DK Shivakumar: ಬೆಂಗಳೂರಿನಲ್ಲಿ ನೂತನವಾಗಿ ನಗರ ವಿನ್ಯಾಸ ಕಾಲೇಜು ಪ್ರಾರಂಭಕ್ಕೆ ಚಿಂತನೆ: ಡಿ.ಕೆ. ಶಿವಕುಮಾರ್
DK Shivakumar: ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಬೆಂಗಳೂರಿನಲ್ಲಿ ನೂತನವಾಗಿ ನಗರ ವಿನ್ಯಾಸ (ಟೌನ್ ಪ್ಲಾನಿಂಗ್) ಕಾಲೇಜು ಪ್ರಾರಂಭ ಮಾಡಬೇಕು ಎನ್ನುವ ಆಲೋಚನೆ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್. -

ಬೆಂಗಳೂರು: ಕೆಂಪೇಗೌಡರು ಕಟ್ಟಿದ ಈ ಬೆಂಗಳೂರಿನಲ್ಲಿ ನೂತನವಾಗಿ ನಗರ ವಿನ್ಯಾಸ (ಟೌನ್ ಪ್ಲಾನಿಂಗ್) ಕಾಲೇಜು ಪ್ರಾರಂಭ ಮಾಡಬೇಕು ಎನ್ನುವ ಆಲೋಚನೆ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ವತಿಯಿಂದ ಸೋಮವಾರ ನಡೆದ 58ನೇ ಅಭಿಯಂತರ ದಿನ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ 165ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಿದರು. ಆದರೆ ಆನಂತರ ಈ ನಗರ ವ್ಯವಸ್ಥಿತವಾಗಿ ಬೆಳೆದಿಲ್ಲ. ಇದಕ್ಕೆ ಒಂದು ವ್ಯವಸ್ಥಿತ ರೂಪ ನೀಡಬೇಕಿದೆ. ಇತರೇ ಎಂಜಿನಿಯರಿಂಗ್ ವಿಷಯಗಳನ್ನು ಅಭ್ಯಾಸ ಮಾಡಿ ಇತರೇ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರು ಎರವಲು ಸೇವೆ ಪಡೆದು ನಗರ ವಿನ್ಯಾಸ ವಿಭಾಗಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.
ಈ ನಗರದ ರಸ್ತೆ, ನೀರು, ಮೂಲಸೌಕರ್ಯ ವ್ಯವಸ್ಥೆ ಮಾಡುವವರು ಎಂಜಿನಿಯರ್‌ಗಳು. ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. 70 ಲಕ್ಷ ಜನರು ಪ್ರತಿದಿನ ಹೊರಗಿನಿಂದ ಬಂದು ಹೋಗುತ್ತಾರೆ. 1.40 ಕೋಟಿ ಜನ ವಾಸವಾಗಿದ್ದಾರೆ. ಇದನ್ನು ಬೆಂಗಳೂರು ತಡೆದುಕೊಳ್ಳಬೇಕಿದೆ. ಇದಕ್ಕೆಲ್ಲಾ ಪರಿಹಾರವಾಗಿ ನನ್ನ ಕಾಲದಲ್ಲಿ ಒಂದಷ್ಟು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕಿದೆ. ಅದಕ್ಕಾಗಿ ಟನಲ್ ರಸ್ತೆ ಮಾಡಲಾಗುತ್ತಿದೆ. ಇದಕ್ಕೂ ಟೀಕೆ ಮಾಡಿ ಹಣ ಹೊಡೆಯಲು ಮಾಡುತ್ತಿದ್ದಾರೆ ಎಂದರು. ಆದರೂ ನಾನು ನನ್ನ ಕೆಲಸ ಮುಂದುವರಿಸಿದ್ದೇನೆ ಎಂದು ತಿಳಿಸಿದರು.
ʼಬೆಂಗಳೂರು ಬಿಜಿನೆಸ್ ಕಾರಿಡಾರ್ ಅನ್ನು ಡಿನೋಟಿಫಿಕೇೆಷನ್ ಮಾಡಬೇಕು ಎಂದು ಒತ್ತಡ ಬಂದಿತು. ಆದರೂ ನಾನು ಮಣಿಯಲಿಲ್ಲ. 100 ಕಿ.ಮೀ ಉದ್ದದ ರಸ್ತೆ ನಿರ್ಮಾಣವಾಗುತ್ತಿದೆʼ ಎಂದರು.
ನೀವು ಕೇವಲ ಇಂಜಿನಿಯರ್‌ಗಳಲ್ಲ ದೇಶದ ನಿರ್ಮಾತೃಗಳು. ಮನುಷ್ಯನ ಹುಟ್ಟು ಸಾವಿನ ನಡುವಿನಲ್ಲಿ ಏನಾದರೂ ಸಾಧನೆ ಮಾಡಬೇಕು. ಇಂಜಿನಿಯರ್‌ಗಳು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಸಾಧನೆ ಮಾಡಿರುತ್ತಾರೆ. ವಿಶ್ವೇಶ್ವರಯ್ಯ ಅವರು ದೇಶ ಕಟ್ಟಿದ ಸಾಧಕರು ಎಂದು ಹೇಳಿದರು.
