BY Vijayendra: ಆ.17ರಂದು ಬಿಜೆಪಿ ಶಾಸಕರು, ಹಿರಿಯರ ತಂಡ ಧರ್ಮಸ್ಥಳಕ್ಕೆ ಭೇಟಿ: ಬಿ.ವೈ. ವಿಜಯೇಂದ್ರ
BY Vijayendra: ಬಿಜೆಪಿ ನಿಲುವು ಸ್ಪಷ್ಟವಿದೆ. ಎಸ್‍ಐಟಿ ತನಿಖೆ ಶೀಘ್ರದಲ್ಲಿ ಮುಗಿಯಬೇಕು. ಇದನ್ನು ಹೀಗೇ ಎಳೆದುಕೊಂಡು ಹೋಗಲು ಸಾಧ್ಯವಿಲ್ಲ. ಸತ್ಯಾಸತ್ಯತೆ ಬಹಿರಂಗ ಆಗಬೇಕು. ಗೊಂದಲಗಳಿಗೆ ಅತಿ ಶೀಘ್ರವೇ ತೆರೆ ಬೀಳಬೇಕಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಪೇಕ್ಷೆಯಂತೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕು. ತ್ರಿವರ್ಣ ಧ್ವಜ ರಾರಾಜಿಸುವ ಮೂಲಕ ಪ್ರತಿಯೊಬ್ಬ ಭಾರತೀಯರಲ್ಲೂ ದೇಶದ ಬಗ್ಗೆ ಸದ್ಭಕ್ತಿ, ಶ್ರದ್ಧೆ ಬರಬೇಕೆಂಬ ಸದುದ್ದೇಶದಿಂದ ಬಿಜೆಪಿ, ರಾಜ್ಯದಲ್ಲೂ ಅಭಿಯಾನ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ.
‘ಹರ್ ಘರ್ ತಿರಂಗ’ ಅಭಿಯಾನದ ಪ್ರಯುಕ್ತ ಗುಟ್ಟಹಳ್ಳಿಯ ಮಾರುತಿ ಬಡಾವಣೆಯಲ್ಲಿರುವ ಪಕ್ಷದ ಕಾರ್ಯಕರ್ತ ಲಕ್ಕಸ್ವಾಮಿ ಅವರ ಮನೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಎಲ್ಲ ಜಿಲ್ಲೆ, ಎಲ್ಲ ವಿಧಾನಸಭಾ ಕ್ಷೇತ್ರ, ಪ್ರತಿ ಗ್ರಾಮದಲ್ಲೂ ಕಾರ್ಯಕರ್ತರ ಮನೆಗೆ ಭೇಟಿ ಕೊಟ್ಟು, ಎಲ್ಲರ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗುತ್ತಿದೆ. ಹರ್ ಘರ್ ತಿರಂಗ ಅಭಿಯಾನ ನಡೆಯುತ್ತಿದೆ ಎಂದು ವಿವರಿಸಿದರು.
ಎಸ್‍ಐಟಿ ತನಿಖೆ ಶೀಘ್ರದಲ್ಲಿ ಮುಗಿಯಬೇಕು
ಇದೇ 17ರಂದು ಪಕ್ಷದ ಶಾಸಕರು, ಹಿರಿಯರ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಡಲಿದ್ದೇವೆ. ಶ್ರೀ ಮಂಜುನಾಥೇಶ್ವರನ ದರ್ಶನ ಪಡೆದು ಬರಲಿದ್ದೇವೆ ಎಂದ ಅವರು, ನಾವು ಬಿಜೆಪಿ ಕಾರ್ಯಕರ್ತರು ಎಂಬುದಕ್ಕಿಂತ ಹೆಚ್ಚಾಗಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರನ ಭಕ್ತರಾಗಿ ಅಲ್ಲಿಗೆ ತೆರಳಲಿದ್ದೇವೆ. ಬಿಜೆಪಿ ನಿಲುವು ಸ್ಪಷ್ಟವಿದೆ. ಎಸ್‍ಐಟಿ ತನಿಖೆ ಶೀಘ್ರದಲ್ಲಿ ಮುಗಿಯಬೇಕು. ಇದನ್ನು ಹೀಗೇ ಎಳೆದುಕೊಂಡು ಹೋಗಲು ಸಾಧ್ಯವಿಲ್ಲ. ಸತ್ಯಾಸತ್ಯತೆ ಬಹಿರಂಗ ಆಗಬೇಕು. ಗೊಂದಲಗಳಿಗೆ ಅತಿ ಶೀಘ್ರವೇ ತೆರೆ ಬೀಳಬೇಕಿದೆ ಎಂದು ಆಗ್ರಹಿಸಿದರು.
ಈ ತನಿಖೆಯ ಹಿಂದೆ ಕೆಲವು ಸಮಾಜಘಾತುಕ ಶಕ್ತಿಗಳು, ಎಸ್.ಡಿ.ಪಿ.ಐ, ಬೇರೆ ಬೇರೆ ಕುತಂತ್ರಗಳು ನಡೆಯುತ್ತಿವೆ ಎಂಬ ಚರ್ಚೆಗಳು ಜನಸಾಮಾನ್ಯರಲ್ಲಿ ನಡೆಯುತ್ತಿವೆ. ನಾವು ಶ್ರೀ ಮಂಜುನಾಥೇಶ್ವರನ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆಯಲು ಹೋಗಲಿದ್ದೇವೆ ಎಂದು ಮತ್ತೊಂದು ಪ್ರಶ್ನೆಗೆ ಸ್ಪಷ್ಟಪಡಿಸಿದರು.
‘ಹರ್ ಘರ್ ತಿರಂಗ’ ಸಂಬಂಧಿತ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಅಶ್ವತ್ಥನಾರಾಯಣ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಮಲ್ಲೇಶ್ವರ ಮಂಡಲ ಅಧ್ಯಕ್ಷ ಕೆ.ಎಸ್. ಕೇಶವ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.