PM Narendra Modi: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ, ಟಿಕೆಟ್ ಪಡೆದು ಪ್ರಯಾಣ
Namma Metro: ರಾಗಿಗುಡ್ಡ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇಂದು ಹಬ್ಬದ ವಾತಾವರಣ ಕಂಡುಬಂತು. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಿದ್ದಾರೆ. ನಂತರ ಎಲೆಕ್ಟ್ರಾನಿಕ್ ಸಿಟಿ ವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು. ಮೆಟ್ರೋದಲ್ಲಿ ಪ್ರಯಾಣದ ಸಂದರ್ಭದಲ್ಲಿ ಶಾಲಾ ಮಕ್ಕಳೊಂದಿಗೆ ಸಂಭಾಷಿಸಿದರು.


ಬೆಂಗಳೂರು: ಬೆಂಗಳೂರಿಗರ ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಗಿಗುಡ್ಡ ಮೆಟ್ರೋ ಸ್ಟೇಶನ್‌ನಲ್ಲಿ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು. ನಂತರ ರಾಗಿಗುಡ್ಡದಿಂದ ಮೆಟ್ರೋದಲ್ಲಿ ಟಿಕೆಟ್ ಪಡೆದು ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಅವರ ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಚಿವ ಅಶ್ವಿನಿ ವೈಷ್ಣವ್, ಸಂಸದರಾದ ತೇಜಸ್ವಿ ಸೂರ್ಯ, ಸೋಮಣ್ಣ, ಸಿಎನ್ ಮಂಜುನಾಥ್, ಶೋಭಾ ಕರಂದ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ವಂದೇ ಭಾರತ್ ರೈಲಿಗೆ ಚಾಲನೆಯ ಬಳಿಕ ಬುಲೆಟ್‌ಪ್ರೂಫ್ ಕಾರಿನಲ್ಲಿ ರಾಗಿಗುಡ್ಡದತ್ತ ಪ್ರಯಾಣಿಸಿದ ಪ್ರಧಾನಿಗೆ ಜನ ಹೂವಿನ ಸುರಿಮಳೆ ಸುರಿದು ಜಯಕಾರ ಕೂಗಿ ಸ್ವಾಗತಿಸಿದರು. ಮಳೆ ಸುರಿಯುತ್ತಿದ್ದರೂ ಜನ ಅದನ್ನು ಲೆಕ್ಕಿಸಲಿಲ್ಲ. ಅಸಂಖ್ಯ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ದಾರಿಯುದ್ದಕ್ಕೂ ನಿಂತು ಮೋದಿಗೆ ಸ್ವಾಗತ ಕೋರಿದರು. ಮೋದಿ.. ಮೋದಿ ಎಂದು ಕೂಗುತ್ತಿದ್ದ ತಮ್ಮ ಅಭಿಮಾನಿಗಳತ್ತ ಪ್ರಧಾನಿ ಮೋದಿ ಕಾರಿನಿಂದಲೇ ಕೈಬೀಸಿದರು.

ಮೇಖ್ರಿ ಸರ್ಕಲ್‌ನಿಂದ ನೇರವಾಗಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಬೆಂಗಳೂರಿನಿಂದ ಬೆಳಗಾವಿಗೆ ಹೋಗುವ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಇದು ಕರ್ನಾಟಕದ ಮೂರನೇ ವಂದೇ ಭಾರತ್ ರೈಲು ಇದಾಗಿದ್ದು, ಎಂಟು ಜಿಲ್ಲೆಗಳನ್ನು ಹಾದು ಹೋಗುತ್ತದೆ. ಇದರ ಜೊತೆಗೆ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಇತರೆ ಎರಡು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಅಮೃತಸರ- ವೈಷ್ಣೋದೇವಿ ಕತ್ರಾ ಮತ್ತು ನಾಗ್ಪುರ- ಪುಣೆ ರೈಲುಗಳಿಗೂ ಇಂದೇ ಚಾಲನೆ ಸಿಕ್ಕಿದೆ.

