Vishweshwar Bhat: ಹೆಗ್ಗಡೆಯವರೇ, ಸಿಹಿ ಹಣ್ಣಿನ ಮರಕ್ಕೆ ಕಲ್ಲೇಟುಗಳು ಸಹಜ, ಟೀಕೆಗಳಿಗೆ ಬೆದರದೆ ಮುಂದುವರಿಯಿರಿ: ವಿಶ್ವೇಶ್ವರ ಭಟ್
Veerendra Heggade: ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಾಯಕತ್ವ ಗಮನಿಸಿದರೆ ದೊಡ್ಡ ಕಂಪನಿಗಳ ಸಿಇಒಗಳ ಕಾರ್ಯವೈಖರಿ ನೆನಪಾಗುತ್ತದೆ. ಹಾಗೆ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವುದರ ಜೊತೆಗೆ ಫೋಟೋಗ್ರಫಿ, ಹಳೆಯ ವಸ್ತುಗಳ ಸಂಗ್ರಹ ಮೊದಲಾದ ಅಪರೂಪದ ಗುಣಗಳನ್ನೂ ರೂಢಿಸಿಕೊಂಡಿದ್ದಾರೆ ಎಂದು


ಬೆಂಗಳೂರು: ಧರ್ಮಸ್ಥಳ ಬರೀ ಶ್ರದ್ಧಾಭಕ್ತಿಯ ಕೇಂದ್ರವಾಗುವುದರ ಜತೆಗೆ, ಅದು ಸಮಾಜದ ಎಲ್ಲ ಸ್ತರದ ಜನರ ಬಾಳನ್ನು ಒಳಗೊಂಡ ಅಪರೂಪದ ಧರ್ಮಕ್ಷೇತ್ರ. ಅಂಥ ಕ್ಷೇತ್ರಕ್ಕೆ ಅರ್ಧ ಶತಮಾನಗಳ ಕಾಲ ನಾಯಕತ್ವವನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು (Veerendra Heggade) ನೀಡಿದ್ದಾರೆ. ಜಾಲಿಯ ಮರಕ್ಕೆ ಯಾರೂ ಕಲ್ಲು ಹೊಡೆಯುವುದಿಲ್ಲ. ಸಿಹಿಯಾದ ಹಣ್ಣು ನೀಡುವ ಮರಕ್ಕೆ ಕಲು ಹೊಡೆಯುತ್ತಾರೆ. ಆದ್ದರಿಂದ ಯಾವ ಟೀಕೆಗಳಿಗೂ ಕಿವಿಗೊಡದೆ ಮುಂದುವರಿಯಿರಿ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwar Bhat) ಅವರು ಮಾರ್ಮಿಕವಾಗಿ ನುಡಿದರು.

ಬೆಂಗಳೂರಿನಲ್ಲಿ ಇಂದು (ಜುಲೈ 26) ನಡೆದ ವಿಶ್ವವಾಣಿ ಪ್ರಕಾಶನದ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕಗಳ ಬಿಡುಗಡೆ ಮಾಡಿದರು. ಹೆಗ್ಗಡೆಯವರ ನಾಯಕತ್ವ ಗಮನಿಸಿದರೆ ದೊಡ್ಡ ಕಂಪನಿಗಳ ಸಿಇಒಗಳ ಕಾರ್ಯವೈಖರಿ ನೆನಪಾಗುತ್ತದೆ. ಹಾಗೆ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವುದರ ಜೊತೆಗೆ ಫೋಟೋಗ್ರಫಿ, ಹಳೆಯ ವಸ್ತುಗಳ ಸಂಗ್ರಹ ಮೊದಲಾದ ಅಪರೂಪದ ಗುಣಗಳನ್ನೂ ರೂಢಿಸಿಕೊಂಡಿದ್ದಾರೆ. ಅತ್ಯುತ್ತಮ ಓದುಗ ಹಾಗೂ ಲೇಖಕ ಸಹ ಆಗಿದ್ದಾರೆ. ಧರ್ಮೋತ್ಥಾನ ಟ್ರಸ್ಟ್‌ನ ಮೂಲಕ ನಾಡಿನಾದ್ಯಂತ 200ಕ್ಕೂ ಅಧಿಕ ದೇವಾಲಯಗಳ ಜೀರ್ಣೋದ್ಧಾರ ಮಾಡಿದ್ದಾರೆ ಎಂದು ವಿವರಿಸಿದರು.
