ಆರ್‌ಎಸ್‌ಎಸ್ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿಯಾಗಿದ್ದು, ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಬೆಳಗಾವಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವುದು ಕಂಡುಬಂದಿದೆ. ಅನಿಸ್ ಉದ್ದೀನ್ ಎಂಬಾತ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸೇನಾಧಿಕಾರಿ ಸೋಫಿಯಾ ಖುರೇಷಿ ಅವರ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿರುವ ಪತಿ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಹಳೆ ಪೋಟೋ ಒಂದನ್ನು ಸೇರಿಸಿ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಅಷ್ಟೇ ಅಲ್ಲದೆ ದಾಳಿಕೋರರಿಂದ ತಪ್ಪಿಸಿಕೊಳ್ಳಲು ಖುರೇಷಿ ಕುಟುಂಬವನ್ನು ದೆಹಲಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.
ಈ ಕುರಿತು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಅವರು ಪ್ರತಿಕ್ರಿಯಿಸಿ, ಈ ರೀತಿಯಲ್ಲಿ ಯಾವುದೇ ಘಟನೆ ನಡೆದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದ್ದು, ಸಾರ್ವಜನಿಕರು ಕಿವಿಗೊಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಸೊಸೆ ಸೋಫಿಯಾ ಖುರೇಷಿ
ಆಪರೇಷನ್ ಸಿಂದೂರ ಮಹತ್ವದ ದಾಳಿ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ್ದ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದವರು. ಇದೇ ವಿಚಾರವಾಗಿ ಮುಸ್ಲಿಂ ಯುವಕ, ಮಹಿಳಾ ಸೇನಾಧಿಕಾರಿ ಅವರ ಮನೆ ಮೇಲೆ ದಾಳಿಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡಿದ್ದಾನೆ.
ಸೋಫಿಯಾ ಖುರೇಷಿ ಅವರ ಪತಿ ತಾಜುದ್ದೀನ್ ಬಾಗೇವಾಡಿ ಅವರೂ ಕೂಡಾ ಸೈನ್ಯದಲ್ಲಿದ್ದು ಪತ್ನಿಯಂತೆ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ. ಸೋಫಿಯಾ ಖುರೇಷಿ ಮೂಲತಃ ಗುಜರಾತ್ ರಾಜ್ಯದ ವಡೋದರದಲ್ಲಿ 1981ರಲ್ಲಿ ಜನಿಸಿದವರು. ಸೈನಿಕ ಕುಟುಂಬಕ್ಕೆ ಸೇರಿರುವ ಇವರ ತಂದೆ ಹಾಗೂ ಅಜ್ಜ ಇಬ್ಬರೂ ಭಾರತೀಯ ಸೇನೆಯಲ್ಲಿದ್ದರು. ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೋಫಿಯಾ, ಸದ್ಯ ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತಿ ತಾಜುದ್ದೀನ್ ಬಾಗೇವಾಡಿ ಅವರೂ ಜಾನ್ಸಿಯಲ್ಲಿ ಕರ್ನಲ್ ಆಗಿ ದೇಶಸೇವೆ ಮಾಡುತ್ತಿದ್ದಾರೆ.
1999ರಲ್ಲಿ ಭಾರತೀಯ ಸೇನೆಗೆ ಸೇರಿದ ಕರ್ನಲ್ ಸೋಫಿಯಾ ಖುರೇಷಿ ನಂತರ ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಸೋಫಿಯಾ ಖುರೇಷಿ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಬಳಿಕ ಆಫ್ರಿಕಾದ ಕಾಂಗೋದಲ್ಲಿ 2006ರಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಮಿಲಿಟರಿ ವೀಕ್ಷಕರಾಗಿದ್ದರು. 2010 ರಿಂದ ಮತ್ತೆ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Operation Sindoor: ನಿಮ್ಮ ಶೌರ್ಯಕ್ಕೆ ನನ್ನ ಸಲಾಂ: ಆಪರೇಷನ್ ಸಿಂದೂರ್ ಯಶಸ್ಸಿಗೆ ಯೋಧರನ್ನು ಶ್ಲಾಘಿಸಿದ ಪ್ರಧಾನಿ
ಪಂಜಾಬ್ ಗಡಿಯಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಸಲ್ಲಿಸಿದ ಸೇವೆಗಾಗಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಅವರಿಂದ ಹಾಗೂ ಈಶಾನ್ಯ ಭಾರತದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ಮಾಡಿರುವ ಅತ್ಯುತ್ತಮ ಸೇವೆಗೆ ಸಿಗ್ನಲ್ ಆಫೀಸರ್ ಇನ್ ಚೀಫ್ ಅವರಿಂದ ಸೋಫಿಯಾ ಖುರೇಷಿ ಪ್ರಶಂಸಾ ಪತ್ರವನ್ನು ಪಡೆದಿದ್ದಾರೆ. 2016ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ಕವಾಯತು ‘ಎಕ್ಸರ್ಸೈಸ್ ಫೋರ್ಸ್ 18’ ರಲ್ಲಿ ಭಾರತೀಯ ತುಕಡಿಯನ್ನು ಮುನ್ನಡೆಸಿರುವ ಕೀರ್ತಿ ಕೂಡ ಇವರದ್ದಾಗಿದೆ. ಆ ಕವಾಯತಿನಲ್ಲಿ ಭಾಗವಹಿಸಿದ್ದ 18 ತಂಡಗಳಲ್ಲಿ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಏಕೈಕ ಮತ್ತು ಭಾರತದ ಮೊದಲ ಮಹಿಳಾ ಅಧಿಕಾರಿಯಾಗಿದ್ದರು. ಅನಂತರ ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿಯಾದರು. ಭಾಗವಹಿಸುವ ಎಲ್ಲಾ ರಾಷ್ಟ್ರಗಳಲ್ಲಿ ಏಕೈಕ ಮಹಿಳಾ ತುಕಡಿ ಕಮಾಂಡರ್ ಆಗಿಯು ಇವರು ಗುರುತಿಸಿಕೊಂಡಿದ್ದಾರೆ.