ಇಂದು ಮಧ್ಯಾಹ್ನ 11.30ಕ್ಕೆ ಎಚ್‌ಎಲ್ ಏರ್‌ಪೋರ್ಟ್‌ಗೆ ಬಂದಿಳಿದ ಪ್ರಧಾನಿ ಮೋದಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೇಖ್ರಿ ಸರ್ಕಲ್ ಬಳಿ ಇರುವ ಮಿಲಿಟರಿ ಬೇಸ್‌ಗೆ ಬಂದಿಳಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು.
ಹಳದಿ ಮಾರ್ಗದಲ್ಲಿ ಸೋಮವಾರದಿಂದ ಪ್ರಯಾಣಿಸಿ
ಈ ಮಾರ್ಗದಲ್ಲಿ ಸೋಮವಾರದಿಂದ ವಾಣಿಜ್ಯ ಸಂಚಾರ ಶುರುವಾಗಲಿದೆ. 19.15 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ. ಸದ್ಯ ಈ ಮಾರ್ಗದಲ್ಲಿ ಕಾರ್ಯಾಚರಣೆಗೆ ಮೂರು ಮೆಟ್ರೋ ರೈಲುಗಳಷ್ಟೇ ಲಭ್ಯ ಇವೆ. ಹೀಗಾಗಿ, ಪ್ರತಿಯೊಂದು ರೈಲು 20-25 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. ಹಳದಿ ಮಾರ್ಗವು 16 ನಿಲ್ದಾಣಗಳನ್ನು ಹೊಂದಿದೆ. ಈ ಮಾರ್ಗದಲ್ಲಿ ರೈಲುಗಳು ಚಾಲಕ ರಹಿತವಾಗಿ ಸಂಚರಿಸಲಿವೆ. ಆರಂಭದಲ್ಲಿ ಹಳದಿ ಮಾರ್ಗದಲ್ಲಿ ಮೂರು ರೈಲುಗಳು ಸಂಚರಿಸಲಿವೆ. ಈ ಯೋಜನೆಯು ದಕ್ಷಿಣ ಬೆಂಗಳೂರನ್ನು ನಗರದ ಕೇಂದ್ರ ಭಾಗಕ್ಕೆ ಸಂಪರ್ಕಿಸುತ್ತದೆ. ಹಳದಿ ಮಾರ್ಗವನ್ನು ₹5,056.99 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಗಸ್ಟ್ 15 ರ ಗಡುವಿನ ಮೊದಲು ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.
ಈ ಮಾರ್ಗದಲ್ಲಿ ಒಟ್ಟು ತಲಾ 6 ಬೋಗಿಗಳುಳ್ಳ 15 ರೈಲುಗಳನ್ನು ಓಡಿಸಲು ನಿರ್ಧರಿಸಿದ್ದು, ಪೂರ್ಣ ಪ್ರಮಾಣದಲ್ಲಿ ರೈಲುಗಳ ಕಾರ್ಯಾಚರಣೆ ಶುರುವಾದ ಬಳಿಕ ಪ್ರತಿ ದಿನ 4 ಲಕ್ಷ ಮಂದಿ ಸಂಚರಿಸುವ ನಿರೀಕ್ಷೆ ಇದೆ. ಹಳದಿ ಮಾರ್ಗದಲ್ಲಿನ ಸಂಚಾರಕ್ಕೆ ಕನಿಷ್ಠ 10 ರೂ. ಹಾಗೂ ಗರಿಷ್ಠ 60 ರೂ. ದರ ನಿಗದಿಪಡಿಸಲಾಗಿದೆ. ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11ರವರೆಗೆ ರೈಲುಗಳು ಸಂಚರಿಸಲಿವೆ. ಪ್ರತಿ ನಿಲ್ದಾಣದಲ್ಲೂ ರೈಲುಗಳು ನಿಲುಗಡೆಗೊಳ್ಳಲಿವೆ. ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರಕ್ಕೆ 25 ರಿಂದ 30 ನಿಮಿಷದಲ್ಲಿ ರೈಲುಗಳು ತಲುಪಲಿವೆ.
ಆರ್.ವಿ.ರಸ್ತೆ - ಬೊಮ್ಮಸಂದ್ರ ಮಾರ್ಗದ ನಡುವಿನ ರೈಲು ಸಂಚಾರದಿಂದ ಐಟಿ-ಬಿಟಿ ಉದ್ಯೋಗಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ನಗರದ ಹೃದಯ ಭಾಗವನ್ನು ಕೇವಲ 25 ರಿಂದ 30 ನಿಮಿಷದಲ್ಲಿ ತಲುಪಬಹುದಾಗಿದೆ. ಎಚ್‌ಎಸ್‌ಆರ್ ಲೇಔಟ್, ಬಿಟಿಎಂ, ಸಿಂಗಸಂದ್ರ, ಬೊಮ್ಮನಹಳ್ಳಿ, ಜಯನಗರ, ತಿಲಕ್‌ನಗರ ಸೇರಿದಂತೆ ಹಲವು ವಸತಿ ಪ್ರದೇಶಗಳಿಗೆ ಈ ಮೆಟ್ರೋ ಸಂಪರ್ಕ ಕಲ್ಪಿಸಲಿದೆ.
ವಿಶೇಷವಾಗಿ ಪ್ರತಿಷ್ಠಿತ ಜಯದೇವ ಆಸ್ಪತ್ರೆಗೆ ಸುಲಭವಾಗಿ ತಲುಪಬಹುದಾಗಿದೆ. ಇನ್ಫೋಸಿಸ್ ಹಾಗೂ ಬಯೋಕಾನ್ ಸಂಸ್ಥೆಗೆ ತೆರಳುವ ಸಾವಿರಾರು ಉದ್ಯೋಗಿಗಳಿಗೆ ಸಂಚಾರ ಸುಲಭವಾಗಲಿದೆ. ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ತೆರಳುವವರಿಗೂ ಸಾಕಷ್ಟು ಅನುಕೂಲವಾಗಲಿದ್ದು, ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆ ಇದೆ.
ಇದನ್ನೂ ಓದಿ: PM Narendra Modi: ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