ಮೂರೂ ಕನಸು ನನಸು
ಇಪ್ಪತ್ತೇಳು ವರ್ಷಗಳ ಹಿಂದೆ ನಾನು ಕಂಡ ಮೂರೂ ಕನಸುಗಳು ಇಂದು ಸಾಕಾರವಾಗಿವೆ. ನನಗೆ 60 ವರ್ಷ ತುಂಬುವುದರಲ್ಲಿ ನೂರು ದೇಶಗಳನ್ನು ಸುತ್ತಬೇಕು, ನೂರು ಪುಸ್ತಕಗಳನ್ನು ಬರೆಯಬೇಕು, ಒಂದು ಪತ್ರಿಕೆಗೆ ಸಂಪಾದಕನಾಗಬೇಕು ಎಂದುಕೊಂಡಿದ್ದೆ. ಒಂದಲ್ಲ ನಾಲ್ಕು ಪತ್ರಿಕೆಗಳಿಗೆ ಸಂಪಾದಕನಾಗಿದ್ದೇನೆ. ನೂರ ಒಂದು ದೇಶಗಳನ್ನು ಸುತ್ತಾಡಿ ನೂರ ಒಂದು ಪುಸ್ತಕ ಬರೆದಿದ್ದೇನೆ. ಇದೊಂದು ಧನ್ಯತೆಯ ಕ್ಷಣ. ಇದು ಇನ್ನಷ್ಟು ಸಾಹಸಗಳಿಗೆ ಪ್ರೇರಣೆಯಾಗಲಿದೆ ಎಂದು ನುಡಿದರು.

ಭೈರಪ್ಪನವರು ನಾಡಿನ ಸಾಕ್ಷಿಪ್ರಜ್ಞೆ
ಎಸ್‌ಎಲ್ ಭೈರಪ್ಪನವರು ಈ ನಾಡಿನ ಸಾಕ್ಷಿಪ್ರಜ್ಞೆ. ಅವರು ಸುತ್ತಾಡಿದಷ್ಟು ವಿದೇಶಗಳನ್ನು ನಾನು ಸುತ್ತಾಡಿಲ್ಲ. ನಾನು ಅಂಟಾರ್ಕ್ಟಿಕಾಗೆ ಹೋಗಿಲ್ಲ, ಭೈರಪ್ಪನವರು ಅಲ್ಲಿಗೂ ಹೋಗಿದ್ದಾರೆ. ಐಸ್‌ಲ್ಯಾಂಡಿನಿಂದ ನನಗೆ ಫೋನ್ ಮಾಡಿದ್ದಾರೆ. ಇಂದು ಭೈರಪ್ಪನವರು ನನ್ನೊಂದಿಗೇ ಇದ್ದು, ಅವರ ದಿನನಿತ್ಯದ ಸಾಂಗತ್ಯವನ್ನು ನಾನು ಪಡೆದಿದ್ದೇನೆ. ಇದು ನನ್ನ ಅರುವತ್ತು ವರ್ಷಕ್ಕೆ ಸಿಕ್ಕಿದ ದೊಡ್ಡ ಭಾಗ್ಯ ಹಾಗೂ ಗಿಫ್ಟ್. ನಾನು ಏಳು ವರ್ಷಗಳಿಂದ ಜರ್ಮನಿಯ ಫ್ರಾಂಕ್‌ಫರ್ಟ್ ಪುಸ್ತಕ ಮೇಳಕ್ಕೆ ಹೋಗುತ್ತಿದ್ದೇನೆ. ಅದು ಜಗತ್ತಿನ ಅತಿ ದೊಡ್ಡ ಪುಸ್ತಕ ಮೇಳ. ಏಳೂ ವರ್ಷವೂ ಅಲ್ಲಿ ನನಗೆ ಕಂಡ ಏಕೈಕ ಕನ್ನಡ ಪುಸ್ತಕಗಳು ಅಂದರೆ ಭೈರಪ್ಪನವರದು ಎಂದರು.

