Pralhad Joshi: ಮೀಸಲಾತಿ ತೆಗೆಯುವುದಲ್ಲ, ಮುಟ್ಟಲೂ ಸಹ ಕೇಂದ್ರ ಸರ್ಕಾರ ಬಿಡಲ್ಲ: ಪ್ರಲ್ಹಾದ್ ಜೋಶಿ
Pralhad Joshi: ಅತಿ ಹೆಚ್ಚು ಬಾರಿ ಸಂವಿಧಾನ ಬದಲಾಯಿಸಿ ದೇಶಕ್ಕೆ ಅನ್ಯಾಯ ಎಸಗಿದವರೇ ಇಂದು ಸಂವಿಧಾನ ಬದಲಾವಣೆ ಕೂಗೆಬ್ಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಮೀಸಲಾತಿ ತೆಗೆಯುವುದಲ್ಲ, ಅದನ್ನು ಮುಟ್ಟಲೂ ಸಹ ಕೇಂದ್ರ ಸರ್ಕಾರ ಬಿಡುವುದಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ಹುಬ್ಬಳ್ಳಿ: ಸಂವಿಧಾನ ಬದಲಾವಣೆ ಮಾಡುತ್ತಾರೆ, ಮೀಸಲಾತಿ ತೆಗೆಯುತ್ತಾರೆ ಎಂದೆಲ್ಲ ಅಪಪ್ರಚಾರ ಜೋರಾಗಿದೆ. ಆದರೆ, ಇದ್ಯಾವುದೂ ನಡೆಯವುದಿಲ್ಲ. ಮೀಸಲಾತಿ ತೆಗೆಯುವುದಲ್ಲ, ಅದನ್ನು ಮುಟ್ಟಲೂ ಸಹ ಕೇಂದ್ರ ಸರ್ಕಾರ ಬಿಡುವುದಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಹುಬ್ಬಳ್ಳಿಯಲ್ಲಿ ಸೋಮವಾರ ಎಬಿವಿಪಿ ಆಯೋಜಿಸಿದ್ದ ʼಸಂವಿಧಾನ 75 ಬದಲಾಯಿಸಿದ್ದು, ಯಾರು? ಬಲಪಡಿಸಿದ್ದು ಯಾರು?ʼ ಅತ್ಯಮೂಲ್ಯ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಅತಿ ಹೆಚ್ಚು ಬಾರಿ ಸಂವಿಧಾನ ಬದಲಾಯಿಸಿ ದೇಶಕ್ಕೆ ಅನ್ಯಾಯ ಎಸಗಿದವರೇ ಇಂದು ಸಂವಿಧಾನ ಬದಲಾವಣೆ ಕೂಗೆಬ್ಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊದಲನೆಯದಾಗಿ ಯಾವ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ. ಇನ್ನು ಸಂವಿಧಾನಾತ್ಮಕವಾಗಿ ಜಾರಿಯಲ್ಲಿರುವ ಮೀಸಲಾತಿಯನ್ನು ತೆಗೆಯುವುದಿರಲಿ ಅದನ್ನು ಮುಟ್ಟಲೂ ಕೂಡಾ ನಮ್ಮ ಸರ್ಕಾರ ಬಿಡುವುದಿಲ್ಲ. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಅವಶ್ಯಕತೆ ಇರುವವರೆಗೂ ಮೀಸಲಾತಿ ಇದ್ದೇ ಇರುತ್ತದೆ. ಇದನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಫೋಸ್ ಕೊಡುತ್ತಿದ್ದಾರೆ ಕಾಂಗ್ರೆಸ್ಸಿಗರು
ಅತ್ಯಧಿಕ ಬಾರಿ ಸಂವಿಧಾನ ತಿದ್ದುಪಡಿ, ಬದಲಾವಣೆ ಮಾಡಿದ ಕಾಂಗ್ರೆಸ್ಸಿಗರೇ, ಇಂದು ʼಸಂವಿಧಾನ ಬದಲಾವಣೆ ಮಾಡುತ್ತಾರೆ, ಮೀಸಲಾತಿ ಹಿಂಪಡೆಯುತ್ತಾರೆʼ ಎಂದೆಲ್ಲಾ ಅಪಪ್ರಚಾರ ಮಾಡುತ್ತ ತಾವೇ ದೊಡ್ಡ ಸಂವಿಧಾನ ರಕ್ಷಕರು ಎನ್ನುವಂತೆ ಫೋಸ್ ಕೊಡುತ್ತಿದ್ದಾರೆ ಎಂದು ಸಚಿವ ಜೋಶಿ ಆರೋಪಿಸಿದರು.
