ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhovi Corporation Scam: ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷರ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

Bhovi Corporation President Ravikumar: ಭೋವಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳಿಂದ ನೇರ ವಸೂಲಿಗೆ ಇಳಿದಿರುವ ನಿಗಮದ ಅಧ್ಯಕ್ಷ ರವಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ರವಿಕುಮಾರ್‌ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಭೋವಿ ನಿಗಮ ಅಧ್ಯಕ್ಷರ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

-

Prabhakara R Prabhakara R Sep 2, 2025 2:04 PM

ಬೆಂಗಳೂರು: ವಾಲ್ಮೀಕಿ ಹಗರಣ ಮುಡಾ ಹಗರಣದ ಬಳಿಕ ಇದೀಗ ಭೋವಿ ಅಭಿವೃದ್ಧಿ ನಿಗಮದಲ್ಲೂ (Bhovi Corporation Scam) ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್‌ಗೆ ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಭೂಮಿ ಮಂಜೂರಾದವರಿಗೆ 25 ಲಕ್ಷ ರೂ. ಸಹಾಯಧನ ಬಿಡುಗಡೆ ಮಾಡಲು ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ 5 ಲಕ್ಷ ರೂ. ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಂಚದ ಆರೋಪ ಕೇಳಿಬಂದಿದ್ದರಿಂದ ರವಿಕುಮಾರ್ ಶೀಘ್ರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೂಕ್ತ ತನಿಖೆ ನಡೆಯಬೇಕು: ವಿಜಯೇಂದ್ರ ಆಗ್ರಹ

ಭೋವಿ ನಿಗಮ ಅಕ್ರಮ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು, ದೇಶದಲ್ಲಿ ಲೂಟಿಕೋರತನದ ಲಂಚಪೀಡಕ ಸರ್ಕಾರ ಯಾವುದಾದರೂ ಇದ್ದರೆ ಅದು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಎಂದು ನಿಸ್ಸಂಶಯವಾಗಿ ಹೇಳಲು ಇದೀಗ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಬಯಲಾಗಿದೆ, ಭೋವಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳಿಂದ ನೇರ ವಸೂಲಿಗೆ ಇಳಿದಿರುವ ನಿಗಮದ ಅಧ್ಯಕ್ಷ ರವಿಕುಮಾರ್ ಅವರು ಭೂ ಒಡೆತನ ಯೋಜನೆಯಡಿ ಲಂಚ ಕೇಳಿ ಸಿಕ್ಕಿಬಿದ್ದಿರುವ ಪ್ರಕರಣ ಅತ್ಯಂತ ನಾಚಿಕೆಗೇಡಿತನದ ಪರಮಾವಧಿಯಾಗಿದೆ ಎಂದು ಕಿಡಿಕಾರಿದ್ದಾರೆ.

ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರ ಈ ಮೊದಲು ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಗಳಿಗೆ ಖನ್ನ ಹಾಕಿತ್ತು, ನಂತರ ಪರಿಶಿಷ್ಟರು, ಶೋಷಿತ ಸಮುದಾಯಗಳ ಕಲ್ಯಾಣಕ್ಕೆ ಮೀಸಲಿಟ್ಟಿರುವ ಹಣವನ್ನೂ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿತು. ಇದೀಗ ಭೋವಿ ಸಮುದಾಯದ ಅಭಿವೃದ್ಧಿ ನಿಗಮದ ಫಲಾನುಭವಿಗಳಿಂದ ವಸೂಲಿಗಿಳಿದಿರುವುದು ನಿಜಕ್ಕೂ ನಾಡಿಗೆ ದುರಂತದ ದೌರ್ಭಾಗ್ಯವೇ ಸರಿ.

ಭೋವಿ ಸಮುದಾಯದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಬೇಕಿದ್ದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧ್ಯಕ್ಷರೇ ವಸೂಲಿಗಿಳಿದಿರುವ ಘಟನೆ ‘ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ'. ಈ ಸಂಬಂಧ ಕೂಡಲೇ ಲೋಕಾಯುಕ್ತ ಸ್ವಯಂ ದೂರು ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಲಿ ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.