ಈ ಸುದ್ದಿಯನ್ನೂ ಓದಿ | Vishwavani Book Release: ಅಸಂಖ್ಯಾತ ಹೊಸ ಓದುಗರನ್ನು ಸೃಷ್ಟಿಸಿದ ಕೀರ್ತಿ ವಿಶ್ವೇಶ್ವರ ಭಟ್ಟರಿಗೆ ಸಲ್ಲಬೇಕು: ಬೊಮ್ಮಾಯಿ
ಅವರಿಗೆ ನೂರಾರು ಪ್ರಶಸ್ತಿ ಸಮ್ಮಾನಗಳು ದೊರೆತಿವೆ. ಆದರೆ ಹಾಗೆ ದೊರೆತ ಒಂದೇ ಒಂದು ಪೈಸೆಯನ್ನೂ ಅವರು ಮನೆಗೆ ಕೊಂಡೊಯ್ದಿಲ್ಲ. ಅದೆಲ್ಲವನ್ನೂ ಇತರರಿಗೆ ಉದಾರವಾಗಿ ನೀಡಿದ್ದಾರೆ. ತಮ್ಮ ಸಾಹಿತ್ಯದಿಂದ ಪಡೆದ ಉಳಿತಾಯದ ಹಣವನ್ನೆಲ್ಲ ಬಡವರಿಗೆ ವಿನಿಯೋಗ ಮಾಡುವ ದೃಷ್ಟಿಯಿಂದ ಟ್ರಸ್ಟ್ ಸ್ಥಾಪನೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಭೇಟಿ ಮಾಡಿ ಊರಿನ ಕೆರೆಯ ಅಭಿವೃದ್ಧಿಗೆ 25 ಕೋಟಿ ರೂ. ಮಂಜೂರು ಮಾಡಿಸಿಕೊಂಡರು. ಊರಿಗೆ ನೀರು ಬಂದಾಗ ಊರಿನ ಕೆರೆಯಲ್ಲಿ ತೆಪ್ಪದಲ್ಲಿ ಓಡಾಡಿ ಸಾರ್ಥಕ್ಯದ ಕ್ಷಣ ಅನುಭವಿಸಿದರು. ಅವರಿಗೆ ಸರಸ್ವತಿ ಸಮ್ಮಾನ್ ಬಂದಾಗಲೂ ಅಷ್ಟು ಆನಂದ ಅನುಭವಿಸಿರಲಿಲ್ಲ. ಭೈರಪ್ಪನವರಷ್ಟು ದೊಡ್ಡ ಮೌಲ್ಯ ಇನ್ಯಾವುದೂ ಇಲ್ಲ ಎಂದು ನುಡಿದರು.
ಜನಜೀವನದ ಸಂಪರ್ಕ ಹೊಂದಿದ ನಾಯಕ ಬೊಮ್ಮಾಯಿ
ಕರ್ನಾಟಕದ ಹತ್ತಕ್ಕೂ ಹೆಚ್ಚು ಮುಖ್ಯಮಂತ್ರಿಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಆದರೆ ಎರಡು ಮೂರು ಮುಖ್ಯಮಂತ್ರಿಗಳ ಜೊತೆಗೆ ಮಾತ್ರ ಐದು ನಿಮಿಷಕ್ಕಿಂತ ಹೆಚ್ಚಿಗೆ ಮಾತಾಡಬಹುದು. ಆದರೆ ಬಸವರಾಜ ಬೊಮ್ಮಾಯಿ ಅವರ ಜೊತೆ ನಾನು ಐದಾರು ತಾಸಿಗೂ ಹೆಚ್ಚು ಕಾಲ ಬೋರಾಗದಂತೆ ನಿರಂತರವಾಗಿ ಮಾತಾಡಬಲ್ಲೆ. ಅವರು ಅತ್ಯುತ್ತಮ ಓದುಗ, ಕೇಳುಗ ಎಲ್ಲವೂ ಆಗಿದ್ದಾರೆ. ಕರ್ನಾಟಕದ ಜನಜೀವನ, ನೀರಾವರಿ, ರಾಜಕೀಯ ಎಲ್ಲದರ ಜೊತೆಗೆ ಅವರಿಗೆ ನಿರಂತರ ಅನುಸಂಧಾನ ಇರುವುದರಿಂದ ಇದು ಸಾಧ್ಯವಾಗಿದೆ. ಅವರಿಗೆ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್ ಖಂಡಿತವಾಗಿ ಇದೆ ಎಂದು ವಿಶ್ವೇಶ್ವರ ಭಟ್ ಹೇಳಿದರು.