ʼಸಂವಿಧಾನ ಬದಲಾವಣೆʼ ಎನ್ನುವುದು ದೇಶದಲ್ಲಿ ಇತ್ತೀಚೆಗೆ ಬಹು ಚರ್ಚಿತ ವಿಷಯವಾಗುತ್ತಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಸದಾ ಅಪಮಾನ ಮಾಡಿದವರೇ ಇಂದು ಮಹಾನ್ ಸಂವಿಧಾನ ರಕ್ಷಕರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾಲದಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕೂ ಗೌರವ ಕೊಡದೇ ದೇಶಕ್ಕೆ ಬಹು ದೊಡ್ಡ ಅನ್ಯಾಯ ಮಾಡಿದ ಈ ಜನರಿಂದ ಇಂದು ಸಂವಿಧಾನ ರಕ್ಷಣೆ ಮಾತು ನಿಜಕ್ಕೂ ವಿಪರ್ಯಾಸ ಎಂದು ದೂರಿದರು.
106 ಬಾರಿ ಸಂವಿಧಾನ ಬದಲಾವಣೆ
ಡಾ. ಅಂಬೇಡ್ಕರ್ ಅವರು ರಚಿಸಿಕೊಟ್ಟ ಸಂವಿಧಾನವನ್ನು ಒಟ್ಟು 106 ಬಾರಿ ಬದಲಾವಣೆ ಮಾಡಲಾಗಿದೆ. ಇಂದಿರಾಗಾಂಧಿ ಅವರ ಆಡಳಿತಾವಧಿಯಲ್ಲೇ ಅತಿ ಹೆಚ್ಚು 56 ಬಾರಿ ಬದಲಾವಣೆಗೊಳಿಸಿ ದೇಶದೊಳಿತಿಗೆ ಇದ್ದಂಥ ಅಧಿಕಾರಗಳನ್ನೆಲ್ಲ ಮೊಟಕುಗೊಳಿಸಿದರು. ರಜಾದಿನ ಶನಿವಾರ-ಭಾನುವಾರವೂ ಅಧಿವೇಶನ ನಡೆಸಿ ಅನುಕೂಲಸಿಂಧು ತಿದ್ದುಪಡಿ ತಂದವರು ಈ ಕಾಂಗ್ರೆಸ್ಸಿಗರೇ ಎಂದು ಹರಿಹಾಯ್ದರು.
ಸಾರ್ವತ್ರಿಕ ಚುನಾವಣೆಗೂ ಮೊದಲೇ ಸಂವಿಧಾನ ಬದಲಾವಣೆ ಮಾಡಿದವರು ಕಾಂಗ್ರೆಸ್ಸಿಗರು. 1951ರಲ್ಲಿ ಮೊದಲನೇ ತಿದ್ದುಪಡಿ ಆಗಿದೆ. 1975ರಲ್ಲಂತೂ ಸಂವಿಧಾನ ಮೇಲೆ ಆಕ್ರಮಣವೇ ನಡೆದಿದೆ. ನೆಹರು ಅವರಿಗೆ ಅಭದ್ರತೆ ವಾತಾವರಣ ಇದ್ದುದರ ಪರಿಣಾಮ ಅಂಬೇಡ್ಕರ್ ಅವರಿಗೆ ಸತತ ಅಪಮಾನ ಮಾಡಿದರು. ನೆಹರು ಅವರ ಪಾಲಿಸಿ ಟೀಕೆ ಮಾಡಿದ ಕಾರಣಕ್ಕೆ ಬದಲಾವಣೆ ಮಾಡಿದರು ಎಂದು ಆರೋಪಿಸಿದರು.