ʼನಾನು ಇಂಜಿನಿಯರ್ ಆಗಲಿಲ್ಲ ಆದರೆ ನನ್ನ ಮಕ್ಕಳನ್ನು ಇಂಜಿನಿಯರ್ ಓದಿಸಿದ್ದೇನೆ. ಎಂಜಿನಿಯರಿಂಗ್ ಕಾಲೇಜು ಪ್ರಾರಂಭ ಮಾಡಿದ್ದೇನೆ. ನಮ್ಮ ಸಂಸ್ಥೆಯಿಂದ ನೂರಾರು ಜನ ಇಂಜಿನಿಯರ್‌ಗಳು ಹೊರ ಬರುತ್ತಿದ್ದಾರೆ. ನಾನು ಸಚಿವನಾಗಿ ಜಿಬಿಎ ಹಾಗೂ ನೀರಾವರಿ ಇಲಾಖೆಯಲ್ಲಿರುವ ಇಂಜಿನಿಯರ್‌ಗಳ ಜತೆ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ನಗರಾಭಿವೃದ್ಧಿ ಹಾಗೂ ಇಂಧನ ಸಚಿವನಾಗಿದ್ದಾಗಲೂ ಕೆಲಸ ಮಾಡಿದ್ದೆ. ಇಂಜಿನಿಯರ್‌ಗಳು ದೇಶ ನಿರ್ಮಿಸುವವರು. ಇಡೀ ಸಮಾಜ ನಿಮ್ಮ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದರ ಬಗ್ಗೆ ನನಗೆ ಅರಿವಿದೆʼ ಎಂದು ತಿಳಿಸಿದರು.
ʼಈ ಹಿಂದೆ ಇನಾಂದಾರ್ ಎಂಬುವರು ಐಟಿಬಿಟಿ ಸಚಿವರಾಗಿದ್ದರು. ಆಗ ಪೊಲೆಂಡ್ ಪ್ರಧಾನಿ ಅವರು ಭೇಟಿ ನೀಡಿದ್ದ ವೇಳೆ ರಾಜ್ಯಪಾಲರ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ನಾನೂ ಸಹ ಭಾಗವಹಿಸಿದ್ದೆ. ಆಗ ಅವರನ್ನು ಬೆಂಗಳೂರು ಭೇಟಿ ವಿಚಾರ ಕೇಳಿದಾಗ, 'ಸಿಲಿಕಾನ್ ವ್ಯಾಲಿ'ಗೆ ನಮ್ಮ ತಂಡವನ್ನು ಕಳಿಸಿದ್ದೆ. ನಮ್ಮ ತಂಡ ಅಲ್ಲಿ ಪರಿಶೀಲನೆ ಮಾಡಿದಾಗ ಐದರಲ್ಲಿ ಮೂರು ಜನ ಭಾರತದವರು. ಅದರಲ್ಲಿ ಇಬ್ಬರು ಬೆಂಗಳೂರಿನವರೇ ಇದ್ದಾರೆ ಎನ್ನುವುದು ಕೇಳಿ ಆಶ್ಚರ್ಯವಾಯಿತು. ಆದ ಕಾರಣ ನಾನು ನೇರವಾಗಿ ಇಲ್ಲಿಯೇ ವಹಿವಾಟು ನಡೆಸಲು ಬಂದೆ ಎಂದರು. ಇದು ನಮ್ಮ ಕರ್ನಾಟಕದ ಹೆಗ್ಗಳಿಕೆ. ಅಟಲ್ ಬಿಹಾರಿ ವಾಜಪೇಯಿ ಅವರು ಮುಂದಿನ ದಿನಗಳಲ್ಲಿ ಬೆಂಗಳೂರಿನ ಮೂಲಕ ಭಾರತ ನೋಡಲಾಗುತ್ತದೆ ಎಂದಿದ್ದರುʼ ಎಂದರು.
ನಮ್ಮ ರಾಜ್ಯದಲ್ಲಿ ಅಧಿಕೃತವಾಗಿ 300 ಎಂಜಿನಿಯರಿಂಗ್ ಕಾಲೇಜುಗಳಿವೆ. ಪ್ರತಿವರ್ಷ 1 ಲಕ್ಷ ಇಂಜಿನಿಯರ್‌ಗಳು ಹೊರಬರುತ್ತಿದ್ದಾರೆ. ಪ್ರಪಂಚದ ಯಾವುದೇ ಮೂಲೆಗೆ ಹೋದರು ನಮ್ಮ ಕರ್ನಾಟಕದವರು ಸಿಗುತ್ತಾರೆ. ಅತ್ಯಂತ ಪ್ರತಿಭಾವಂತರು ವಿದೇಶಗಳಲ್ಲಿ ನೆಲೆಸಿ ಸೇವೆ ಮಾಡುತ್ತಿದ್ದಾರೆ ಎಂದರು.