ತೇಜಸ್ವಿಗೆ ಉಜ್ವಲ ಭವಿಷ್ಯ
ಸಂಸದ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿಯ ಶಶಿ ತರೂರ್ ಎನ್ನುವವರಿದ್ದಾರೆ. ಶಶಿ ತರೂರ್ ಅವರಿಗೆ ಭಾಷೆ ಇದೆ, ಬದ್ಧತೆ ಇಲ್ಲ. ತೇಜಸ್ವಿ ಸೂರ್ಯ ಅವರಿಗೆ ಭಾಷೆ ಹಾಗೂ ಬದ್ಧತೆ ಎರಡೂ ಇದೆ. ಅವರಿಗೆ ಉಜ್ವಲವಾದ ಭವಿಷ್ಯ ಇದೆ. ಅವರು ಅಕ್ಷರವಂತ ರಾಜಕಾರಣಿ. ವಾಜಪೇಯಿ, ಆಡ್ವಾಣಿ ಮುಂತಾದ ಮಹನೀಯ ರಾಜಕಾರಣಿಗಳು ಮೂಲತಃ ಪತ್ರಕರ್ತರಾಗಿದ್ದರು. ಮಾತನಾಡುವುದು ಸುಲಭ, ಆದರೆ ಬರಹಕ್ಕೆ ಪಟ್ಟಾಗಿ ಒಂದು ಕಡೆ ಕುಳಿತುಕೊಳ್ಳುವುದು ಮುಖ್ಯ. ಓದು ಹಾಗೂ ಬರಹದ ಹಿನ್ನೆಲೆ ಇರುವ ರಾಜಕಾರಣಿಗಳು ತೇಜಸ್ವಿಯಂತೆ ಅಪರೂಪ ಎಂದು ನುಡಿದರು.

ಶೋಭಾ ಅಪರೂಪದ ಪತ್ರಕರ್ತೆ
ಶೋಭಾ ಮಳವಳ್ಳಿ ಸಾಮಾನ್ಯ ಸಬ್ ಎಡಿಟರ್ ಆಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸೇರಿಕೊಂಡವರು ಇಂದು ಅರ್ನಾಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಕನ್ನಡ ಟಿವಿ ವಾಹಿನಿಯ ಮುಖ್ಯಸ್ಥೆಯಾಗುವ ಎತ್ತರಕ್ಕೆ ಏರಿದ್ದಾರೆ. ಅವರಲ್ಲಿ ಆ ಗುಣವನ್ನು ಅಂದೇ ಗುರುತಿಸಿದ್ದೆ. ಅವರ ಕ್ರಿಯಾಶೀಲತೆ, ಸುದ್ದಿಮೂಗು ಗುಣ ಅಪರೂಪದ್ದು. ಬ್ರೇಕಿಂಗ್ ನ್ಯೂಸ್ ದೊರೆತಾಗ ಅವರು ದೈತ್ಯರಂತೆ ಕೆಲಸ ಮಾಡುತ್ತಾರೆ ಎಂದು ಬಣ್ಣಿಸಿದರು.
ಕನ್ನಡದಲ್ಲಿ ಪುಸ್ತಕ ಬರೆದು ಹಣ ಮಾಡಿದವರು ಅಪರೂಪ. ನಾನು, ರವಿ ಬೆಳಗೆರೆ, ಎಸ್ ಷಡಕ್ಷರಿ ಮಾತ್ರ. ಷಡಕ್ಷರಿ ಅವರದು ಸದಾ ಧನಾತ್ಮಕವಾಗಿ ಇರುವ ಅಪರೂಪದ ವ್ಯಕ್ತಿತ್ವ. ರೂಪಾ ಗುರುರಾಜ್ ಅವರು ನಿರೂಪಕಿಯಾಗಿ ಪರಿಚಯವಾದವರು ವಿಶ್ವವಾಣಿಯ ಅಂಕಣದ ಮೂಲಕ ಮನೆಮಾತಾಗಿದ್ದಾರೆ. ಅದಕ್ಕೆ ಅವರು ಹಾಕಿದ ಪರಿಶ್ರಮ ಗಮನಾರ್ಹ ಎಂದರು.