ಇಂದಿರಾಗಾಂಧಿ ಕುರ್ಚಿ ಉಳಿಸಲು ಬದಲಾವಣೆ
ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿ ಆಯ್ಕೆ ಅನೂರ್ಜಿತಗೊಳಿಸಿದ ನಂತರ ಸುಪ್ರಿಂ ಕೋರ್ಟ್ ತೀರ್ಪು ಬರುತ್ತದೆ ಎಂಬ ಏಕೈಕ ಕಾರಣಕ್ಕೆ ಪ್ರಧಾನಮಂತ್ರಿ, ಸಭಾಪತಿ, ಉಪರಾಷ್ಟ್ರಪತಿ ಚುನಾವಣೆಗೆ ಪ್ರಶ್ನೆ ಮಾಡುವಂತಿಲ್ಲ ಎಂಬ ಬದಲಾವಣೆ ತಂದರು. 39ನೇ ಬದಲಾವಣೆ ಯಾವುದೇ ಚರ್ಚೆ ಇಲ್ಲದೇ, ರಾಜ್ಯಸಭೆಯಲ್ಲಿ ಪಾಸ್ ಮಾಡಿದರು. ಶೇ.50ರಷ್ಟು ವಿಧಾನಸಭೆಗಳು ಅದನ್ನು ಅಂಗೀಕರಿಸಬೇಕಿತ್ತಾದರೂ ರಜಾ ದಿನ ಶನಿವಾರ-ಭಾನುವಾರವೂ ರಾಜ್ಯಸಭೆ ನಡೆಸಿ ಅಂಗೀಕಾರ ಪಡೆದರು. ಆದರೆ, ಇದು ದೇಶದ ಒಳಿತಿನ ಕಾರಣಕ್ಕಲ್ಲ. ಇಂದಿರಾಗಾಂಧಿ ಕುರ್ಚಿ ಉಳಿಸಲು ಮಾಡಿದ್ದು ಎಂದು ಸಚಿವ ಜೋಶಿ ನೇರ ಆರೋಪ ಮಾಡಿದರು.
ಸಂವಿಧಾನಕ್ಕೆ ಹೇಗೆ ಅಪಚಾರವಾಗಿದೆ ಎಂಬುದು ಇನ್ನೂ ಅನೇಕರ ಅರಿವಿಗೆ ಬರಬೇಕಿದೆ. ನೆಹರು ಸರ್ಕಾರದ ವಿರುದ್ಧ ಟೀಕೆ-ಟಿಪ್ಪಣಿ ತಡೆದುಕೊಳ್ಳಲಾಗದೆ ಹಾಗೂ ಇಂದಿರಾಗಾಂಧಿ ಅಧಿಕಾರ ಎತ್ತಿ ಹಿಡಿಯಲು ಮಾಡಿದರೇ ಹೊರತು ಯಾವುದೇ ಸಾಮಾಜಿಕ ನ್ಯಾಯ, ಆರ್ಥಿಕತೆ ಮತ್ತು ದೇಶದ ಗಡಿ ಭದ್ರತೆ ವಿಷಯದಲ್ಲಿ ಆಗಿರಲಿಲ್ಲ ಎಂದು ದೂರಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ 10 ವರ್ಷಗಳ ಕಾಲ ಮೀಸಲಾತಿ ಮುಂದುವರೆಸಲು 79ನೇ ತಿದ್ದುಪಡಿ ತರಲಾಯಿತು. 81ನೇ ತಿದ್ದುಪಡಿಯನ್ನು ಪರಿಶಿಷ್ಟರಿಗೆ ಬ್ಯಾಕ್‌ಲಾಗ್ ಮುಂದುವರಿಕೆ ಕುರಿತು, 85ನೇ ತಿದ್ದುಪಡಿಯನ್ನು ನ್ಯಾಷನಲ್ ಕಮಿಷನ್ ಫಾರ್ ಎಸ್ಸಿ-ಎಸ್ಟಿ ಬೇರ್ಪಡೆ, ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ಕಾಲದಲ್ಲಿ 99ನೇ ತಿದ್ದುಪಡಿ, ಜಿಎಸ್‌ಟಿಗಾಗಿ 101ನೇ ತಿದ್ದುಪಡಿ ಮತ್ತು ಓಬಿಸಿ ಆಯೋಗಕ್ಕೆ ಸಂವಿಧಾನದ ಸ್ಥಾನಮಾನ ನೀಡಲೆಂದು 102ನೇ ತಿದ್ದುಪಡಿ ತರಲಾಗಿದೆ ಎಂದು ಜೋಶಿ ವಿವರಿಸಿದರು.
ಕಳ್ಳನೇ ಕಳ್ಳ, ಕಳ್ಳ ಎಂದು ಕೂಗುತ್ತಿರುವಂತಿದೆ
ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ಕಾಂಗ್ರೆಸ್ಸಿಗರ ಅಪಪ್ರಚಾರ ಪಿಕ್ ಪಾಕೆಟ್ ಮಾಡಿದ ಕಳ್ಳನೇ ಕಳ್ಳ ಕಳ್ಳ ಎಂದು ಕೂಗುತ್ತಿರುವಂತಿದೆ. ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ಇದಾಗಿದೆ. ಸದಾ ಕಾಲ ಭಾರತದ ಬಗೆಗಿನ ಸತ್ಯ ಮತ್ತು ಇತಿಹಾಸವನ್ನು ಮುಚ್ಚಿಟ್ಟು ದೇಶದ ಚರಿತ್ರೆಯನ್ನು ವಿಕೃತವಾಗಿ ರೂಪಿಸುವ ಪ್ರಯತ್ನ ಸಹ ನಡೆಯಿತು ಎಂದು ಹೇಳಿದರು.
