Basava Jaya Mruthyunjaya Swamiji: ಬಸವಜಯ ಮೃತ್ಯುಂಜಯ ಶ್ರೀಗಳಿಗೆ ವಿಷಪ್ರಾಶನ: ಅರವಿಂದ್ ಬೆಲ್ಲದ ಆರೋಪ
Arvind Bellad: 2ಎ ಮೀಸಲಾತಿಗೆ ಹೋರಾಟ ಮಾಡುತ್ತಿರುವ ಸ್ವಾಮೀಜಿಯನ್ನು ಮಟ್ಟ ಹಾಕಲು ಯತ್ನ ನಡೆದಿದೆ. ಲಿಂಗಾಯತ ಸಮಾಜ ಕಾಂಗ್ರೆಸ್ ಸರ್ಕಾರ ಮಾಡಿದ ಅನ್ಯಾಯವನ್ನು ನೋಡುತ್ತಿದೆ. ಸ್ವಾಮೀಜಿಯನ್ನು ಮುಗಿಸಲು ಯತ್ನ ಮಾಡುತ್ತಿರುವ ಸರ್ಕಾರ ಹಾಗೂ ವ್ಯಕ್ತಿಗಳಿಗೆ ಸರಿಯಾದ ಶಿಕ್ಷೆಯಾಗಲಿದೆ ಎಂದು ಅರವಿಂದ ಬೆಲ್ಲದ ಹೇಳಿದ್ದಾರೆ.

ಬಸವ ಜಯಮೃತ್ಯುಂಜಯ ಸ್ವಾಮೀಜಿ, ಅರವಿಂದ ಬೆಲ್ಲದ

ಹುಬ್ಬಳ್ಳಿ: ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳಿಗೆ (Basava Jaya Mruthyunjaya Swamiji) ವಿಷಪ್ರಾಶನ ಪ್ರಯತ್ನ ನಡೆದಿದೆ. ಶ್ರೀಗಳ ಆಹಾರವನ್ನು ವಿಷ ಮಾಡಿ ಅವರನ್ನು ಮುಗಿಸಬೇಕೆಂದು ಯೋಚನೆ ಮಾಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ (Arvind Bellad) ಗಂಭೀರ ಆರೋಪ ಮಾಡಿದ್ದಾರೆ. ಶ್ರೀಗಳ ಆರೋಗ್ಯ ಹದಗೆಟ್ಟಿದ್ದು, ಶ್ರೀಗಳು ತಮಗೆ ವಿಷಪ್ರಾಶನ ಆಗಿದೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದವರು ತಿಳಿಸಿದ್ದಾರೆ.
ನಗರದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ʼಶ್ರೀಗಳ ಆರೋಗ್ಯ ಹದಗೆಟ್ಟಿದೆ. ಅವರಿಗೆ ಫುಡ್ ಪಾಯಿಸನ್ ಆಗಿದೆ ಅಂತ ಗೊತ್ತಿತ್ತು. ಇದಕ್ಕೆ ಕಾರಣ ಬೇರೆ ಇದೆ. ಮಠದ ಹೊರಗಡೆ ಯುವಕರಿಬ್ಬರು ಇದ್ದಾರೆ. ಆ ಇಬ್ಬರು ಮಠಕ್ಕೆ ಯಾರು ಬರ್ತಾರೆ ಯಾರು ಹೋಗುತ್ತಾರೆ ಅಂತ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವೀಡಿಯೊ ಸಹ ಮಾಡಿಕೊಳ್ಳುತ್ತಿದ್ದಾರೆ ಅಂತ ಭಕ್ತರು ನನಗೆ ಹೇಳಿದ್ದಾರೆ. ಅದೇ ಯುವಕರು ಅಡುಗೆ ಮನೆಗೆ ಹೋಗಿದ್ದರು. ಈ ಬಗ್ಗೆ ಸ್ಥಳೀಯ ಭಕ್ತರು ಯುವಕರನ್ನು ವಿಚಾರಣೆ ಮಾಡಿದ್ದಾರೆ. ಆ ಯುವಕರು ಅಡುಗೆ ಮನೆಗೆ ಹೋಗಿ ಬಂದ ಕೆಲವೇ ಹೊತ್ತಿನಲ್ಲಿ ಶ್ರೀಗಳ ಆರೋಗ್ಯ ಹದಗೆಟ್ಟಿದೆ. ಶ್ರೀಗಳು ಈ ಬಗ್ಗೆ ನನ್ನ ಮುಂದೆ ಹೇಳಿಕೊಂಡಿದ್ದಾರೆ. ಶ್ರೀಗಳು ತಮಗೆ ವಿಷಪ್ರಾಶನ ಆಗಿದೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆʼ ಎಂದರು.
ʼಕೆಟ್ಟ ಕೆಲಸ ಮಾಡುತ್ತಿದ್ದಾರೆ. ಸಮಾಜ ನೋಡುತ್ತಿದೆ, ಅವರು ಮಾಡಿದ ಕೆಟ್ಟ ಕೆಲಸಕ್ಕೆ ತಕ್ಕ ಶಿಕ್ಷೆ ಸಮಾಜ ನೀಡುತ್ತದೆ. 2ಎ ಮೀಸಲಾತಿಗೆ ಹೋರಾಟ ಮಾಡುತ್ತಿರುವ ಸ್ವಾಮೀಜಿಯನ್ನು ಮಟ್ಟ ಹಾಕಲು ಯತ್ನ ನಡೆದಿದೆ. ಲಿಂಗಾಯತ ಸಮಾಜ ಕಾಂಗ್ರೆಸ್ ಸರ್ಕಾರ ಮಾಡಿದ ಅನ್ಯಾಯವನ್ನು ನೋಡುತ್ತಿದೆ. ಸ್ವಾಮೀಜಿ ಹೋರಾಟದಿಂದ ಕೆಲ ಸಮುದಾಯಗಳಿಗೆ ಮೀಸಲಾತಿ ಒದಗಿಸುವ ಕೆಲಸವನ್ನು ಬಸವರಾಜ ಬೊಮ್ಮಾಯಿ ಸರ್ಕಾರ ಮಾಡಿದೆ. ಸ್ವಾಮೀಜಿಯನ್ನು ಮುಗಿಸಲು ಯತ್ನ ಮಾಡುತ್ತಿರುವ ಸರ್ಕಾರ ಹಾಗೂ ವ್ಯಕ್ತಿಗಳಿಗೆ ಸರಿಯಾದ ಶಿಕ್ಷೆಯಾಗಲಿದೆ" ಎಂದು ಹೇಳಿದರು.
ʼಸ್ವಾಮೀಜಿಯವರು ಯಾವುದೇ ಪಕ್ಷದ ಪರ ಅಥವಾ ವಿರೋಧವಿಲ್ಲ. ಅವರ ಹೋರಾಟದ ಫಲವಾಗಿ 2ಸಿ, 2ಡಿ ಮೀಸಲಾತಿ ನೀಡಲಾಗಿದೆ. ಇದನ್ನು ಜಾರಿಗೆ ತರದೆ ಕಾಂಗ್ರೆಸ್ ಸರ್ಕಾರ ಅದಕ್ಕೆ ಬೇರೆ ಬೇರೆ ಕಾನೂನು ನೆಪ ಹೇಳುತ್ತಿದೆʼ ಎಂದರು.