ಈ ಸುದ್ದಿಯನ್ನೂ ಓದಿ | Vishwavani Book Release: ಓದಿನಿಂದ ನಮ್ಮ ಇತಿಹಾಸವನ್ನು ವಿಭಿನ್ನವಾಗಿ ನೋಡಬಹುದು: ಡಾ. ಡಿ. ವೀರೇಂದ್ರ ಹೆಗ್ಗಡೆ
ವಿಶ್ವವಾಣಿ ಆರಂಭಿಸಿ ನಡೆಸಿದ್ದೇ ದೊಡ್ಡ ಸಾಹಸ. ಎಷ್ಟೇ ಕಷ್ಟ ಬಂದರೂ ಮುಚ್ಚದೆ ನಡೆಸಿಕೊಂಡು ಹೋದೆವು. ಕನ್ನಡದ ಎಲ್ಲ ದಿನಪತ್ರಿಕೆಗಳು ಉದ್ಯಮಿಗಳ ಕೈಯಲ್ಲಿವೆ. ಆದರೆ ವಿಶ್ವವಾಣಿ ಮಾತ್ರ ಕನ್ನಡದ ಪತ್ರಕರ್ತನೊಬ್ಬ ನಡೆಸುತ್ತಿರುವ ರಾಜ್ಯಮಟ್ಟದ ದಿನಪತ್ರಿಕೆ. ಅದೀಗ ವಿಶ್ವವಾಣಿ ಟಿವಿ ಚಾನೆಲ್, ಪ್ರವಾಸಿ ಪ್ರಪಂಚ ವಾರಪತ್ರಿಕೆ, ಮಾಧ್ಯಮ ವಿದ್ಯಾಪೀಠ, ಲೋಕಧ್ವನಿ ದಿನಪತ್ರಿಕೆಮ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಮುಂತಾದ 9 ಸಂಸ್ಥೆಗಳಾಗಿ ವಿಸ್ತರಿಸಿದೆ. ವಿಶ್ವವಾಣಿ ಎಂಬ ಆಲದ ಮರದ ಕೊಂಬೆಗಳು ವಿಸ್ತರಿಸಿದ್ದು, 211 ಪತ್ರಕರ್ತರು ಅದರ ಅಡಿಯಲ್ಲಿ ಕೆಲಸ ಮಾಡುತ್ತ ಬೆಳೆಯುತ್ತಿದ್ದಾರೆ ಎಂದು ವಿವರಿಸಿದರು.
ವಿಶ್ವೇಶ್ವರ ಭಟ್ ಅವರ ನಾಲ್ಕು ಪುಸ್ತಕ ಸೇರಿದಂತೆ ವಿಶ್ವವಾಣಿ ಪುಸ್ತಕ ಪ್ರಕಾಶನದ 8 ಕೃತಿಗಳು ಬಿಡುಗಡೆಯಾದವು. ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿ ಸಂಪಾದಕರಾದ ಶೋಭಾ ಮಳವಳ್ಳಿ, ಉದ್ಯಮಿ ಹಾಗೂ ಲೇಖಕರಾದ ಎಸ್. ಷಡಕ್ಷರಿ, ಉದ್ಯಮಿ ಮತ್ತು ಅಂಕಣಕಾರ ಕಿರಣ್ ಉಪಾಧ್ಯಾಯ, ಪತ್ರಕರ್ತ ರಾಜು ಅಡಕಳ್ಳಿ, ನಿರೂಪಕಿ ಹಾಗೂ ಲೇಖಕಿ ರೂಪಾ ಗುರುರಾಜ್ ಉಪಸ್ಥಿತರಿದ್ದರು.
ವಿಶ್ವೇಶ್ವರ ಭಟ್ ಅವರ 100ನೇ ಪುಸ್ತಕ ವಿದೇಶ ಕಾಲ, ಸಂಪಾದಕರ ಸದ್ಯಶೋಧನೆ ಭಾಗ 7, ಸಂಪಾದಕರ ಸದ್ಯಶೋಧನೆ 8, Ask The Editor ಭಾಗ 3, ರೂಪಾ ಗುರುರಾಜ್ ಅವರ ಒಂದೊಳ್ಳೆ ಮಾತು-4, ರಾಜು ಅಡಕಳ್ಳಿಯವರ ಗೆದ್ದವರ ಕಥೆಗಳು, ಕಿರಣ್ ಉಪಾಧ್ಯಾಯರ ಉಭಯದೇಶವಾಸಿ, ಎಸ್ ಷಡಕ್ಷರಿಯವರ ಯಶಸ್ವಿ ಬದುಕಿಗೆ ಸರಳ ಸೂತ್ರಗಳು ಬಿಡುಗಡೆಯಾದವು.