ಶಿವನಸಮುದ್ರದಲ್ಲಿ 1904 ರಲ್ಲಿಯೇ ವಿದ್ಯುತ್ ತಯಾರಿಸಲಾಯಿತು. ಶರಾವತಿಯಲ್ಲಿ ಇನ್ನೊಂದು ಅದ್ಬುತ ಆವಿಷ್ಕಾರ ಮಾಡಲಾಗಿದೆ. ಈ ರೀತಿಯಲ್ಲಿ ಎಲೆಕ್ಟ್ರಿಕಲ್, ಸಿವಿಲ್ ಸೇರಿದಂತೆ ಐಟಿ ವಿಭಾಗ ಹೊರತಾಗಿ ಇತರೇ ಎಂಜಿನಿಯರಿಂಗ್ ಕ್ಷೇತ್ರಗಳು ದೇಶದ ನಿರ್ಮಾಣಕ್ಕೆ ಸತತ ಕೊಡುಗೆ ನೀಡುತ್ತಲೇ ಇವೆ. ನನ್ನ ಮಗಳು ಏಕೆ ಸಿವಿಲ್ ಎಂಜಿನಿಯರಿಂಗ್ ಓದು ಎಂದು ಹೇಳಿದೆ ಎಂದು ನನಗೆ ಕೇಳಿದಳು. ನೀನು ಸ್ವತಂತ್ರವಾಗಿ ಇರುತ್ತೀಯಾ. ಐಟಿ ಓದಿದರೆ ನಿನ್ನ ಸಮಯಕ್ಕೆ ಕೆಲಸ ಮಾಡಬೇಕಾಗುತ್ತದೆ. ವೈದ್ಯೆಯಾದರೆ ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ನನ್ನ ಮಾತು ಕೇಳಿದಳು ಎಂದರು.
“ಯಾರಾದರೂ ಬುದ್ಧಿವಂತ ನಮ್ಮ ಸುತ್ತಮುತ್ತಾ ಅಥವಾ ಜತೆಯಲ್ಲಿ ಇದ್ದರೆ ಅವರಿಗೆ 'ವಿಶ್ವೇಶ್ವರಯ್ಯನ ತಲೆ' ಎಂದು ಹೊಗಳುವ ಪರಿಪಾಠ ಗ್ರಾಮೀಣ ಭಾಗದಲ್ಲಿದೆ. ಅಂದರೆ ವಿಶ್ವೇಶ್ವರಯ್ಯ ಅವರು ತಮ್ಮ ಬುದ್ಧಿವಂತಿಕೆಯಿಂದ ಜನಸಾಮಾನ್ಯರ ನಡುವೆಯೂ ಜನಜನಿತವಾಗಿದ್ದವರು" ಎಂದರು.
ಈ ಸುದ್ದಿಯನ್ನೂ ಓದಿ | DK Shivakumar: ರಾಜಕೀಯವಾಗಿ ಬದುಕಿದ್ದೇನೆ ಎಂದು ತೋರಿಸಿಕೊಳ್ಳಲು ಪ್ರತಾಪ್ ಸಿಂಹ ಯತ್ನ: ಡಿಕೆಶಿ
"ತುರ್ತುಪರಿಸ್ಥಿತಿ ವೇಳೆ ನಮ್ಮ ಊರಿನ ಮನೆ ಮೇಲೆ ಜಪ್ತಿ ಮಾಡಲಾಯಿತು. ಈ ವೇಳೆ ನಮ್ಮ ತಂದೆಯವರಿಗೆ ಇಂಜಿನಿಯರ್ ಒಬ್ಬ ಬಹಳ ಕಾಟ ನೀಡಿದನಂತೆ. ನಮ್ಮ ಮನೆಯಿಂದ ಚಿನ್ನ ಸೇರಿದಂತೆ ಒಂದಷ್ಟು ವಸ್ತುಗಳನ್ನು ಜಪ್ತಿ ಮಾಡಲಾಯಿತಂತೆ. ಆಗ ನಮ್ಮ ತಂದೆ ಮನವಿ ಮಾಡಿದರೂ ಆತ ಬಿಡಲಿಲ್ಲ. ಆ ಕಾರಣಕ್ಕೆ ನನ್ನನ್ನು ಇಂಜಿನಿಯರ್ ಮಾಡಬೇಕು ಎಂಬುದು ಅವರ ಅಭಿಲಾಷೆಯಾಗಿತ್ತು. ಆದರೆ ನನಗೆ ಚಿಕ್ಕ ವಯಸ್ಸಿನಿಂದಲೂ ರಾಜಕಾರಣಿಯಾಗಬೇಕು ಎನ್ನುವ ಗುರಿಯಿದ್ದ ಕಾರಣಕ್ಕೆ ನಿಮ್ಮ ಮುಂದೆ ಉಪಮುಖ್ಯಮಂತ್ರಿಯಾಗಿ ನಿಂತಿದ್ದೇನೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.