ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Murder Case: ಅನಸ್ತೇಶಿಯಾ ಓವರ್‌ಡೋಸ್‌ ನೀಡಿ ಪತ್ನಿಯನ್ನೇ ಕೊಂದ ವೈದ್ಯ; 6 ತಿಂಗಳ ಬಳಿಕ ಅರೆಸ್ಟ್!

Anaesthetic Overdose: ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ಎಂಬಾತನನ್ನು ಪತ್ನಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಪತ್ನಿಗೆ ಅನಸ್ತೇಶಿಯಾ ಓವರ್‌ಡೋಸ್‌ ನೀಡಿ ಕೊಂದಿರುವುದು ಎಫ್‌ಎಸ್‌ಎಲ್‌ ವರದಿಯಿಂದ ಬಯಲಾಗಿದೆ. ಹೀಗಾಗಿ ಆರೋಪಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಅನಸ್ತೇಶಿಯಾ ಓವರ್‌ಡೋಸ್‌ ನೀಡಿ ಪತ್ನಿಯನ್ನೇ ಕೊಂದ ವೈದ್ಯ!

-

Prabhakara R Prabhakara R Oct 15, 2025 6:17 PM

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಗೆ ಅನಸ್ತೇಶಿಯಾ ಓವರ್‌ಡೋಸ್‌ ನೀಡಿ ಕೊಂದ ಬಳಿಕ ಸಹಜ ಸಾವು (Bengaluru Murder Case) ಎಂದು ಬಿಂಬಿಸಿದ್ದ ಖತರ್ನಾಕ್‌ ವೈದ್ಯನನ್ನು ಬೆಂಗಳೂರಿನ ಪೊಲೀಸರು ಮಣಿಪಾಲದಲ್ಲಿ ಬಂಧಿಸಿದ್ದಾರೆ. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ತನ್ನ ಪತ್ನಿಯನ್ನು ಕೊಲೆ ಮಾಡಿರುವುದು 6 ತಿಂಗಳ ಬಳಿಕ ಎಫ್ಎಸ್ಎಲ್ ವರದಿ ಮೂಲಕ ಬಹಿರಂಗಗೊಂಡಿದೆ.

ಡಾ. ಮಹೇಂದ್ರ ರೆಡ್ಡಿ ಹಾಗೂ ಕೃತಿಕಾ ರೆಡ್ಡಿ ಜೋಡಿ 2024ರ ಮೇ 26ರಂದು ಪೋಷಕರ ಒಪ್ಪಿಗೆಯಂತೆ ಅದ್ಧೂರಿಯಾಗಿ ಮದುವೆಯಾಗಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೃತಿಕಾ ಡೆರ್ಮಟಾಲಜಿಸ್ಟ್ ಆಗಿದ್ದರೇ, ಗಂಡ ಡಾ. ಮಹೇಂದ್ರ ರೆಡ್ಡಿ ಜನರಲ್ ಸರ್ಜನ್ ಆಗಿದ್ದ. ಮೃತ ಕೃತಿಕಾಗೆ ಅಜೀರ್ಣತೆ, ಗ್ಯಾಸ್ಟ್ರಿಕ್ ಹಾಗೂ ಲೋ ಶುಗರ್ ಸಮಸ್ಯೆ ಇತ್ತು. ಆದರೆ ಇದನ್ನು ಮುಚ್ಚಿಟ್ಟು ಮನೆಯವರು ಮದುವೆ ಮಾಡಿದ್ದರು ಎನ್ನಲಾಗಿದೆ. ಮದುವೆಯಾದ ಬಳಿಕ ಡಾಕ್ಟರ್ ಗಂಡ ಇದನ್ನು ತಿಳಿದುಕೊಂಡಿದ್ದನು.

ಕೃತಿಕಾಗೆ ನಿತ್ಯ ವಾಂತಿ ಹಾಗೂ ಇತರೆ ಅನಾರೋಗ್ಯದ ಸಮಸ್ಯೆಗಳು ಎದುರಾಗುತ್ತಿದ್ದವು. ಇದೇ ಕಾರಣಕ್ಕೆ ಆರೋಪಿ ಮಹೇಂದ್ರ ರೆಡ್ಡಿ ಕೊಲೆಗೆ ಸಂಚು ರೂಪಿಸಿದ್ದ. 11 ತಿಂಗಳ ನಂತರ ಪ್ಲ್ಯಾನ್ ಮಾಡಿ ಕೊಲೆಗೈದು, ಅದನ್ನು ಸಹಜ ಸಾವು ಎಂದು ಬಿಂಬಿಸಿದ್ದ.

