DK Shivakumar: ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಗಸ್ಟ್ 5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ: ಡಿಕೆಶಿ
DK Shivakumar: ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಆಗಸ್ಟ್ 5ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು. ನಂತರ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.


ಬೆಂಗಳೂರು: ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಆಗಸ್ಟ್ 5ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು. ನಂತರ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು. ಮಾಧ್ಯಮಗಳ ಜತೆ ಗುರುವಾರ ಮಾತನಾಡಿದ ಅವರು, ಮತದಾರರ ಹಕ್ಕು, ಸಂವಿಧಾನದ ರಕ್ಷಣೆ ಮಾಡಬೇಕಿದೆ. ಕರ್ನಾಟಕದ ಭೂಮಿಯಿಂದಲೇ ಈ ಹೋರಾಟ ಪ್ರಾರಂಭ ಮಾಡಿದರೆ ಹೆಚ್ಚಿನ ಶಕ್ತಿ ದೊರೆಯುತ್ತದೆ ಎಂದು ರಾಹುಲ್ ಗಾಂಧಿ ಇಲ್ಲಿಂದ ಪ್ರಾರಂಭ ಮಾಡುತ್ತಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಆದಂತಹ ಹಲವಾರು ಲೋಪದೋಷಗಳನ್ನು ನಮ್ಮ ನಾಯಕರು ಎತ್ತಿ ಹಿಡಿಯಲಿದ್ದಾರೆ ಎಂದು ಹೇಳಿದರು.
ನಮ್ಮ ಸರ್ಕಾರವೇ ಮಾಡಿರುವ ನಿಯಮಗಳು ಹಾಗೂ ನ್ಯಾಯಾಲಯ ನೀಡಿರುವ ನಿರ್ದೇಶನದ ಮೇರೆಗೆ ಪ್ರತಿಭಟನೆ ನಡೆಸಲಾಗುವುದು. ಮುಖಂಡರು, ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಲಾಗಿದೆ. ರಾಜ್ಯದ ಎಲ್ಲಾ ಬ್ಲಾಕ್‌ಗಳಿಂದ ಪ್ರತಿನಿಧಿಗಳು ಹಾಜರಾಗಬೇಕು ಎಂದು ಆಹ್ವಾನ ನೀಡಲಾಗಿದೆ ಎಂದರು.
ಕರಡು ಮತದಾರರ ಪಟ್ಟಿಯ ಬಗ್ಗೆ ಏಕೆ ಕಾಂಗ್ರೆಸ್ ಈ ಮೊದಲೇ ಆಕ್ಷೇಪಣೆ ಸಲ್ಲಿಸಲಿಲ್ಲ ಎಂದಾಗ, ನಾವು ಆಕ್ಷೇಪಣೆ ಸಲ್ಲಿಸಿದ್ದೆವು ಆದರೆ ಚುನಾವಣಾ ಆಯೋಗ ಅದನ್ನು ಸ್ವೀಕರಿಸಲಿಲ್ಲ. ಮಹದೇವರಪುರ ಕ್ಷೇತ್ರದಲ್ಲಿ ಅಭ್ಯರ್ಥಿ ನಾಗೇಶ್ ಅವರು ಹಾಗೂ ಅವರ ಮಗ ದಾಖಲೆಗಳನ್ನು ತೋರಿಸಿದರು. ದಿನೇಶ್ ಗುಂಡೂರಾವ್ ಕ್ಷೇತ್ರ ಗಾಂಧಿನಗರದಲ್ಲೂ ಇದೇ ರೀತಿ ನಡೆದಿದೆ. ಇಲ್ಲಿ ಒಂದು ವಾರ್ಡ್‌ನಲ್ಲಿ 7 ಸಾವಿರದಷ್ಟು ಮತದಾರರ ಸೇರ್ಪಡೆಯಾಗಿದೆ ಎಂದು ಆರೋಪಿಸಿದರು.
ಪಾದಯಾತ್ರೆ ಎಲ್ಲಿಂದ ಎಲ್ಲಿಯವರೆಗೆ ಇರಲಿದೆ ಎಂದು ಕೇಳಿದಾಗ, ನಾವು ಪಾದಯಾತ್ರೆ ಮಾಡುತ್ತಿಲ್ಲ. ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿ ನಮ್ಮ ವಿಚಾರ ಜನರಿಗೆ ತಿಳಿಸುತ್ತೇವೆ. ನಂತರ ಐದಾರು ನಾಯಕರು ಚುನಾವಣಾ ಆಯೋಗ ಕಚೇರಿಗೆ ಹೋಗಿ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ನಡಿಗೆ ಮೂಲಕ ಹೋಗುತ್ತೀರಾ ಎಂದು ಕೇಳಿದಾಗ ಪೊಲೀಸರು ವಾತಾವರಣ ನೋಡಿ ಯಾವ ಸಲಹೆ ನೀಡುತ್ತಾರೋ ಆ ರೀತಿ ಮಾಡುತ್ತೇವೆ. ನಡಿಗೆ ಮೂಲಕ ಆದರೂ ಹೋಗಬಹುದು ಅಥವಾ ವಾಹನದಲ್ಲಿಯಾದರೂ ತೆರಳಬಹುದು ಎಂದು ಹೇಳಿದರು.
ಯಾವ ಕ್ಷೇತ್ರಗಳ ದಾಖಲೆ ಬಿಡುಗಡೆ ಮಾಡುತ್ತೀರಾ ಎಂದು ಕೇಳಿದಾಗ, ಈ ವಿಚಾರವನ್ನು ರಾಹುಲ್ ಗಾಂಧಿ ಅವರು ತೀರ್ಮಾನ ಮಾಡಿ ಬಹಿರಂಗಪಡಿಸಿದ್ದಾರೆ. ನಾನು ಈ ವಿಚಾರವಾಗಿ ಏನು ಹೇಳುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ | DK Shivakumar: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಐಟಿ ಕಂಪನಿಗಳಿಗೆ ಮುಕ್ತ ಸ್ವಾಗತ ಎಂದ ಡಿಕೆಶಿ
ಚುನಾವಣೆಯಾದ 45 ದಿನಗಳವರೆಗೂ ಕಾಂಗ್ರೆಸ್‌ನವರು ಏನು ಮಾಡುತ್ತಿದ್ದರು ಎಂಬ ಬಿಜೆಪಿ ಪ್ರಶ್ನೆ ಬಗ್ಗೆ ಕೇಳಿದಾಗ ನಾವು ಚುನಾವಣೆ ನಂತರ ಮಲಗಿದ್ದೆವು. ಅಧಿಕಾರ ಪ್ರಮಾಣ ವಚನ ಸ್ವೀಕರಿಸಿ, ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟೆವು ಎಂದು ಅವರು ತಿರುಗೇಟು ನೀಡಿದರು.