ಖರ್ಗೆ, ಜೂನಿಯರ್ ಖರ್ಗೆ ಹೊಸ ಚರ್ಚೆ ಹರಿ ಬಿಟ್ಟಿದ್ದಾರೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಜ್ಯೂನಿಯರ್ ಖರ್ಗೆ ಅವರು ಅಂಬೇಡ್ಕರ್ ಅವರನ್ನು ಸೋಲಿಸಿದ್ದು ವೀರ ಸಾವರ್ಕರ್ ಎಂಬ ಹೊಸ ಚರ್ಚೆ ಹರಿ ಬಿಬಿಟ್ಟಿದ್ದಾರೆ. ಮರಿ ಖರ್ಗೆ ಅವರಿಗೆ ದೇಶದ ಇತಿಹಾಸವೇ ಸರಿ ಗೊತ್ತಿಲ್ಲ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದರು.
ಪ್ರಿಯಾಂಕ್ ಖರ್ಗೆ ಅವರೇ, ಅಂಬೇಡ್ಕರ್ ಅವರನ್ನು ಚುನಾವಣೆಗೆ ನಿಲ್ಲಿಸಿದವರು ನೀವು ಮತ್ತು ಅಂಬೇಡ್ಕರ್ ವಿರುದ್ಧ ಅಭ್ಯರ್ಥಿ ಹಾಕಿದವರೂ ನೀವೇ ವಿನಃ ಬಿಜೆಪಿಯಲ್ಲ. ಶ್ರೀಪಾದ್ ಅಮೃತ ಢಾಂಗೆ, ಕಾರ್ಜೋಳ್ಕರ್ ಮತ್ತು ಅಂಬೇಡ್ಕರ್ ಇವರ್ಯಾರೂ ಅಂದಿನ ಜನಸಂಘ, ಆರೆಸ್ಸೆಸ್‌ಗೆ ಸಂಬಂಧವೇ ಇರಲಿಲ್ಲ. ಅಂಬೇಡ್ಕರ್ ಅವರನ್ನು ಸೋಲಿಸಲೆಂದೇ ಎರಡೆರೆಡು ಬಾರಿ ಪ್ರಚಾರಕ್ಕೆ ಹೋದವರು ಪ್ರಧಾನಿ ನೆಹರು. ಇದೆಲ್ಲ ಸತ್ಯಾಂಶ, ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಅಂಬೇಡ್ಕರ್ ಸೋಲಿನ ಬಗ್ಗೆ ಬರೆದ ಪತ್ರವನ್ನು ಇಲ್ಲದಂತೆ ಮಾಡಿದವರೂ ನಿಮ್ಮ ಕಾಂಗ್ರೆಸ್ಸಿಗರು ಎಂದು ಅವರು ದೂರಿದರು.
ಈ ಸುದ್ದಿಯನ್ನೂ ಓದಿ | Operation Sindoor: ಆಪರೇಷನ್ ಸಿಂದೂರ ಮುಗಿದಿಲ್ಲ; ಇದು ಭಾರತ ಸ್ಥಾಪಿತ ನೀತಿ ಎಂದ ಮೋದಿ
ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಲಿಲ್ಲ ಎನ್ನುವುದಾದರೆ ಕಾರ್ಜೋಳ್ಕರ್ ಅವರಿಗೆ ಅಂಬೇಡ್ಕರ್‌ಗೂ ಮೊದಲೇ ಪದ್ಮಭೂಷಣ ಏಕೆ ಕೊಟ್ಟಿರಿ? ರಾಜೀವ ಗಾಂಧಿ ಅವರಿಗೆ ಕೊಟ್ಟರೂ ಅಂಬೇಡ್ಕರ್‌ಗೆ ಏಕೆ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ, ಭಾರತ ರತ್ನ ಯಾವುದನ್ನೂ ಆಗೇಕೆ ಕೊಡಲಿಲ್ಲ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಶವ ಸಾಗಿಸಲು ವಿಮಾನ, ದುಡ್ಡೂ ಸಹ ನೀಡಲಿಲ್ಲ. ಇದು ಕರಾಳ ಮತ್ತು ಐತಿಹಾಸಿಕ ಸತ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.