ಕೃತಿಕಾ ಮನೆಯಲ್ಲಿ ಹುಷಾರಿಲ್ಲದೆ ಮಲಗುತ್ತಿದ್ದಳು. ತಂದೆ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ವೇಳೆ ಅಲ್ಲಿಗೆ ಗಂಡ ಬಂದಿದ್ದ. ಬಳಿಕ ಹೆಂಡತಿಗೆ ಐವಿ ಇಂಜೆಕ್ಷನ್ ಮೂಲಕ ಒಂದಷ್ಟು ಮೆಡಿಸನ್ ನೀಡಿದ್ದ. ಇವುಗಳನ್ನು 2 ದಿನ ನಿರಂತರ ನೀಡಲಾಗಿತ್ತು. ಬಳಿಕ 2025ರ ಏಪ್ರಿಲ್ 23 ರಂದು ಕೃತಿಕಾಗೆ ಮೂರ್ಛೆ ಬಂದಿದ್ದರಿಂದ ಪೋಷಕರು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಗ ವೈದ್ಯರು ಆಸ್ಪತ್ರೆಗೆ ಬರುವ ಮೊದಲೇ ಜೀವ ಹೋಗಿದೆ ಎಂದು ಹೇಳಿದ್ದರು.

ಇದಾದ ಮೇಲೆ ಅಸ್ಪತ್ರೆಯಿಂದ ಡೆತ್ ಮೆಮೊ ಬಂದಿತ್ತು. ಡೆತ್ ಮೆಮೊ ಬಂದಿದ್ದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಭೇಟಿ ನೀಡಿ ದೂರು ನೀಡುವಂತೆ ಆಕೆಯ ಕುಟುಂಬಕ್ಕೆ ತಿಳಿಸಿದ್ದರು. ಆದರೆ ಕುಟುಂಬಸ್ಥರು ಸಹ ದೂರು ನೀಡಲು ಹಿಂದೇಟು ಹಾಕಿದ್ದರು. ಈ ನಡುವೆ ಅವರಿಂದ ದೂರು ಪಡೆದು ಮಾರತಹಳ್ಳಿ ಪೊಲೀಸರು ಯುಡಿಆರ್ ದಾಖಲು ಮಾಡಿದ್ದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹದ ಸ್ಯಾಂಪಲ್ ಪಡೆದು ಎಫ್ಎಸ್ಎಲ್‌ಗೆ ಕಳುಹಿಸಿದ್ದರು.

ಸದ್ಯ ಎಫ್ಎಸ್ಎಲ್ ವರದಿ ಬಂದಿದ್ದು ವರದಿಯಲ್ಲಿ ಮೃತಳ ದೇಹದಲ್ಲಿ ಅನಸ್ತೇಶಿಯಾ ಅಂಶಗಳು ಕಂಡುಬಂದಿವೆ. ಸಾವಿಗೆ ಇದೇ ಅನಸ್ತೇಶಿಯಾ ಅಂಶಗಳೇ ಕಾರಣ ಎಂದು ವರದಿ ನೀಡಲಾಗಿದೆ. ಈ ವರದಿ ಆಧರಿಸಿ ಕೇಸ್ ದಾಖಲು ಮಾಡಲಾಗಿದೆ. ಆರು ತಿಂಗಳ ಬಳಿಕ ಯುಡಿಆರ್ ಆಗಿದ್ದ ಪ್ರಕರಣ ಇದೀಗ ಕೊಲೆ ಎಂದು ಕೇಸ್ ಪೊಲೀಸರು ದಾಖಲು ಮಾಡಿದ್ದಾರೆ.

ಈ ಸುದ್ದಿಯನ್ನೂ | Murder Case: ಐದು ತಿಂಗಳ ಹಿಂದೆಯಷ್ಟೇ ಕೈ ಹಿಡಿದವಳ ಕಥೆನೇ ಮುಗ್ಸಿದ ಪಾಪಿ ಪತಿ

ಬೆಂಗಳೂರಿನಿಂದ ಮಣಿಪಾಲಕ್ಕೆ ಹೋಗಿದ್ದ ಮಹೇಂದ್ರ ರೆಡ್ಡಿಯನ್ನು ಪತ್ನಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.